ಅಪೌಷ್ಟಿಕತೆಯಿಂದ ನರಳುತ್ತಿರುವ ದೇಶ

Update: 2023-12-18 04:47 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಂದು ದೇಶ ಎಷ್ಟು ಆರೋಗ್ಯವಂತವಾಗಿದೆ ಎನ್ನುವುದನ್ನು ಗುರುತಿಸುವುದು ಅಲ್ಲಿರುವ ಬೃಹತ್ ಆಸ್ಪತ್ರೆಗಳಿಂದಲ್ಲ. ಆ ದೇಶದ ಜನತೆಯ ಬಹುಸಂಖ್ಯಾತ ಜನರು ಬಳಸುವ ಪೌಷ್ಟಿಕ ಆಹಾರಗಳಿಂದ. ಭಾರತದಲ್ಲಂತೂ ಹಸಿದವರಿಗೆ ಆಹಾರದ ಆಯ್ಕೆಯ ಅವಕಾಶ ತೀರಾ ಕಡಿಮೆ. ಹಸಿದವರಿಗೆ ಆಹಾರ ಸಿಗುತ್ತಿಲ್ಲ ಎನ್ನುವ ಗದ್ದಲದ ನಡುವೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಎನ್ನುವ ಕೂಗು ಬದಿಗೆ ಸರಿಯುತ್ತಿದೆ. ನಾವು ತಿನ್ನುವ ಆಹಾರ ಎಷ್ಟು ಪೌಷ್ಟಿಕವಾಗಿದೆ ಎಂದು ಪರಿಶೀಲಿಸುವುದಕ್ಕಿಂತ, ಹಸಿವನ್ನು ಇಂಗಿಸಲು ಶಕ್ತವಾಗಿದ್ದರೆ ಸಾಕು ಎನ್ನುವ ಸ್ಥಿತಿಗೆ ಈ ದೇಶದ ಬಡವರು ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಆಹಾರದ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಈ ದೇಶದ ಬಡವರ ಕೈಯಿಂದ ಅವರ ಅಳಿದುಳಿದ ಪೌಷ್ಟಿಕ ಆಹಾರವನ್ನು ಕಿತ್ತುಕೊಳ್ಳುತ್ತಿದೆ. ಒಂದೆಡೆ ಈ ದೇಶದ ಶೇಕಡ 75ರಷ್ಟು ಮಂದಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಎಂದು ವಿಶ್ವಸಂಸ್ಥೆಯ ಕೃಷಿ ಮತ್ತು ಆಹಾರ ಸಂಸ್ಥೆ ಹೇಳಿದ್ದರೆ, ಇಲ್ಲಿ ‘ವಿದ್ಯಾರ್ಥಿಗಳಿಗೆ ಮೊಟ್ಟೆ ಯಾಕೆ ನೀಡುತ್ತೀರಿ?’ ‘ಗೋಮಾಂಸಾಹಾರವನ್ನು ನಿಷೇಧಿಸಿ’ ‘ಮಾಂಸಾಹಾರ ತಾಮಸ ಗುಣವನ್ನು ಪ್ರೋತ್ಸಾಹಿಸುತ್ತದೆ’ ಎನ್ನುವ ಕೂಗು ಈ ದೇಶದ ರಾಜಕೀಯವನ್ನೇ ನಿಯಂತ್ರಿಸುತ್ತಿದೆ.

