ರಾಯಚೂರು | ಗೃಹ ಸಚಿವ ಅಮಿತ್ ಶಾ ರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ವಕೀಲರ ಪ್ರತಿಭಟನೆ

Update: 2024-12-30 12:32 GMT

ರಾಯಚೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ ಗೃಹ ಸಚಿವ ಅಮಿತ್ ಶಾ ಅವರಿನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ರಾಯಚೂರು ಜಿಲ್ಲಾ ವಕೀಲರ ಸಂಘದಿಂದ ಇಂದು ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಡಾ.ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿ, ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಭಾರತದ ಸಂವಿಧಾನಕ್ಕೆ ಏಳು ದಶಕಗಳು ತುಂಬಿದ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನದಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡುವಾಗ ಅಮಿತ್ ಶಾ ಅವರು, ಡಾ.ಅಂಬೇಡ್ಕರ್ ಹೆಸರನ್ನು ಹೇಳುವುದು ಒಂದು ವ್ಯಸನವಾಗಿದೆ. ಅಂಬೇಡ್ಕರ್ ಹೆಸರು ಪದೇಪದೇ ಉಚ್ಛರಿಸುವ ಬದಲು ದೇವರನ್ನು ಸ್ಮರಿಸಿದರೆ ಏಳೇಳು ಜನ್ಮಗಳ ಸ್ವರ್ಗ ದೊರಿತಿತ್ತು ಎಂದಿರುವುದು ಮಹಾ ಮಾನವತವಾದಿ ಸಮಾನತೆಯ ಹರಿಕಾರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಅವರು ರಚಿಸಿರುವ ಸಂವಿಧಾನ ಮೇಲಿರುವ ಆಸಹನೆಯ ಪ್ರತೀಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾತಿ ಆಧಾರದ ಮೇಲೆ ಈ ದೇಶದ ಬಹು ಸಂಖ್ಯಾತರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ವಿದ್ಯೆ, ಆಸ್ತಿ, ಅಧಿಕಾರಿಗಳನ್ನು ನಿರಾಕರಿಸುತ್ತ ಬಂದ ಮನುವಾದಿಗೆ ಸೇರಿದ ಅಮಿತ್ ಶಾ ಸ್ವಾತಂತ್ರ್ಯ ಮತ್ತು ಸಮಾನತೆಯ ಆಶಯ ಒಪ್ಪಿಕೊಳ್ಳಲು ಆಗುವುದಿಲ್ಲ ಎನ್ನುವುದನ್ನು ತಮ್ಮ ಮಾತಿನ ಮೂಲಕ ಹೊರಹಾಕಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಹಾಗೂ ಆರ್ ಎಸ್ಎಸ್ ನಾಯಕರು ಅವಕಾಶ ಸಿಕ್ಕಾಗಲೆಲ್ಲ ಸಂವಿಧಾನ ಮತ್ತು ಮೀಸಲಾತಿ ಕುರಿತು ಅವಹೇಳನ ಮಾಡುತ್ತಲೇ ಬಂದಿದ್ದಾರೆ. ಅಮಿತ್ ಶಾ ಸಂವಿಧಾನದ ಆಧಾರದ ಮೇಲೆ ರಚನೆಯಾಗಿರುವ ಸರ್ಕಾರದಲ್ಲಿ ಗೃಹ ಮಂತ್ರಿಯಾಗಿರಲು ಯಾವುದೇ ನೈತಿಕತೆ ಇಲ್ಲ. ತಕ್ಷಣವೇ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಅಮಿತ್ ಶಾ ಅವರು ದೇಶದ ಜನರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಪ್ಪ ಭಂಡಾರಿ, ವಕೀಲರಾದ ಎಸ್.ಜಿ.ಮಠ್, ಶ್ರೀಕಾಂತ್ ರಾವ್, ಎಸ್.ಮಾರೆಪ್ಪ, ಕರುಣಾಕರ್ ಕಟ್ಟಮನಿ, ಈರಣ್ಣ, ಹನುಮಂತಪ್ಪ, ಎಚ್.ದೊಡ್ಡಪ್ಪ, ಬಸವರಾಜ ಚಿಕ್ಕಸೂಗೂರು, ರವಿ ದಳವಾಯಿ, ಪರಶುರಾಮ್ ಮಾಡಗಿರಿ, ಶಿವಕುಮಾರ ಮ್ಯಾಗಳಮನಿ, ನಜೀರ್ ಅಹ್ಮದ್, ತಾಯಪ್ಪ ಭಂಡಾರಿ, ಜುನೈದ್, ರವೀಂದ್ರ, ಚೇತನ್ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News