ಸಿನೆಮಾ ಕಲಾವಿದರಿಗೆ ಆಸರೆಯಾದ ಕಂಪೆನಿ ನಾಟಕಗಳು

ನನ್ನ ಮದ್ರಾಸಿನ ತೋಟ ಸಾಲದಲ್ಲಿತ್ತು. ಅದನ್ನು ಬಿಡಿಸಿಕೊಳ್ಳಲು ಆ ಸೋವಿಯ ಕಾಲಕ್ಕೇ ಶಾಸ್ತ್ರಿಗಳು ನನಗೆ ಐವತ್ತು ಸಾವಿರ ರೂ.ಗಳನ್ನು ಇಡಿಯಾಗಿ ಒಂದೇ ಕಂತಿನಲ್ಲಿ ಅದೂ ಮುಂಗಡವಾಗಿ ಕೊಟ್ಟರು. ಆ ಹಣದಿಂದಲೇ ನಾನು ತೋಟವನ್ನು ಉಳಿಸಿಕೊಂಡಿದ್ದು. ಇಲ್ಲದಿದ್ದಲ್ಲಿ ಅದು ಕೈಬಿಟ್ಟು ಹೋಗುತ್ತಿತ್ತು. ಅವರು ಅಂದು ನನಗೆ ಕೊಟ್ಟ ಆ ಐವತ್ತು ಸಾವಿರ ರೂ. ಇಂದು ನನ್ನ ಹಲವಾರು ಕೋಟಿಗಳ ಆಸ್ತಿ. -ಲೀಲಾವತಿ

Update: 2023-12-22 06:33 GMT

ಸಿನೆಮಾದಲ್ಲಿ ಹಿಂದೆ ಅನೇಕರು ನಟಿಸುತ್ತಿ ದ್ದರೂ ದೈನಂದಿನ ಬದುಕಿಗಾಗುತ್ತಿತ್ತು. ಆದರೆ ಮನೆ ಕಟ್ಟಿಕೊಂಡಿದ್ದು, ತೋಟ ಮಾಡಿದ್ದು ರಂಗಭೂಮಿಯಿಂದ ಅದರಲ್ಲೂ ಉತ್ತರ ಕರ್ನಾಟಕದ ನಾಟಕ ಕಂಪೆನಿಗಳಿಂದ ಎನ್ನುವುದನ್ನು ಮರೆಯಲಾಗದು. ಇದು ಈಗಿನ ಸಿನೆಮಾ ಕಲಾವಿದರಿಗೆ ಹೆಚ್ಚು ಅನ್ವಯಿಸದು. ಈಚೆಗೆ ಅಂದರೂ ಉಮಾಶ್ರೀ, ಮಾಲಾಶ್ರೀ, ತಾರಾ, ಪ್ರೇಮಾ ಮೊದಲಾದವರಲ್ಲದೆ ಧಾರಾವಾಹಿ ಹಾಗೂ ರಿಯಾಲಿಟಿ ಷೋಗಳ ಕಲಾವಿದರು ಕಂಪೆನಿ ನಾಟಕಗಳಿಗೆ ಅದರಲ್ಲೂ ನಷ್ಟ ಅನುಭವಿಸಿದಾಗ ಬಣ್ಣ ಹಚ್ಚುವುದು ಸಾಮಾನ್ಯ. ಮುಖ್ಯವಾಗಿ ಜಾತ್ರೆಗಳಲ್ಲಿ ಕಂಪೆನಿಗಳ ನಡುವೆ ಪೈಪೋಟಿ ಹೆಚ್ಚಿರುವ ಕಾರಣ, ಪ್ರೇಕ್ಷಕರನ್ನು ಆಕರ್ಷಿಸಲು ಸಿನೆಮಾ ನಟರ ಮೊರೆ ಹೋಗುವುದು ಸಾಮಾನ್ಯ ಸಂಗತಿಯಾಗಿದೆ.