ಭಾರತದಲ್ಲಿ ದೇಶದ ಶೇ.31.7ರಷ್ಟು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕುಂಠಿತ ಬೆಳವಣಿಗೆಯಿಂದ ಬಳಲುತ್ತಿದ್ದಾರೆ. ಶೇ. 18.7ರಷ್ಟು ಮಕ್ಕಳು ಕೃಶ ಕಾಯವನ್ನು ಹೊಂದಿದ್ದು, ಭಾರೀ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೇ ಪೌಷ್ಟಿಕ ಆಹಾರದ ಕೊರತೆ ಎಂದು ವಿಶ್ವ ಸಂಸ್ಥೆ ಹೇಳುತ್ತದೆ. ಎಫ್ಎಒ ಪ್ರಕಾರ 2021ರಲ್ಲಿ ಶೇ. 74.1ರಷ್ಟು ಭಾರತೀಯರು ಆರೋಗ್ಯಕರ ಆಹಾರವನ್ನು ಪಡೆಯಲು ವಿಫಲರಾಗಿದ್ದಾರೆ. ಭಾರತದಲ್ಲಿ ಪೌಷ್ಟಿಕ, ಆರೋಗ್ಯಕರ ಆಹಾರದ ಬೆಲೆ ಅಧಿಕವಾಗುತ್ತಿರುವ ಪ್ರಮಾಣಕ್ಕೆ ಹೋಲಿಸಿದರೆ ಜನಸಾಮಾನ್ಯರ ಆದಾಯ ಹೆಚ್ಚದೇ ಇರುವುದೇ ಇದಕ್ಕೆ ಕಾರಣ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಡುತ್ತದೆ. ಭಾರತದಲ್ಲಿ ಮಹಿಳೆಯರು ತೀವ್ರ ರಕ್ತಹೀನತೆಯಿಂದ ನರಳುತ್ತಿರುವುದು ಅವರ ಗರ್ಭದೊಳಗಿರುವ ಮಗುವಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹುಟ್ಟುವಾಗಲೇ ಮಗು ಕಾಯಿಲೆಪೀಡಿತವಾಗಿರುತ್ತದೆ. ಭಾರತದಲ್ಲಿ ಐದು ವರ್ಷಕ್ಕಿಂತ ಕೆಳ ವಯಸ್ಸಿನ 56 ಸಾವಿರಕ್ಕೂ ಅಧಿಕ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಅವರು ದೇಶಾದ್ಯಂತ 1,129 ಪೌಷ್ಟಿಕತೆ ಪುನರ್ವಸತಿ ಕೇಂದ್ರದಲ್ಲಿ ದಾಖಲಾಗಿದ್ದಾರೆ ಎನ್ನುವುದನ್ನು ಅಂಕಿಅಂಶಗಳು ಹೇಳುತ್ತವೆ. ಅಪೌಷ್ಟಿಕತೆಯಿಂದ ಬಳಲುವ 11 ಲಕ್ಷಕ್ಕೂ ಅಧಿಕ ಮಕ್ಕಳು ಯಾವುದೇ ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗದೆ ಬದುಕು ಸವೆಸುತ್ತಿವೆ. 2022-23ರಲ್ಲಿ ಪುನರ್ವಸತಿ ಕೇಂದ್ರಗಳಲ್ಲಿ ದಾಖಲಾದ ಒಟ್ಟು ಮಕ್ಕಳ ಸಂಖ್ಯೆ 1.89 ಲಕ್ಷ. 2021-22ರಲ್ಲಿ 1.32 ಲಕ್ಷ ಮಕ್ಕಳು ತೀವ್ರ ಅಪೌಷ್ಟಿಕತೆಯ ಕಾರಣಕ್ಕಾಗಿ ವಿವಿಧ ಕೇಂದ್ರಗಳಲ್ಲಿ ದಾಖಲಾಗಿದ್ದಾರೆ. ಐದು ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳ ಅಪೌಷ್ಟಿಕತೆ ಮಧ್ಯಪ್ರದೇಶದಲ್ಲಿ ಗರಿಷ್ಠವಾಗಿದೆ. ವಿಪರ್ಯಾಸವೆಂದರೆ ಅಭಿವೃದ್ಧಿಯಲ್ಲಿ ದೇಶಕ್ಕೆ ಮಾದರಿ ಎಂದು ಮಾಧ್ಯಮಗಳ ಮೂಲಕ ಬಿಂಬಿಸಲ್ಪಡುತ್ತಿರುವ ಗುಜರಾತ್ ತೀವ್ರ ಅಪೌಷ್ಟಿಕತೆಗಾಗಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಗುಜರಾತಿನಲ್ಲಿ ಅಪೌಷ್ಟಿಕತೆಯ ಜೊತೆ ಜೊತೆಗೇ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಇಲ್ಲಿ ಮಹಿಳೆಯರು ತೀವ್ರ ಅನಾರೋಗ್ಯವನ್ನು ಎದುರಿಸುತ್ತಿರುವುದನ್ನೂ ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 50,000 ಮಕ್ಕಳನ್ನು ತೀವ್ರ ಅಪೌಷ್ಟಿಕತೆಯ ಕಾರಣಕ್ಕಾಗಿ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿರುವ ಅಂಶವನ್ನು ಸರಕಾರವೇ ಬಹಿರಂಗಪಡಿಸಿದೆ. 2021-22ರ ಸಾಲಿನಲ್ಲಿ ದೇಶಾದ್ಯಂತ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ತೀವ್ರವಾದ ಅಪೌಷ್ಟಿಕತೆ ಎದುರಾಗಿದೆ. ಐದು ವರ್ಷಕ್ಕಿಂತ ಕೆಳಗಿನ ವಯಸ್ಸಿನ 1.04 ಲಕ್ಷ ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸರಕಾರ ಲೋಕಸಭೆಯಲ್ಲಿ ತಿಳಿಸಿದೆ.

