ಅಗ್ನಿವೀರರಿಗೆ ಅಗ್ನಿ ಪರೀಕ್ಷೆ

Update: 2024-07-08 06:06 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸರಕಾರ ಹಾಕಿದ ‘ಅಗ್ನಿಪಥ’ವನ್ನು ದಾಟಲಾಗದೆ ನೂರಾರು ಯುವ ಜೀವಗಳು ಬೆಂದು ಹೋಗುತ್ತಿರುವುದು ಇದೀಗ ತೀವ್ರ ಚರ್ಚೆಯಲ್ಲಿದೆ. ವಾಯುಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಗ್ನಿವೀರನೊಬ್ಬ ಆತ್ಮಹತ್ಯೆ ಮಾಡಿದ ಬೆನ್ನಿಗೇ ಸರಕಾರದ ನೂತನ ಅಗ್ನಿಪಥ ಯೋಜನೆಯ ಬಗ್ಗೆ ಇರುವ ಅಸಮಾಧಾನಗಳು ಇನ್ನಷ್ಟು ಜ್ವಲಿಸತೊಡಗಿವೆ. ಯೋಧರನ್ನು ನಾಲ್ಕು ವರ್ಷಗಳಿಗೆ ಗುತ್ತಿಗೆಯಾಧಾರದಲ್ಲಿ ನೇಮಕ ಮಾಡಿ ಅವರನ್ನು ಬಳಸಿ ಎಸೆಯುವ ಸರಕಾರದ ಕ್ರಮದ ವಿರುದ್ಧ ಈಗಾಗಲೇ ಉತ್ತರ ಭಾರತದಲ್ಲಿ ತೀವ್ರ ಪ್ರತಿಭಟನೆಗಳು ನಡೆದಿವೆ. ಅದರ ಬೆನ್ನಿಗೇ ಕಳೆದ ಒಂದು ವರ್ಷದಲ್ಲಿ 20ಕ್ಕೂ ಅಧಿಕ ಅಗ್ನಿವೀರರು ಬೇರೆ ಬೇರೆ ಕಾರಣಗಳಿಗೆ ಸಾವನ್ನಪ್ಪುತ್ತಿರುವುದು, ಅವರಲ್ಲಿ ಹಲವರು ಆತ್ಮಹತ್ಯೆಗೈದಿರುವುದು ಮತ್ತು ಮೃತರಿಗೆ ಪರಿಹಾರ ನೀಡುವಿಕೆಯಲ್ಲಿ ಗೊಂದಲಗಳೇರ್ಪಟ್ಟಿರುವುದು ಅಸಮಾಧಾನದ ಬೆಂಕಿಗೆ ಇನ್ನಷ್ಟು ತುಪ್ಪವನ್ನು ಸುರಿದಿದೆ. ಇತ್ತೀಚೆಗೆ ಮೃತಪಟ್ಟ ಯೋಧನೊಬ್ಬನನ್ನು ಹುತಾತ್ಮನೆಂದು ಪರಿಗಣಿಸಲು ಸೇನೆ ಸಿದ್ಧವಿಲ್ಲದೇ ಇದ್ದುದು, ಪೂರ್ಣ ಪ್ರಮಾಣದಲ್ಲಿ ಪರಿಹಾರವನ್ನು ನೀಡದೇ ಇದ್ದುದು ಒಟ್ಟು ಅಗ್ನಿಪಥ ಯೋಜನೆಯ ಬಗ್ಗೆ ಇನ್ನಷ್ಟು ಆತಂಕಗಳನ್ನು ಸೃಷ್ಟಿಸಿದೆ. ಈಗಾಗಲೇ ರಾಹುಲ್‌ಗಾಂಧಿಯವರು ಸದನದಲ್ಲಿ ಅಗ್ನಿಪಥ ಯೋಜನೆಯ ಹೆಸರಿನಲ್ಲಿ ನಮ್ಮ ಯೋಧರಿಗೆ ಆಗುತ್ತಿರುವ ಅನ್ಯಾಯಗಳನ್ನು ಮುಂದಿಟ್ಟಿದ್ದರೂ, ಸರಕಾರ ಆರೋಪಗಳನ್ನು ನಿರಾಕರಿಸಿದೆ.

ಸರಕಾರ ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದ ದಿನದಿಂದಲೇ ಅದರ ವಿರುದ್ಧ ಉತ್ತರ ಭಾರತದ ಯುವಕರು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಯುವಕರ ಪ್ರತಿಭಟನೆಯನ್ನು ಲಾಠಿಗಳ ಮೂಲಕ ನಿಯಂತ್ರಿಸಲು ನಡೆಸಿದ ಪ್ರಯತ್ನ ಹಲವು ಬಾರಿ ಹಿಂಸಾಚಾರಕ್ಕೆ ತಿರುಗಿದೆ. ಬಳಿಕ, ‘‘ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪ ಇರುವ ಯುವಕರನ್ನು ಸೇನೆಯಿಂದ ಶಾಶ್ವತವಾಗಿ ಹೊರಗಿರಿಸಲಾಗುವುದು’’ ಎಂಬ ಬೆದರಿಕೆಯನ್ನು ಸರಕಾರ ಒಡ್ಡಿ, ಯುವಕರನ್ನು ಬೀದಿಗಿಳಿಯದಂತೆ ನೋಡಿಕೊಂಡಿತು. ಒಂದು ಕಾಲದಲ್ಲಿ ಸೇನೆ ಸೇರಿ, ದೇಶ ಕಾಯುವುದು ಯುವಕರ ಕನಸಾಗಿತ್ತು. ಅದಕ್ಕಾಗಿ ಹಗಲು ರಾತ್ರಿ ತಯಾರಿ ನಡೆಸುತ್ತಿದ್ದರು. ಅದು ಅವರ ಪಾಲಿಗೆ ಕೇವಲ ವೃತ್ತಿ ಮಾತ್ರವಲ್ಲ, ತಾಯ್ನಾಡಿಗೆ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ಅರ್ಪಿಸುವುದಕ್ಕೆ ಒದಗುವ ಒಂದು ಅವಕಾಶವೂ ಕೂಡ ಆಗಿತ್ತು. ಆದರೆ ಯಾವಾಗ ಅಗ್ನಿಪಥ ಯೋಜನೆಯನ್ನು ಸರಕಾರ ಜಾರಿಗೆ ತಂದಿತೋ, ಸೈನಿಕರಾಗುವ ಅವರ ಕನಸು ನುಚ್ಚು ನೂರಾಯಿತು. ಅವರು ಪೂರ್ಣ ಪ್ರಮಾಣದಲ್ಲಿ ಯೋಧರಾಗಿ ಗುರುತಿಸಲು ಸಾಧ್ಯವಿಲ್ಲ ಮಾತ್ರವಲ್ಲ, ನಾಲ್ಕು ವರ್ಷಗಳ ಕಾಲ ಅವರನ್ನು ಬಳಸಿಕೊಂಡು ಸೇನೆ ಎಸೆದು ಬಿಡುತ್ತದೆ. ಅವರು ನಿವೃತ್ತ ಸೈನಿಕರೆಂಬ ಅರ್ಹತೆಯನ್ನು ಕೂಡ ಪಡೆದುಕೊಳ್ಳದೆ ತಮ್ಮ ಉಳಿದ ಬದುಕನ್ನು ಚೌಕೀದಾರನಾಗಿಯೋ ಅಥವಾ ಯಾವುದೋ ಖಾಸಗಿ ಭದ್ರತಾಕಂಪೆನಿಯ ಕೂಲಿಯಾಳುಗಳಾಗಿಯೋ ಕಳೆಯಬೇಕು. ಇವರಿಗೆ ಒಬ್ಬ ಅಧಿಕೃತ ಯೋಧನಿಗೆ ಸಿಗುವ ಯಾವುದೇ ಶಾಶ್ವತ ಸೌಲಭ್ಯಗಳೂ ನೀಡಲಾಗುವುದಿಲ್ಲ.

