ಮಿತ್ರ ಪಕ್ಷಗಳನ್ನು ಓಲೈಸುವ ಅನಿವಾರ್ಯತೆ

Update: 2024-09-10 05:09 GMT

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪ್ರಜಾಪ್ರಭುತ್ವ ವ್ಯವಸ್ಥೆ ನಿರಂಕುಶ ಸರ್ವಾಧಿಕಾರಿಯಾಗಲು ಹೊರಟವರಿಗೆ ಹೇಗೆ ಪಾಠ ಕಲಿಸುತ್ತದೆ ಎಂಬುದಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಕಳೆದ ಹತ್ತು ವರ್ಷಗಳಿಂದ ನಿಚ್ಚಳ ಬಹುಮತದಿಂದ ಅಧಿಕಾರ ಅನುಭವಿಸಿದ ಬಿಜೆಪಿ ಈ ಬಾರಿ ಬೆಂಬಲ ನೀಡಿದ ಪಕ್ಷಗಳ ಕಣ್ಸನ್ನೆಯಂತೆ ನಡೆಯಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಇದರ ಜೊತೆಗೆ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಪ್ರಾಬಲ್ಯ ಹೆಚ್ಚಿದೆ. ಅದರಲ್ಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹದಿಮೂರು ವರ್ಷಗಳ ಕಾಲ ಗುಜರಾತಿನ ಮುಖ್ಯಮಂತ್ರಿಯಾದಾಗ ಹಾಗೂ ಆನಂತರ ಪ್ರಧಾನಿಯಾದಾಗ ಕೂಡ ಯಾವ ಪಕ್ಷದ ಬೆಂಬಲದ ಹಂಗಿಲ್ಲದೆ ಮನ ಬಂದಂತೆ ಆಡಳಿತ ನಡೆಸಿದರು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಬಿಜೆಪಿಗೆ ನಿಚ್ಚಳ ಬಹುಮತ ಲಭಿಸದ ಕಾರಣ ಬೆಂಬಲ ನೀಡಿದ ಮಿತ್ರಪಕ್ಷಗಳ ಒಪ್ಪಿಗೆ ಪಡೆಯದೇ ಏನನ್ನೂ ಮಾಡುವ ಸ್ಥಿತಿಯಲ್ಲಿ ಇಲ್ಲ.

ಮೂರು ತಿಂಗಳ ಹಿಂದೆ ಸತತ ಮೂರನೇ ಸಲ ಸರಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿಯವರು ಈ ವರೆಗೆ ಮಿತ್ರ ಪಕ್ಷಗಳ ಮುಲಾಜು ಹಾಗೂ ಒತ್ತಡವಿಲ್ಲದೆ ತಮ್ಮ ಇಷ್ಟದಂತೆ ಸರಕಾರವನ್ನು ನಡೆಸಿದರು. ಆದರೆ ಇದೇ ಮೊದಲ ಸಲ ಮಿತ್ರಪಕ್ಷಗಳ ಒತ್ತಡಕ್ಕೆ ಮಣಿದು ಮೂರು ಪ್ರಸ್ತಾವನೆಗಳನ್ನು ವಾಪಸ್ ಪಡೆಯಬೇಕಾಯಿತು. ಅವು ಯಾವುವು ಅಂದರೆ ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳಿಗೆ ಅಧಿಕಾರಿಗಳ ಹಿಂಬಾಗಿಲ ಪ್ರವೇಶದ ನೇಮಕಾತಿ ಮತ್ತು ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆ ಹಾಗೂ ಇದಕ್ಕೆ ಸಂಬಂಧಿಸಿದ ನಿಯಮಾವಳಿ ಮತ್ತು ಪ್ರಸಾರ ಸೇವೆಗಳ ನಿಯಂತ್ರಣ ವಿಧೇಯಕ. ಇವುಗಳಲ್ಲದೆ ಹಿಂದಿನ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗಿದ್ದ ವಕ್ಫ್ ಮಸೂದೆಯ ತಿದ್ದುಪಡಿಯನ್ನು ಸಂಸತ್ತಿನ ಜಂಟಿ ಸದನ ಸಮಿತಿ(ಜೆಪಿಸಿ)ಯ ಪರಿಶೀಲನೆಗೆ ಒಪ್ಪಿಸಬೇಕಾಯಿತು. ಎಂತಹ ನಿರಂಕುಶ ಸರ್ವಾಧಿಕಾರಿಯಾದರೂ ಪ್ರಜಾಪ್ರಭುತ್ವ ವ್ಯವಸ್ಥೆ ಅಂಥವರಿಗೆ ಪಾಠ ಕಲಿಸುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಇಷ್ಟೇ ಅಲ್ಲದೆ ಮೋದಿ ಸರಕಾರ ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು (ಯುಪಿಎಸ್) ಜಾರಿಗೆ ತರುವುದಾಗಿ ಹೇಳಿತು. ಇದನ್ನು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಇದು ಯೂ ಟರ್ನ್ ನೀತಿ ಎಂದು ಲೇವಡಿ ಮಾಡಿದರು. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಸದನದಲ್ಲಿ ಆಡುತ್ತಿರುವ ಮಾತುಗಳು ಸರಕಾರದ ಚುಕ್ಕಾಣಿ ಹಿಡಿದವರಿಗೆ ನುಂಗಲಾಗದ ತುತ್ತಾಗಿವೆ.

