ಕನ್ನಡ ಚಿತ್ರರಂಗದಲ್ಲಿ ಶೋಷಣೆ : ತನಿಖೆ ನಡೆಸಲು ಅಡ್ಡಿಯೇನು?

Update: 2024-09-06 05:11 GMT

 ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕನ್ನಡ ಚಿತ್ರರಂಗದ ನಿಯೋಗ (PC:x.com/CMofKarnataka)

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳಿಗಾಗಿ ಅಲ್ಲಿನ ಕಲಾವಿದರನ್ನು ನಾವು ಅಭಿನಂದಿಸಬೇಕು. ಯಾಕೆಂದರೆ ಅವರು ತಮ್ಮ ಮನೆಯೊಳಗಿರುವ ಕೊಳೆತ ಹೆಗ್ಗಣಗಳನ್ನು ಗುರುತಿಸಿ ಅದನ್ನು ಹೊರ ಹಾಕಿ, ಮನೆಯನ್ನು ಶುಚಿಗೊಳಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ದುರ್ವಾಸನೆ ಬರುವುದು ಸಹಜ. ಆದರೆ ದುರ್ವಾಸನೆಯನ್ನು ಅತ್ತರು ಸಿಂಪಡಿಸಿ ಮುಚ್ಚಿಡುವುದಕ್ಕಿಂತ ಇದು ಎಷ್ಟೋ ವಾಸಿ. ಮುಚ್ಚಿಟ್ಟರೆ ಅದು ಇನ್ನಿತರ ಭೀಕರ ಸಾಂಕ್ರಾಮಿಕ ರೋಗಗಳನ್ನು ಹರಡಬಹುದು. ವಿಪರ್ಯಾಸವೆಂದರೆ, ಮಲಯಾಳಂ ಚಿತ್ರರಂಗದ ಒಳಗಿರುವ ಕರ್ಮಕಾಂಡಗಳನ್ನು ಬಹಿರಂಗಪಡಿಸಿರುವ ಹೇಮಾ ಕಮಿಟಿ ವರದಿಯ ಬಗ್ಗೆ ಮುಖ ಸಿಂಡರಿಸುತ್ತಾ ಉಳಿದ ಭಾಷೆಯ ಚಿತ್ರರಂಗದ ಪ್ರಮುಖರು ಸಜ್ಜನರಂತೆ ಬಾಯಿ ಮುಚ್ಚಿ ಕೂತಿದ್ದಾರೆ. ಕನ್ನಡ ಚಿತ್ರರಂಗವೂ ಸೇರಿದಂತೆ ಯಾವುದೇ ಭಾಷೆಯ ಪ್ರಮುಖ ಕಲಾವಿದರು, ನಿರ್ದೇಶಕರು ಈ ಬಗ್ಗೆ ಗಂಭೀರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿಲ್ಲ. ಇದೇ ಸಂದರ್ಭದಲ್ಲಿ, ಮಲಯಾಳಂ ಚಿತ್ರರಂಗದ ಕಲಾವಿದರು, ನಿರ್ದೇಶಕರು ಹೇಮಾ ಸಮಿತಿಯ ವರದಿಯನ್ನು ಗಂಭೀರವಾಗಿ ತೆಗೆದುಕೊಂಡು ಮಾತನಾಡಲು ಶುರು ಹಚ್ಚಿದಾರೆ. ಅಮ್ಮಾ ಸಂಘಟನೆಯ ಹಲವು ಹಿರಿಯ ಕಲಾವಿದರು ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗಳಿಗೆ ರಾಜೀನಾಮೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಹಲವು ನಟಿಯರು, ನಟರು ಮಹಿಳಾ ದೌರ್ಜನ್ಯಗಳನ್ನು