ಆರೋಗ್ಯವಂತ ಮಕ್ಕಳು ಮತ್ತು ಮಹಿಳೆಯರೇ ದೇಶದ ಭವಿಷ್ಯ. ಗರ್ಭಿಣಿಯರು ಪೌಷ್ಟಿಕ ಆಹಾರ ದೊರಕದೆ, ಆರೈಕೆಗಳಿಲ್ಲದೆ ರೋಗಪೀಡಿತ, ಕಾಯಿಲೆ ಪೀಡಿತ ಮಕ್ಕಳನ್ನು ಹೆರುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲ, ರಕ್ತಹೀನತೆಯ ಕಾರಣದಿಂದ ಹೆರಿಗೆಯ ಬಳಿಕ ಮಹಿಳೆಯರೂ ಶಾಶ್ವತ ಕಾಯಿಲೆಪೀಡಿತರಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹುಟ್ಟಿದ ಮಗುವಿಗೆ ಸೂಕ್ತ ಆರೈಕೆ ಸಿಗುವುದು ಕಷ್ಟವಾಗುತ್ತದೆ. ಇಂತಹ ಮಕ್ಕಳು ಬೌದ್ಧಿಕವಾಗಿ ಅಥವಾ ದೈಹಿಕವಾಗಿ ದೇಶದ ಪಾಲಿಗೆ ಸಂಪನ್ಮೂಲವಾಗುವುದಾದರೂ ಹೇಗೆ ಸಾಧ್ಯ? ನಾವಿಂದು ಯುವಕರಲ್ಲಿ ಕ್ರೀಡಾ ಪ್ರತಿಭೆಗಳನ್ನು ಹುಡುಕುತ್ತೇವೆ. ಬಲಾಢ್ಯ, ಶಕ್ತಿಶಾಲಿ, ಬುದ್ಧಿವಂತ ವಿದ್ಯಾರ್ಥಿಗಳು, ಯುವಕರು ದೇಶದ ಆಸ್ತಿಯೆಂದು ಸರಕಾರ ಘೋಷಿಸುತ್ತದೆ. ಆದರೆ ಅಂತಹ ಯುವಕರನ್ನ್ನು ಬೆಳೆಸುವ ಹೊಣೆಗಾರಿಕೆ ಕೂಡ ಸರಕಾರದ್ದೇ ಆಗಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಮಾತಿದೆ. ಒಂದು ಮರ ಸಮೃದ್ಧವಾಗಿ ಫಲ ಬಿಡಬೇಕಾದರೆ ಮೊದಲು ಬೀಜ ಉತ್ತಮವಾಗಿರಬೇಕು. ಗಿಡವಾಗಿದ್ದಾಗ ಅದರ ಆರೈಕೆ ನಡೆಯಬೇಕು. ಸರಿಯಾದ ನೀರು, ಗೊಬ್ಬರ ಇಲ್ಲದೆ ಬೆಳೆದ ಮರದಲ್ಲಿ ನಾವು ಫಲವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ತಾಯಂದಿರಿಗೆ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವುದೆಂದರೆ, ಈ ದೇಶದ ಜನಸಂಖ್ಯೆಯನ್ನು ಶಕ್ತಿಯಾಗಿಸುವುದೆಂದು ಅರ್ಥ. ಇಲ್ಲವಾದರೆ ಇವುಗಳೇ ದೇಶಕ್ಕೆ ಹೊರೆಯಾಗಿ ಬಿಡುತ್ತವೆ.