ಲೋಕಸಭಾ ಚುನಾವಣೆಯಲ್ಲಿ ಬಹುಮತವನ್ನು ಗಳಿಸದಿರುವುದಕ್ಕೆ ಮುಖ್ಯ ಕಾರಣ ಪಿಂಚಣಿ ಯೋಜನೆ ಎಂದು ತಿಳಿದ ನಂತರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಯೋಜನೆಯನ್ನು ಪರಿಷ್ಕರಿಸಿದೆ. ಮೋದಿ ಸರಕಾರ ವಾಪಸ್ ಪಡೆದ ಇನ್ನೊಂದು ತೀರ್ಮಾನವೆಂದರೆ ಹಿಂಬಾಗಿಲ ಪ್ರವೇಶದ ನೇಮಕಾತಿ. ಅಂದರೆ ಬೇರೆ ಬೇರೆ ವಿಷಯಗಳ ಬಗ್ಗೆ ಪರಿಣಿತಿ ಪಡೆದವರನ್ನು ಹಾಗೂ ಖಾಸಗಿ ವಲಯದವರನ್ನು ಸರಕಾರಿ ಇಲಾಖೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದು. ಇದರರ್ಥ, ಸರಕಾರದ ಉನ್ನತ ಹುದ್ದೆಗಳಿಗೆ ಆರೆಸ್ಸೆಸ್ ಮೂಲದವರನ್ನು ನೇರ ನೇಮಕಾತಿ ಮಾಡಿಕೊಳ್ಳುವುದು, ಆ ಮೂಲಕ ಆಡಳಿತದ ಮೇಲೆ ಬಿಗಿ ಹಿಡಿತವನ್ನು ಸಾಧಿಸುವುದು. ಇದಕ್ಕೆ ಪ್ರತಿಪಕ್ಷಗಳು ಮಾತ್ರವಲ್ಲ, ಸರಕಾರಕ್ಕೆ ಬೆಂಬಲ ನೀಡಿರುವ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇದನ್ನು ಕೈ ಬಿಡಲಾಯಿತು.

ಸರಕಾರಿ ಇಲಾಖೆಗಳ ಉನ್ನತ ಸ್ಥಾನಗಳಿಗೆ ನೇರ ನೇಮಕಾತಿಗೆ ತೀವ್ರ ವಿರೋಧ ಬರಲು ಇನ್ನೊಂದು ಮಹತ್ವದ ಕಾರಣ ಮೀಸಲಾತಿ. ಪ್ರತಿಪಕ್ಷಗಳು ಮಾತ್ರವಲ್ಲ, ಸರಕಾರಕ್ಕೆ ಬೆಂಬಲ ನೀಡಿರುವ ಜೆಡಿಯು ಮತ್ತು ಎಲ್‌ಜೆಪಿ ಪಕ್ಷಗಳು ಇದರಿಂದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀಸಲಾತಿಗೆ ಧಕ್ಕೆ ಉಂಟಾಗುತ್ತದೆ. ಹಾಗಾಗಿ ಲ್ಯಾಟರಲ್ ಎಂಟ್ರಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಸಿಗಬೇಕೆಂದು ಪಟ್ಟು ಹಿಡಿದವು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 400 ಸ್ಥಾನಗಳನ್ನು ಗೆಲ್ಲುವ ಆಸೆ ಇಟ್ಟುಕೊಂಡಿದ್ದರು. ಆದರೆ ನಿರೀಕ್ಷೆ ಈಡೇರಲಿಲ್ಲ. ಬಿಜೆಪಿ 400 ಸ್ಥಾನಗಳನ್ನು ಪಡೆದರೆ ಸಂವಿಧಾನವನ್ನು ಬದಲಿಸುತ್ತದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಸಮುದಾಯಗಳ ಮೀಸಲು ವ್ಯವಸ್ಥೆಯನ್ನು ರದ್ದು ಪಡಿಸುತ್ತದೆ ಎಂದು ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಆತಂಕ ಉಂಟಾದ ಪರಿಣಾಮವಾಗಿ ಆ ಜನರು ಬಿಜೆಪಿಗೆ ವಿರುದ್ಧ ಮತದಾನ ಮಾಡಿದ್ದರಿಂದ ನಿಚ್ಚಳ ಬಹುಮತ ಸಿಗದೆ ಗುರಿ ಸಾಧಿಸಲಾಗಲಿಲ್ಲ ಎಂದು ಬಿಜೆಪಿಗೆ ಆತಂಕ ಉಂಟಾಗಿದ್ದು ಹೀಗಾಗಿ ನೇರ ನೇಮಕಾತಿ ಕೈ ಬಿಟ್ಟಿದೆ.