ನಾಲ್ಕು ವರ್ಷಗಳ ಸೇವಾವಧಿಯ ಕೊನೆಗೆ ಇವರ ಹೆಸರಿನಲ್ಲಿ ಮಾಡುವ 48 ಲಕ್ಷ ರೂಪಾಯಿಯ ಜೀವವಿಮಾನಿಧಿ ಇವರಿಗೆ ಸಿಗುವ ಅಧಿಕೃತ ಪರಿಹಾರ. ಇನ್ನು ಸರಕಾರದಿಂದ ಪರಿಹಾರ ಸಿಗಬೇಕಾದರೆ ಕೆಲವು ನಿಯಮಗಳ ವ್ಯಾಪ್ತಿಗೆ ಇವರು ಒಳಪಡಬೇಕು. ಸೇವಾವಧಿಯಲ್ಲಿದ್ದು ಅವಘಡದಲ್ಲಿ ಅಥವಾ ಯುದ್ಧದಲ್ಲಿ ಮೃತಪಡದೆ ಇದ್ದರೆ ಸರಕಾರದಿಂದ ಯಾವುದೇ ಪರಿಹಾರ ಇವರಿಗೆ ದೊರಕುವುದಿಲ್ಲ. ಬದಲಿಗೆ ಜೀವವಿಮಾ ನಿಧಿಯನ್ನು ಹೊರತು ಪಡಿಸಿ. ಜೊತೆಗೆ, ನಾಲ್ಕು ವರ್ಷಗಳ ಸೇವೆ ಸಲ್ಲಿಸಿ ಅಲ್ಲಿಂದ ಬಿಡುಗಡೆಯಾದರೆ, ಯಾವುದೇ ಪೆನ್ಶನ್‌ಗಳಾಗಲಿ, ನಿವೃತ್ತ ಸೈನಿಕನಿಗೆ ಸಿಗುವ ಸೌಲಭ್ಯಗಳಾಗಲಿ ಸಿಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಅತ್ಯಂತ ಅಪಾಯಕಾರಿಯಾಗಿರುವ ಪ್ರದೇಶಗಳಲ್ಲಿ ಈ ಸೈನಿಕರನ್ನು ಬಳಸಲಾಗುತ್ತದೆಯಾದರೂ, ಇವರಿಗೆ ಸೂಕ್ತ ತರಬೇತಿಗಳೇ ಸಿಕ್ಕಿರುವುದಿಲ್ಲ. ಕೇವಲ ಆರು ತಿಂಗಳ ತರಬೇತಿಯನ್ನು ನೀಡಿ ಇವರನ್ನು ತೀರಾ ತಳದರ್ಜೆಯ ಕೆಲಸಗಳಿಗೆ ನಾಲ್ಕು ವರ್ಷಗಳ ಕಾಲ ಬಳಸಲಾಗುತ್ತದೆ. ಅತ್ಯಂತ ಅಪಾಯಕಾರಿ ಪ್ರದೇಶದಲ್ಲಿ ಕ್ಲಿಷ್ಟಕರವಾದ ಕಾರ್ಯಾಚರಣೆಯಲ್ಲಿ ಇವರನ್ನು ಬಳಸುವ ಸಾಧ್ಯತೆಗಳಿರುತ್ತವೆ. ಕಳೆದ ಒಂದು ವರ್ಷದಲ್ಲಿ ಯಾವ ಯುದ್ಧ ನಡೆಯದೇ ಇದ್ದರೂ, 20 ಅಗ್ನಿವೀರರು ಹೇಗೆ ಮೃತಪಟ್ಟರು ಮತ್ತು ಇವರಲ್ಲಿ ಹಲವರು ಯಾಕೆ ಆತ್ಮಹತ್ಯೆಮಾಡಿಕೊಂಡರು ಎನ್ನುವುದು ಈ ನಿಟ್ಟಿನಲ್ಲಿ ಚರ್ಚೆಯಾಗುವುದು ಅತ್ಯಗತ್ಯವಾಗಿದೆ.

