ಖಾಸಗಿತನದ ಹಕ್ಕು, ಮಾಹಿತಿ ಹಕ್ಕು: ಸುಪ್ರೀಂ ಅಂಗಳದಲ್ಲಿ ಚುನಾವಣಾ ಬಾಂಡ್ ಸಂಘರ್ಷ

Update: 2023-11-03 02:16 GMT

ಹೊಸದಿಲ್ಲಿ: ಚುನಾವಣಾ ಬಾಂಡ್ ಯೋಜನೆಯ ಅಧಿಕೃತತೆಯನ್ನು ನಿರ್ಧರಿಸುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಗೆ  ಮತದಾರರ ಮಾಹಿತಿ ಹಕ್ಕು ಮತ್ತು ದೇಣಿಗೆ ನೀಡಿದವರ ಖಾಸಗಿತನದ ಹಕ್ಕು ಈ ಎರಡು ವಿಚಾರಗಳ ನಡುವಿನ ಸಂಘರ್ಷವನ್ನು ಬಗೆಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ವ್ಯಕ್ತಿಗಳ ವಿವರಗಳನ್ನು ತಿಳಿಯುವ ಹಕ್ಕು ಮತದಾರರಿಗೆ ಇದ್ದು, ಇಡೀ ವ್ಯವಸ್ಥೆ ಪಾರದರ್ಶಕವಾಗಿರಬೇಕು ಎನ್ನುವ ವಾದ ಅರ್ಜಿದಾರರದ್ದಾದರೆ, ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಆಯ್ಕೆಯ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವ ಸಂದರ್ಭದಲ್ಲಿ ದೇಣಿಗೆ ನೀಡಿದ ಸಂಸ್ಥೆಗಳ ಗೌಪ್ಯತೆ ಕಾಪಾಡಬೇಕು ಎನ್ನುವುದು ಕೇಂದ್ರ ಸರ್ಕಾರದ ವಾದ.

ಚುನಾವಣಾ ಬಾಂಡ್ ಯೋಜನೆಯ ಅಪಾರದರ್ಶಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಅಂತಿಮ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಭೂಷಣ್ ಆರ್.ಗವಾಯಿ, ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದಕ್ಕೆ ಸಹಮತ ವ್ಯಕ್ತಪಡಿಸಿದ್ದು, "ರಾಜಕೀಯ ಪಕ್ಷಗಳಿಗೆ ಹೇಗೆ ದೇಣಿಗೆ ನೀಡಲಾಗುತ್ತದೆ ಎಂದು ತಿಳಿದುಕೊಳ್ಳುವ ನಾಗರಿಕರ ಹಕ್ಕು ಮತ್ತು ರಾಜಕೀಯ ಪಕ್ಷಗಳ ಜತೆಗಿನ ಸಂಬಂಧದ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಹಕ್ಕಿನ ನಡುವೆ ಸಮತೋಲನ ಅಗತ್ಯ" ಎಂದು ಅಭಿಪ್ರಾಯಪಟ್ಟಿದೆ.

ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶದ ಅನ್ವಯ ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕುಗಳಿಗೆ ಸೇರಿಸಿರುವುದನ್ನು ತುಷಾರ್ ಮೆಹ್ತಾ ಉಲ್ಲೇಖಿಸಿದರು. ಈ ಹಂತದಲ್ಲಿ ವಾದ ಮಂಡಿಸಿದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು, ಸುಪ್ರೀಂಕೋರ್ಟ್ ತನ್ನ ಸಂವಿಧಾನಾತ್ಮಕ ಅಧಿಕಾರವನ್ನು ಚಲಾಯಿಸಿ, ರಾಜಕೀಯ ದೇಣಿಗೆಗೆ ವ್ಯವಸ್ಥೆ ಸೃಷ್ಟಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ರಾಜಕೀಯ ಪಕ್ಷಗಳ ದೇಣಿಗೆ ಮೂಲವನ್ನು ತಿಳಿದುಕೊಳ್ಳುವ ಮತದಾರರ ಹಕ್ಕನ್ನು ಚುನಾವಣಾ ಬಾಂಡ್ ಉಲ್ಲಂಘಿಸಿದೆಯೇ ಎನ್ನುವ ಅಂಶವನ್ನು ಸುಪ್ರೀಂಕೋರ್ಟ್ ಪರಿಶೀಲಿಸಲಿದೆ ಎಂದು ಸಿಜೆಐ ಸ್ಪಷ್ಟನೆ ನೀಡಿದರು. ಸಂವಿಧಾನದಲ್ಲಿ ಒಂದು ಹಕ್ಕನ್ನು ಉಲ್ಲೇಖಿಸಲಾಗಿದೆಯೇ ಎಂದು ಪರಿಶೀಲಿಸುವುದರಿಂದ ಶಾಸಕಾಂಗ ಅಥವಾ ಕಾರ್ಯಾಂಗದ ಕ್ಷೇತ್ರಕ್ಕೆ ಲಗ್ಗೆ ಇಟ್ಟಂತಾಗುವುದಿಲ್ಲ. ಹಾಲಿ ಇರುವ ವ್ಯವಸ್ಥೆಯ ಅಧಿಕೃತತೆಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News