ಬೆಂಕಿಗೆ ಪ್ರಧಾನಿಯೇ ತುಪ್ಪ ಸುರಿದರೆ?

Update: 2024-09-16 04:31 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ತಾನೇ ಹಚ್ಚಿದ ಬೆಂಕಿಯನ್ನು ನಂದಿಸಲಾಗದೆ ಮಣಿಪುರದಲ್ಲಿ ಬಿಜೆಪಿ ಕೈ ಹಿಸುಕಿಕೊಳ್ಳುತ್ತಿದೆ. ಮಣಿಪುರದಲ್ಲಿ ಶಾಂತಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ ಎಂದು ಆರೆಸ್ಸೆಸ್ ಮುಖ್ಯಸ್ಥರೇ ಕೇಂದ್ರ ಸರಕಾರವನ್ನು ಒತ್ತಾಯಿಸುವ ಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲದರ ಬೆನ್ನಿಗೆ ಕಳೆದ ವಾರದಿಂದ ಮಣಿಪುರದಲ್ಲಿ ಪರಿಸ್ಥಿತಿ ಮತ್ತೆ ಉಲ್ಬಣಗೊಂಡಿದ್ದು, ಪೊಲೀಸರ ಗುಂಡಿಗೆ ಮಹಿಳೆಯರೂ ಸೇರಿದಂತೆ ಹಲವು ನಾಗರಿಕರು ಮೃತಪಟ್ಟಿದ್ದಾರೆ. ಮಣಿಪುರ ಪೊಲೀಸ್ ಮಹಾನಿರ್ದೇಶಕ ಮತ್ತು ರಾಜ್ಯ ಸರಕಾರದ ಭದ್ರತಾ ಸಲಹೆಗಾರರನ್ನು ತೆರವು ಗೊಳಿಸಬೇಕು ಎಂದು ಆಗ್ರಹಿಸಿದ ಸಾವಿರಾರು ವಿದ್ಯಾರ್ಥಿಗಳು ಮಣಿಪುರದ ರಾಜಭವನದ ಮುಂದೆ ಧರಣಿ ನಡೆಸಿದ್ದು, ಅವರ ವಿರುದ್ಧ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆೆ. ಈ ಸಂದರ್ಭದಲ್ಲಿ ಸುಮಾರು 40 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಮಣಿಪುರದಲ್ಲಿ ಮತ್ತೆ ಐದು ದಿನ ಇಂಟರ್‌ನೆಟ್ ಸ್ಥಗಿತಗೊಂಡಿದೆ. ಮೂರು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯುವ ಬದಲಿಗೆ, ಅಲ್ಲಿ ನಡೆಯುವ ಕೃತ್ಯಗಳು ಹೊರಗಿನ ಜಗತ್ತಿಗೆ ಗೊತ್ತಾಗದಂತೆ ಮುಚ್ಚಿ

ಡುವ ದಾರಿಯನ್ನು ಅಲ್ಲಿನ ಸರಕಾರ ಹುಡುಕುತ್ತಿದೆ. ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ವರದಿ ಸಲ್ಲಿಸಲು ನೇಮಕಗೊಂಡಿರುವ ಆಯೋಗವು ವರದಿ ನೀಡುವ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಇದೆ. ಯಾಕೆಂದರೆ, ಮಣಿಪುರದಲ್ಲಿ ಏನು ನಡೆದಿದೆ ಎನ್ನುವುದು ಜಗತ್ತಿನ ಮುಂದೆ ಅಧಿಕೃತವಾಗಿ ಬಹಿರಂಗವಾಗುವುದು ಸರಕಾರಕ್ಕೂ ಬೇಕಾಗಿಲ್ಲ.

