ರಣಹದ್ದುಗಳ ಸ್ಥಾನ ತುಂಬುತ್ತಿರುವ ಮನುಷ್ಯ

Update: 2024-08-01 06:08 GMT

Photo: x.com/CEOofGAMERSEX

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಾಧಾರಣವಾಗಿ ಹುಲಿ, ಸಿಂಹಗಳು ಕ್ರೂರ ಮಾಂಸಾಹಾರಿ ಪ್ರಾಣಿಗಳಾದರೂ, ಆ ಹೆಸರುಗಳನ್ನು ಮನುಷ್ಯ ತನ್ನ ಹೆಗ್ಗಳಿಕೆಗಾಗಿ ದುರುಪಯೋಗ ಪಡಿಸಿಕೊಳ್ಳುವುದಿದೆ. ತಮ್ಮ ನಾಯಕರನ್ನು ಹಿಂಬಾಲಕರು ಹುಲಿ, ಸಿಂಹಗಳಿಗೆ ಹೋಲಿಸುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಇದೇ ಸಂದರ್ಭದಲ್ಲಿ ದುಷ್ಟ ರಾಜಕಾರಣಿಗಳನ್ನು, ಶ್ರೀಸಾಮಾನ್ಯರನ್ನು ಶೋಷಿಸುವ ಅಧಿಕಾರಿಗಳನ್ನು ರಣ ಹದ್ದುಗಳಿಗೆ ಹೋಲಿಸುವುದಿದೆ. ವಿಪರ್ಯಾಸವೆಂದರೆ, ಇಂದು ಮನುಷ್ಯ ವೇಷದಲ್ಲಿರುವ ಇಂತಹ ರಣಹದ್ದುಗಳ ಸಂಖ್ಯೆ ಹೆಚ್ಚುತ್ತಿವೆ. ಇದೇ ಸಂದರ್ಭದಲ್ಲಿ ಈ ಮನುಷ್ಯರ ರಾಕ್ಷಸತ್ವದೊಂದಿಗೆ ಸ್ಪರ್ಧಿಸಲು ಕಸುವು ಸಾಲದೆ ರಣಹದ್ದುಗಳು ಅಳಿವಿನಂಚಿನಲ್ಲಿವೆ.

ಸಾಧಾರಣವಾಗಿ ಹದ್ದುಗಳಿಗೆ, ಗಿಡುಗಗಳಿಗೆ ಇರುವ ಗೌರವ ರಣಹದ್ದುಗಳಿಗಿಲ್ಲ. ಹಲವು ಮಾಂಸಾಹಾರಿ ಪ್ರಾಣಿ, ಪಕ್ಷಿಗಳಂತೆಯೇ ರಣಹದ್ದುಗಳೂ ಕಳೇಬರಗಳನ್ನೇ ಆಹಾರಕ್ಕೆ ನೆಚ್ಚಿಕೊಂಡಿವೆ. ಆದರೆ ರಣಹದ್ದುಗಳನ್ನು ಮನುಕುಲ ಸದಾ ನಿಕೃಷ್ಟವಾಗಿ ನಡೆಸಿಕೊಂಡು ಬಂದಿದೆ. ಯುದ್ಧಗಳು, ನರಮೇಧಗಳು, ಸಾಂಕ್ರಾಮಿಕ ರೋಗಗಳೊಂದಿಗೆ ಮನುಷ್ಯರು ರಣಹದ್ದುಗಳನ್ನು ನೆನಪಿಸಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ, ಯುದ್ಧಗಳು, ನರಮೇಧಗಳ ಮುಖ್ಯ ಕಾರಣಕರ್ತರು ಮನುಷ್ಯರೇ ಹೊರತು, ರಣ ಹದ್ದುಗಳಲ್ಲ. ಮನುಷ್ಯರು ಮಾಡಿದ ಅನಾಹುತಗಳ ಪರಿಣಾಮಗಳನ್ನು ತನ್ನ ಆಹಾರವಾಗಿಸಿ, ಈ ಜಗತ್ತನ್ನು ತಲೆ ತಲಾಂತರಗಳಿಂದ ರಣಹದ್ದುಗಳು ಪೊರೆಯುತ್ತಾ ಬಂದಿವೆ.

ರಣಹದ್ದುಗಳ ಕುರಿತಂತೆ ಇತ್ತೀಚೆಗೆ ಕುತೂಹಲಕರ ವರದಿಯೊಂದು ಹೊರ ಬಿದ್ದಿದೆ. ಭಾರತದಲ್ಲಿ ರಣಹದ್ದುಗಳು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ ಎನ್ನುವುದು ವರದಿಯಿಂದ ಬಹಿರಂಗವಾಗಿದೆ. ಅದಕ್ಕಿಂತಲೂ ಆತಂಕಕಾರಿ ಸಂಗತಿಯೆಂದರೆ, ಈ ರಣಹದ್ದುಗಳ ಸಂಖ್ಯೆ ಇಳಿಕೆಯಾಗುತ್ತಿರುವ ಪ್ರದೇಶದಲ್ಲಿ ಮನುಷ್ಯನ ಸಾವಿನ ಪ್ರಮಾಣಗಳು ಹೆಚ್ಚುತ್ತಿವೆ ಎನ್ನುವುದು. ರಣಹದ್ದುಗಳ ಸಂಖ್ಯೆಯಲ್ಲಿ ಕುಸಿತವುಂಟಾಗಿರುವ ಕಾರಣದಿಂದಾಗಿ ೨೦೦೦-೨೦೦೫ರ ನಡುವೆ ದೇಶವು ವಾರ್ಷಿಕ ೫೨,೬೨೧ ಕೋಟಿ ರೂಪಾಯಿಗಳ ಆರ್ಥಿಕ ಹಾನಿಗಳನ್ನು ಅನುಭವಿಸಿತ್ತು ಎಂದು ಅಮೆರಿಕನ್ ಇಕನಾಮಿಕ್ಸ್ ಅಸೋಸಿಯೇಶನ್ ತನ್ನ ಅಧ್ಯಯನದಲ್ಲಿ ಹೇಳಿದೆ. ರಣಹದ್ದುಗಳು ಭಾರತೀಯ ಪರಿಸರ ವ್ಯವಸ್ಥೆಗೆ ಅತ್ಯಂತ ಅಗತ್ಯವಾಗಿರುವ ಪಕ್ಷಿಗಳಲ್ಲಿ ಒಂದಾಗಿವೆ ಎನ್ನುವುದು ವರದಿಯಿಂದ ಬಹಿರಂಗವಾಗಿದೆ. ರಣಹದ್ದುಗಳ ಇಳಿಕೆಯ ಕಾರಣದಿಂದ ಐದು ವರ್ಷಗಳಲ್ಲಿ ಐದು ಲಕ್ಷ ಜನರು ಮೃತಪಟ್ಟಿದ್ದರು ಎನ್ನುವ ಅಂಶವನ್ನು ವರದಿ ಉಲ್ಲೇಖಿಸಿದೆ. ಈ ಅಧ್ಯಯನಕ್ಕಾಗಿ ರಣಹದ್ದುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ೬೦೦ಕ್ಕೂ ಅಧಿಕ ಜಿಲ್ಲೆಗಳನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ೧೯೯೪ಕ್ಕಿಂತ ಮೊದಲು ಈ ಜಿಲ್ಲೆಗಳಲ್ಲಿ ಮಾನವ ಸಾವಿನ ಸರಾಸರಿ ಪ್ರಮಾಣ ಶೇ. ೦.೯ರಷ್ಟಿತ್ತು ಎನ್ನುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿತ್ತು. ಆದರೆ ರಣಹದ್ದುಗಳ ಸಂಖ್ಯೆ ಇಳಿಕೆಯಾಗುತ್ತಿದ್ದಂತೆಯೇ ಮನುಷ್ಯರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗತೊಡಗಿತು.

ರಣಹದ್ದುಗಳು ‘ಮನುಷ್ಯರಂತೆ’ ಜೀವಂತ ಮನುಷ್ಯರನ್ನು ಬಲಿತೆಗೆದುಕೊಳ್ಳುವುದಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆ, ನರಮೇಧಗಳಿಗೆ ಹೋಲಿಸಿದರೆ ರಣಹದ್ದುಗಳ ಸಂಖ್ಯೆ ಹೆಚ್ಚಾಗಬೇಕಾಗಿತ್ತು. ಕಳೆದ ಎರಡು ದಶಕಗಳಲ್ಲಿ ಈ ದೇಶದಲ್ಲಿ ನಡೆದಿರುವ ಹಿಂಸಾಚಾರ, ದಂಗೆ, ಗಲಭೆಯಿಂದ ಸತ್ತ ಮನುಷ್ಯರ ಸಂಖ್ಯೆ ಬಹುದೊಡ್ಡದು. ಇದರ ಬೆನ್ನಿಗೇ ೨೦೨೦ರಲ್ಲಿ ಬಂದ ಕೊರೋನ ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿತು. ಮೃತದೇಹಗಳನ್ನು ಹೂಳುವುದಕ್ಕೂ ಸ್ಥಳವಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಯಿತು. ಗಂಗಾನದಿಯ ತಟದಲ್ಲಿ ಅನಾಥ ಶವಗಳು ಸಾಲು ಸಾಲಾಗಿ ಪತ್ತೆಯಾದವು. ನಾಯಿ-ನರಿಗಳು ಅವುಗಳನ್ನು ಎಳೆದು ತಿನ್ನುತ್ತಿರುವುದು ಮಾಧ್ಯಮಗಳಿಂದ ಬೆಳಕಿಗೆ ಬಂತು. ಮನುಷ್ಯರೇ ಇಷ್ಟೊಂದು ಪ್ರಮಾಣದಲ್ಲಿ ರಣಹದ್ದುಗಳಿಗೆ ಆಹಾರವನ್ನು ಒದಗಿಸಿಕೊಡುತ್ತಿದ್ದರೂ, ರಣ ಹದ್ದುಗಳ ಸಂಖ್ಯೆ ಹೆಚ್ಚಾಗಿಲ್ಲ ಎನ್ನುವುದು ವಿಶೇಷವೇ ಸರಿ. ಕ್ರೌರ್ಯದ ವಿಷಯದಲ್ಲಿ ಮನುಷ್ಯನೊಂದಿಗೆ ಸ್ಪರ್ಧಿಸಲು ರಣಹದ್ದುಗಳೂ ಸಿದ್ಧವಿಲ್ಲ ಎನ್ನುವುದು ಇದರಿಂದ ಬಹಿರಂಗವಾಗುತ್ತದೆ.