ಈಚೆಗೆ ನಿಧನರಾದ ಸಿನೆಮಾದ ಹಿರಿಯ ಕಲಾವಿದೆ ಲೀಲಾವತಿ ಅವರು ರಂಗಭೂಮಿಯ ಕಲಾವಿದರೂ ಎಂಬುದು ಅನೆಕರಿಗೆ ಗೊತ್ತಿರಲಿಕ್ಕಿಲ್ಲ. ಅವರು ಬದುಕು ಕಟ್ಟಿಕೊಂಡಿದ್ದು ಕೂಡಾ ರಂಗಭೂಮಿಯ ಮೂಲಕ ಎನ್ನುವುದನ್ನು ಮರೆಯಲಾಗದು. ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಜನ್ಮ ಶತಮಾನೋತ್ಸವ ಸಮಾರಂಭವನ್ನು ಕರ್ನಾಟಕ ನಾಟಕ ಅಕಾಡಮಿ ವತಿಯಿಂದ 2018ರಲ್ಲಿ ಬಾಗಲಕೋಟೆಯಲ್ಲಿ ಆಯೋಜಿಸಿದಾಗ, ಸಂಚಾಲಕನಾಗಿ ದುಡಿದೆ. ಹಾಗೆಯೇ ಗಂಗಾಧರ ಶಾಸ್ತ್ರಿಗಳ ಕುರಿತು ಕೃತಿ ಪ್ರಕಟಿಸಲು ನಿರ್ಧರಿಸಲಾಯಿತು. ಆಗ ಲೀಲಾವತಿ ಅವರನ್ನು ಮಾತನಾಡಿಸಬೇಕೆಂದು ಗಂಗಾಧರ ಶಾಸ್ತ್ರಿಗಳ ಪುತ್ರರಾಗಿದ್ದ ಬಸವರಾಜ ಅವರು ಸಲಹೆ ನೀಡಿದರು. ಹಾಗೆ ದೂರವಾಣಿಯಲ್ಲಿ ಲೀಲಾವತಿ ಅವರನ್ನು ಮಾತನಾಡಿಸಿದಾಗ

ನಾನು ನಿರೂಪಿಸಿದ ಲೇಖನವೊಂದು ಸಿದ್ಧಗೊಂಡಿತು. ಅದು ಹೀಗಿದೆ:

‘‘ನನ್ನ ಜೀವನದಲ್ಲಿ ಉತ್ತರ ಕರ್ನಾಟಕ ಹಾಗೂ ಅಲ್ಲಿಯ ಜನರನ್ನು ವಿಶೇಷವಾಗಿ ನಾಟಕ ಕಂಪೆನಿಯ ಮಾಲಕರಾದ ಚಿತ್ತರಗಿ ಗಂಗಾಧರ ಶಾಸ್ತ್ರಿಗಳನ್ನು ಎಂದಿಗೂ ಮರೆಯಲಾರೆ. ಅವರೆಲ್ಲ ನಿಂತು ಹೋಗಬಹುದಾಗಿದ್ದ ನನ್ನ ಉಸಿರಿಗೆ ಮರುಜೀವ ಕೊಟ್ಟರು. ಕಷ್ಟದಲ್ಲಿದ್ದಾಗ ಅವರು ಮಾಡಿದ ಸಹಾಯವನ್ನು ನಾನೆಂದಿಗೂ ಮರೆಯಲಾರೆ. ಇಂದು ನಾನೇನಾದರೂ ನೆಮ್ಮದಿಯ ಬದುಕು ನಡೆಸುತ್ತಿದ್ದೇನೆ ಎಂದರೆ ಅದಕ್ಕೆ ಉತ್ತರ ಕರ್ನಾಟಕದ ಅಭಿಮಾನಿಗಳು, ಅನ್ನದಾತರೇ ಕಾರಣರು. ನನ್ನ ಜೀವನ ನಿರ್ವಹಣೆಯ ದೇವರೇ ಉತ್ತರ ಕರ್ನಾಟಕದ ಈ ಜನ. ಅದರಲ್ಲಿಯೂ ಮುಖ್ಯವಾಗಿ ಗಂಗಾಧರ ಶಾಸ್ತ್ರಿಗಳನ್ನು ಎಷ್ಟು ನೆನೆದು ಕೊಂಡಾಡಿದರೂ ಕಡಿಮೆಯೇ. ನನ್ನ ಮೇಲೆ ನಂಬಿಕೆಯಿಟ್ಟು ಶಾಸ್ತ್ರಿಗಳಂತೆ ನನಗೆ ಸಹಾಯ ಮಾಡಿದವರು ಮತ್ತಾರೂ ಇಲ್ಲ.

