ರಾಯಚೂರು | ಎಪಿಎಂಸಿ ಭೂಮಿ ಅತಿಕ್ರಮಣ ತಡೆಯಲು ಆಗ್ರಹ
ರಾಯಚೂರು : ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂಬಂಧಿಸಿದ ಜಮೀನಿನಲ್ಲಿ ಅನಧಿಕೃತ ಕಟ್ಟಡ ಕಟ್ಟುತ್ತಿರುವುದನ್ನು ತಡೆದು, ಅನಧಿಕೃತ ಕಟ್ಟಡಗಳು ನಿರ್ಮಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಯು.ಆಂಜನೇಯ ಮಡ್ಡಿಪೇಟೆ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಗರದ ಸರ್ವೆ ನಂಬರ್ 240/1, ವಿಸ್ತೀರ್ಣ 1ಎಕರೆ 30ಗುಂಟೆ ಮತ್ತು ಸರ್ವೆ ನಂಬರ್ 246 ವಿಸ್ತೀರ್ಣ 2ಎಕರೆ 27ಗುಂಟೆ ನಗರದ ಮಧ್ಯಭಾಗದಲ್ಲಿರುವ ಬಸವನ ಭಾವಿವೃತ್ತ ಹಾಗೂ ಗಂಜ್ ರಸ್ತೆಗೆ ಹೊಂದಿಕೊಂಡಿರುವ ಸರ್ವೇ ನಂಬರ್ ಗಳ ಜಮೀನು ಭೂಕಳ್ಳರ ಪಾಲಾಗುತ್ತಿದೆ ಎಂದು ತಿಳಿಸಿದರು.
ನಗರದಲ್ಲಿ ಇನ್ನೂ ಹಲವು ಜಮೀನುಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗುರುತಿಸಿಕೊಳ್ಳದೆ ಅನಧಿಕೃತ ಕಟ್ಟಡಗಳು ತಲೆಯೆತ್ತಿ, ಹಾಲಿ ಕೃಷಿ ಉತ್ಪನ್ನ ಮಾರುಕಟ್ಟೆ ಯನಾಮನಿರ್ದೇಶನ ಸದಸ್ಯ ಎನ್. ಭೀಮರೆಡ್ಡಿ, ಬೆಲ್ಲಂ ನರಸರೆಡ್ಡಿ ಸೇರಿದಂತೆ ಇನ್ನಿತರರ ಪಾಲಾಗಿವೆ ಎಂದು ಆರೋಪಿಸಿದರು.
ಸರ್ವೆ ನಂಬರುಗಳು ಜಮೀನುಗಳ ಪಕ್ಕದಲ್ಲಿರುವ ಹಳೆ ರಸ್ತೆ ಮತ್ತು ಮಳೆ ನೀರು ಹರಿದು ಹೋಗುವ ನಾಲೆಯನ್ನು ಕೂಡ ಬಿಡದೆ ಅನಧಿಕೃತ ಕಟ್ಟಡಗಳನ್ನು ಕಟ್ಟಿ ಭೂಮಿ ಕಬ್ಜಾ ಮಾಡಲು ಹೊರಟಿದ್ದಾರೆ. ಆದ್ದರಿಂದ ಈ ಜಮೀನುಗಳಲ್ಲಿ ಅಕ್ರಮ ಕಟ್ಟಡಗಳು ಕಟ್ಟುವುದನ್ನು ತಡೆಹಿಡಿದು ಸಂರಕ್ಷಿಸಬೇಕು ಎಂದು ಜಿಲ್ಲಾಧಿಕಾರಿ, ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ, ನಗರಸಭೆ ಪೌರಾಯುಕ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಾರ್ಕೆಟ್ ಯಾರ್ಡ್ ಠಾಣೆ ಆರಕ್ಷಕ ಉಪನಿರೀಕ್ಷರಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನಮ್ಮ ದೂರನ್ನು ಕೂಲಂಕೂಷವಾಗಿ ಪರಿಶೀಲಿಸಿ ಸರಕಾರಿ ಜಮೀನನ್ನು ಭೂಗಳ್ಳರಿಂದ ರಕ್ಷಿಸಿ ಸ್ವಾಧೀನ ಪಡಿಸಿಕೊಂಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಾಮನಿರ್ದೇಶನ ಸದಸ್ಯ ಎನ್. ಭೀಮರೆಡ್ಡಿ ಇವರನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.