ರಾಯಚೂರು | ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 15ಸಾವಿರ ರೂ. ಗೌರವಧನ ನೀಡಲು ಒತ್ತಾಯಿಸಿ ಅನಿರ್ಧಿಷ್ಠಾವಧಿ ಹೋರಾಟಕ್ಕೆ ನಿರ್ಧಾರ
ರಾಯಚೂರು : ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ. ಗೌರವಧನ ನಿಗದಿಪಡಿಸಲು ಆಗ್ರಹಿಸಿ ಜ.7 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಮಟ್ಟದ ಅನಿರ್ದಿಷ್ಠಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಸೋಮಶೇಖರ ಯಾದಗಿರಿ ತಿಳಿಸಿದರು.
ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಅತಿ ಕಡಿಮೆ ಗೌರವಧನ ನೀಡಿ ಹೆಚ್ಚಿನ ಕೆಲಸ ಮಾಡಿಕೊಳ್ಳಲಾಗುತ್ತಿದೆ. ಆರೋಗ್ಯ ಕ್ಷೇತ್ರದ ಅನೇಕ ಕಾರ್ಯಗಳನ್ನು ಮಾಡುತ್ತಾ ಒತ್ತಡದ ಜೀವನಕ್ಕೆ ಸಿಲುಕಿದ್ದಾರೆ. ಗೌರವಧನ ಹೆಚ್ಚಳಕ್ಕೆಅನೇಕ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಮತ್ತು ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಒಟ್ಟಿಗೆ ಸೇರಿಸಿ 15 ಸಾವಿರ ರೂ. ಮಾಸಿಕ ಗೌರವಧನ ಹೆಚ್ಚಳ ಮಾಡಬೇಕು. ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ 2,000 ರೂ. ರಷ್ಟು ಗೌರವಧನ ಹೆಚ್ಚಿಸಬೇಕು.
ತೀವ್ರವಾದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳು ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ರುಟೀನ್ ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಬೇಕು. ಸೇವೆಯಲ್ಲಿ ಇರುವಾಗ ಆಗುವ ಅನಾಹುತಗಳಿಗೆ ಇಲಾಖೆಯೇ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಕೇವಲ 20ಸಾವಿರ ರೂ. ನೀಡುತ್ತಿದ್ದು, ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಮಾದರಿಯಂತೆ 5 ಲಕ್ಷ ರೂ. ಗೆ ಹೆಚ್ಚಿಸಬೇಕು. ವಿವಿಧ ಜಿಲ್ಲೆಗಳಲ್ಲಿ ಕಳೆದ 2-3 ತಿಂಗಳಿಂದ ಬಾಕಿ ಇರುವ ಪ್ರೋತ್ಸಾಹ ಧನ ಕೂಡಲೇ ಬಿಡುಗಡೆ ಮಾಡಬೇಕು. ಕಾರ್ಯಕರ್ತೆಯರು ಸ್ವಂತ ಹಣದಲ್ಲಿ ಸ್ಮಾರ್ಟ್ ಫೋನ್ ಗಳನ್ನು ಖರೀದಿ ಮಾಡಿ ಇಲಾಖೆಯ ಕೆಲಸಗಳಿಗೆ ಬಳಕೆ ಮಾಡಬೇಕು ಎಂದು ಹೊರಡಿಸಿದ ಅಧಿಕೃತ ಜ್ಞಾಪನಾ ಪತ್ರವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಂಘದ ಮುಖಂಡರಾದ ಎನ್.ಎಸ್.ವೀರೇಶ, ಈರಮ್ಮ, ರಾಧಾ, ಮಹೇಶ್ ಚೀಕಲಪರ್ವಿ ಉಪಸ್ಥಿತರಿದ್ದರು.