ರಾಜ್ಯ ಬಿಜೆಪಿ ಎಂಬ ಮುರಿದ ಮನೆ
‘ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು’ ಎನ್ನುವಂತಹ ಸ್ಥಿತಿ ರಾಜ್ಯ ಬಿಜೆಪಿಯದ್ದಾಗಿದೆ. ಯಡಿಯೂರಪ್ಪ ಬಣ ಬಿಜೆಪಿಯನ್ನು ಏರಿಗೆ ಎಳೆದರೆ, ಅವರ ವಿರೋಧಿ ಬಣ ನೀರಿಗೆ ಎಳೆಯುತ್ತಿದೆ. ವಿಧಾನಸಭಾ ಚುನಾವಣೆಯ ಸೋಲಿನಿಂದ ತತ್ತರಿಸಿ ಕೂತಿರುವ ರಾಜ್ಯ ಬಿಜೆಪಿಯನ್ನು ಮತ್ತೆ ಸಂಘಟಿತಗೊಳಿಸಿ, ಮುನ್ನಡೆಸಲು ಬೇಕಾದ ನಾಯಕತ್ವದ ಕೊರತೆಯ ಬಗ್ಗೆ ಬಿಜೆಪಿಯೊಳಗಿರುವ ನಾಯಕರೇ ಪದೇ ಪದೇ ಉಲ್ಲೇಖಿಸುತ್ತಿದ್ದಾರೆ. ಒಂದೆಡೆ ರಾಜ್ಯಾಧಕ್ಷ ವಿಜಯೇಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಆಂದೋಲನಗಳು ನಡೆದರೆ, ಮತ್ತೊಂದೆಡೆ ಬಿಜೆಪಿ ನಾಯಕರಿಂದಲೇ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಗುಪ್ತ ಸಭೆ ನಡೆಯುತ್ತದೆ. ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಡೆಸಿದ ಪಾದಯಾತ್ರೆ, ಧರಣಿಗಳನ್ನೆಲ್ಲ ವಿಫಲಗೊಳಿಸಲು ಬಿಜೆಪಿಯೊಳಗಿಂದಲೇ ಪ್ರಯತ್ನಗಳು ನಡೆದವು. ಸರಕಾರದ ವಿರುದ್ಧದ ಈ ಪ್ರತಿಭಟನೆಗಳು ಗೆದ್ದರೆ ಅದು ಪರೋಕ್ಷವಾಗಿ ಯಡಿಯೂರಪ್ಪ ಬಣದ ಗೆಲುವಾಗಿ ಬಿಡುವ ಬಗ್ಗೆ ಕೆಲವರಿಗೆ ಆತಂಕವಿದೆ. ರಾಜ್ಯ ಬಿಜೆಪಿಯ ಚುಕ್ಕಾಣಿ ಮತ್ತೆ ಯಡಿಯೂರಪ್ಪ ಕೈ ಸೇರಿ, ಅವರ ಮುಖಾಂತರ ಮಗನ ಕೈಗೆ ಹಸ್ತಾಂತರವಾಗುವುದು ಆರೆಸ್ಸೆಸ್ ನಾಯಕರೂ ಸೇರಿದಂತೆ ಕೆಲವರಿಗೆ ಇಷ್ಟವಿಲ್ಲದ ವಿಷಯವಾಗಿದೆ. ಆದುದರಿಂದಲೇ ಬಿಜೆಪಿಯೊಳಗೆ ವಿಜಯೇಂದ್ರ ನಾಯಕತ್ವದ ಬಗ್ಗೆ ಮತ್ತೆ ಅಪಸ್ವರ ಎದ್ದಿದೆ. ಇತ್ತೀಚೆಗೆ ಯತ್ನಾಳ್ ಸೇರಿದಂತೆ ಹಲವು ನಾಯಕರು ಪ್ರತ್ಯೇಕ ಸಭೆಗಳನ್ನು ನಡೆಸಿ ಯಡಿಯೂರಪ್ಪ ವಿರುದ್ಧ ತಮ್ಮ ಅಸಮಾಧಾನಗಳನ್ನು ತೋಡಿಕೊಂಡಿದ್ದರು. ಇದೀಗ ಗೋಕಾಕ್ ಕ್ಷೇತ್ರದ ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ರಾಜ್ಯಾಧ್ಯಕ್ಷರ ವಿರುದ್ಧ ಟೀಕೆ ಮಾಡಿದ್ದಾರೆ.
