ದೇವೇಗೌಡರು, ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ : ಸಚಿವ ಭೋಸರಾಜು

Update: 2025-02-19 13:19 IST
ದೇವೇಗೌಡರು, ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ : ಸಚಿವ ಭೋಸರಾಜು
  • whatsapp icon

ರಾಯಚೂರು : ಮಾಜಿ ಪ್ರಧಾನಿ ದೇವೇಗೌಡ ಅವರು ಮಹಾದಾಯಿ ಹಾಗೂ ಮೇಕೆದಾಟು ಯೋಜನೆ ಬಗ್ಗೆ ಹೋರಾಟ ಮಾಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಹೇಳಿದ್ದು, ಹಾಸ್ಯಾಸ್ಪದ. ಅವರು ಎನ್‌ಡಿಎ ಸರಕಾರದ ಭಾಗವಾಗಿದ್ದು, ರಾಜ್ಯಸಭೆಯಲ್ಲಿ ಮೋದಿಯನ್ನು ಹೋಗಳಿದ್ದೇ ಆಗಿದೆ. ಮೋದಿಯವರ ಬಳಿ ಹೋಗಿ ಸಹಿ ಮಾಡಿಸಿಕೊಳ್ಳಲು ಆಗಿಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ರಾಯಚೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯನ್ನು  ಹಗಲಿರುಳು ಹೊಗಳುವ ದೇವೇಗೌಡರು ಹಾಗೂ ಕುಮಾರಸ್ವಾಮಿ ಬಿಜೆಪಿ ರಾಜ್ಯಾದ್ಯಕ್ಷರ ಆಯ್ಕೆಯ ಬಗ್ಗೆ ಮಾರ್ಗದರ್ಶನ, ಸಲಹೆ ಸೂಚನೆ ನೀಡುತ್ತಾರೆ. ಆದರೆ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ದೇವೆಗೌಡರು ವಿಧಾನಸಭೆ ಚುನಾವಣೆಗೂ ಮುಂಚೆ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಒಂದು ದಿನದಲ್ಲಿ ಮಹದಾಯಿ ಯೋಜನೆಗೆ ಜಾರಿಗೊಳಿಸುತ್ತೇವೆ ಎಂದು ಹೇಳಿದ್ದರು, ಈಗ ಏನಾಗಿದೆ? ಪ್ರಧಾನಿ ಮೋದಿ ಬಳಿ ಚರ್ಚೆ ಮಾಡುವ ಧೈರ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಕುಂಭಮೇಳದ ಬಗ್ಗೆ ದೊಡ್ಡ ಮಟ್ಟದಲ್ಲಿ ಉತ್ತರ ಪ್ರದೇಶ ಹಾಗೂ ಕೇಂದ್ರದ ಬಿಜೆಪಿ ಸರಕಾರ ಪ್ರಚಾರ ಮಾಡಿತ್ತು. ಈಗ ಅಲ್ಲಿ ಸೂಕ್ತ ವ್ಯವಸ್ಥೆವಿಲ್ಲದೇ ಅನೇಕರು ಸಾವನ್ನಪ್ಪಿದ್ದಾರೆ. ದೆಹಲಿ ರೈಲ್ವೆ‌ ನಿಲ್ದಾಣದಲ್ಲಿ ನೂರಾರು ಜನ ಭಕ್ತರು ಮೃತಪಟ್ಟರು. ಇದರ ಸರಿಯಾದ ಅಂಕಿ-ಸಂಖ್ಯೆ ನೀಡದೇ ತಮ್ಮ ವೈಫಲ್ಯ ಮರೆಮಾಚುತ್ತಿದ್ದಾರೆ‌ ಎಂದು ಕಿಡಿಕಾರಿದರು.

ರಾಯಚೂರು ನಗರ ಸೇರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆರೆಗಳನ್ನೂ ತುಂಬಿಸಲಾಗಿದೆ. ಹಲವೆಡೆ ಇನ್ನೂ ತುಂಬಿಸಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಗೆ ಬಿಡುಗಡೆಯಾದ ಅನುದಾನ ಸರಿಯಾಗಿ ಬಳಸಿಕೊಂಡು ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಮಾಡಲಾಗುತ್ತಿದೆ. ಹಿಂದಿನ ಬಿಜೆಪಿ ಸರಕಾರ ಅವಧಿಯಲ್ಲಿ ಹಣ ದುರ್ಬಳಕೆಯಾದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇಲಾಖೆಯಲ್ಲಿ ಏನಾದರೂ ಲೋಪ-ದೋಷಗಳು ಕಂಡು ಬಂದಲ್ಲಿ ಸರಿಪಡಿಸಿ ಜನರಿಗೆ, ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ‌ ವೇಳೆ ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಸದಸ್ಯ ಜಯಣ್ಣ, ಮುಖಂಡರಾದ ಮಹಮ್ಮದ್ ಶಾಲಂ, ನರಸಿಂಹಲು ಮಾಡಗಿರಿ, ರಾಮಣ್ಣ ಇರಬಗೇರ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News