ನನ್ನ ಮದ್ರಾಸಿನ ತೋಟ ಸಾಲದಲ್ಲಿತ್ತು. ಅದನ್ನು ಬಿಡಿಸಿಕೊಳ್ಳಲು ಆ ಸೋವಿಯ ಕಾಲಕ್ಕೇ ಶಾಸ್ತ್ರಿಗಳು ನನಗೆ ಐವತ್ತು ಸಾವಿರ ರೂ.ಗಳನ್ನು ಇಡಿಯಾಗಿ ಒಂದೇ ಕಂತಿನಲ್ಲಿ ಅದೂ ಮುಂಗಡವಾಗಿ ಕೊಟ್ಟರು. ಆ ಹಣದಿಂದಲೇ ನಾನು ತೋಟವನ್ನು ಉಳಿಸಿಕೊಂಡಿದ್ದು. ಇಲ್ಲದಿದ್ದಲ್ಲಿ ಅದು ಕೈಬಿಟ್ಟು ಹೋಗುತ್ತಿತ್ತು. ಅವರು ಅಂದು ನನಗೆ ಕೊಟ್ಟ ಆ ಐವತ್ತು ಸಾವಿರ ರೂ. ಇಂದು ನನ್ನ ಹಲವಾರು ಕೋಟಿಗಳ ಆಸ್ತಿ. ಅದು ನನ್ನ ತೋಟ ಎಂದು ಹೇಳಿಕೊಳ್ಳುವುದಕ್ಕಿಂತ ಗಂಗಾಧರ ಶಾಸ್ತ್ರಿಗಳ ತೋಟ ಎಂದೇ ಹೇಳಬೇಕು. ಹಾಗೇ ಹೇಳುತ್ತೇನೆ ಕೂಡಾ. ಅವರು ನನ್ನ ಪಾಲಿಗೆ ಬರೀ ಗಂಗಾಧರ ಶಾಸ್ತ್ರಿಗಳಲ್ಲ. ‘ಗಂಗಾಧರೇಂದ್ರ’ ಅಂದರೆ ಪರಮೇಶ್ವರ. ನಮ್ಮ ಪಾಲಿನ ದೇವರು. ನನ್ನ ಮದ್ರಾಸ್ ತೋಟವನ್ನು ನಾನು ಉಳಿಸಿಕೊಂಡಿದ್ದೇ ಅವರಿಂದ.

ಉತ್ತರ ಕರ್ನಾಟಕದಲ್ಲಿ ಅಭಿನಯಿಸಲು ಹೋಗುತ್ತಿದ್ದಾಗ ಅಲ್ಲಿ ಎಲ್ಲ ಊರಿನ ಜನ ನನಗೆ ತೋರಿದ ಪ್ರೀತಿ, ಕೊಟ್ಟ ಪ್ರೋತ್ಸಾಹ ಮರೆಯಲಾರೆ. ಕಂಪೆನಿಯ ಜನ ನನ್ನನ್ನು ತಮ್ಮ ಕುಟುಂಬದವರಂತೆಯೇ ಆತ್ಮೀಯವಾಗಿ ಕಂಡಿದ್ದಾರೆ. ಇದನ್ನೆಲ್ಲಾ ಜೀವನಪೂರ್ತಿ ಮರೆಯೋಕಾಗಲ್ಲ.