ಸಾಧಾರಣವಾಗಿ ರಣಹದ್ದುಗಳ ಬಳಿಕ ಮನುಷ್ಯರು ಅತ್ಯಂತ ನಿಕೃಷ್ಟವಾಗಿ ಕಾಣುತ್ತಾ ಬಂದಿರುವುದು ಕಾಗೆಗಳನ್ನು. ಆದರೆ ಕಾಗೆಗಳು ಪರಿಸರದ ಸಮತೋಲನದಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎನ್ನುವುದನ್ನು ಪರಿಸರ ತಜ್ಞರು ನಿರೂಪಿಸುತ್ತಲೇ ಬಂದಿದ್ದಾರೆ. ಕಾಗೆಗಳನ್ನು ರೈತನ ಮಿತ್ರ ಎಂದು ಕರೆಯುತ್ತಾರೆ. ಮನುಷ್ಯ ಮಾಡಿದ ಹೊಲಸುಗಳನ್ನು ತಿಂದು ಶುಚಿಗೊಳಿಸುವುದು ಕಾಗೆಗಳು. ಆದರೆ ತನ್ನ ಬಣ್ಣದ ಕಾರಣಕ್ಕಾಗಿ ಮತ್ತು ತಾನು ಸೇವಿಸುವ ಆಹಾರದ ಕಾರಣಕ್ಕಾಗಿಯೇ ಕಾಗೆಯನ್ನು ಮನುಷ್ಯ ದೂರವಿಡುತ್ತಾ ಬಂದಿದ್ದಾನೆ. ನವಿಲು, ಗುಬ್ಬಚ್ಚಿಗಳ ಮೇಲಿರುವ ಕಾಳಜಿ ಕಾಗೆಗಳ ಮೇಲಿಲ್ಲ. ಸಾಧಾರಣವಾಗಿ ಎಲ್ಲ ಹಕ್ಕಿಗಳು ಪರಿಸರದ ಸಮತೋಲನಕ್ಕೆ ಒಂದಲ್ಲ ಒಂದು ರೀತಿಯ ಕೊಡುಗೆಗಳನ್ನು ನೀಡುತ್ತಲೇ ಬಂದಿವೆ. ಆಧುನಿಕ ತಂತ್ರಜ್ಞಾನಗಳು, ಮೊಬೈಲ್ ಟವರ್‌ಗಳ ಕಾರಣಗಳಿಂದಾಗಿ ಹಕ್ಕಿಗಳು ನೆಲೆ ಕಳೆದುಕೊಳ್ಳುತ್ತಿವೆ. ಕಾಗೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಕಾಗೆಗಳು ಸತ್ತ ಇಲಿ ಮತ್ತಿತರ ಪ್ರಾಣಿಗಳ ಕಳೇಬರಗಳನ್ನು ಶುಚಿಗೊಳಿಸಿ ಸಮಾಜದ ಆರೋಗ್ಯವನ್ನು ಕಾಪಾಡಿಕೊಂಡು ಬಂದಿವೆ. ಅದೇ ರೀತಿ, ಮನುಷ್ಯತ್ವ ಮರೆತು ಮನುಷ್ಯ ಇನ್ನೊಬ್ಬ ಮನುಷ್ಯನ ಮೃತದೇಹಕ್ಕೆ ಘನತೆಯ ಸಂಸ್ಕಾರವನ್ನು ಮಾಡಲು ಸಿದ್ಧನಿಲ್ಲದೇ ಇದ್ದಾಗ ರಣಹದ್ದುಗಳು ಅವುಗಳನ್ನು ಆಹಾರವಾಗಿಸಿಕೊಂಡು ಸಮಾಜದ ಆರೋಗ್ಯವನ್ನು ಕಾಪಾಡುತ್ತಾ ಬಂದಿವೆ. ಮನುಷ್ಯ ಮಾಡಿದ ಎಲ್ಲ ಹಿಂಸಾಕಾಂಡಗಳು ಅಂತಿಮವಾಗಿ ರಣಹದ್ದುಗಳಿಂದ ಶುಚಿಗೊಳಿಸಲ್ಪಟ್ಟಿವೆ. ಸಾಲು ಸಾಲು ಸಾಂಕ್ರಾಮಿಕ ರೋಗಗಳಿಂದ ಸಮಾಜವನ್ನು ಕಾಪಾಡುತ್ತಾ ಬಂದಿರುವುದು ರಣಹದ್ದುಗಳು. ಯಾವಾಗ ರಣಹದ್ದುಗಳ ಸಂಖ್ಯೆಯಲ್ಲಿ ಇಳಿಮುಖವಾಯಿತೋ ಸಾಂಕ್ರಾಮಿಕ ರೋಗಗಳು ಹೆಚ್ಚು ಹೆಚ್ಚು ಹರಡತೊಡಗಿದವು. ಸಾವಿನ ಪ್ರಮಾಣ ಹೆಚ್ಚಲು ಇದುವೇ ಕಾರಣವಾಗಿದೆ.