ನೂರಾರು ಜನರ ಹತ್ಯಾಕಾಂಡ, ಮನೆಗಳ ಧ್ವಂಸ ನಡೆದು ಸಾವಿರಾರು ಜನರು ಮಣಿಪುರದಲ್ಲಿ ನಿರ್ವಸಿತರಾಗಿದ್ದಾರೆ. ಮಹಿಳೆಯರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಮೆರವಣಿಗೆಯಲ್ಲಿ ಕೊಂಡೊಯ್ದು ಅವರ ಮೇಲೆ ದುಷ್ಕರ್ಮಿಗಳು ಅತ್ಯಾಚಾರಗಳನ್ನು ಎಸಗಿದ್ದಾರೆ. ಯುದ್ಧಪೀಡಿತ ರಶ್ಯ, ಉಕ್ರೇನ್‌ಗಳಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಸಂತೈಸಿದ ಪ್ರಧಾನಿ ಮೋದಿಯವರಿಗೆ ತನ್ನದೇ ದೇಶದ ಭಾಗವಾಗಿರುವ ಮಣಿಪುರಕ್ಕೆ ಭೇಟಿಕೊಟ್ಟು ಅಲ್ಲಿನ ಜನರ ಸಂಕಟಗಳನ್ನು ಆಲಿಸುವುದಕ್ಕೆ ಈವರೆಗೂ ಸಮಯ ಸಿಕ್ಕಿಲ್ಲ. ಮಣಿಪುರಕ್ಕೆ ಪ್ರಧಾನಿ ಮೋದಿಯವರು ಯಾಕೆ ಭೇಟಿ ಕೊಡುತ್ತಿಲ್ಲ ಎನ್ನುವುದು ಗುಟ್ಟಿನ ವಿಷಯವೇನೂ ಅಲ್ಲ. ಸಂಘಪರಿವಾರ ಮತ್ತು ಬಿಜೆಪಿಯ ಜಂಟಿ ಪ್ರಾಯೋಜಕತ್ವದಲ್ಲಿ ಮಣಿಪುರ ಉರಿಯುತ್ತಿದೆ. ಮಣಿಪುರದ ಜನತೆಗೆ ಮುಖ ತೋರಿಸುವ ನೈತಿಕತೆಯನ್ನು ಪ್ರಧಾನಿ ಉಳಿಸಿಕೊಂಡಿಲ್ಲ. ಆದುದರಿಂದಲೇ ಅವರು ಮಣಿಪುರಕ್ಕೆ ಭೇಟಿ ನೀಡಲು ಅಂಜುತ್ತಿದ್ದಾರೆ. ವಿಪರ್ಯಾಸವೆಂದರೆ, ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ವಿಫಲವಾಗಿರುವ ಪ್ರಧಾನಿ ಮೋದಿಯವರು, ಕರ್ನಾಟಕ ರಾಜ್ಯದ ಮಂಡ್ಯದ ನಾಂಗಮಂಗಲದಲ್ಲಿ ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ನಡೆದ ದಾಂಧಲೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಪ್ರಧಾನಿ ಮೋದಿಯವರ ಕಳವಳ, ದಾಂಧಲೆ ನಡೆಸಿದ ದುಷ್ಕರ್ಮಿಗಳ ಕುರಿತಂತೆ, ಅದನ್ನು ನಿಯಂತ್ರಿಸಿದ ಪೊಲೀಸರ ಕುರಿತಂತೆ. ಮಣಿಪುರದ ಬೆಂಕಿಯನ್ನು ನಂದಿಸಲು ವಿಫಲವಾಗಿರುವ ಪ್ರಧಾನಿ ಮೋದಿಯವರು ಮಂಡ್ಯದಲ್ಲಿ ನಡೆದ ಗಲಭೆಯ ಬೆಂಕಿಗೆ ತುಪ್ಪ ಸುರಿದು ಅದನ್ನು ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಹಂಚಲು ಹೊರಟಿದ್ದಾರೆ.