ಅದು 1965ರ ಆಸುಪಾಸಿನ ವರ್ಷಗಳು. ನಾಟಕ ಕಂಪೆನಿಗಳು ಹಾನಿಗೊಳಗಾದಾಗ, ಹಣ ಸಂಗ್ರಹ ಕಡಿಮೆಯಾದಾಗ, ಸಿನೆಮಾ ನಟ/ನಟಿಯರನ್ನು ಕರೆಸುವ ಪದ್ಧತಿ ಶುರುವಾಯಿತು. ಸಿನೆಮಾದವರು ನಾಟಕಗಳಲ್ಲಿ ಪಾರ್ಟು ಮಾಡುವರೆಂದರೆ ಸಹಜವಾಗಿ ವಿಶೇಷ ಆಕರ್ಷಣೆ. ಭರ್ಜರಿ ಕಲೆಕ್ಷನ್ ಆಗುತ್ತಿತ್ತು. ಸಿನೆಮಾದವರಿಗೂ ಅಷ್ಟೆ. ಸಿನೆಮಾದಲ್ಲಿ ಅವಕಾಶಗಳು ಕಡಿಮೆಯಾದಾಗ ಅವರು ಉತ್ತರ ಕರ್ನಾಟಕದ ನಾಟಕ ಕಂಪೆನಿಗಳತ್ತ ಹೊರಳುತ್ತಿದ್ದರು. ಆ ಕಾಲದಲ್ಲಿ ಅವರಿಗೆ ನಮ್ಮ ನಾಟಕ ಕಂಪೆನಿಗಳು ಕೊಡುವಷ್ಟು ವರಮಾನವನ್ನು ಸಿನೆಮಾಗಳೂ ಕೊಡುತ್ತಿರಲಿಲ್ಲ. ಒಂದು ದಿನಕ್ಕೆ ಒಂದು ನಾಟಕಕ್ಕೆ ಐದು ನೂರು ರೂ.! ಇದು ಆಗಿನ ಕಾಲಕ್ಕೆ ಥಿಯೇಟರ್ ತುಂಬಿ ಆದ ಕಲೆಕ್ಷನ್ನಿನ ಅರ್ಧ ಹಣ. ಇಷ್ಟು ಕೊಟ್ಟೂ ನಾಟಕ ಕಂಪೆನಿಗಳಿಗೆ ಲಾಭವಾಗುತ್ತಿತ್ತು. ಆಗ ಒಳ್ಳೆಯ ನಟ/ನಟಿಯರ ತಿಂಗಳ ಪಗಾರವೇ 200-300 ರೂ. ಇದ್ದ ಕಾಲ. ಸಿನೆಮಾದವರಿಗೆ ದಿನಕ್ಕೆ ಸರಾಸರಿ 500 ರೂ. ಊಟ, ವಸತಿ, ಪ್ರಯಾಣ ವೆಚ್ಚ ಎಲ್ಲಾ ಕೊಡುತ್ತಿದ್ದರು. ನಾವೆಲ್ಲ ಅದರ ಮೇಲೇನೆ ಹೊಟ್ಟೆ ತುಂಬಿಸ್ಕೊಳ್ತಾ ಇದ್ದಿದ್ದು. ಉಪಕಾರ ಅಂತ ಸಿನೆಮಾದಿಂದ ಆಗಲಿಲ್ಲ. ಆಗಿದ್ದು ಡ್ರಾಮಾದಿಂದಲೇ. ತಂಪು ಹೊತ್ತಲ್ಲಿ ನೆನೆಸ್ಕೊಬೇಕು ನಾನು.

ಒಂದು ದಿನ ಗಂಗಾಧರ ಶಾಸ್ತ್ರಿಗಳು ಬಂದರು. ಅವರದು ಕಂಪೆನಿ ಇತ್ತು. ‘ಅಮ್ಮಾ, ನೀವು ಅಗ್ರಿಮೆಂಟ್ ಮಾಡ್ಕಳ್ಳಿ. ನಿಮಗೆ ಒಂದೇ ಏಟಿಗೆ 50 ಸಾವಿರ ರೂ. ಕೊಡ್ತೇನೆ’ ಅಂದ್ರು. ನನ್ನ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ಒಟ್ಟಾಗಿ ಅಷ್ಟು ಹಣ ನಾನು ಕಂಡಿದ್ದು ಅದೇ ಮೊದಲು. ಸಿನೆಮಾದಲ್ಲಿ 2,3,5 ಸಾವಿರ ಸಿಗೋದು. ಆ ಹೊತ್ತಿಗೆ ನಾನು ಮದ್ರಾಸಿನಲ್ಲಿ ತೋಟ ಕೊಂಡುಕೊಂಡಿದ್ದೆ. ಅದರ ಬಾಕಿ ಇನ್ನೂ ಅಷ್ಟು ಕೊಡೊದಿತ್ತು. ಶಾಸ್ತ್ರಿಗಳು ಅಷ್ಟು ಹಣ ಕೊಟ್ಟಿರದಿದ್ದರೆ ಆ ತೋಟ ಕೈಬಿಡ್ತಿತ್ತು. ಒಟ್ಟು 160 ನಾಟಕಗಳಿಗೆ ಕಂಟ್ರಾಕ್ಟ್ ಮಾಡಿಕೊಂಡು ಹಣ ಕೊಟ್ಟಿದ್ರು. ಆಗಾಗ ಗುಡಗೇರಿ ಬಸವರಾಜ ಅವರ ‘ಸೂಳೆಯ ಮಗ’ ನಾಟಕದಲ್ಲಿ ನಾಯಕಿ ಸಂಧ್ಯಾಳ ಪಾತ್ರ ಮಾಡಲು ಹೋಗುತ್ತಿದ್ದೆ. ನಾಯಕ ಸುಂದರನ ಪಾತ್ರ ಮಾಲಕ ಗುಡಗೇರಿ ಬಸವರಾಜ ಅವರದು. ಕೆಲ ಸಮಯದ ನಂತರ ಗುಡಗೇರಿ ಕಂಪೆನಿ ಹಾನಿಯಲ್ಲಿ ಬಂತು. ಮ್ಯಾನೇಜ್‌ಮೆಂಟನ್ನು ಶಾಸ್ತ್ರಿಗಳು ವಹಿಸಿಕೊಂಡಿದ್ದರು. ಜೊತೆಗೆ 50 ಸಾವಿರಕ್ಕೆ 160 ನಾಟಕದ ಕಂಟ್ರಾಕ್ಟ್ ಮಾಡಿಕೊಂಡರು. ಗುಡಗೇರಿ ಕಂಪೆನಿ ಮತ್ತೆ ಎಂದಿನಂತೆ ಲಾಭದಲ್ಲಿ ಬಂತು. ನಂತರ ಅದನ್ನು ಮಾಲಕ ಗುಡಗೇರಿ ಬಸವರಾಜರಿಗೆ ವಹಿಸಿಕೊಟ್ಟರು. ಆ ಕಾಲಕ್ಕೆ 50 ಸಾವಿರ ರೂ. ಒಂದೇ ಗಂಟು ನೀಡಿದ್ದನ್ನು ಇಂದಿಗೂ ನೆನೆಯುವೆ...’’