‘‘ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ. ವೈ. ವಿಜಯೇಂದ್ರ ಅವರನ್ನು ನಾನು ಎಂದೂ ಒಪ್ಪುವುದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂದು ಪಕ್ಷದ ವರಿಷ್ಠರು ಕೂಡಲೇ ನಿರ್ಧರಿಸಬೇಕು’’ ಎಂದು ರಮೇಶ್ ಜಾರಕಿ ಹೊಳಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ‘‘ವಿಜಯೇಂದ್ರ ಪಕ್ಷದಲ್ಲಿ ಇನ್ನೂ ಕಿರಿಯ. ಅವನಿಗೆ ಏನೂ ಸಿದ್ಧಾಂತವಿಲ್ಲ. ಭ್ರಷ್ಟ ಎಂಬ ಲೇಬಲ್ ಬೇರೆ ಆತನ ಮೇಲಿದೆ. ಆತನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಕ್ಕೆ ನನ್ನ ವಿರೋಧವಿದೆ’’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಮುಖ ನಾಯಕನೊಬ್ಬ ರಾಜ್ಯಾಧ್ಯಕ್ಷರ ಬಗ್ಗೆ ಇಷ್ಟೊಂದು ಸ್ಪಷ್ಟವಾಗಿ ಭಿನ್ನಮತ ವ್ಯಕ್ತಪಡಿಸಿದ ಬಳಿಕವೂ ಇದರ ವಿರುದ್ಧ ಇತರ ನಾಯಕರು ತುಟಿ ಬಿಚ್ಚಿಲ್ಲ. ವಿಜಯೇಂದ್ರ ಅವರಿಗೆ ಬೆಂಬಲವಾಗಿ ಯಾರೂ ಹೇಳಿಕೆ ನೀಡಿಲ್ಲ ಮಾತ್ರವಲ್ಲ, ಜಾರಕಿ ಹೊಳಿ ಅವರ ಹೇಳಿಕೆ ತಪ್ಪು ಎಂದೂ ಯಾರು ಆಕ್ಷೇಪಿಸಿಲ್ಲ. ರಮೇಶ್ ಜಾರಕಿಹೊಳಿ ಅವರ ಹೇಳಿಕೆಯ ಬಗ್ಗೆ ಬಿಜೆಪಿ ನಾಯಕರ ಮೌನ, ಪರೋಕ್ಷವಾಗಿ ಹೇಳಿಕೆಗೆ ಸಮ್ಮತಿ ವ್ಯಕ್ತಪಡಿಸಿದಂತೆಯೇ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ದಿಲ್ಲಿಯ ವರಿಷ್ಠರು ಈವರೆಗೂ ರಮೇಶ್ ವಿರುದ್ಧ ಯಾವ ಕ್ರಮವನ್ನೂ ತೆಗೆದುಕೊಳ್ಳುವ ಮಾತನಾಡಿಲ್ಲ. ಅಂದರೆ, ವರಿಷ್ಠರಿಗೂ ಈ ಹೇಳಿಕೆ ಪಕ್ಷ ವಿರೋಧಿಯಾಗಿ ಕಂಡಿಲ್ಲ. ಆದುದರಿಂದ, ವರಿಷ್ಠರೇ ಕೆಲವು ನಾಯಕರ ಬಾಯಲ್ಲಿ ಯಡಿಯೂರಪ್ಪ ಗುಂಪಿನ ವಿರುದ್ಧ ಹೇಳಿಕೆಗಳನ್ನು ನೀಡಿಸುತ್ತಿದ್ದಾರೆಯೇ ಎಂದು ಒಟ್ಟು ಬೆಳವಣಿಗೆಗಳನ್ನು ಅನುಮಾನಿಸಬೇಕಾಗಿದೆ.