ಇತ್ತೀಚೆಗೆ ಕರ್ನಾಟಕದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆಯ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಪೊಲೀಸ್ ಠಾಣೆಯ ಮುಂದೆ ದಾಂಧಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಲವು ಸ್ಥಳೀಯ ಮುಸ್ಲಿಮರ ಅಂಗಡಿಗಳಿಗೆ ಸಂಘಪರಿವಾರ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ. ತಡವಾಗಿಯಾದರೂ ಎಚ್ಚೆತ್ತುಕೊಂಡ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ಅನಾಥವಾಗಿದ್ದ ಗಣೇಶ ಪ್ರತಿಮೆಯನ್ನು ಸ್ವಯಂ ಕಾಳಜಿ ವಹಿಸಿ ವಿಸರ್ಜನೆ ಮಾಡಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚುವರಿ ತನಿಖೆಯೂ ನಡೆಯುತ್ತಿದೆ. ಪರಿಸ್ಥಿತಿ ಶಾಂತವಾಗಿದೆ. ವಿಪರ್ಯಾಸವೆಂದರೆ, ಮಂಡ್ಯದಲ್ಲಿ ಪರಿಸ್ಥಿತಿ ಶಾಂತವಾಗಿರುವುದು ಈ ದೇಶದ ಪ್ರಧಾನಿಗೆ ಅಸಹನೆಯ ವಿಷಯವಾಗಿದೆ. ಅವರಿಗೆ ಮಂಡ್ಯ ಸೇರಿದಂತೆ ಇಡೀ ಕರ್ನಾಟಕ ಇನ್ನೊಂದು ಮಣಿಪುರವಾಗಬೇಕಾಗಿದೆ. ಆ ಕಾರಣಕ್ಕಾಗಿಯೇ ಹರ್ಯಾಣದಲ್ಲಿ ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ ‘‘ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಗಣೇಶೋತ್ಸವ ಆಚರಣೆಗೆ ಅವಕಾಶ ಕೊಡುತ್ತಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಗಣೇಶನನ್ನು ಕಂಬಿಯ ಹಿಂದೆ ದೂಡಲಾಗುತ್ತಿದೆ’’ ಎಂದು ಆರೋಪಿಸಿದ್ದಾರೆ. ಕರ್ನಾಟಕದ ಯಾವುದೋ ಮೂಲೆಯಲ್ಲಿ ನಡೆದಿರುವ ಒಂದು ಸಣ್ಣ ಘಟನೆಯನ್ನು ದೂರದ ಹರ್ಯಾಣದ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿಯವರು ಬಳಸಲು ಮುಂದಾಗಿದ್ದಾರೆ ಎನ್ನುವುದೇ, ಚುನಾವಣೆಯನ್ನು ಎದುರಿಸಲು ಅವರಲ್ಲಿರುವ ವಿಷಯ ದಾರಿದ್ರ್ಯವನ್ನು ಹೇಳುತ್ತಿದೆ. ಮಂಡ್ಯದ ನಾಗಮಂಗಲ ಹೊರತು ಪಡಿಸಿದರೆ ಇಡೀ ರಾಜ್ಯದಲ್ಲಿ ಶಾಂತಿಯುತವಾಗಿ ಗಣೇಶೋತ್ಸವವನ್ನು ಆಚರಿಸಲಾಗಿದೆ. ಮಂಡ್ಯದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಲು ತಮ್ಮದೇ ಸರಕಾರದ ಭಾಗವಾಗಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ಪಟಾಲಂನ ಪಾತ್ರವೂ ಬಹಳಷ್ಟಿದೆ ಪ್ರಧಾನಿ ಮೋದಿಗೂ ಚೆನ್ನಾಗಿಯೇ ಗೊತ್ತಿದೆ. ಇಷ್ಟಾದರೂ, ಪೊಲೀಸರ ಪ್ರಯತ್ನದಿಂದ ಒಂದೆರಡು ದಿನಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಹರ್ಯಾಣ ಚುನಾವಣೆಯ ಸಂದರ್ಭದಲ್ಲಿ ಯಾವ ರೀತಿಯಲ್ಲೂ ಅಲ್ಲಿಗೆ ಪ್ರಸ್ತುತವಲ್ಲದ ಕರ್ನಾಟಕದ ನಾಗಮಂಗಲದ ದಾಂಧಲೆ ಪ್ರಕರಣವನ್ನು ಉಲ್ಲೇಖಿಸಿರುವ ಪ್ರಧಾನಿ, ಮಣಿಪುರದಲ್ಲಿ ಕಳೆದೆರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಅನ್ಯಾಯಗಳ ಬಗ್ಗೆ ಯಾಕೆ ಮಾತನಾಡಿಲ್ಲ? ಎಂದು ಜನರು ಕೇಳುತ್ತಿದ್ದಾರೆ.