ಭಾರತ ಪೌಷ್ಟಿಕ ಆಹಾರ ಉತ್ಪಾದನೆಯಲ್ಲಿ ಹಿಂದೆ ಬಿದ್ದಿಲ್ಲ. ಇಂದಿಗೂ ಹಾಲು, ಮಾಂಸ ರಫ್ತಿನಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಈ ದೇಶದ ಜನರ ಬಾಯಿಯಿಂದ ಕಿತ್ತು ಪೌಷ್ಟಿಕ ಆಹಾರಗಳನ್ನು ರಫ್ತು ಮಾಡಲಾಗುತ್ತಿದೆ. ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಅನುಪಯುಕ್ತ ಗೋವುಗಳ ಮಾಂಸಗಳು ಕೂಡ ಬಡವರಿಗೆ ಸಿಗದಂತೆ ಮಾಡಲಾಗುತ್ತಿದೆ. ಶೇ. 10ರಷ್ಟಿರುವ ಜನರ ಭಾವನೆಗಳನ್ನು ಮುಂದಿಟ್ಟುಕೊಂಡು ಬಹುಸಂಖ್ಯಾತರ ಕೈಯಿಂದ ಪೌಷ್ಟಿಕ ಮಾಂಸಾಹಾರವನ್ನು ಕಿತ್ತುಕೊಳ್ಳಲಾಗುತ್ತಿರುವುದು ಆಘಾತಕಾರಿಯಾಗಿದೆ. ಒಂದೆಡೆ ಗೋಮಾಂಸ ರಫ್ತಿನಲ್ಲಿ ಭಾರತ ಇಂದಿಗೂ ಅಗ್ರಸ್ಥಾನದಲ್ಲೇ ಇದೆ. ಆದರೆ ಭಾರತೀಯ ಗೋಮಾಂಸಾಹಾರಿಗಳಿಗೆ ಮಾಂಸ ಪೂರೈಸುವ ಸಂದರ್ಭದಲ್ಲಿ ಅದಕ್ಕೆ ರಾಜಕೀಯಶಕ್ತಿಗಳು ಅಡ್ಡಿಪಡಿಸುತ್ತಿವೆ. ಪರಿಣಾಮವಾಗಿ, ಗ್ರಾಮೀಣ ಪ್ರದೇಶದ ರೈತರು ತಮ್ಮ ಅನುಪಯುಕ್ತ ಗೋವುಗಳನ್ನು ಮಾರುವುದಕ್ಕೆ ಕಷ್ಟವಾಗಿ ಹೈನೋದ್ಯಮವೂ ದುಬಾರಿಯಾಗಿದೆ. ಹೈನೋದ್ಯಮ ದುಬಾರಿಯಾಗುತ್ತಿದ್ದಂತೆಯೇ ಹಾಲು, ಮೊಸರು, ತುಪ್ಪದ ಬೆಲೆಯೂ ಏರಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ರೈತರು ತ್ಯಜಿಸಿದ ಅನುಪಯುಕ್ತ ಗೋವುಗಳನ್ನು ಸಾಕುವ ಹೊಣೆಗಾರಿಕೆಯನ್ನು ಸರಕಾರ ಗೋಶಾಲೆಗಳಿಗೆ ನೀಡಿದೆ. ಅನುಪಯುಕ್ತ ಗೋವುಗಳ ಸಾಕಣೆಗಾಗಿ ಸರಕಾರ ಪ್ರತಿವರ್ಷ ಸಾವಿರಾರು ಕೋಟಿ ರೂ.