ವಿಧಾನಸಭಾ ಚುನಾವಣೆ ಮುಗಿದು ಸೋಲಿನ ಹೊಣೆ ಹೊತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್‌ಕುಮಾರ್ ಕಟೀಲು ಅವರು ರಾಜೀನಾಮೆ ನೀಡಿದರು. ಅವರು ರಾಜೀನಾಮೆ ನೀಡಿದ ಬೆನ್ನಿಗೇ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಮಾಡಲು ವರಿಷ್ಠರು ವಿಫರಾದ ಕಾರಣ, ತಾತ್ಕಾಲಿಕವಾಗಿ ಅವರೇ ಮುಂದುವರಿಯಬೇಕಾಯಿತು. ಸುಮಾರು ಒಂದು ವರ್ಷಗಳ ಕಾಲ ರಾಜ್ಯಾಧ್ಯಕ್ಷರಿಲ್ಲದೆಯೇ ಬಿಜೆಪಿ ಮುಂದುವರಿಯಿತು. ಜೊತೆಗೆ ವಿರೋಧ ಪಕ್ಷ ನಾಯಕನ ಆಯ್ಕೆಯೂ ವರಿಷ್ಠರ ಪಾಲಿಗೆ ಜಟಿಲವಾಯಿತು. ವಿಧಾನಸಭೆಯಲ್ಲಿ ನಾಯಕನಿಲ್ಲದ ಕಾರಣ, ಸದನದಲ್ಲಿ ಎಲ್ಲರೂ ವಿರೋಧ ಪಕ್ಷದ ನಾಯಕರಂತೆಯೇ ವರ್ತಿಸತೊಡಗಿದರು. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ನಾಯಕನನ್ನು ಆಯ್ಕೆ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ವರಿಷ್ಠರು ಸಿಲುಕಿಕೊಂಡರು. ಯಡಿಯೂರಪ್ಪ ಅದಾಗಲೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಹೇಳಿಕೆ ನೀಡಿದ್ದರು. ಆದರೆ ಯಡಿಯೂರಪ್ಪ ಅವರಿಲ್ಲದೆ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸುವುದು ಸಾಧ್ಯವಿಲ್ಲ ಎನ್ನುವುದು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಮಿತ್ ಶಾ ಅವರಿಗೆ ಅರ್ಥವಾಗಿತ್ತು. ತನ್ನನ್ನು ವರಿಷ್ಠರು ವೃದ್ಧಾಶ್ರಮಕ್ಕೆ ಸೇರಿಸಲು ಸಿದ್ಧತೆ ನಡೆಸುತ್ತಿರುವುದನ್ನು ಅರಿತುಕೊಂಡ ಯಡಿಯೂರಪ್ಪ, ತನ್ನ ಮಗನ ಮೂಲಕ ಪಕ್ಷದ ನಿಯಂತ್ರಣವನ್ನು ಕೈಗೆ ತೆಗೆದುಕೊಳ್ಳಲು ಯೋಜನೆ ಹಾಕಿದ್ದರು.