ರಾಯಚೂರು | ಹೇಮನಾಳ ಸರಕಾರಿ ಶಾಲೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ
ರಾಯಚೂರು : ದೇವದುರ್ಗ ತಾಲ್ಲೂಕಿನ ಹೇಮನಾಳ ಗ್ರಾಮದ ಶಿಥಿಲಗೊಂಡ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ತೆರವುಗೊಳಿಸಿ ನೆನೆಗುದಿಗೆ ಬಿದ್ದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಹೇಮನಾಳ ಸರಕಾರಿ ಪ್ರಾಥಮಿಕ ಶಾಲೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಮೇಲ್ಚಾವಣಿಯ ಸಿಮೆಂಟ್ ಉದುರುತ್ತಿದೆ. ಮಕ್ಕಳು ಜೀವದ ಭಯದಲ್ಲಿಯೇ ಪಾಠ ಕೇಳುವಂತಾಗಿದೆ. ಅನಾಹುತ ಸಂಭವಿಸುವ ಮುಂದೆ ಕಟ್ಟಡ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಸರ್ವೆ ನಂಬರ್ 194 ಭೂಮಿ ಪಹಣಿಯಲ್ಲಿ ಶಾಲೆಯ ಹೆಸರು ಸೇರಿಸಬೇಕು. 2021–22ರಲ್ಲಿ ಮೈಕ್ರೋ ಯೋಜನೆಯಡಿ 3 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಕೂಡಲೇ ನನೆಗುದಿಗೆ ಬಿದ್ದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮನವಿ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಎಂ.ಆರ್.ಬೇರಿ, ರಾಜಪ್ಪ ಸಿರವಾರಕರ್, ಮೂರ್ತಿ ನಾಯಕ, ಸಿದ್ದಪ್ಪ ಸಾಹುಕಾರ್, ರಂಗಪ್ಪ ನಾಯಕ, ಶರಣೇಗೌಡ, ತಿಮ್ಮಣ್ಣ ಉಪಸ್ಥಿತರಿದ್ದರು.