ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ | ಬಿಜೆಪಿ ನಾಯಕರಿಂದ ಸೇಡಿನ ರಾಜಕಾರಣ: ಶಾಸಕ ಹಂಪನಗೌಡ ಬಾದರ್ಲಿ
ರಾಯಚೂರು: ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರ ಆತ್ಮಹತ್ಯೆ ಪ್ರಕರಣವನ್ನಿಟ್ಟುಕೊಂಡು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಆರೋಪಿ ಎಂದು ಬಿಂಬಿಸುವ ಮೂಲಕ ಬಿಜೆಪಿ ನಾಯಕರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಆರೋಪಿಸಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಕ್ರಿಯಾಶೀಲ ಸಚಿವ. ಅವರ ಏಳಿಗೆ ಸಹಿಸದೆ ಅನಗತ್ಯವಾಗಿ ಅವರ ಹೆಸರನ್ನು ಗುತ್ತಿಗೆದಾರನ ಸಾವಿನ ಪ್ರಕರಣದಲ್ಲಿ ತಳುಕು ಹಾಕುವ ಸಂಚು ನಡೆಸಿದ್ದಾರೆ' ಎಂದು ದೂರಿದರು.
'ಗುತ್ತಿಗೆದಾರನ ಆತ್ಮಹತ್ಯೆಗೂ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಯಾವುದೇ ಸಂಬಂಧ ಇರದಿದ್ದರೂ ಅವರನ್ನು ತೇಜೋವಧೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದ ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣ, ಪಂಚಾಯತ್‌ರಾಜ್ ಇಲಾಖೆ, ಭೋವಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಬಯಲು ಮಾಡಿರುವ ಪ್ರಿಯಾಂಕ್ ಖರ್ಗೆ ಅವರನ್ನು ನೈತಿಕವಾಗಿ ಕುಗ್ಗಿಸುವ ದುರುದ್ದೇಶದಿಂದ ಬಿಜೆಪಿ ಮುಖಂಡರು ಪ್ರತಿನಿತ್ಯ ಆರೋಪ ಮಾಡುತ್ತಿದ್ದಾರೆ' ಎಂದು ಟೀಕಿಸಿದರು