ಗ್ರಂಥಾಲಯಗಳನ್ನು ನಿಯಂತ್ರಿಸಲು ಮಸೂದೆ?

Update: 2023-08-16 04:49 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಏನನ್ನು ಬರೆಯಬೇಕು, ಏನನ್ನು ಮಾತನಾಡಬೇಕು ಎನ್ನುವುದರ ಬಗ್ಗೆ ಪತ್ರಕರ್ತರಿಗೆ, ಮಾಧ್ಯಮಗಳಿಗೆ, ಜನಸಾಮಾನ್ಯರಿಗೆ ಕೇಂದ್ರ ಸರಕಾರ ಕಾನೂನುಗಳ ಮೂಲಕ ಆಗಾಗ ನಿರ್ದೇಶನ ನೀಡುತ್ತಿರುತ್ತದೆ. ಸರಕಾರಕ್ಕೆ ಕಹಿಯಾಗುವಂತೆ ಬರೆದ ಲೇಖಕರು, ಚಿಂತಕರಲ್ಲಿ ಹಲವರು ಈಗಾಗಲೇ ದೇಶದ್ರೋಹ ಆರೋಪ ಹೊತ್ತು ಜೈಲು ಸೇರಿದ್ದಾರೆ. ಸರಕಾರದ ವಿರುದ್ಧ ಯೋಚಿಸುವವರನ್ನು, ಚಿಂತಿಸುವವರನ್ನು ‘ಅರ್ಬನ್ ನಕ್ಸಲ್’ ಎಂದು ಘೋಷಿಸಿ ಅವರ ಮೇಲೆ ಕೇಸು ದಾಖಲಿಸಲಾಗುತ್ತಿದೆ. ಹಿಂದಿನ ಬ್ರಿಟಿಷ್ ಕಾಲದ ದೇಶದ್ರೋಹಿ ಕಾನೂನಿನ ಬದಲಿಗೆ ಹೊಸ ಸ್ವದೇಶಿ ಕಾನೂನೊಂದನ್ನು ಜಾರಿಗೊಳಿಸಿ ಬರಹಗಾರರು, ಸಾಮಾಜಿಕ ಹೋರಾಟಗಾರರ ಕೈಕಾಲುಗಳನ್ನು ಇನ್ನಷ್ಟು ಬಿಗಿಯಾಗಿ ಕಟ್ಟಿ ಹಾಕಲು ಸಿದ್ಧತೆ ನಡೆಸುತ್ತಿದೆ. ಇದೇ ಹೊತ್ತಿಗೆ ಸರಕಾರದ ಪಾಲಿಗೆ ಜನರು ವೈಚಾರಿಕ, ವೈಜ್ಞಾನಿಕವಾಗಿರುವ ಅತ್ಯುತ್ತಮ ಪುಸ್ತಕಗಳನ್ನು ಓದುವುದು ಕೂಡ ಸಮಸ್ಯೆಯಾದಂತಿದೆ. ಆದುದರಿಂದ ಜನರು ಏನನ್ನು ಓದಬೇಕು, ಏನನ್ನು ಓದಬಾರದು ಎನ್ನುವುದನ್ನು ಕೂಡ ತಾನೇ ನಿರ್ಧರಿಸಲು ಮುಂದಾದಂತಿದೆ. ಆ ಕಾರಣಕ್ಕಾಗಿಯೇ ದೇಶದ ವಿವಿಧ ರಾಜ್ಯಗಳಲ್ಲಿರುವ ಗ್ರಂಥಾಲಯಗಳ ನಿಯಂತ್ರಣ ಸಾಧಿಸಲು ಹೊರಟಿದೆ.

ಗ್ರಂಥಾಲಯ ಚಳವಳಿಗಳಿಗೆ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಗ್ರಂಥಾಲಯ ಚಳವಳಿ ತನ್ನದೇ ಆದ ಪಾತ್ರಗಳನ್ನು ನಿರ್ವಹಿಸಿತ್ತು. ಸ್ವಾತಂತ್ರ್ಯಾನಂತರವೂ ಗ್ರಂಥಾಲಯಗಳನ್ನು ರೂಪಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಬಹಳಷ್ಟು ವೆಚ್ಚಗಳನ್ನು ಮಾಡಿವೆ. ಜನರನ್ನು ಚಿಂತನಾಶೀಲರನ್ನಾಗಿಸುವಲ್ಲಿ ಗ್ರಂಥಾಲಯಗಳ ಪಾತ್ರ ಬಹುದೊಡ್ಡದು. ದೇಶಾದ್ಯಂತ ಈ ಲೈಬ್ರರಿಗಳ ಸಹಸ್ರಾರು ಶಾಖೆಗಳು ಹರಡಿಕೊಂಡಿವೆ. ದೇಶದಲ್ಲಿ ೪೬,೭೪೬ ನೋಂದಾಯಿತ ಸಾರ್ವಜನಿಕ ವಾಚನಾಲಯಗಳಿವೆ. ಇವುಗಳ ಪೈಕಿ ೯,೫೧೫ ವಾಚನಾಲಯಗಳನ್ನು ಹೊಂದಿರುವ ಕೇರಳ ಅಗ್ರ ಸ್ಥಾನದಲ್ಲಿದೆ. ಶೈಕ್ಷಣಿಕ ಸಂಸ್ಥೆಗಳ ವಾಚನಾಲಯಗಳನ್ನೂ ಸೇರಿಸಿದರೆ, ಕೇರಳ ರಾಜ್ಯದಲ್ಲಿನ ವಾಚನಾಲಯಗಳ ಸಂಖ್ಯೆ ಸುಮಾರು ೧೪,೦೦೦ ಆಗುತ್ತದೆ. ಕರ್ನಾಟಕದಲ್ಲಿ ೬,೮೯೦ ನೋಂದಾಯಿತ ವಾಚನಾಲಯಗಳಿವೆ. ಅವುಗಳಲ್ಲಿ ೫,೭೬೬ ಗ್ರಾಮ ಪಂಚಾಯತ್ ವಾಚನಾಲಯಗಳು, ೧೨೭ ಸಂಚಾರಿ ವಾಚನಾಲಯಗಳು ಮತ್ತು ಏಳು ಮಕ್ಕಳ ವಾಚನಾಲಯಗಳು ಸೇರಿವೆ.

ಬೇರೆ ಬೇರೆ ಕಾರಣಗಳಿಂದ ದೇಶಾದ್ಯಂತ ಪುಸ್ತಕಗಳ ಓದುಗರ ಸಂಖ್ಯೆ ಇಳಿಮುಖವಾಗುತ್ತಿದೆ ಎನ್ನುವುದು ಸಮೀಕ್ಷೆಗಳಿಂದ ಬಹಿರಂಗವಾಗುತ್ತಿವೆ. ವಿದ್ಯುನ್ಮಾನ ತಂತ್ರಜ್ಞಾನಗಳಲ್ಲಿ ಆಗಿರುವ ಅಭಿವೃದ್ಧಿಯೂ ಇದಕ್ಕೆ ಕಾರಣವಾಗಿರಬಹುದು. ಆದರೆ ಗ್ರಂಥಾಲಯಗಳ ಕುರಿತಂತೆ ಸರಕಾರದ ನಿರ್ಲಕ್ಷ್ಯಗಳ ಪಾತ್ರವನ್ನು ಈ ಸಂದರ್ಭದಲ್ಲಿ ನಿರಾಕರಿಸುವಂತಿಲ್ಲ. ಸರಕಾರದ ಅವ್ಯವಸ್ಥೆಯಿಂದಾಗಿ ಈಗಾಗಲೇ ಗ್ರಂಥಾಲಯಗಳು ಕಳಪೆ ಪುಸ್ತಕಗಳ ಗೋದಾಮುಗಳಾಗಿ ಪರಿವರ್ತನೆಗೊಂಡಿವೆ. ಅರ್ಹ ಪ್ರಕಾಶಕರ, ಲೇಖಕರ ಕೃತಿಗಳು ಗ್ರಂಥಾಲಯಗಳನ್ನು ತಲುಪುತ್ತಿಲ್ಲ. ಗ್ರಂಥಾಲಯಗಳಿಗಾಗಿಯೇ ಪುಸ್ತಕಗಳನ್ನು ಮುದ್ರಿಸುವ ಪ್ರಕಾಶಕರ ಮಾಫಿಯಾ ಒಂದಿದೆ. ಅರ್ಹ ಲೇಖಕರು, ಪ್ರಕಾಶಕರು ಇವರ ಜೊತೆಗೆ ಸ್ಪರ್ಧಿಸಲು ಸಾಧ್ಯವಾಗದೆ ತಮ್ಮ ಪುಸ್ತಕಗಳನ್ನು ಓದುಗರಿಗೆ ತಲುಪಿಸಲು ಪರ್ಯಾಯ ದಾರಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ವೈಚಾರಿಕ, ವೈಜ್ಞಾನಿಕ, ಸೃಜನಶೀಲ ಕೃತಿಗಳನ್ನು ಗ್ರಂಥಾಲಯಗಳು ದೂರ ಇಡುತ್ತಿವೆ ಎನ್ನುವ ಆರೋಪಗಳು ಹೆಚ್ಚುತ್ತಿವೆ. ಪರಿಣಾಮವಾಗಿ ಲೈಬ್ರರಿಗಳ ಕುರಿತ ಆಸಕ್ತಿ ಜನರಲ್ಲಿ ಕಡಿಮೆಯಾಗುತ್ತಿದೆ.

ಕೇಂದ್ರದ ಜಿಎಸ್‌ಟಿ ಹೇರಿಕೆಯಿಂದಾಗಿ ಪುಸ್ತಕ ಪ್ರಕಾಶನ ದುಬಾರಿಯಾಗಿದೆ. ಗಂಭೀರ ವೈಚಾರಿಕ ಪುಸ್ತಕಗಳನ್ನಂತೂ ಮುದ್ರಿಸುವಂತೆಯೇ ಇಲ್ಲ ಎನ್ನುವ ಸ್ಥಿತಿಯಿದೆ. ಲೇಖಕರು ಸ್ವತಃ ಮುದ್ರಿಸಿ ಮಾರಾಟ ಮಾಡುವಂತಹ ಸ್ಥಿತಿ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲೇ ಇಲ್ಲ. ಗ್ರಂಥಾಲಯಗಳು ನೆರವಿಗೆ ಬರುತ್ತವೆ ಎನ್ನುವ ನಿರೀಕ್ಷೆಯಿಂದ ಹೆಚ್ಚಿನ ಪ್ರಕಾಶಕರು ವೈಚಾರಿಕ, ಸಾಹಿತ್ಯಕ ಪುಸ್ತಕಗಳನ್ನು ಪ್ರಕಟಿಸುತ್ತಾರೆ. ಕೇರಳದಂತಹ ರಾಜ್ಯಗಳು ವೈಚಾರಿಕ ಕ್ರಾಂತಿಯನ್ನು ಸಾಧಿಸಿರುವುದೇ ಗ್ರಂಥಾಲಯಗಳ ಮೂಲಕ. ಇತ್ತೀಚಿನ ದಿನಗಳಲ್ಲಿ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗಲು ಮುಖ್ಯ ಕಾರಣ ಪುಸ್ತಕಗಳ ದರ ದುಬಾರಿಯಾಗುತ್ತಿರುವುದು. ಲೇಖಕರು ಮತ್ತು ಓದುಗರ ನಡುವಿನ ಗೋಡೆ ಎತ್ತರಿಸಲ್ಪಡುತ್ತಿವೆ. ಡಿಜಿಟಲ್ ಗ್ರಂಥಾಲಯಗಳು ಆರಂಭವಾಗಿವೆಯಾದರೂ, ಅವು ಪುಸ್ತಕಗಳಷ್ಟು ಪರಿಣಾಮಕಾರಿಯಾಗಿ ಓದುಗರನ್ನು ತಲುಪಲು ಇನ್ನೂ ಯಶಸ್ವಿಯಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಗ್ರಂಥಾಲಯಗಳನ್ನು ನೆಚ್ಚಿಕೊಳ್ಳುವ ಸ್ಥಿತಿಯೂ ಇಲ್ಲ. ಇಂತಹ ಸಂದರ್ಭದಲ್ಲಿ ಗ್ರಂಥಾಲಯಗಳು ಲಕ್ಷಾಂತರ ಓದುಗರಿಗೆ ನೆರಳನ್ನೀಯುತ್ತಾ ಬಂದಿವೆ. ಓದುವ ಸಂಸ್ಕೃತಿ ಇಂದು ಒಂದಿಷ್ಟು ಉಳಿದಿದೆಯಾದರೆ ಅದಕ್ಕೆ ಗ್ರಂಥಾಲಯಗಳ ಕೊಡುಗೆ ಬಹುದೊಡ್ಡದು. ಓದುವವರು ಮತ್ತು ಬರೆಯುವವರನ್ನು ಏಕಕಾಲದಲ್ಲಿ ಪೊರೆಯುತ್ತಾ ಸಾಗುತ್ತಿವೆ ದೇಶದ ಗ್ರಂಥಾಲಯಗಳು. ಅವ್ಯವಹಾರಗಳು, ಅಕ್ರಮಗಳು ಗ್ರಂಥಾಲಯಗಳ ಉದ್ದೇಶಕ್ಕೆ ಸಾಕಷ್ಟು ಧಕ್ಕೆ ಮಾಡಿವೆಯಾದರೂ ಇಂದಿಗೂ ಅತ್ಯುತ್ತಮ ಕೃತಿಗಳಿಗಾಗಿ ಗ್ರಂಥಾಲಯದ ಬಾಗಿಲು ತಟ್ಟುವ ಓದುಗರಿದ್ದಾರೆ.

ಇದೇ ಹೊತ್ತಿಗೆ ಬಲಪಂಥೀಯ ಸಿದ್ಧಾಂತವನ್ನು ಹರಡುವುದಕ್ಕಾಗಿ ಗ್ರಂಥಾಲಯಗಳ ಮೇಲೆ ಆರೆಸ್ಸೆಸ್‌ನ ಸಹ ಸಂಘಟನೆಗಳು ಬೇರೆ ಬೇರೆ ಸಾಹಿತ್ಯ ಪ್ರಕಾಶನಗಳ ವೇಷದಲ್ಲಿ ಗ್ರಂಥಾಲಯದೊಳಗೆ ಅಕ್ರಮವಾಗಿ ನುಗ್ಗುತ್ತಿವೆ. ಜೀವ ವಿರೋಧಿ, ಸಂವಿಧಾನ ವಿರೋಧಿ ಚಿಂತನೆಗಳನ್ನು ಗ್ರಂಥಾಲಯದೊಳಗೆ ನುಗ್ಗಿಸುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರಕಾರವನ್ನು ಬಳಸಿಕೊಂಡು ತಮ್ಮ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಸಾಗಿಸುವುದು ಮಾತ್ರವಲ್ಲ, ವೈಚಾರಿಕ, ವೈಜ್ಞಾನಿಕ ಪುಸ್ತಕಗಳನ್ನು ಕೊಳ್ಳದಂತೆ ಒತ್ತಡ ಹೇರುವ ಕೆಲಸಗಳನ್ನು ಇವುಗಳು ಮಾಡುತ್ತಿವೆ. ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಗ್ರಂಥಾಲಯಗಳು ಇನ್ನೂ ತನ್ನ ಗುಣಮಟ್ಟವನ್ನು ಉಳಿಸಿಕೊಂಡಿವೆ. ಕಳಪೆ ಪುಸ್ತಕಗಳು ಗ್ರಂಥಾಲಯಗಳನ್ನು ಪ್ರವೇಶಿಸುತ್ತಿವೆಯಾದರೂ, ಸಂಘಪರಿವಾರದ ಜೀವವಿರೋಧಿ ಪುಸ್ತಕಗಳು ಪ್ರವೇಶಿಸದಂತೆ ರಾಜ್ಯ ಸರಕಾರಗಳು ತಡೆಯುತ್ತಿವೆ. ಈ ಕಾರಣದಿಂದಲೇ ವಿವಿಧ ರಾಜ್ಯಗಳಲ್ಲಿರುವ ಎಲ್ಲ ಗ್ರಂಥಾಲಯಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಹೊರಟಿದೆ.

ದೇಶದ ಗ್ರಂಥಾಲಯಗಳನ್ನು ಕೇಂದ್ರದ ನಿಯಂತ್ರಣಕ್ಕೆ ತರಲು ಹೊರಟಿರುವ ಕೇಂದ್ರ ಸಂಸ್ಕೃತಿ ಸಚಿವಾಲಯವು ಸಂಸತ್‌ನಲ್ಲಿ ಶೀಘ್ರವೇ ಮಸೂದೆಯೊಂದನ್ನು ಮಂಡಿಸುವ ನಿರೀಕ್ಷೆಯಿದೆ. ಈ ಮಸೂದೆಯ ಪ್ರಕಾರ ಗ್ರಂಥಾಲಯದ ಮೇಲೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಮಾನ ಕಾರ್ಯವ್ಯಾಪ್ತಿಯಿದೆ. ‘ವಾಚನಾಲಯಗಳ ನಿಯಂತ್ರಣ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಕೇಂದ್ರ ಸಂಸ್ಕೃತಿ ಸಚಿವಾಲಯ ಯೋಚಿಸುತ್ತಿದೆ’ ಎಂದು ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ವಾಚನಾಲಯಗಳ ಉತ್ಸವವೊಂದರಲ್ಲಿ ರಾಜಾರಾಮ್ ಮೋಹನ್ ರಾಯ್ ಲೈಬ್ರರಿ ಫೌಂಡೇಶನ್‌ನ ಮಹಾನಿರ್ದೇಶಕ ಪ್ರೊ. ಅಜಯ್ ಪ್ರತಾಪ್ ಸಿಂಗ್ ಹೇಳಿದ್ದರು. ಇದು ವಾಚನಾಲಯಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸಿ ಸಂಘ ಪರಿವಾರದ ಸಿದ್ಧಾಂತವನ್ನು ಹರಡುವ ಬೃಹತ್ ಕಾರ್ಯಸೂಚಿಯೊಂದರ ಭಾಗವಾಗಿದೆ ಎಂದು ಬಹುತೇಕ ರಾಜ್ಯಗಳು ಭಾವಿಸಿವೆ. ಈ ಮಸೂದೆಯ ಮೂಲಕ, ವಾಚನಾಲಯಗಳಿಗೆ ನೀಡುವ ನಿಧಿಗಳನ್ನು ಸರಕಾರ ನಿಯಂತ್ರಿಸುವ ಸಾಧ್ಯತೆಗಳಿವೆ. ರಾಜಾರಾಮ್ ಮೋಹನ್ ರಾಯ್ ಲೈಬ್ರರಿ ಫೌಂಡೇಶನ್ ಮುಂತಾದ ರಾಷ್ಟ್ರೀಯ ಸಂಸ್ಥೆಗಳು ನೀಡುವ ನಿಧಿಗಳು ಮತ್ತು ಅನುದಾನಗಳನ್ನು ಕೇಂದ್ರ ನಿಯಂತ್ರಿಸುವುದು ಮಾತ್ರವಲ್ಲ, ತನ್ನ ರಾಜಕೀಯ ದುರುದ್ದೇಶಗಳಿಗೆ ಸಹಾಯ ಮಾಡಬಲ್ಲ ಅಜೆಂಡಾಗಳಿರುವ ಪ್ರಕಾಶನಗಳಿಗೆ ಈ ನಿಧಿಯನ್ನು ದುರ್ಬಳಕೆ ಮಾಡುವ ಸಾಧ್ಯತೆಯ ಬಗ್ಗೆಯೂ ಚಿಂತಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ‘‘ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಚಿಂತನೆಗಳನ್ನು ಬಿತ್ತುವ ಪುಸ್ತಕಗಳನ್ನು ಆದ್ಯತಾ ಪಟ್ಟಿಯಿಂದ ಕೈಬಿಡುವ ಸಾಧ್ಯತೆಗಳಿವೆ. ಅವುಗಳ ಸ್ಥಾನವನ್ನು ಪ್ರತಿಗಾಮಿ ಚಿಂತನೆಗಳನ್ನು ಬೋಧಿಸುವ ಪುಸ್ತಕಗಳು ಆಕ್ರಮಿಸಲಿವೆ. ಭವಿಷ್ಯದ ತಲೆಮಾರುಗಳು ಇದರ ಬಲಿಪಶುಗಳಾಗಲಿವೆ’’ ಎಂದು ಈಗಾಗಲೇ ಕೇರಳ, ಕರ್ನಾಟಕದ ಗ್ರಂಥಾಲಯ ಮುಖ್ಯಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ‘‘ನಾವು ಕೇರಳದಲ್ಲಿ ಜಾತ್ಯತೀತ, ಪ್ರಗತಿಪರ ಮತ್ತು ಸಮ್ಮಿಳಿತ (ಎಲ್ಲರನ್ನೂ ಒಳಗೊಂಡ) ವಾಚನಾಲಯ ವ್ಯವಸ್ಥೆಯೊಂದನ್ನು ಹೊಂದಿದ್ದೇವೆ. ಇದು ವರ್ಷಗಳ ಬಳಿಕ ಜಾಗತಿಕ ಮಾದರಿಯಾಗಿ ಹೊರಹೊಮ್ಮಿದೆ. ವಾಚನಾಲಯಗಳು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳು. ಇದರಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪವನ್ನು ವಿರೋಧಿಸಬೇಕು’’ ಎಂದು ಕೇರಳ ಗ್ರಂಥಾಲಯ ಮಂಡಳಿಯ ಮುಖ್ಯಸ್ಥರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಈ ದೇಶದ ಗ್ರಂಥಾಲಯಗಳು ಪರ್ಯಾಯ ಶಾಲೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಓದುಗರು ತಮ್ಮ ಪಠ್ಯವನ್ನು ಸ್ವಯಂ ಆಯ್ಕೆ ಮಾಡಿಕೊಳ್ಳುವ ಅವಕಾಶಗಳು ಈ ಪರ್ಯಾಯ ಶಾಲೆಗಳಲ್ಲಿವೆ. ದೇಶದಲ್ಲಿರುವ ಗ್ರಂಥಾಲಯಗಳು ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಪ್ರಜ್ಞಾವಂತ ಓದುಗರನ್ನು ಬೆಳೆಸುವ ಪ್ರಯತ್ನ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ಗ್ರಂಥಾಲಯದ ನಿಯಂತ್ರಣ ಕೇಂದ್ರ ಸರಕಾರದ ವಶವಾದರೆ, ಶಿಕ್ಷಣ ಕ್ಷೇತ್ರವನ್ನು ಕುಲಗೆಡಿಸಿದಂತೆಯೇ ಗ್ರಂಥಾಲಯಗಳನ್ನು ಕೂಡ ಕುಲಗೆಡಿಸಲಿದೆ. ಗ್ರಂಥಾಲಯಗಳು ಸಂಘಪರಿವಾರದ ಜೀವವಿರೋಧಿ ಚಿಂತನೆಗಳನ್ನು ಹಂಚುವ ಕೇಂದ್ರಗಳಾಗಿ ಮಾರ್ಪಾಡಾಗಲಿವೆ. ಇದರ ವಿರುದ್ಧ ಓದುಗರು, ಪ್ರಕಾಶಕರು, ಲೇಖಕರು ಸಂಘಟಿತವಾಗಿ ಧ್ವನಿಗೂಡಿಸುವ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News