ರಾಯಚೂರು | ಜಿಲ್ಲಾಡಳಿತದಿಂದ ದೇವರ ದಾಸಿಮಯ್ಯ ಜಯಂತಿ ಆಚರಣೆ

Update: 2025-04-02 18:15 IST
Photo of Program
  • whatsapp icon

ರಾಯಚೂರು : ದೇವರ ದಾಸಿಮಯ್ಯನವರ ವಚನಗಳ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ಮೂಲಕ ಸಮಾಜ ಅಭಿವೃದ್ಧಿಗೆ ಕಾರಣರಾಗಬೇಕೆಂದು ರಾಯಚೂರು ಗ್ರೇಡ್-2 ತಹಶೀಲ್ದಾರ್ ಭೀಮರಾಯ ಅವರು ಹೇಳಿದರು.

ಎ.2ರ ಬುಧವಾರ ದಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಆದ್ಯ ವಚನಕಾರ ನೇಕಾರ ಸಂತ ವಿಶ್ವಮಾನ್ಯ ಶರಣ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇವರ ದಾಸಿಮಯ್ಯ ಸೇರಿದಂತೆ ಹಲವಾರು ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡಲಾಗುತ್ತದೆ. ಎಲ್ಲಾ ಸಮಾಜಗಳಲ್ಲಿ ಬದಲಾವಣೆ ಜೊತೆಗೆ ದಾರಿ ತಪ್ಪುತಿರುವವರನ್ನು ಸರಿದಾರಿಗೆ ಕೊಂಡೊಯ್ಯಲು, ತಿದ್ದುಕೊಳ್ಳುವ ಅವಕಾಶ, ಮಾನವ ಜೀವನದಲ್ಲಿ ಹೇಗೆ ಜೀವಿಸಬೇಕು ಹಾಗೂ ಬದುಕಿನ ಆಚಾರ-ವಿಚಾರಗಳ ಬಗ್ಗೆ ಅನೇಕ ಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದಾರೆ ಎಂದರು.

ಈ ವೇಳೆ ಉಪನ್ಯಾಸಕರಾಗಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಸ್ಮತಾ ಅಕ್ಕನವರು ಮಾತನಾಡಿ, ದೇವರ ದಾಸಿಮಯ್ಯ ಕನ್ನಡದ ಆದ್ಯ ವಚನಕಾರ. ತನ್ನ ಬದುಕಿಗಾಗಿ ಮಾಡುತ್ತಿದ್ದ ನೇಯ್ಗೆವೃತ್ತಿಯ ಜೊತೆಗೆ ತನ್ನ ಕಾಯಕ ಮತ್ತು ದರ್ಶನದ ಅನುಭವಗಳ ಸಾರವನ್ನು ಬಳಸಿಕೊಂಡು ವಚನಗಳನ್ನು ರಚಿಸಿ ನಾಡನ್ನು ಬೆಳಗಿದ ಮಹಾಕಾಯಕ ಯೋಗಿ ಆಗಿದ್ದಾರೆ. ಅಲ್ಲದೆ ದೇವರ ದಾಸಿಮಯ್ಯ ಅವರು ಸುಮಾರು 176 ವಚನಗಳನ್ನು ಈ ನಾಡಿಗೆ ನೀಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಕಸಾಪ ಜಿಲ್ಲಾ ಸಂಚಾಲಕರಾದ ಡಾ.ದಂಡಪ್ಪ ಬಿರಾದಾರ, ನೇಕಾರ ಸಮಾಜದ ಜಿಲ್ಲಾಧ್ಯಕ್ಷರಾದ ಜಿ.ನಾಗರಾಜ, ಪ್ರದಾನ ಕಾರ್ಯದರ್ಶಿ ಹೆಚ್ ವೆಂಕಟೇಶ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಾವತಿ, ತಾಲೂಕ ಗೌರವ ಅಧ್ಯಕ್ಷ ದೊಡ್ಡ ಈರಣ್ಣ ಕರ್ಲಿ, ತಾಲೂಕ ಅಧ್ಯಕ್ಷ ಉದಯಕುಮಾರ, ದತ್ತಾತ್ರೇಯ, ಪಿ.ಗೋವಿಂದ ರಾಜ, ಸುರೇಖಾ, ಶ್ರೀನಿವಾಸ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News