ರಣಹದ್ದುಗಳ ಸಂಖ್ಯೆ ಇಳಿಕೆಯಾಗುತ್ತಿರುವಂತೆಯೇ ಸಮಾಜದಲ್ಲಿ ಮನುಷ್ಯರೇ ರಣಹದ್ದುಗಳ ಸ್ಥಾನ ತುಂಬಲು ಸ್ಪರ್ಧಿಸುತ್ತಿರುವುದು ವಿಪರ್ಯಾಸವಾಗಿದೆ. ಮನುಷ್ಯರನ್ನು ಮನುಷ್ಯರೇ ಕಿತ್ತುತಿನ್ನುವ ಸಮಾಜವೊಂದು ಸೃಷ್ಟಿಯಾಗುತ್ತಿದೆ. ಇಸ್ರೇಲ್ ಕಳೆದ ಕೆಲವು ತಿಂಗಳುಗಳಿಂದ ಫೆಲೆಸ್ತೀನ್‌ನಲ್ಲಿ ಮಕ್ಕಳು, ಮಹಿಳೆಯರು ಎಂದು ಬಿಡದೇ ನಡೆಸುತ್ತಿರುವ ಮಾರಣ ಹೋಮಕ್ಕೆ ರಣಹದ್ದುಗಳೇ ನಾಚಿ ಕಣ್ಮರೆಯಾಗುತ್ತಿರಬೇಕು. ರಣಹದ್ದುಗಳು ಕೇವಲ ತನ್ನ ಹಸಿವೆಯನ್ನು ಇಂಗಿಸುವುದಕ್ಕಾಗಿ ಮೃತಪಟ್ಟ ದೇಹಗಳನ್ನು ಭಕ್ಷಿಸುತ್ತವೆ. ಆದರೆ, ಇಸ್ರೇಲ್‌ನಂತಹ ಸರ್ವಾಧಿಕಾರಿ ದೇಶಗಳು ಯಾವ ಕಾರಣವೂ ಇಲ್ಲದೆ ಮಕ್ಕಳು, ಮಹಿಳೆಯರನ್ನು ತಿಂದು ತೇಗುತ್ತಿವೆ. ಭಾರತದ ಮಣಿಪುರದಲ್ಲಿ ನಡೆಯುತ್ತಿರುವ ಸಾವು-ನೋವುಗಳು ಯಾವ ಪರಕಾಷ್ಠೆ ಗೆ ತಲುಪಿದೆ ಎಂದರೆ, ರಣಹದ್ದುಗಳೂ ಅಲ್ಲಿ ಬೀಳುತ್ತಿರುವ ಅಮಾಯಕರ ಹೆಣಗಳನ್ನು ಮುಟ್ಟಲು ಹಿಂಜರಿಯುವ ಸ್ಥಿತಿಯಿದೆ. ಮನುಷ್ಯ ರಣಹದ್ದುಗಳಿಂತಲೂ ಭೀಕರವಾಗಿ ಅಲ್ಲಿ ಅಮಾಯಕರ ಮೇಲೆ ಎರಗುತ್ತಿದ್ದಾನೆ.

ರಣಹದ್ದುಗಳ ಸಂಖ್ಯೆ ಇಳಿಮುಖವಾಗಿದೆ ಎನ್ನುವುದಕ್ಕಿಂತ ರಣಹದ್ದು ರೂಪಾಂತರಗೊಳ್ಳುತ್ತಿದೆ. ಅದು ಮನುಷ್ಯರೂಪವನ್ನು ಪಡೆದು ಸಹ ಮನುಷ್ಯರನ್ನೇ ಬಲಿತೆಗೆದುಕೊಳ್ಳತೊಡಗಿದೆ. ಮನುಷ್ಯ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ರೋಗ ಪೀಡಿತಗೊಂಡಿದ್ದಾನೆ. ರೋಗಾಣುಗಳು ಮೆದುಳನ್ನೇ ಆವಾಹಿಸಿಕೊಂಡು ಹರಡತೊಡಗಿವೆ. ಮನುಷ್ಯನ ಒಳಗಿರುವ ಮನುಷ್ಯತ್ವ ಸತ್ತು ಹೋಗುತ್ತಿದೆ. ಅಳಿದುಳಿದ ರಣಹದ್ದುಗಳು ಅಳಿವಿನಂಚಿನಲ್ಲಿರುವ ಮನುಷ್ಯತ್ವಕ್ಕಾಗಿ ಕಣ್ಣೀರಿಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News