ನ್ಯಾಯ ವ್ಯವಸ್ಥೆಯಲ್ಲಿ ‘ಅಗ್ರಹಾರ’ ಮನಸ್ಥಿತಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯ ಹೈಕೋರ್ಟ್ ನ್ಯಾಯಾಧೀಶರೊಬ್ಬರು ನ್ಯಾಯಾಲಯದ ಪೀಠದಲ್ಲೇ ಕುಳಿತು ನೀಡಿದ ‘ದೇಶ ವಿರೋಧಿ’ ಮತ್ತು ‘ಮಹಿಳಾ ವಿರೋಧಿ’ ಹೇಳಿಕೆ ದೇಶಾದ್ಯಂತ ಟೀಕೆಗೊಳಗಾಗುತ್ತಿದ್ದು, ನ್ಯಾಯವ್ಯವಸ್ಥೆಯ ಮಾನವನ್ನು ಹರಾಜಿಗಿಟ್ಟಿದೆ. ಮೂರನೇ ದರ್ಜೆಯ ಸಂಘಪರಿವಾರ ನಾಯಕನೊಬ್ಬ ಬೀದಿಯಲ್ಲಿ ನಿಂತು ನೀಡುವ ಹೇಳಿಕೆಯಂತೆ, ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶವನ್ನು ‘ಪಾಕಿಸ್ತಾನ’ ಎಂದು ಕರೆದಿರುವ ಹೈಕೋರ್ಟ್ ನ್ಯಾಯಾಧೀಶ ವೇದವ್ಯಾಸಾಚಾರ್ ಶ್ರೀಷಾನಂದ ಹೇಳಿಕೆಯ ವೀಡಿಯೋ ವೈರಲ್ ಆಗಿದೆ. ಜೊತೆಗೆ ಇತ್ತೀಚೆಗೆ ಕಲಾಪದ ಸಂದರ್ಭದಲ್ಲಿ ಮಹಿಳಾ ವಕೀಲೆಯೊಬ್ಬರೊಂದಿಗೆ ನ್ಯಾಯಾಧೀಶರು ‘ಒಳ ಉಡುಪಿ’ನ ಬಗ್ಗೆ ಅಸಭ್ಯವಾಗಿ ಮಾತನಾಡಿರುವುದು ಮುನ್ನಲೆಗೆ ಬಂದಿದೆ. ಹೈಕೋರ್ಟ್ ನ್ಯಾಯಾಧೀಶರ ಸಂವೇದನಾ ರಹಿತ ಹೇಳಿಕೆಯ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬೆನ್ನಿಗೇ, ಸುಪ್ರೀಂಕೋರ್ಟ್ ಸ್ವಯಂ ಪ್ರಕರಣ ದಾಖಲಿಸಿದೆ. ಅಷ್ಟೇ ಅಲ್ಲ, ಇದರ ಬಗ್ಗೆ ಎರಡು ದಿನಗಳಲ್ಲಿ ವರದಿಯನ್ನು ನೀಡಲು ಆದೇಶ ನೀಡಿದೆ. ಸಂವಿಧಾನವನ್ನು ಮುನ್ನಡೆಸುವ ಉನ್ನತ ಪೀಠದಲ್ಲಿ ಕುಳಿತು ಆಡಬಾರದ ಮಾತುಗಳನ್ನು ಆಡಿದ ಬಳಿಕ, ಇದೀಗ ನ್ಯಾಯಾಲಯದ ಕಲಾಪಗಳ ವೀಡಿಯೊಗಳನ್ನು ವೈರಲ್ ಮಾಡಿರುವುದರ ವಿರುದ್ಧ ಕ್ರಮ ತೆಗೆದುಕೊಳ್ಳಲು ರಾಜ್ಯ ಹೈಕೋರ್ಟ್ ಮುಂದಾಗಿದೆ. ಮಾತ್ರವಲ್ಲ, ಅನುಮತಿ ಇಲ್ಲದೆ ಹೈಕೋರ್ಟ್ ವೀಡಿಯೊ ಬಳಕೆಗೆ ನಿರ್ಬಂಧವನ್ನು ಹೇರಿದೆ.