ಇದು ಲೀಲಾವತಿ ಕುರಿತಾಗಿದ್ದರೂ ಉತ್ತರ ಕರ್ನಾಟಕದ ಕಂಪೆನಿಗಳ ಮತ್ತು ಸಿನೆಮಾ ನಟ/ನಟಿಯರ ಬಾಂಧವ್ಯ ಕುರಿತೂ ಹೇಳುತ್ತಿದೆ. ನಟ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಅವರನ್ನು ಸಂದರ್ಶಿಸಿದಾಗ ‘‘ಸಿನೆಮಾದಲ್ಲಿ ಅಷ್ಟೊಂದು ಸಂಭಾವನೆ ಬರುತ್ತಿರಲಿಲ್ಲ. ಆದರೆ ಉತ್ತರ ಕರ್ನಾಟಕದ ನಾಟಕ ಕಂಪೆನಿಗಳಿಗೆ ತೂಗುದೀಪ ಶ್ರೀನಿವಾಸ್ ಅವರು ನಟಿಸಲು ಹೋದಾಗ ಮನೆ ಕಟ್ಟಿಕೊಳ್ಳಲು ಸಾಧ್ಯವಾಯಿತು’’ ಎಂದು ಹೆಮ್ಮೆಯಿಂದ ಹೇಳಿದ್ದರು.

ಹೀಗೆ ಕಂಪೆನಿ ನಾಟಕಗಳಿಗೆ ನಟಿಸಲು ಹೋದ ಸಿನೆಮಾ ಕಲಾವಿದರ ಪರಂಪರೆ ದೊಡ್ಡದಿದೆ. ಜಮಖಂಡಿ ಕಂಪೆನಿಗೆ ‘ಸದಾರಮೆ’ ನಾಟಕಕ್ಕೆ ಚಿತ್ರನಟ ನರಸಿಂಹರಾಜು, ಸುಂದರಕೃಷ್ಣ ಅರಸ್, ದೊಡ್ಡಣ್ಣ, ಸುಧೀರ್, ಕಲ್ಪನಾ, ಶ್ರೀನಾಥ್, ಸುದರ್ಶನ್- ಶೈಲಶ್ರೀ ದಂಪತಿ ಅವರು ಪಿ.ಬಿ.ಧುತ್ತರಗಿ ಅವರ

