ರಾಯಚೂರು | ಜ.6ರಂದು ರೈತ ಸಂಘಟನೆಯಿಂದ ಪೋತ್ನಾಳ್ ಬಳಿ ಹೆದ್ದಾರಿ ತಡೆ ಪ್ರತಿಭಟನೆ
ರಾಯಚೂರು : ಜೋಳ ಖರೀದಿ ಕೇಂದ್ರಗಳಲ್ಲಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಜೋಳ ಖರೀದಿ ಮಾಡಬೇಕು ಹಾಗೂ ಎಂಎಸ್ಪಿ ದರದಲ್ಲಿ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಒತ್ತಾಯಿಸಿ ಮಾನ್ವಿ ತಾಲ್ಲೂಕಿನ ಪೋತ್ನಾಳ್ ಗ್ರಾಮದ ಬಳಗಾನೂರು ಕ್ರಾಸ್ ಬಳಿ ಕರ್ನಾಟಕ ರಾಜ್ಯ ರೈತ ಸಂಘ ( ಪ್ರೋ.ನಂಜುಂಡಸ್ವಾಮಿ ಬಣ)ದಿಂದ ಜ.6ರಂದು ರಸ್ತೆ ತಡೆ ಹೋರಾಟ ಮಾಡಲಾಗುವುದು ಎಂದು ಸಂಘದ ಮುಖಂಡ ಅಮಿನ್ ಪಾಶ ದಿದ್ದಗಿ ತಿಳಿಸಿದರು.
ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, 2023-24ನೇ ಸಾಲಿನಲ್ಲಿ ಜೋಳ ಖರೀದಿ ಕೇಂದ್ರಗಳಲ್ಲಿ ರೈತರಿಂದ ಗರಿಷ್ಠ 20ಕ್ವಿಂಟಾಲ್ ಖರೀದಿಸಲಾಗುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಕೇವಲ 10 ಕ್ವಿಂಟಾಲ್ ಖರೀದಿ ಮಾಡಲಾಗುತ್ತಿದೆ. ಈ ಕುರಿತು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ರಸ್ತೆ ತಡೆ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ, ನವಲಿ ಸಮಾನಾಂತರ ಜಲಾಶಯ ಕಾಮಗಾರಿ ನನೆಗುದಿಗೆ ಬಿದ್ದಿದೆ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಲೆ ಸಿಗುತ್ತಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಈ ಭಾಗದ ಶಾಸಕರು ರೈತರ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತುತ್ತಿಲ್ಲ. ಬೆಂಗಳೂರು, ಮೈಸೂರು ಭಾಗದ ಶಾಸಕರು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಅವಕಾಶ ನೀಡಿದರೂ ಈ ಭಾಗದ ಶಾಸಕರು ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಿಲ್ಲ ಎಂದು ಆರೋಪಿಸಿದರು.
ಜ.6 ರೊಳಗೆ ನಮ್ಮಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಹಂತಹಂತವಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಬಸವರಾಜ ಹಂಚಿನಾಳ, ಪ್ರಹ್ಲಾದ್ ರೆಡ್ಡಿ, ಬಡೇಸಾಬ್ ಬಿಜನಗೇರಾ ಉಪಸ್ಥಿತರಿದ್ದರು.