ಖಂಡಿಸಿ ಹೇಳಿಕೆಗಳನ್ನು ನೀಡಿದ್ದಾರೆ. ಮಲಯಾಳಂನ ಪ್ರತಿಭಾವಂತ ನಟಿ ಪಾರ್ವತಿ ಅವರು ಈ ಬಗ್ಗೆ ಹೇಳಿಕೆಗಳನ್ನು ನೀಡುತ್ತಾ, ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ನಡೆಸುವ ಪುರುಷರನ್ನು ತಿದ್ದುವ, ಅವರನ್ನು ಮನುಷ್ಯರಾಗಿಸುವ ಪ್ರಯತ್ನ ನಡೆಸದೇ ಮಹಿಳೆಯರನ್ನೇ ಇವುಗಳಿಗೆಲ್ಲ ಹೊಣೆ ಮಾಡುವುದರ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ. ಇದೇ ಸಂದರ್ಭದಲ್ಲಿ, ‘‘ಈ ಬೆಳವಣಿಗೆಗಳನ್ನು ಇಟ್ಟುಕೊಂಡು ಮಲಯಾಳಂ ಚಿತ್ರರಂಗ ಕೊಳೆತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅದು ತಪ್ಪು. ಆಳದಲ್ಲಿ ಮಲಯಾಳಂ ಚಿತ್ರರಂಗ ನಿರ್ಮಲವಾಗಿದೆ. ಇದು ಯಾಕೆ ನಿರ್ಮಲವಾಗಿದೆಯೆಂದರೆ, ನಮ್ಮ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ನಾವು ಮಾತನಾಡಿ, ಅದನ್ನು ಸರಿಪಡಿಸಿಕೊಳ್ಳುತ್ತಿದ್ದೇವೆ. ಇಂತಹ ದೌರ್ಜನ್ಯಗಳ ಬಗ್ಗೆ ಮೌನಕ್ಕೆ ಜಾರಿರುವ ಇತರ ಭಾಷೆಯ ಚಿತ್ರರಂಗದ ಜನರು ಆ ಬಗ್ಗೆ ಯೋಚಿಸಬೇಕಾಗಿದೆ’’ ಎಂದಿದ್ದಾರೆ. ಇದು ನೂರಕ್ಕೆ ನೂರು ಸತ್ಯ ಕೂಡ.

ಮಲಯಾಳಂ ಚಿತ್ರರಂಗಕ್ಕೆ ಸಂಬಂಧಿಸಿದ ವರದಿ ಹೊರ ಬೀಳುತ್ತಿದ್ದಂತೆಯೇ ನೆರೆಯ ತಮಿಳು ನಾಡಿನ ನಟಿಯರೂ ತಮ್ಮ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ಧ್ವನಿಯೆತ್ತಿದ್ದಾರೆ. ತಮಿಳು ನಟಿ ಕುಟ್ಟಿ ಪದ್ಮಿನಿ ಒಂದು ಟಿವಿ ವಾಹಿನಿಗೆ ಸಂದರ್ಶನವನ್ನು ನೀಡುತ್ತಾ ‘‘ತಮಿಳು ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಮಿತಿ ಮೀರಿದೆ’’ ಎಂದು ಆರೋಪಿಸಿದ್ದಾರೆ. ಎಲ್ಲಕ್ಕಿಂತ ಗಂಭೀರ ಆರೋಪವನ್ನು ತಮಿಳು ನಟಿ ಸೌಮ್ಯಾ ಅವರು ಮಾಡಿದ್ದಾರೆ. ನಿರ್ದೇಶಕರೊಬ್ಬರು ತನ್ನನ್ನು ಲೈಂಗಿಕ ಗುಲಾಮಳಂತೆ ಬಳಸಿಕೊಂಡಿದ್ದರು. ಅಷ್ಟೇ ಅಲ್ಲ, ಅತ್ಯಂತ ಬರ್ಬರವಾಗಿ ಒಂದು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯಗಳನ್ನು ಎಸಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ‘‘ಆ ನಿರ್ದೇಶನಕನ ಹೆಸರನ್ನು ಮಾಧ್ಯಮಗಳಲ್ಲಿ ಬಹಿರಂಗಪಡಿಸುವುದಿಲ್ಲ. ಆದರೆ ತನಿಖಾ ತಂಡದ ಮುಂದೆ ಆತನ ವಿವರಗಳನ್ನು ನೀಡುತ್ತೇನೆ’’ ಎಂದು ಹೇಳಿದ್ದಾರೆ. ವಿಪರ್ಯಾಸವೆಂದರೆ, ಈಕೆಯ 18ನೇ ವರ್ಷದಲ್ಲಿ ಈ ಭೀಕರ ದೌರ್ಜನ್ಯ ನಡೆದಿತ್ತು. ಈ ಕೃತ್ಯವನ್ನು 30 ವರ್ಷಗಳ ಕಾಲ ಮುಚ್ಚಿಟ್ಟು ಇದೀಗ ಬಹಿರಂಗ ಪಡಿಸಿದ್ದಾರೆ. ಇದರ ಬೆನ್ನಿಗೇ, ತಮಿಳು ನಾಡಿನ ದಕ್ಷಿಣ ಭಾರತೀಯ ಕಲಾವಿದರ ಸಂಘವು ಸಭೆ ನಡೆಸಿ, ‘ಲೈಂಗಿಕ ಅಪರಾಧ ಸಾಬೀತಾದ ಕಲಾವಿದರನ್ನು ಚಿತ್ರರಂಗದಿಂದ ಐದು ವರ್ಷ ನಿಷೇಧಿಸುವ’ ನಿರ್ಣಯವನ್ನು ಮಾಡಿದೆ. ಆದರೆ ಈ ನಿರ್ಣಯ ತನ್ನ ಗುರಿಯನ್ನು ಸಾಧಿಸಬೇಕಾದರೆ, ತಮಿಳು ನಾಡಿನ ಚಿತ್ರರಂಗದಲ್ಲಿ ನಡೆದ ದೌರ್ಜನ್ಯಗಳನ್ನು ತನಿಖೆ ನಡೆಸಲು ಪ್ರತ್ಯೇಕ ಸಮಿತಿಯನ್ನು ರಚಿಸಬೇಕು.

ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲೂ ಚಿತ್ರರಂಗದ ಲೈಂಗಿಕ ಕಿರುಕುಳದ ಬಗ್ಗೆ ಜಾಗೃತಿಯ ಮಾತುಗಳು ಕೇಳಿ ಬರುತ್ತಿವೆ. ಹೇಮಾ ಸಮಿತಿಯ ರೀತಿಯಲ್ಲೇ ಕರ್ನಾಟಕದಲ್ಲೂ ಒಂದು ಸಮಿತಿಯನ್ನು ರಚಿಸಿ, ಲೈಂಗಿಕ ಕಿರುಕುಳಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಸಿನೆಮಾ ಕಲಾವಿದರು, ಸಾಮಾಜಿಕ ಹೋರಾಟಗಾರರು ಸರಕಾರವನ್ನು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಂಡವೊಂದು ಭೇಟಿ ಮಾಡಿದ್ದು, ಈ ಬಗ್ಗೆ ಸಿಎಂ ಭರವಸೆಯನ್ನೂ ನೀಡಿದ್ದಾರೆ. ಕನ್ನಡ ಚಿತ್ರರಂಗ ಮಹಿಳೆಯರ ದೌರ್ಜನ್ಯದಲ್ಲಿ ಕಡಿಮೆ ಅಪರಾಧಿಯೇನೂ ಅಲ್ಲ. ಈ ಹಿಂದೆ ಶೃತಿ ಹರಿಹರನ್ ಎನ್ನುವ ನಟಿಯೊಬ್ಬರು ಖ್ಯಾತ ಕಲಾವಿದನ ಬಗ್ಗೆ ಇಂತಹದೊಂದು ಆರೋಪವನ್ನು ಮಾಡಿದ್ದರು. ಹಲವು ನಟರು ತಮ್ಮ ಪತ್ನಿಯರ ಮೇಲೆ ನಡೆಸಿದ ಬರ್ಬರ ದೌರ್ಜನ್ಯಗಳು ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದವು. ಅದಕ್ಕಾಗಿ ಒಂದಿಬ್ಬರು ನಟರ ಮೇಲೆ ಪೊಲೀಸ್ ದೂರುಗಳೂ ದಾಖಲಾಗಿದ್ದವು. ಈ ಲೈಂಗಿಕ ದೌರ್ಜನ್ಯಗಳು ಬೇರೆ ಬೇರೆ ರೂಪದಲ್ಲಿ ಕನ್ನಡ ಚಿತ್ರೋದ್ಯಮವನ್ನು ಕುಕ್ಕಿ ತಿನ್ನುತ್ತಲೇ ಇವೆ. ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಬಂಧನವಾದ ಬಳಿಕ ಕನ್ನಡ ಚಿತ್ರರಂಗ ಅಮಾಯಕವಾಗಿ ಉಳಿದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಟಿವಿಗಳಲ್ಲಿ, ಸಿನೆಮಾಗಳಲ್ಲಿ ನಟಿಸುವ ಅವಕಾಶ ನೀಡುವ ಹೆಸರಿನಲ್ಲಿ ಮಹಿಳೆಯರನ್ನು ವಂಚಿಸಿದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಚಿತ್ರರಂಗದಲ್ಲಿ ಹಿರಿಯರು ನಡೆಸಿದ ದೌರ್ಜನ್ಯಗಳನ್ನು ಕಿರಿಯ ನಟಿಯರು ಬಹಿರಂಗ ಪಡಿಸುವುದು ಅಷ್ಟು ಸುಲಭವಿಲ್ಲ. ಮಾಧ್ಯಮಗಳಲ್ಲಿ ಬಾಯಿ ಬಿಟ್ಟರೆ ಎಲ್ಲರೂ ಒಂದಾಗಿ ಆಕೆಯ ಭವಿಷ್ಯವನ್ನೇ ಬಲಿ ತೆಗೆದುಕೊಳ್ಳುವ ಸಾಧ್ಯತೆಗಳಿರುವುದರಿಂದ ಹೇಳಿಕೆ ನೀಡಲು ಹಿಂಜರಿಯುತ್ತಾರೆ. ಇದೇ ಸಂದರ್ಭದಲ್ಲಿ ಸಮಿತಿ ರಚನೆಯಾದರೆ ಸಂತ್ರಸ್ತರಿಗೆ ತಮ್ಮ ಅಳಲನ್ನು ಹೇಳಿಕೊಳ್ಳಲು ನೈತಿಕ ಸ್ಥೈರ್ಯವನ್ನು ಸಿಕ್ಕಂತಾಗುತ್ತದೆ. ಕನ್ನಡ ಚಿತ್ರೋದ್ಯಮವನ್ನು ಉದ್ಧರಿಸುವುದಕ್ಕಾಗಿ ಇತ್ತೀಚೆಗೆ ಸಾರ್ವಜನಿಕವಾಗಿ ನಾಗದರ್ಶನ ಸಮಾರಂಭವನ್ನು ಮಾಡಿದ ಕಲಾವಿದರಿಗೆ, ಇಂತಹದೊಂದು ಸಮಿತಿಯನ್ನು ರಚಿಸಿ ಕನ್ನಡ ಚಿತ್ರರಂಗವನ್ನು ಶುಚಿಗೊಳಿಸುವ ಅಗತ್ಯ ಕಂಡು ಬರದೇ ಇರುವುದು ನಿಜಕ್ಕೂ ವಿಷಾದನೀಯವಾಗಿದೆ. ನಾಗದರ್ಶನದಿಂದ ಕನ್ನಡ ಚಿತ್ರರಂಗ ಉದ್ಧಾರವಾಗುತ್ತದೆಯೋ ಇಲ್ಲವೋ, ಆದರೆ ಹೇಮಾ ಸಮಿತಿಯಂತೆ ಇಲ್ಲೂ ಸಮಿತಿಯೊಂದು ರಚಿಸಿ ತನಿಖೆ ನಡೆದರೆ, ಹಲವು ಕಲಾವಿದರು, ನಿರ್ದೇಶಕರು, ನಿರ್ಮಾಪಕರ ನಿಜ ಮುಖ ದರ್ಶನವಾಗುವುದಂತೂ ಖಚಿತ.