ಇದಲ್ಲದೆ ಮುಂಬರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಈ ವಿಷಯ ಪ್ರತಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಬಹುದೆಂಬ ಆತಂಕ ಹಾಗೂ ಇದರ ವಿರುದ್ಧ ದಲಿತ ಮತ್ತು ಹಿಂದುಳಿದ ಸಮುದಾಯಗಳು ಆಗಸ್ಟ್ 21ರಂದು ‘ಭಾರತ್‌ಬಂದ್’ ಮಾಡುವುದಾಗಿ ಘೋಷಿಸಿದ್ದರಿಂದ ಲ್ಯಾಟರಲ್ ಎಂಟ್ರಿಗೆ ಸಂಬಂಧಿಸಿದಂತೆ ನೀಡಲಾಗಿದ್ದ ಜಾಹೀರಾತನ್ನು ಅದು ಪ್ರಕಟವಾದ ಮೂರು ದಿನಗಳಲ್ಲೇ ಸರಕಾರ ವಾಪಸ್ ಪಡೆಯಿತು.

ಮೋದಿ ಸರಕಾರ ವಿರೋಧ ಪಕ್ಷಗಳು ಹಾಗೂ ಮಿತ್ರ ಪಕ್ಷಗಳ ಪ್ರತಿರೋಧಕ್ಕೆ ಮಣಿದು ವಾಪಸ್ ಪಡೆದ ಇನ್ನೊಂದು ಮಸೂದೆಯೆಂದರೆ ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆ. ಒಟಿಟಿ ಹಾಗೂ ಡಿಜಿಟಲ್ ಸುದ್ದಿ ಪ್ರಸಾರಕರು ಇದರ ವ್ಯಾಪ್ತಿಗೆ ಬರುತ್ತಾರೆ. ಹೀಗಾಗಿ ಪ್ರಮುಖ ಸುದ್ದಿ ವಾಹಿನಿಗಳು ಅದರಲ್ಲೂ ದೃಶ್ಯ ಮಾಧ್ಯಮಗಳು ಬಿಜೆಪಿ ತುತ್ತೂರಿಯಾಗಿರುವುದರಿಂದ ದೇಶದ ಎಲ್ಲ ವಿಭಾಗಗಳ ಜನರು ಸುದ್ದಿ ವಾಹಿನಿಗಳನ್ನು ನೋಡುವುದನ್ನು ನಿಲ್ಲಿಸಿ ಆನ್‌ಲೈನ್ ಮೂಲಕ ಬರುವ ಸುದ್ದಿಗಳನ್ನು ನೋಡಲು ಹಾಗೂ ಸಾಮಾಜಿಕ ಜಾಲತಾಣಗಳ ನೈಜ ಸುದ್ದಿಗಳನ್ನು ನೋಡತೊಡಗಿದರು. ಇತ್ತೀಚಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದು ಹೆಚ್ಚಾಯಿತು. ಇದರಿಂದ ಹೆದರಿದ ಮೋದಿ ಸರಕಾರ ಈ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಲು ಮುಂದಾಯಿತು. ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ವಿರೋಧ ಬಂದುದರ ಪರಿಣಾಮವಾಗಿ ವಾಪಸ್ ಪಡೆಯಬೇಕಾಯಿತು ಇದರಿಂದ ಸರಕಾರಕ್ಕೆ ಮುಖಭಂಗವಾದಂತಾಯಿತು.

ಮೋದಿ ಸರಕಾರ ವಾಪಸ್ ಪಡೆದ ಇನ್ನೊಂದು ವಿಧೇಯಕವೆಂದರೆ ವಕ್ಫ್ ಕಾನೂನಿಗೆ ತಿದ್ದುಪಡಿ ತರುವ ಮಸೂದೆ. ವಕ್ಫ್ ಮಸೂದೆಗೆ ಅತ್ಯಂತ ತೀವ್ರವಾದ ವಿರೋಧ ಬಂತು. ಪ್ರತಿಪಕ್ಷಗಳು ಮಾತ್ರವಲ್ಲ ಬಿಜೆಪಿಯ ಮಿತ್ರಪಕ್ಷಗಳಾದ ಜೆಡಿಯು ಹಾಗೂ ತೆಲುಗು ದೇಶಂ ಕೂಡಾ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದವು. ಹೀಗಾಗಿ ಇದನ್ನು ಸಂಸತ್ತಿನ ಸದನದ ಜಂಟಿ ಸಮಿತಿಗೆ ಒಪ್ಪಿಸಲಾಯಿತು. ಈ ಹಿಂದೆ ಇನ್ನೂ ಕೆಲವು ಮಸೂದೆಗಳನ್ನು ವಾಪಸ್ ಪಡೆಯಲಾಗಿತ್ತು. ಅವುಗಳೆಂದರೆ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಮಸೂದೆ ಮತ್ತು ಕೃಷಿ ಮಸೂದೆಗಳು. ರೈತಾಪಿ ವರ್ಗದ ತೀವ್ರ ವಿರೋಧ ಇದಕ್ಕೆ ಕಾರಣ. ರಾಜಧಾನಿ ದಿಲ್ಲಿಯಲ್ಲಿ ಒಂದು ವರ್ಷಕ್ಕೂ ಮಿಕ್ಕಿ ನಡೆದ ರೈತರ ಅವಿರತ ಚಳವಳಿಗೆ ಮಣಿದ ಮೋದಿ ಸರಕಾರ, ಇದನ್ನು ಮಂಡಿಸಿ ಒಂದು ವರ್ಷದ ನಂತರ, 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮೂರು ತಿಂಗಳಿರುವಾಗ ವಾಪಸ್ ಪಡೆಯಿತು.

ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಿಸುವ ಕೋಮುವಾದಿ ಶಕ್ತಿಗಳ ಮಸಲತ್ತು ಎಂದಿಗೂ ಯಶಸ್ವಿಯಾಗುವುದಿಲ್ಲ. ಭಾರತದ ಮತದಾರರು ಜಾಗೃತರಾಗಿದ್ದಾರೆ. ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಬಹುತ್ವ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿಲ್ಲ. ಈ ಸದನದಲ್ಲಿ ಪ್ರತಿಪಕ್ಷ ಸದಸ್ಯರ ಸಂಖ್ಯೆ ಗಮನಾರ್ಹವಾಗಿದೆ. ಜೊತೆಗೆ ಬಿಜೆಪಿ ಮಿತ್ರ ಪಕ್ಷಗಳು ಬಿಜೆಪಿಯ ರಹಸ್ಯ ಕಾರ್ಯಸೂಚಿಯನ್ನು ಜಾರಿಗೆ ತರಲು ಬಿಡುವುದಿಲ್ಲ. ಕಾಂಗ್ರೆಸ್ ಮುಕ್ತ ಅಂದರೆ ಪ್ರತಿಪಕ್ಷ ಮುಕ್ತ ಭಾರತವನ್ನು, ಏಕಪಕ್ಷ, ಏಕವ್ಯಕ್ತಿ ಸರ್ವಾಧಿಕಾರವನ್ನು ಹೇರುವ ಹುನ್ನಾರ ಈಗ ವಿಫಲಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂಥ ಅಸಹಾಯಕ ಪರಿಸ್ಥಿತಿಯನ್ನು ಹಿಂದೆಂದೂ ಎದುರಿಸಿರಲಿಲ್ಲ.ಈಗ ಅವರಿಗೆ ಎಪ್ಪತ್ತೈದು ವಯಸ್ಸು ಸಮೀಪಿಸುತ್ತಿದೆ. ಪಕ್ಷದ ನಿಯಮಾವಳಿ ಪ್ರಕಾರ ಸಕ್ರಿಯ ರಾಜಕೀಯದಿಂದ ಹೊರಗೆ ಬಂದು ಮಾರ್ಗದರ್ಶಿ ಮಂಡಲಿ ಸೇರುವ ದಿನಗಳು ಸಮೀಪಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News