ಉದ್ಯೋಗ ನೀಡುವಲ್ಲಿ ಸರಕಾರಗಳು ವಿಫಲ : ಸೈಯದ್ ಮುಜೀಬ್
ರಾಯಚೂರ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿವೆ ಎಂದು ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ಕಳವಳ ವ್ಯಕ್ತಪಡಿಸಿದ್ದಾರೆ.
ರಾಯಚೂರು ಜಿಲ್ಲಾ ಸಿಪಿಎಂ 14ನೇ ಜಿಲ್ಲಾ ಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಉದ್ಯೋಗಕ್ಕೆ ಭದ್ರತೆ ಕೊಡದೆ ಕಾಯಂ ನೇಮಕಾತಿ ಪದ್ದತಿ ತೆಗೆದು ವ್ಯವಸ್ಥಿತವಾಗಿ ಗುತ್ತಿಗೆ ಪದ್ದತಿ ಜಾರಿ ಮಾಡಿ ಕೆಲಸದಲ್ಲಿ ಅಭದ್ರತೆ ಸೃಷ್ಠಿಮಾಡುತ್ತಿವೆ ಎಂದು ಹೇಳಿದರು.
ಸರಕಾರಗಳಿಂದ ಕಾರ್ಮಿಕರ ಪರವಾಗಿದ್ದ ಸವಲತ್ತು ಸೌಲಭ್ಯಗಳಿರುವ ಕಾನೂನುಗಳನ್ನು ತೆಗೆದು ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿವೆ. ವೇತನದಲ್ಲಿ ಕನಿಷ್ಠ ವೇತನ ಜಾರಿ ಮಾಡಲಾಗದೆ ಮಾಲಿಕರ ಪರವಾಗಿ ಸರಕಾರಗಳು ಕೆಲಸ ಮಾಡುತ್ತಿವೆ. ದೇಶ ಕಟ್ಟುವ ರೈತ ಕಾರ್ಮಿಕರ ವಿರುದ್ಧ ವಿರೋಧಿ ನೀತಿಗಳನ್ನು ಸರಕಾರ ಜಾರಿಗೆ ತಂದು ಒಕ್ಕಲೆಬ್ಬಿಸುತ್ತಿವೆ ಎಂದು ದೂರಿದರು.
ದೇಶದಲ್ಲಿರುವ ರೈತರ ಭೂಮಿಯನ್ನು ಕಸಿದುಕೊಂಡು ಬಹುರಾಷ್ಟ್ರೀಯ ಕಂಪನಿಗಳಿಗೆ ಕೊಡಲು ಮುಂದಾಗಿವೆ, ಇದರಿಂದಾಗಿ ದೇಶದಲ್ಲಿ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತಿದೆ. ಸರಕಾರಗಳ ನೀತಿ ವಿರುದ್ಧ ದೊಡ್ಡ ಮಟ್ಟದಲ್ಲಿ ರೈತ ಕಾರ್ಮಿಕರು ಹೋರಾಟಗಳ ಮೂಲಕ ಸರಕಾರಗಳಿಗೆ ಎಚ್ಚರಿಸಬೇಕಾಗಿದೆ ಎಂದು ಕರೆ ನೀಡಿದರು.
ದೇಶದಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ರಾಜಕೀಯ ಗಟ್ಟಿಗೋಳಿಸಲು ಸಿಪಿಐಎಂನ 14ನೇ ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಎಮ್ಸ್, ನೀರಾವರಿ ಯೋಜನೆ, ಕೈಗಾರಿಕೆಗಳಿಗಾಗಿ ದೊಡ್ಡ ಹೋರಾಟ ಮಾಡಲು ಎರಡು ದಿನ ನಡೆಯುವ ಸಮ್ಮೇಳನದಲ್ಲಿ ಚರ್ಚೆ ಮಾಡಲಾಗುವುದೆಂದು ಅವರು ತಿಳಿಸಿದರು.
ವೇದಿಕೆ ಮೇಲೆ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಚ್.ಪದ್ಮಾ, ನರಸಣ್ಣ ನಾಯಕ, ಶರಣಬಸವ, ಶಬ್ಬೀರ್, ಮುಖಂಡಾರದ ಗಿರಿಯಪ್ಪ ಪೂಜಾರಿ, ದೇವಿಂದ್ರಗೌಡ, ಶೇಖಮ್ಮ ದೇಸಾಯಿ, ವರಲಕ್ಷ್ಮೀ, ರಮೇಶ ವಿರಾಪೂರ, ಜಿಲ್ಲಾ ಕಾರ್ಯದರ್ಶಿ ಕೆಜಿ ವಿರೇಶ ಮತ್ತಿತರರು ಉಪಸ್ಥಿತರಿದ್ದರು.