ಮಂಡ್ಯದಲ್ಲಿ ನಡೆದ ಪ್ರಕರಣವನ್ನು ಪೊಲೀಸರು ಉಲ್ಬಣಿಸಲು ಬಿಡದೇ ಇದ್ದುದೇ ಪ್ರಧಾನಿ ಮೋದಿಯವರ ಚಿಂತೆಗೆ ಕಾರಣವಾಗಿರಬಹುದೆ? ನಾಗಮಂಗಲ ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಬಿಗಿ ಗೊಳಿಸಿ ದುಷ್ಕರ್ಮಿಗಳನ್ನು ಬಂಧಿಸಿರುವುದು ಪ್ರಧಾನಿ ಮೋದಿಯವರ ಸಮಸ್ಯೆಯೆ? ಗಣೇಶೋತ್ಸವವನ್ನು ಕೋಮುಗಲಭೆಗಳಿಗಾಗಿ, ಒಂದು ಸಮುದಾಯದ ಅಂಗಡಿ ಮುಂಗಟ್ಟುಗಳನ್ನು ನಾಶ ಮಾಡುವುದಕ್ಕಾಗಿ ದುರ್ಬಳಕೆ ಮಾಡಿಕೊಂಡ ದುಷ್ಕರ್ಮಿಗಳ ಬಗ್ಗೆ ಪ್ರಧಾನಿಯಾಗಿ ಒಂದು ಮಾತು ಆಡಿಲ್ಲ. ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡು, ಜಿಲ್ಲೆಯಲ್ಲಿ ಶಾಂತಿ ಕಾಪಾಡಿ ಎಂದು ಸಲಹೆ ನೀಡುವುದು ಪ್ರಧಾನಿಯ ಹೊಣೆಗಾರಿಕೆ. ಆದರೆ ಅವರು, ಪೊಲೀಸರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ, ದುಷ್ಕರ್ಮಿಗಳಿಗೆ ಪರೋಕ್ಷ ಕುಮ್ಮಕ್ಕು ನೀಡಿದ್ದಾರೆ ಮಾತ್ರವಲ್ಲ, ಉದ್ವಿಗ್ನಕಾರಿ ಹೇಳಿಕೆಯ ಮೂಲಕ, ಶಾಂತಿ ನೆಲೆಸಿರುವ ಮಂಡ್ಯಕ್ಕೆ ಮತ್ತೆ ಬೆಂಕಿ ಹಚ್ಚಲು ನೋಡುತ್ತಿದ್ದಾರೆ. ನಾಗಮಂಗಲ ಎನ್ನುವ ಸಣ್ಣ ಊರಿನಲ್ಲಿ ನಡೆದಿರುವ ದುಷ್ಕರ್ಮಿಗಳ ಪುಂಡಾಟದ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮಣಿಪುರದ ಬಗ್ಗೆ ಯಾಕೆ ಹರ್ಯಾಣ ಚುನಾವಣೆಯ ಸಂದರ್ಭದಲ್ಲಿ ಮಾತನಾಡಲಿಲ್ಲ? ಅಮೆರಿಕದಲ್ಲಿ ಕೇಂದ್ರ ಸರಕಾರದ ಭಾರತ ವಿರೋಧಿ ನೀತಿಗಳ ಬಗ್ಗೆ ಮಾತನಾಡಿದ ಕಾರಣಕ್ಕಾಗಿ ರಾಹುಲ್ ಗಾಂಧಿಯ ವಿರುದ್ಧ ಟೀಕೆಗಳನ್ನು ಮಾಡಿದ ಬಿಜೆಪಿ ನಾಯಕರು, ತನ್ನದೇ ಪ್ರಧಾನಿಯ ಈ ದ್ವಂದ್ವಗಳಿಗೆ ಏನು ಹೇಳುತ್ತಾರೆ?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News