ಅಗ್ನಿ ಪಥ ಯೋಜನೆ ಸೇನೆಯ ಮೇಲೂ ತನ್ನ ದುಷ್ಪರಿಣಾಮಗಳನ್ನು ಬೀರುವ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕೇವಲ ನಾಲ್ಕು ವರ್ಷಗಳ ಗುತ್ತಿಗೆಯಾಧಾರದಲ್ಲಿ ಸೇನೆ ಸೇರುವ ಈ ಸಂದರ್ಭವನ್ನು ದುಷ್ಕರ್ಮಿಗಳೂ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಒಬ್ಬ ಅಧಿಕೃತ ಸೈನಿಕರಿಗೆ ಅನ್ವಯವಾಗುವ ಬಿಗಿ ನಿಯಮಗಳು ಈ ಆಯ್ಕೆಯ ಸಂದರ್ಭದಲ್ಲಿ ಅಗ್ನಿವೀರನಿಗೆ ಅನ್ವಯವಾಗುವುದಿಲ್ಲ. ಯೋಗ್ಯ ರೀತಿಯ ತರಬೇತಿ ನೀಡಲು ಸಮಯವೂ ಇರುವುದಿಲ್ಲ. ನಾಲ್ಕು ವರ್ಷ ಶಸ್ತ್ರ ತರಬೇತಿ ಪಡೆದು ಮತ್ತೆ ಸಮಾಜದೊಳಗೆ ಪ್ರವೇಶಿಸುವ ಯುವಕರನ್ನು ಉಗ್ರವಾದಿಗಳು, ದುಷ್ಕರ್ಮಿಗಳು ದುರ್ಬಳಕೆ ಮಾಡಿಕೊಳ್ಳು ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಡುತ್ತಾರೆ. ಅಷ್ಟೇ ಅಲ್ಲ, ಇವರಿಂದ ದೇಶದ ರಕ್ಷಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳುವ ಅಪಾಯಗಳನ್ನು ಬೊಟ್ಟು ಮಾಡುತ್ತಾರೆ. ಸೇನೆಯೊಳಗೂ ಭ್ರಷ್ಟಾಚಾರಗಳು, ಅಕ್ರಮಗಳು ವ್ಯಾಪಕವಾಗಿವೆ. ಶತ್ರು ದೇಶಗಳು ಇಂತಹ ಭ್ರಷ್ಟ ಸೇನಾಧಿಕಾರಿಗಳನ್ನು, ಸೈನಿಕರನ್ನು ಬಳಸಿಕೊಳ್ಳುತ್ತಿರುವುದು ಆಗಾಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಅಗ್ನಿ ಪಥ ಯೋಜನೆಯಲ್ಲಿರುವ ಲೋಪದೋಷಗಳು ಸೇನೆಯ ನೈತಿಕಸ್ಥೈರ್ಯವನ್ನು ಕೆಡಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.

ಕೊರೋನೋತ್ತರ ದಿನಗಳಲ್ಲಿ ಭಾರತದಲ್ಲಿ ನಿರುದ್ಯೋಗ ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಸೇನೆಯನ್ನೇ ನೆಚ್ಚಿಕೊಂಡ ದೊಡ್ಡ ಸಂಖ್ಯೆಯ ಯುವಕರಿಗೆ ಅಗ್ನಿಪಥ ಯೋಜನೆ ಭಾರೀ ನಿರಾಶೆಯನ್ನು ತಂದಿದೆ. ಉತ್ತರ ಭಾರತದ ಹಿಂದುಳಿದ ವರ್ಗದ ಸಮುದಾಯದ ಯುವಕರ ಉದ್ಯೋಗವನ್ನು ಅಗ್ನಿಪಥ ಕಸಿದುಕೊಂಡಿದೆ ಮಾತ್ರವಲ್ಲ, ಸೇನೆ ಸೇರಿದರೂ ಸೈನಿಕನೆಂದು ಹೆಮ್ಮೆ ಪಡುವ ಅವಕಾಶವನ್ನು ಅವನಿಂದ ಕಿತ್ತುಕೊಂಡಿದೆ. ಅಗ್ನಿಪಥದ ಮೂಲಕ ಕಂಡ ಯುವಕರ ಬದುಕನ್ನು ಅಗ್ನಿಗೆ ತಳ್ಳಲು ಹೊರಟಿದ್ದಾರೆ ರಾಜಕಾರಣಿಗಳು. ಇದು ಅಂತಿಮವಾಗಿ ದೇಶದ ಭದ್ರತೆಯ ಮೇಲೆ ಭಾರೀ ದುಷ್ಪರಿಣಾಮ ಬೀರಲಿದೆ. ಈ ಅಗ್ನಿಪಥವು ಯುವಕರ ಬದುಕಿಗೆ, ರಕ್ಷಣಾ ವ್ಯವಸ್ಥೆಗೆ ಪೂರ್ಣ ಪ್ರಮಾಣದಲ್ಲಿ ಹಾನಿ ಮಾಡುವ ಮೊದಲು, ಸರಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News