‘ಮಲಮಗಳು’ ನಾಟಕಕ್ಕೆ ಹೋಗುತ್ತಿದ್ದರು. ಸುಂದರರಾಜ್-ಪ್ರಮೀಳಾ ಜೋಷಾಯ್ ದಂಪತಿ ‘ಮದುಕನ ಮದುವೆ’ ನಾಟಕಕ್ಕೆ ಬಣ್ಣ ಹಚ್ಚುತ್ತಿದ್ದರು. ಶ್ರೀಲಲಿತಾ, ಶ್ರೀನಿವಾಸಮೂರ್ತಿ, ವಿಜಯಕಲಾ, ಆಶಾಲತಾ, ದಿನೇಶ್, ವಜ್ರಮುನಿ, ಕಲ್ಯಾಣಕುಮಾರ್, ಉದಯಕುಮಾರ್, ಗಿರಿಜಾ ಲೋಕೇಶ್, ಬಿ.ಜಯಮ್ಮ ಸೇರಿದಂತೆ ಅನೇಕ ಕಲಾವಿದರನ್ನು ಹೆಸರಿಸಬಹುದು. ಕಲ್ಪನಾ ಅವರಿಗೆ ಸಿನೆಮಾಗಳಲ್ಲಿ ಅವಕಾಶ ಕಡಿಮೆಯಾದಾಗ ಅದರಲ್ಲೂ ತಮ್ಮ ಮನೆಯನ್ನು ಪುನರ್ ನವೀಕರಣ ಮಾಡಿದ ಪರಿಣಾಮ ಲಕ್ಷಾಂತರ ರೂ. ಸಾಲ ಮಾಡಿದ್ದರು. ಇದರಿಂದ ಅನಿವಾರ್ಯವಾಗಿ ನಾಟಕ ಕಂಪೆನಿಗಳತ್ತ ವಾಲಿದರು. ಅವರು ಪ್ರವೇಶಿಸಿದ್ದು ಗುಡಗೇರಿ ಬಸವರಾಜ ಅವರ ಕಂಪೆನಿಗೆ. ಆಮೇಲೆ ಅಲ್ಲಿಯೇ ದುರಂತ ಅಂತ್ಯ ಕಂಡಿದ್ದು ಇತಿಹಾಸ.

ಹಿರಿಯ ಕಲಾವಿದೆ ಉಮಾಶ್ರೀ ಅವರಂತೂ ಖಾನಾವಳಿ ಚೆನ್ನಿ ಪಾತ್ರಕ್ಕೆ ಹೆಸರಾಗಿದ್ದರು. ನಾಟಕ ಕಂಪೆನಿಗಳು ನಷ್ಟ ಅನುಭವಿಸಿ ಕ್ಯಾಂಪ್ ಬಂದ್ ಮಾಡಬೇಕೆಂದುಕೊಂಡಾಗ ಲಾಭ ತಂದುಕೊಡುತ್ತಿದ್ದವರು ಉಮಾಶ್ರೀ. ಅದರಲ್ಲೂ ಬಾದಾಮಿ ಬಳಿಯ ಬನಶಂಕರಿ ಜಾತ್ರೆಗಳಲ್ಲಿ ಸಿನೆಮಾ ಕಲಾವಿದರನ್ನು ಆಹ್ವಾನಿಸುವುದು ಪ್ರತೀ ವರ್ಷ ನಡೆಯುತ್ತಿದೆ. ಕೆಲ ವರ್ಷಗಳ ಹಿಂದೆ ಪ್ರೇಮಾ ಅವರು ಬನಶಂಕರಿ ಜಾತ್ರೆಯಲ್ಲಿ ಕಂಪೆನಿಯೊಂದಕ್ಕೆ ನಟಿಸಿದ್ದರು.

ಆದರೆ ಕಂಪೆನಿಯವರು ಲಾಭವನ್ನೇ ಕಾಣುತ್ತಾರೆಂದು ಹೇಳಲಾಗದು. ಮಾಲಾಶ್ರೀ ಅವರನ್ನು ಆಹ್ವಾನಿಸಿದ್ದ ಕಂಪೆನಿಯೊಂದು ಬರೊಬ್ಬರಿ 20 ಲಕ್ಷ ರೂ. ನಷ್ಟ ಅನುಭವಿಸಿತು. ಹೀಗೆಯೇ ಧಾರಾವಾಹಿ ಹಾಗೂ ರಿಯಾಲಿಟಿ ಷೋಗಳಲ್ಲಿ ನಟಿಸಿದವರನ್ನು ಆಹ್ವಾನಿಸಿ ಕಲೆಕ್ಷನ್ ಆಗದೆ ಕೈ ಸುಟ್ಟುಕೊಂಡ ಕಂಪೆನಿಗಳೂ ಇವೆ.

ಏನೇ ಇರಲಿ, ರಂಗಭೂಮಿ ಹಾಗೂ ಸಿನೆಮಾ ನಂಟು ನೇಯ್ಗೆಯ ಹಾಸುಹೊಕ್ಕಿನ ಹಾಗೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News