ಯಡಿಯೂರಪ್ಪ ಮತ್ತು ಅವರ ಬೆನ್ನಿಗಿರುವ ಲಿಂಗಾಯತ ಸಮುದಾಯದ ಬೆಂಬಲವನ್ನು ಬಿಜೆಪಿ ಉಳಿಸಿಕೊಳ್ಳಬೇಕಾದರೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡುವುದು ವರಿಷ್ಠರಿಗೆ ಅನಿವಾರ್ಯವಾಯಿತು. ಯಡಿಯೂರಪ್ಪ ಪುತ್ರ ಎನ್ನುವ ಹೆಗ್ಗಳಿಕೆಯೊಂದನ್ನು ಬಿಟ್ಟರೆ ವಿಜಯೇಂದ್ರ ಅವರಿಗೆ ಪಕ್ಷ ಕಟ್ಟಿದ ಯಾವ ಅನುಭವವೂ ಇಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ವಿಜಯೇಂದ್ರ ಅವರು ನಡೆಸಿದ ಭ್ರಷ್ಟಾಚಾರ ರಾಜಕೀಯ ವಲಯದಲ್ಲಿ ಬಹಳಷ್ಟು ಸುದ್ದಿ ಮಾಡಿತ್ತು. ವಿಜಯೇಂದ್ರ ಅವರು ನಡೆಸಿದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ತೋರಿಸಿಯೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ವಿಪರ್ಯಾಸವೆಂದರೆ, ಬಳಿಕ ಅದೇ ವಿಜಯೇಂದ್ರ ಅವರ ಕೈಗೆ ಬಿಜೆಪಿಯ ಚುಕ್ಕಾಣಿಯನ್ನು ವರಿಷ್ಠರೇ ನೀಡಿದರು. ಯಡಿಯೂರಪ್ಪ ಅವರ ವಿರೋಧಿ ಬಣಕ್ಕೆ ಇದಕ್ಕಿಂತ ದೊಡ್ಡ ಮುಖಭಂಗ ಇನ್ನೇನಿದೆ?
ಯಡಿಯೂರಪ್ಪರನ್ನೇ ಅಧಿಕಾರದಿಂದ ಇಳಿಸಿ, ಯಡಿಯೂರಪ್ಪ ಮುಕ್ತ ಬಿಜೆಪಿ ಮಾಡಲು ಹೊರಟವರು ಇದೀಗ ಯಡಿಯೂರಪ್ಪ ಅವರ ಪುತ್ರನ ಮಾರ್ಗದರ್ಶನವನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಸಾಧ್ಯವಾಗುವ ವಿಷಯವಲ್ಲ. ಯಡಿಯೂರಪ್ಪ ಅವರ ಕೈಯಿಂದ ಅಧಿಕಾರ ಪುತ್ರನಿಗೆ ಹಸ್ತಾಂತರವಾದರೆ ಬಿಜೆಪಿಯೂ ಒಂದು ಕುಟುಂಬದ ಕೈಗೊಂಬೆಯಾಗಬೇಕಾಗುತ್ತದೆ ಎನ್ನುವುದು ಕೆಲವರ ಆತಂಕ. ಇದೇ ಸಂದರ್ಭದಲ್ಲಿ ಆರೆಸ್ಸೆಸ್‌ನ ತಂತ್ರ ಮಾತ್ರ ಬೇರೆ ತರದ್ದಾಗಿದೆ. ಲಿಂಗಾಯತ ಲಾಬಿ ಬಿಜೆಪಿಯನ್ನು ನಿಯಂತ್ರಿಸುವುದು ಆರೆಸ್ಸೆಸ್‌ಗೆ ಸಮಸ್ಯೆಯಾಗಿದೆ. ರಾಜ್ಯ ಬಿಜೆಪಿಯೊಳಗೆ ಬ್ರಾಹಣ್ಯವನ್ನು ಮುನ್ನೆಲೆಗೆ ತರಬೇಕಾದರೆ, ಬಿಜೆಪಿಯ ನಾಯಕತ್ವದ ಚುಕ್ಕಾಣಿ ಬ್ರಾಹ್ಮಣ ನಾಯಕರ ಕೈವಶವಾಗಬೇಕು. ಅದಕ್ಕೆ ಲಿಂಗಾಯತ ಲಾಬಿ, ಅದರಲ್ಲೂ ಮುಖ್ಯವಾಗಿ ಯಡಿಯೂರಪ್ಪ ಬಣ ತೊಡಕಾಗಿದೆಯೆಂದು ಆರೆಸ್ಸೆಸ್ ಭಾವಿಸಿಕೊಂಡು ಬಂದಿದೆ.ಅದಕ್ಕಾಗಿಯೇ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ, ಸಿಟಿ.