ದೇಶಾದ್ಯಂತ ಎಲ್ಲ ಭಾಷೆಗಳ ಚಿತ್ರರಂಗದ ಒಳಗಿನ ಹುಳುಕುಗಳನ್ನು ಶುಚಿಗೊಳಿಸಲು ಇಂತಹ ಸಮಿತಿಯ ನೇಮಕ ಅತ್ಯಗತ್ಯವಾಗಿದೆ. ಆದುದರಿಂದ, ಕೇಂದ್ರ ಸರಕಾರವೂ ಎಲ್ಲ ರಾಜ್ಯಗಳಿಗೆ ಈ ನಿಟ್ಟಿನಲ್ಲಿ ಒತ್ತಡವನ್ನು ಹಾಕಬೇಕು. ಹಾಗೆಯೇ ಚಿತ್ರರಂಗದ ಹಿರಿಯ ಕಲಾವಿದರು, ಬರಹಗಾರರು ಸರಕಾರವನ್ನು ಒತ್ತಾಯಿಸಬೇಕು. ನಟಿಯೊಬ್ಬಳ ಮೇಲೆ ಅತ್ಯಾಚಾರ ನಡೆದ ಬಳಿಕ ಎಚ್ಚೆತ್ತು ಸಮಿತಿ ರಚಿಸುವುದಕ್ಕಿಂತ, ಇಂತಹ ಸಮಿತಿಗಳನ್ನು ರಚಿಸಿ ನಡೆಯಬಹುದಾದ ದೌರ್ಜನ್ಯಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳುವುದು ಅತ್ಯುತ್ತಮವಾಗಿದೆ. ಇದೇ ಸಂದರ್ಭದಲ್ಲಿ ಈ ತನಿಖೆಯ ದುರುಪಯೋಗವಾಗದಂತೆಯೂ ನೋಡಿಕೊಳ್ಳಬೇಕಾಗಿದೆ. ಕೆಲವರು ತಮ್ಮ ವೈಯಕ್ತಿಕ ಅಸಮಾಧಾನಗಳನ್ನು ಮುಂದಿಟ್ಟುಕೊಂಡು ಸುಳ್ಳು ದೂರು ದಾಖಲಿಸಲು ಮುಂದಾಗುವ ಸಾಧ್ಯತೆಗಳಿವೆ. ಹಾಗೆಯೇ ಪರಸ್ಪರ ಒಪ್ಪಿ ನಡೆದ ಲೈಂಗಿಕ ಸಂಬಂಧಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಸಂದರ್ಭವನ್ನು ಬಳಸಿಕೊಳ್ಳುವವರೂ ಇಲ್ಲದಿಲ್ಲ. ಆದುದರಿಂದ, ಸಮಿತಿಯು ಅತ್ಯಂತ ಹೊಣೆಗಾರಿಕೆಯಿಂದ, ಎಚ್ಚರಿಕೆಯಿಂದ ತನಿಖೆ ನಡೆಸಬೇಕು. ದೂರಿನ ವಿಶ್ವಾಸಾರ್ಹತೆಯೂ ತನಿಖೆಗೊಳಪಡಬೇಕು. ತನಿಖೆಯ ಸಂದರ್ಭದಲ್ಲಿ ಯಾವುದೇ ಅಮಾಯಕರು ಅನಗತ್ಯ ಬಲಿಪಶುವಾಗಬಾರದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News