ಗಳನ್ನು ವ್ಯಯ ಮಾಡುತ್ತಿದೆ. ವಿಪರ್ಯಾಸವೆಂದರೆ, ಗೋಶಾಲೆಗಳು ಅಕ್ರಮಗಳ ಬೀಡಾಗಿದ್ದು ಈ ಹಣ ಗೋವುಗಳ ಸಾಕಣೆಗೆ ಬಳಕೆಯಾಗುತ್ತಿಲ್ಲ. ಗೋಶಾಲೆಗಳಲ್ಲಿರುವ ಅನುಪಯುಕ್ತ ಗೋವುಗಳು ಗುಟ್ಟಾಗಿ ಬೃಹತ್ ಮಾಂಸ ಸಂಸ್ಕರಣಾ ಘಟಕಗಳಿಗೆ ರವಾನೆಯಾಗಿ ಅಲ್ಲಿಂದ ವಿದೇಶಗಳಿಗೆ ರಫ್ತಾಗುತ್ತಿವೆ. ಒಟ್ಟಿನಲ್ಲಿ ಭಾರತೀಯರು ಅದರಲ್ಲೂ ದುರ್ಬಲ ಸಮುದಾಯದ ಬಡ ಜನರು ಗೋಮಾಂಸದಂತಹ ಪೌಷ್ಟಿಕ ಆಹಾರವನ್ನು ಬಳಕೆ ಮಾಡದಂತೆ ನೋಡಿಕೊಳ್ಳುವುದಕ್ಕಾಗಿಯೇ ಈ ದೇಶದಲ್ಲಿ ಗೋಮಾಂಸಾಹಾರ ಸೇವನೆಯನ್ನು ರಾಜಕೀಯಗೊಳಿಸಲಾಗಿದೆ. ದೇಶದ ಅಪೌಷ್ಟಿಕತೆಯ ಸಮಸ್ಯೆಯನ್ನು ಕಡಿಮೆಗೊಳಿಸಲು ಇರುವ ಒಂದೇ ಒಂದು ದಾರಿಯೆಂದರೆ, ಗೋಮಾಂಸಾಹಾರವನ್ನು ಸರಕಾರವೇ ಪ್ರೋತ್ಸಾಹಿಸುವುದು. ಅನುಪಯುಕ್ತ ಗೋವುಗಳನ್ನು ಮಾರುವ ಸಂಪೂರ್ಣ ಸ್ವಾತಂತ್ರ್ಯವನ್ನು ಆ ಗೋವುಗಳ ಹಕ್ಕುದಾರರಾಗಿರುವ ರೈತರಿಗೆ ನೀಡುವುದು. ಈ ಮೂಲಕ ಗೋಸಾಕಣೆಯ ವೆಚ್ಚವೂ ಇಳಿಕೆಯಾಗುತ್ತದೆ. ಇದು ಪರೋಕ್ಷವಾಗಿ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುತ್ತದೆ. ಸಹಜವಾಗಿಯೇ ಹಾಲು, ಬೆಣ್ಣೆ, ತುಪ್ಪ ಗಳ ಬೆಲೆ ಇಳಿಕೆಯಾಗುತ್ತದೆ. ಇದೇ ಸಂದರ್ಭದಲ್ಲಿ ದೇಶದಲ್ಲಿರುವ ಎಲ್ಲ ಗೋಶಾಲೆಗಳನ್ನು ಮುಚ್ಚಿಸಿ, ಅದಕ್ಕೆ ನೀಡುತ್ತಿರುವ ಅನುದಾನವನ್ನು ನೇರವಾಗಿ ಗೋವುಗಳನ್ನು ಸಾಕುವ ರೈತರಿಗೆ ಸಿಗುವಂತೆ ಮಾಡಬೇಕು. ಇದು ಹೈನೋದ್ಯಮದ ಮೇಲೆ ಮಾತ್ರವಲ್ಲ, ಆಹಾರ ಉತ್ಪಾದನೆಯ ಮೇಲೆಯೇ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಮಾಂಸಾಹಾರ ಅಗ್ಗದ ಬೆಲೆಯಲ್ಲಿ ದೊರಕತೊಡಗಿದಂತೆಯೇ ತರಕಾರಿ ಬೆಲೆಯೂ ಸಹಜವಾಗಿ ಇಳಿಕೆಯಾಗತೊಡಗುತ್ತದೆ.

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News