ರವಿಯಂತಹ ಶೂದ್ರ ನಾಯಕರನ್ನು ಅಸ್ತ್ರವಾಗಿ ಬಳಸುತ್ತಾ ಬಂದಿದೆ. ಯಡಿಯೂರಪ್ಪರ ವಿರುದ್ಧ ಮಾತನಾಡುವುದು ಈಶ್ವರಪ್ಪ ಆದರೂ, ಮಾತನಾಡಿಸುವುದು ಆರೆಸ್ಸೆಸ್. ಹಾಗೆಯೇ ತನ್ನ ಕೆಲಸವನ್ನು ಮಾಡಿಸುವುದಕ್ಕಾಗಿ ಕೆಲವು ಲಿಂಗಾಯತ ನಾಯಕರನ್ನೂ ಆರೆಸ್ಸೆಸ್ ಬಳಸುತ್ತಿದೆ. ಯಡಿಯೂರಪ್ಪ ಅವರನ್ನು ಹಣಿಯಲು ದಿವಂಗತ ಅನಂತಕುಮಾರ್ ಅವರ ಕಾಲದಿಂದಲೂ ಬ್ರಾಹ್ಮಣ್ಯ ಶಕ್ತಿ ಪ್ರಯತ್ನಿಸುತ್ತಲೇ ಬಂದಿದ್ದು, ಅದರ ಮುಂದುವರಿದ ಭಾಗ ಇದಾಗಿದೆ. ಇದು ಯಡಿಯೂರಪ್ಪ ಅವರಿಗೂ ತಿಳಿಯದ್ದೇನಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ, ಆರೆಸ್ಸೆಸ್‌ನ ನಾಯಕ ಸಂತೋಷ್ ನೀಡಿರುವ ಕಿರುಕುಳವನ್ನು ಅವರಿನ್ನೂ ನೆನಪಿಟ್ಟುಕೊಂಡಿದ್ದಾರೆ. ಆದುದರಿಂದಲೇ, ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕಷ್ಟೇ ತನ್ನನ್ನು ಬಳಸಿ, ಬಳಿಕ ಎಸೆಯುವ ಆರೆಸ್ಸೆಸ್‌ನ ತಂತ್ರದ ಬಗ್ಗೆ ಎಚ್ಚರಿಕೆಯನ್ನಿಟ್ಟುಕೊಂಡೇ ಅವರು ಮುನ್ನಡಿಯಿಟ್ಟಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ ಎಂದು ಹೊರಟಿರುವ ಬಿಜೆಪಿ ಮೊದಲು, ತನ್ನ ರಾಜ್ಯಾಧ್ಯಕ್ಷ ಯಾರು ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳುವ ಅಗತ್ಯವಿದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದು ದಿಲ್ಲಿಯ ವರಿಷ್ಠರೇ ಆಗಿದ್ದರೆ, ಕನಿಷ್ಠ ತನ್ನ ಆಯ್ಕೆಯನ್ನು ಪ್ರಶ್ನಿಸುವ ಬಿಜೆಪಿ ನಾಯಕರನ್ನು ಬಾಯಿ ಮುಚ್ಚಿಸಬೇಕು ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಅಸಮಾಧಾನವನ್ನು ಹೀಗೆ ಮುಂದುವರಿಯಲು ಬಿಟ್ಟರೆ, ಬಿಜೆಪಿ ಶೀಘ್ರದಲ್ಲೇ ಎರಡು ಹೋಳಾಗುವ ಎಲ್ಲ ಸಾಧ್ಯತೆಗಳಿವೆ. ಅದರ ಸೂಚನೆಗಳನ್ನು ಈಗಾಗಲೇ ಹಲವು ನಾಯಕರು ವರಿಷ್ಠರಿಗೆ ನೀಡಿದ್ದಾರೆ.