ಅನುಮತಿ ಇಲ್ಲದೆ ಹೈಕೋರ್ಟ್ ವೀಡಿಯೊಗಳನ್ನು ಬಳಕೆ ಮಾಡುವುದು ತಪ್ಪೇ ಆಗಿರಬಹುದು. ಆದರೆ ನ್ಯಾಯವ್ಯವಸ್ಥೆಯ ಉನ್ನತ ಪೀಠದಲ್ಲಿ ಕುಳಿತು, ಈ ದೇಶದ ಸಮಗ್ರತೆಗೆ, ಸೌಹಾರ್ದಕ್ಕೆ, ಅಖಂಡತೆಗೆ ಧಕ್ಕೆ ತರುವಂತೆ ಮೌಖಿಕ ಹೇಳಿಕೆಗಳನ್ನು ನ್ಯಾಯಾಧೀಶರು ನೀಡುವುದು ಅದಕ್ಕಿಂತಲೂ ದೊಡ್ಡ ತಪ್ಪು. ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡಿ, ವಕೀಲರ ಬಾಯಿ ಮುಚ್ಚಿಸಲು ಯತ್ನಿಸುವುದು ಅಥವಾ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದು ಕೂಡ ಸಣ್ಣ ತಪ್ಪೇನಲ್ಲ. ಕಾನೂನು ಬಾಹಿರವಾಗಿಯಾದರೂ ಈ ವೀಡಿಯೊ ವೈರಲ್ ಆದ ಕಾರಣದಿಂದಾಗಿ ನ್ಯಾಯಾಧೀಶರ ನ್ಯಾಯ ಬಾಹಿರ ವರ್ತನೆಗಳು ಬಹಿರಂಗವಾಗಿ ಚರ್ಚೆಗೊಳಗಾಗುತ್ತಿದೆ. ಇಲ್ಲಿ ನಿಜಕ್ಕೂ ನ್ಯಾಯಾವ್ಯವಸ್ಥೆಗೆ ಮೊದಲು ಧಕ್ಕೆಯಾಗಿರುವುದು ಯಾರಿಂದ? ವೀಡಿಯೊ ವೈರಲ್ ಮಾಡಿದವರಿಂದಲೋ ಅಥವಾ ನ್ಯಾಯಾಧೀಶನೊಬ್ಬ ತನ್ನ ಸ್ಥಾನದ ಘನತೆಯನ್ನು ಮರೆತು, ಕೋಮುವಾದಿಯಾಗಿ, ಸ್ತ್ರೀ ವಿರೋಧಿಯಾಗಿ ಹೇಳಿಕೆ ನೀಡಿರುವುದರಿಂದಲೋ? ಇದೊಂದು ತಿರುಚಿದ ವೀಡಿಯೊ ಆಗಿದ್ದರೆ ಖಂಡಿತವಾಗಿಯೂ ಇದನ್ನು ಖಂಡಿಸಿ, ವೈರಲ್ ಮಾಡಿದವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಶಿಕ್ಷಿಸಬಹುದಿತ್ತು. ವೀಡಿಯೋ ವೈರಲ್ ಮಾಡಿದವರು ಆರೋಪಿಗಳಾಗಿದ್ದರೆ, ಆ ವೀಡಿಯೊದೊಳಗಿರುವ ಕೃತ್ಯಗಳಿಗಾಗಿ ನ್ಯಾಯಾಧೀಶರೂ ಆರೋಪಿ ಸ್ಥಾನದಲ್ಲಿ ನಿಲ್ಲುತ್ತಾರೆ. ಆದುದರಿಂದ ಹೈಕೋರ್ಟ್ ಮೊದಲು ತನ್ನ ಮುಖದ ವಿಕಾರಗಳನ್ನು ತಿದ್ದಿಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಬೇಕಾಗಿದೆ. ಆ ಬಳಿಕ ವೀಡಿಯೊವನ್ನು ಯಾರು ರೆಕಾರ್ಡಿಂಗ್ ಮಾಡಬಹುದು, ಮಾಡಬಾರದು ಎನ್ನುವುದರ ಬಗ್ಗೆ ಆದೇಶಗಳನ್ನು ಹೊರಡಿಸುವುದು ನ್ಯಾಯ ಬದ್ಧ ನಡೆಯಾಗಿದೆ.
ಒಂದು ಪ್ರದೇಶದಲ್ಲಿ ಬಹುಸಂಖ್ಯಾತರಾಗಿ ಯಾವ ಸಮುದಾಯ ವಾಸ ಮಾಡುತ್ತಿದೆ? ಎನ್ನುವ ಆಧಾರದಲ್ಲಿ ಆ ಊರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಸಂವಿಧಾನ ವಿರೋಧಿ ಮತ್ತು ಮನುಷ್ಯ ವಿರೋಧಿ ಕ್ರಮವಾಗಿದೆ. ಒಬ್ಬ ವ್ಯಕ್ತಿಯನ್ನು ಯಾವ ವಿಚಾರಣೆಯೂ ನಡೆಸದೆ ಧರ್ಮ ಅಥವಾ ಜಾತಿಯ ಆಧಾರದಲ್ಲಿ ಅಪರಾಧಿಯೆಂದು ಘೋಷಿಸಿದಂತೆಯೇ ಇದು ಕೂಡ. ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶವನ್ನು ಪಾಕಿಸ್ತಾನ ಎಂದು ಕರೆದಂತೆಯೇ ನಾಳೆ ದಲಿತರು ಬಹುಸಂಖ್ಯಾತರಾಗಿರುವ ಊರನ್ನು ಕೂಡ ಈ ನ್ಯಾಯಾಧೀಶರು ಪರೋಕ್ಷವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಬಹುದು. ನ್ಯಾಯಾಧೀಶರ ಇಂತಹ ಹೇಳಿಕೆಗಳು ಸಾರ್ವಜನಿಕರನ್ನು ಪ್ರಚೋದಿಸುವಂತಿದೆ ಮಾತ್ರವಲ್ಲ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಈ ದೇಶದ ಬಹುಸಂಖ್ಯಾತರನ್ನು ಎತ್ತಿ ಕಟ್ಟುವ ಹುನ್ನಾರ ಅವರ ಮಾತಿನಲ್ಲಿದೆ. ಒಂದು ಸಮುದಾಯ ಬಹುಸಂಖ್ಯಾತರಾಗಿರುವ ಪ್ರದೇಶವನ್ನು ‘ಪಾಕಿಸ್ತಾನ’ವೆಂದು ಕರೆಯುವುದು ಅಲ್ಲಿರುವ ಜನರ ಭಾರತೀಯತೆಯ ಗುರುತಿಗೆ ಮಾಡುವ ಅಪಮಾನ ಕೂಡ. ಯಾವ ಕಾರಣವೂ ಇಲ್ಲದೆ ಅವರ ದೇಶಪ್ರೇಮವನ್ನು ನ್ಯಾಯಾಧೀಶರು ಅನುಮಾನಿಸಿದ್ದಾರೆ. ಇಂತಹ ಮನಸ್ಥಿತಿ ಇಡೀ ದೇಶದ ನ್ಯಾಯವ್ಯವಸ್ಥೆಯನ್ನು ಆವರಿಸಿಕೊಳ್ಳುತ್ತಿರುವುದು ಅತ್ಯಂತ ಆತಂಕಕಾರಿಯಾಗಿದೆ. ನ್ಯಾಯಾಧೀಶರು ಸಂವಿಧಾನಕ್ಕಿಂತ ಹೆಚ್ಚು ಆರೆಸ್ಸೆಸ್, ಸಂಘಪರಿವಾರದ ಕೃತಿಗಳನ್ನು ತಲೆಯಲ್ಲಿ ತುಂಬಿಕೊಂಡ ಪರಿಣಾಮವಿದು. ಇಂತಹ ನ್ಯಾಯಾಧೀಶರು ಆರೋಪಿಯಾಗಿ ಕಟಕಟೆಯಲ್ಲಿ ನಿಂತ ಒಬ್ಬ ದಲಿತ ಅಥವಾ ಮುಸ್ಲಿಮ್ ವ್ಯಕ್ತಿಯ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿ ತೀರ್ಪು ನೀಡಲಾರರೆ? ಇತ್ತೀಚೆಗೆ ಕೆಲವು ನಿವೃತ್ತ ನ್ಯಾಯಾಧೀಶರು ವಿಶ್ವ ಹಿಂದೂ ಪರಿಷತ್‌ನ ಸಮಾವೇಶವೊಂದರಲ್ಲಿ ಭಾಗವಹಿಸಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ವಿಶ್ವ ಹಿಂದೂ ಪರಿಷತ್‌ನ ಹಲವು ನಾಯಕರು ಹಲವು ಕೋಮುಗಲಭೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ನೇರವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸಿದ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಸಂವಿಧಾನದ ಕುರಿತಂತೆ ಈ ಸಂಘಟನೆಯ ನಾಯಕರು ಯಾವ ದೋರಣೆಯನ್ನು ಹೊಂದಿದ್ದಾರೆ ಎನ್ನುವುದು ನ್ಯಾಯಾಧೀಶರಿಗೆ ತಿಳಿಯದ ವಿಷವೇನಲ್ಲ. ಹೀಗಿರುವಾಗ, ಸಂಘಪರಿವಾರದ ನಾಯಕರು ಒಳಗೊಂಡಿರುವ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ನ್ಯಾಯಾಧೀಶರು ಸಂವಿಧಾನಕ್ಕೆ ಎಷ್ಟರಮಟ್ಟಿಗೆ ನ್ಯಾಯ ನೀಡಿರಬಹುದು? ಎನ್ನುವ ಅನುಮಾನ ಸಹಜವಾಗಿಯೇ ದೇಶವನ್ನು ಕಾಡುತ್ತದೆ.
ನಾಲ್ಕು ವರ್ಷಗಳ ಹಿಂದೆ ರಾಜಸ್ಥಾನದ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರು, ಗೋಮಾತೆಯ ಹಿರಿಮೆಯನ್ನು ಕೊಂಡಾಡುವ ಭರದಲ್ಲಿ ‘ಹೆಣ್ಣು ನವಿಲು ಗಂಡು ನವಿಲಿನ ಕಣ್ಣೀರು ಕುಡಿದು ಗರ್ಭ ಧರಿಸುತ್ತದೆ’ ಎಂಬ ಹೇಳಿಕೆಯನ್ನು ನೀಡಿದ್ದರು. ವಿಜ್ಞಾನ, ವೈಚಾರಿಕತೆಯ ಪ್ರಾಥಮಿಕ ಜ್ಞಾನವೂ ಇಲ್ಲದ ಈ ನ್ಯಾಯಾಧೀಶರು, ತನ್ನ ಹೇಳಿಕೆಗೆ ಪುರಾಣ ಕತೆಗಳನ್ನು ಆಧಾರವಾಗಿಟ್ಟುಕೊಂಡಿದ್ದರು. ಮುಂಬೈಯ ನ್ಯಾಯಾಧೀಶರೊಬ್ಬರು ಅಸಮಾನತೆಯನ್ನು ಎತ್ತಿ ಹಿಡಿದಿದ್ದ ಮನುಸ್ಮತಿಯ ಹಿರಿಮೆಯನ್ನು ನ್ಯಾಯ ನೀಡುವ ಸಂದರ್ಭದಲ್ಲಿ ಕೊಂಡಾಡಿದ್ದರು. ಸಂವಿಧಾನವನ್ನು ಬರೆದ ಅಂಬೇಡ್ಕರ್ ಒಂದು ಕಾಲದಲ್ಲಿ ಮನುಸ್ಮತಿಯನ್ನು ಯಾಕೆ ಸುಟ್ಟು ಹಾಕಿದ್ದರು ಎನ್ನುವ ಪ್ರಾಥಮಿಕ ಅರಿವು ಕೂಡ ಇವರಿಗಿರಲಿಲ್ಲ ಅಥವಾ ಪರೋಕ್ಷವಾಗಿ ಇವರು ಮನುಸ್ಮತಿ ಪ್ರತಿಪಾದಿಸುವ ಮೇಲು-ಕೀಳುಗಳನ್ನು ತಮ್ಮ ಹೇಳಿಕೆಯ ಮೂಲಕ ಸಮರ್ಥಿಸಲು ಮುಂದಾಗಿದ್ದರು. ಇದೀಗ ಕರ್ನಾಟಕದ ಹೈಕೋರ್ಟ್ ನ್ಯಾಯಾಧೀಶರ ಹೇಳಿಕೆ ಇವೆಲ್ಲದರ ಮುಂದುವರಿದ ಭಾಗವಾಗಿದೆ. ಸಾಧಾರಣವಾಗಿ ಒಬ್ಬ ಪೊಲೀಸ್ ಅಧಿಕಾರಿ ತನ್ನ ಕರ್ತವ್ಯಕ್ಕೆ ಧಕ್ಕೆ ತರುವಂತೆ ವರ್ತಿಸಿದರೆ ಅವನನ್ನು ತಕ್ಷಣ ಅಮಾನತುಗೊಳಿಸಲಾಗುತ್ತದೆ. ಆದರೆ ನ್ಯಾಯಾಧೀಶನೊಬ್ಬ ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿದ ಬಳಿಕವೂ ಅದೇ ಸ್ಥಾನದಲ್ಲಿ ಮುಂದುವರಿಯುವುದನ್ನು ನೋಡುತ್ತಿದ್ದೇವೆ. ಹೆಚ್ಚೆಂದರೆ ಸುಪ್ರೀಂಕೋರ್ಟ್ ತರಾಟೆಯೊಂದಿಗೆ ಪ್ರಕರಣ ಮುಗಿದು ಹೋಗುತ್ತದೆ. ಇತ್ತೀಚೆಗೆ ಹಿರಿಯ ರಾಜಕೀಯ ನಾಯಕರೊಬ್ಬರು ನ್ಯಾಯ ವ್ಯವಸ್ಥೆಯಲ್ಲಿ ಮೇಲ್‌ಜಾತಿಯ ಜನರ ಪ್ರಾಬಲ್ಯದಿಂದ ದುರ್ಬಲರಿಗೆ ನ್ಯಾಯ ಸಿಗುತ್ತಿಲ್ಲ ಎನ್ನುವ ಆರೋಪ ಮಾಡಿದ್ದರು. ಮನುಸ್ಮತಿ ಮೇಲ್ ಜಾತಿಯ ಜನರ ಹಿತಾಸಕ್ತಿಗಳನ್ನಷ್ಟೇ ಕಾಪಾಡುತ್ತದೆ. ಆದುದರಿಂದಲೇ, ಸಂವಿಧಾನವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿರುವ ನ್ಯಾಯಾಲಯದಂತಹ ಉನ್ನತ ಸಂಸ್ಥೆಗಳಲ್ಲಿ ಶೋಷಿತ, ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ನ್ಯಾಯಾಧೀಶರ ಸಂಖ್ಯೆ ಹೆಚ್ಚಾಗಬೇಕಾಗಿದೆ. ನ್ಯಾಯವ್ಯವಸ್ಥೆಯಲ್ಲಿ ಮೇಲ್‌ಜಾತಿಯ ಅಗ್ರಹಾರ ಮನಸ್ಥಿತಿ ಕೆಸರುಗಟ್ಟಿದಾಗ ಮಾತ್ರ ಅಲ್ಲಿರುವ ಮಂದಿಗೆ ಮುಸ್ಲಿಮರು ಬಹುಸಂಖ್ಯಾತರಿರುವ ಪ್ರದೇಶ ಪಾಕಿಸ್ತಾನವಾಗಿಯೂ, ದಲಿತರು ಬಹುಸಂಖ್ಯಾತರಾಗಿರುವ ಪ್ರದೇಶಗಳು ಕೊಳೆಗೇರಿಗಳಾಗಿಯೂ ಕಾಣಲು ಶುರುವಾಗುತ್ತದೆ. ಆದುದರಿಂದ ನಮ್ಮ ನ್ಯಾಯ ವ್ಯವಸ್ಥೆ ಅಸಮಾನತೆಯನ್ನು ಎತ್ತಿ ಹಿಡಿಯುವ ಅಗ್ರಹಾರಗಳಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ.