ಗ್ಯಾರಂಟಿ ಹುಲಿ ಸವಾರಿಗೆ ಯಶಸ್ವೀ ಒಂದು ವರ್ಷ

Update: 2024-05-20 05:29 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಗ್ಯಾರಂಟಿಗಳ ಹುಲಿ ಸವಾರಿಯ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಒಂದು ವರ್ಷವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಬಹುಮತವನ್ನು ಪಡೆದು ರಚನೆಯಾದ ಸರಕಾರ ಹತ್ತು ಹಲವು ಸವಾಲುಗಳನ್ನು ಎದುರಿಸಬೇಕಾಗಿತ್ತು. ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳು ಆಡಳಿತವನ್ನು ಅಸ್ತವ್ಯಸ್ತಗೊಳಿಸಲಿದೆ ಎನ್ನುವ ಬಿಜೆಪಿಯ ನಿರೀಕ್ಷೆ ಸದ್ಯಕ್ಕಂತೂ ಹುಸಿಯಾಗಿದೆ. ಫಲಿತಾಂಶ ಘೋಷಣೆಗೊಳ್ಳುವ ಮುನ್ನ ‘ಆಪರೇಷನ್ ಕಮಲ’ದ ಬೆದರಿಕೆಯನ್ನು ಬಿಜೆಪಿ ಮುಖಂಡರು ಒಡ್ಡಿದ್ದರು. ಜೆಡಿಎಸ್ ಸಮ್ಮಿಶ್ರ ಸರಕಾರದ ಕನಸು ಕಾಣುತ್ತಿತ್ತು. ಆದರೆ ಜನರು ನೀಡಿದ ಫಲಿತಾಂಶ ಕಾಂಗ್ರೆಸ್ ವಿರುದ್ಧ ದ ಎಲ್ಲ ಸಂಚುಗಳನ್ನೂ ಧೂಳೀಪಟಗೊಳಿಸಿತು.ಅಧಿಕಾರ ಹಿಡಿದ ಬೆನ್ನಿಗೇ ‘ಗ್ಯಾರಂಟಿಗಳನ್ನು ಜಾರಿಗೊಳಿಸಿ’ ಎಂದು ಬಿಜೆಪಿ ನಾಯಕರು ಸವಾಲು ಹಾಕತೊಡಗಿದರು. ಕಾಂಗ್ರೆಸ್ ಗ್ಯಾರಂಟಿಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ಸಾಹಸಕ್ಕೆ ಇಳಿಯಲಾರದು ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿತ್ತು. ಗ್ಯಾರಂಟಿಯ ಅನುಷ್ಠಾನವೇ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂದು ಅವರು ನಂಬಿದ್ದರು. ಆದರೆ ಸಿದ್ದರಾಮಯ್ಯ ಅವರು ಮುತ್ಸದ್ದಿ ಅರ್ಥಶಾಸ್ತ್ರಜ್ಞರಂತೆ ಗ್ಯಾರಂಟಿಗಳನ್ನು ಒಂದೊಂದಾಗಿ ಯಶಸ್ವಿಯಾಗಿ ಜಾರಿಗೊಳಿಸತೊಡಗಿದರು. ಎಲ್ಲ ಗ್ಯಾರಂಟಿಗಳನ್ನು ಯಾವುದೇ ಗೊಂದಲಗಳಿಲ್ಲದಂತೆ ಯಶಸ್ವಿಯಾಗಿ ಜಾರಿಗೊಳಿಸಿರುವುದು ಕಾಂಗ್ರೆಸ್ ಸರಕಾರದ ಒಂದು ವರ್ಷದ ನಿಜವಾದ ಸಾಧನೆಯಾಗಿದೆ. ಇದಕ್ಕಾಗಿ ಸಿದ್ದರಾಮಯ್ಯ ತಂಡ ಅಭಿನಂದನಾರ್ಹವಾಗಿದೆ. ರಾಜ್ಯದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ, ಒಂದು ವರ್ಷದ ಕಾಂಗ್ರೆಸ್ ಆಡಳಿತ ಫಲಿತಾಂಶವೂ ಕೂಡ. ಗ್ಯಾರಂಟಿ ಜನಸಾಮಾನ್ಯರ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಿದೆ ಎನ್ನುವುದನ್ನು ಅಧ್ಯಯನ ಮಾಡಲು ಚುನಾವಣಾ ಫಲಿತಾಂಶವನ್ನು ಬಳಸಿಕೊಳ್ಳಬಹುದಾಗಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಸರಕಾರಕ್ಕಿದ್ದ ದೊಡ್ಡ ಲಾಭವೆಂದರೆ, ವಿರೋಧ ಪಕ್ಷವಾಗಿ ಬಿಜೆಪಿಯ ಸಂಪೂರ್ಣ ವೈಫಲ್ಯ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದ ಬಳಿಕವೂ ಬಿಜೆಪಿ ಹಲವು ತಿಂಗಳ ಕಾಲ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವಲ್ಲಿ ವಿಫಲವಾಯಿತು. ಅಧಿವೇಶನದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷವನ್ನು ಸಂಘಟಿತಗೊಳಿಸುವವರೇ ಇದ್ದಿರಲಿಲ್ಲ. ವಿರೋಧ ಪಕ್ಷಕ್ಕೆ ನಾಯಕನಿಲ್ಲದ ಕಾರಣದಿಂದ ಯಾವ ವಿಷಯವನ್ನಿಟ್ಟು ಸರಕಾರವನ್ನು ಟೀಕಿಸಬೇಕು ಎನ್ನುವುದರ ಬಗ್ಗೆ ಬಿಜೆಪಿಯೊಳಗೆ ಗೊಂದಲಗಳಿದ್ದವು. ಅಧಿವೇಶನ ಸಂದರ್ಭದಲ್ಲಿ ಇದು ಎದ್ದು ಕಾಣುತ್ತಿತ್ತು. ಅಷ್ಟೇ ಅಲ್ಲ, ಚುನಾವಣೆಯ ಸೋಲಿನ ನೈತಿಕ ಹೊಣೆಯನ್ನು ಹೊತ್ತು ಅದಾಗಲೇ ಬಿಜೆಪಿ ರಾಜ್ಯಾಧ್ಯಕ್ಷರು ರಾಜೀನಾಮೆ ನೀಡಿದ್ದರು. ನೂತನ ರಾಜ್ಯಾಧ್ಯಕ್ಷರ ಆಯ್ಕೆ ಮಾಡುವಲ್ಲೂ ವರಿಷ್ಠರು ವಿಫಲರಾಗಿದ್ದರು. ಅನಿವಾರ್ಯವಾಗಿ, ರಾಜೀನಾಮೆ ನೀಡಿದ ರಾಜ್ಯಾಧ್ಯಕ್ಷರು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆಯಬೇಕಾಯಿತು. ಫಲಿತಾಂಶ ಹೊರ ಬಿದ್ದ ಬೆನ್ನಿಗೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಜಗ್ಗಾಟದಲ್ಲಿ ಕಾಂಗ್ರೆಸ್ ಒಡೆಯುತ್ತದೆ ಎಂದು ಬಿಜೆಪಿ ನಾಯಕರು ನಿರೀಕ್ಷಿಸುತ್ತಿದ್ದರೆ, ಬಿಜೆಪಿಯೊಳಗೇ ಯಡಿಯೂರಪ್ಪ ಬಣ ಮತ್ತು ಆರೆಸ್ಸೆಸ್ ಬಣಗಳ ನಡುವೆ ಜಗ್ಗಾಟ ಆರಂಭವಾಯಿತು. ಬಿಜೆಪಿಯೊಳಗಿನ ಬಿರುಕು ಕಾಂಗ್ರೆಸ್‌ಗೆ ಸುಗಮವಾಗಿ ಸರಕಾರ ನಡೆಸಲು ತುಸು ನೆರವಾಯಿತು. ಆದುದರಿಂದ ಯಶಸ್ವೀ ಒಂದು ವರ್ಷಕ್ಕಾಗಿ ಕಾಂಗ್ರೆಸ್ ಮೊದಲು ಕೃತಜ್ಞತೆ ಹೇಳಬೇಕಾದುದು ರಾಜ್ಯ ಬಿಜೆಪಿ ವರಿಷ್ಠರಿಗೆ.

ಆದರೆ ಮುಂದಿನ ದಿನಗಳು ಕಾಂಗ್ರೆಸ್‌ಗೆ ಇಷ್ಟೇ ಸಲೀಸಾಗಿರುತ್ತದೆ ಎಂದೇನಿಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶ, ರಾಜ್ಯ ಸರಕಾರದ ಮೇಲೆ ಬಹಳಷ್ಟು ಪರಿಣಾಮಗಳನ್ನು ಬೀರಲಿದೆ. ಗ್ಯಾರಂಟಿಗಳ ಅಳಿವು ಉಳಿವು ಕೂಡ ಲೋಕಸಭಾ ಫಲಿತಾಂಶವನ್ನು ಅವಲಂಬಿಸಿದೆ. ಕಾಂಗ್ರೆಸ್ ಕಡಿಮೆ ಸ್ಥಾನಗಳನ್ನು ತನ್ನದಾಗಿಸಿಕೊಂಡರೆ, ಗ್ಯಾರಂಟಿಗಳು ಮುಂದುವರಿಯುತ್ತವೆ ಎಂದು ನಿರೀಕ್ಷಿಸುವುದು ಕಷ್ಟ. ಜನರೇ ಗ್ಯಾರಂಟಿಗಳ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಭಾವಿಸಿ ಕಾಂಗ್ರೆಸ್ ಅವುಗಳನ್ನು ಒಂದೊಂದಾಗಿ ಹಿಂದೆಗೆಯಬಹುದು. ಕಾಂಗ್ರೆಸ್ ಹಿನ್ನಡೆ ಅನುಭವಿಸಿದರೆ, ಸರಕಾರದ ಮೇಲೂ ಅದು ದುಷ್ಪರಿಣಾಮವನ್ನು ಬೀರಬಹುದು. ಲೋಕಸಭಾ ಚುನಾವಣೆ ಮುಗಿದಂತೆಯೇ ಡಿಕೆಶಿ-ಸಿದ್ದರಾಮಯ್ಯ ಬಣದ ನಡುವಿನ ತಿಕ್ಕಾಟ ಮತ್ತೆ ಜೀವ ಪಡೆದುಕೊಂಡರೆ ಅಚ್ಚರಿಯೇನೂ ಇಲ್ಲ. ಸಿದ್ದರಾಮಯ್ಯ ಪೂರ್ಣಾವಧಿಯ ಮುಖ್ಯಮಂತ್ರಿ ಹೌದೋ ಅಲ್ಲವೋ ಎನ್ನುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದರೆ, ಅದರ ಲಾಭವನ್ನು ಬಿಜೆಪಿ ತನ್ನದಾಗಿಸಿಕೊಳ್ಳಬಹುದು. ಹಾಗೆಯೇ ಎನ್‌ಡಿಎ ಬಹುಮತ ಪಡೆದು ಮೋದಿಯವರು ಮತ್ತೆ ಪ್ರಧಾನಿಯಾದರೆ, ಅದರ ಕರಿ ನೆರಳು ರಾಜ್ಯದ ಮೇಲೂ ಬೀಳಬಹುದು. ಈಗಾಗಲೇ ರಾಜ್ಯಕ್ಕೆ ಸಲ್ಲಬೇಕಾದ ಹಣಕ್ಕಾಗಿ ಕೇಂದ್ರದ ಜೊತೆಗೆ ರಾಜ್ಯ ಅಕ್ಷರಶಃ ಸಂಘರ್ಷಕ್ಕಿಳಿದಿದೆ. ಮೋದಿ ಮತ್ತೆ ಅಧಿಕಾರಕ್ಕೇರಿದರೆ, ಸರಕಾರ ತನ್ನೆಲ್ಲ ಶಕ್ತಿಯನ್ನು ಕೇಂದ್ರದ ಜೊತೆಗೆ ಗುದ್ದಾಟ ನಡೆಸುವುದಕ್ಕೇ ವ್ಯಯ ಮಾಡಬೇಕಾಗಬಹುದು.

ಕಳೆದ ಒಂದು ವರ್ಷದ ಆಡಳಿತದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಲಾಗದು. ಸಂಘಪರಿವಾರದ ದ್ವೇಷ ರಾಜಕಾರಣಕ್ಕೆ ಲಗಾಮು ಹಾಕಲು ಗೃಹ ಸಚಿವರು ಸಂಪೂರ್ಣ ವಿಫಲವಾಗಿದ್ದಾರೆ. ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳನ್ನು ಗೃಹ ಸಚಿವರು ಮೃದುವಾಗಿ ನಿಭಾಯಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯಗಳಿಗಾಗಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಪ್ರಜ್ವಲ್ ಲೈಂಗಿಕ ಹಗರಣದಲ್ಲಿ ಪ್ರಮುಖ ಆರೋಪಿಯ ರಕ್ಷಣೆಯಲ್ಲಿ ಕಾಂಗ್ರೆಸ್ ಪಾಲಿದೆ ಎಂದು ಬಿಜೆಪಿಯೇ ಆರೋಪ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿರುವ ಆರೋಪಗಳೂ ಕೇಳಿ ಬರುತ್ತಿವೆ. ಗುತ್ತಿಗೆದಾರರು ಈಗಾಗಲೇ ಸರಕಾರದ ವಿರುದ್ಧ ಹಲವು ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಾಣಿಕೆಗೆ ಸರಕಾರ ತಿಣುಕಾಡುತ್ತಿರುವುದು ಎದ್ದು ಕಾಣುತ್ತಿದೆ. ಇದರಿಂದಾಗಿ ಅಭಿವೃದ್ಧಿ ಯೋಜನೆಗಳು ಹಿನ್ನಡೆ ಅನುಭವಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಹಣ ಹೊಂದಾಣಿಕೆ ರಾಜ್ಯ ಸರಕಾರಕ್ಕೆ ಬಹುದೊಡ್ಡ ಸವಾಲಾಗಲಿದೆ. ಗ್ಯಾರಂಟಿಗಳು ಇನ್ನೊಂದೆರಡು ವರ್ಷಗಳಲ್ಲಿ ಸರಕಾರಕ್ಕೆ ಹೊರಲಾಗದ ಭಾರವಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಅಲ್ಪಸಂಖ್ಯಾತರಿಗೆ ಸರಕಾರ ಸೂಕ್ತ ಪ್ರಾತಿನಿಧ್ಯವನ್ನು ನೀಡಿಲ್ಲ ಎನ್ನುವ ಆರೋಪಗಳೂ ವ್ಯಾಪಕವಾಗಿವೆ. ಮುಂದಿನ ದಿನಗಳಲ್ಲಿ ಈ ಎಲ್ಲ ಆರೋಪಗಳಿಂದ ಸರಕಾರ ಹೇಗೆ ಕಳಚಿಕೊಳ್ಳುತ್ತದೆ ಎನ್ನುವ ಆಧಾರದಲ್ಲಿ ಅದರ ಭವಿಷ್ಯ ನಿಂತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News