ರಾಯಚೂರು | ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಆರ್‌ಎಸ್ ಪಕ್ಷದ ವತಿಯಿಂದ ಮನವಿ
ರಾಯಚೂರು : ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ಎಕರೆಗೆ 20 ಕ್ವಿಂಟಲ್ ನಂತೆ ಜೋಳವನ್ನು ಖರೀದಿಸುವಂತೆ ಹಾಗೂ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಂಧನೂರು ತಾಲ್ಲೂಕಿನಲ್ಲಿ ಕೆ ಆರ್ ಎಸ್ ಪಕ್ಷದ ವತಿಯಿಂದ ತಹಶೀಲ್ದಾರರು ಸಿಂಧನೂರು ಇವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರುಪಾದಿ ಗೋಮರ್ಸಿ, ರಾಜ್ಯ ಸರ್ಕಾರವು ಬೆಂಬಲ ಬೆಲೆ ಅಡಿಯಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಪ್ರತಿ ರೈತರ ಜೋಳವನ್ನು ಎಕರೆಗೆ 10 ಕ್ವಿಂಟಲ್ ರಂತೆ ಖರೀದಿಸುವ ಮಿತಿಯನ್ನು ನಿಗದಿಪಡಿಸಿರುತ್ತದೆ. ಕಲ್ಯಾಣ ಕರ್ನಾಟಕ ಸೇರಿದಂತೆ ವಿಶೇಷವಾಗಿ ಸಿಂಧನೂರು ತಾಲೂಕಿನ ರೈತರು ಈ ಬಾರಿ ಹೆಚ್ಚಿನ ಜೋಳವನ್ನು ಬೆಳೆದಿದ್ದು ಎಕರೆಗೆ 35 ರಿಂದ 40 ಕ್ವಿಂಟಲ್ ಹೆಚ್ಚಿನ ಇಳುವರಿ ಕೂಡ ಬಂದಿರುತ್ತದೆ. ರೈತರು ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಜೋಳವನ್ನು ಮಾರಾಟ ಮಾಡಲು ಪ್ರಸ್ತುತವಾಗಿ ರಾಜ್ಯ ಸರ್ಕಾರವು ನಿಗದಿಪಡಿಸಿದ ಕಡಿಮೆ ಮಿತಿಯಿಂದಾಗಿ ಕಂಗಾಲಾಗಿದ್ದಾರೆ. ಈ ಯೋಜನೆ ರೈತರಲ್ಲಿ ನಿರಾಶಕ್ತಿ ಮೂಡಿಸಿದೆ. ಈಗಾಗಲೇ ಜೋಳದ ಕಟಾವು ಪ್ರಕ್ರಿಯೆ ಮುಗಿಯುವ ಹಂತದಲ್ಲಿ ಇದ್ದು, ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ರೈತನಿಂದ ಪ್ರತಿ ಎಕರೆಗೆ ಕಳೆದ ವರ್ಷದ ಮಾದರಿಯಂತೆ 20 ಕ್ವಿಂಟಲ್ ಮಾರಾಟ ಮಾಡಲು ನೂತನ ಆದೇಶವನ್ನು ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಹೊರಡಿಸಬೇಕೆಂದು ಒತ್ತಾಯಿಸಿದರು.
ಸರ್ಕಾರದ ಜೋಳ ಖರೀದಿ ಕೇಂದ್ರದ ನೀತಿ-ನಿಯಮಗಳು, ಉದ್ದೇಶಗಳು ಉಲ್ಲಂಘನೆ ಆಗದಂತೆ ಕಟ್ಟುನಿಟ್ಟದ ಕ್ರಮವಹಿಸಬೇಕು ಹಾಗೂ ತೂಕದಲ್ಲಿ ಮೋಸ, ಅನ್ಯಾಯ, ತಾರತಮ್ಯ ನೀತಿ ಮತ್ತು ಮಧ್ಯವರ್ತಿಗಳ ಹಾವಳಿ ತಡೆಯಲು ಜೋಳ ಖರೀದಿ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಂಧನೂರು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಮೇಟಿ, ತಾಲ್ಲೂಕು ಕಾರ್ಯದರ್ಶಿಗಳಾದ ಕೃಷ್ಣ ಸುಕಾಲಪೇಟೆ, ವೀರೇಶ್ ಕೋಟೆ, ಶರಣಪ್ಪ ಬೇರಗೀ, ಚನ್ನಬಸವ ಸೋಮಲಾಪುರ್, ಕಣಪ್ಪ ಜನತಾ ಕಾಲೋನಿ, ಶರಣಯ್ಯ ಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಭಾಗವಸಿದ್ದರು.