ಆರೆಸ್ಸೆಸ್ ಸೋದರ ಸಂಸ್ಥೆಗಳಿಗೆ ಜಮೀನು: ಕಾಂಗ್ರೆಸ್ ಇಬ್ಬಂದಿತನವೇಕೆ?

Update: 2024-09-05 05:28 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಆರೆಸ್ಸೆಸ್ ಅಂಗಸಂಸ್ಥೆಯಾಗಿರುವ ರಾಷ್ಟ್ರೋತ್ಥಾನ ಸೇರಿದಂತೆ ಹಲವು ಸಂಘಟನೆಗಳಿಗೆ ನೀಡಿದ ಜಮೀನುಗಳನ್ನು ವಾಪಸ್ ಪಡೆಯಬೇಕೆಂದು ಬಿಜೆಪಿ ಯಾಕೆ ಒತ್ತಾಯಿಸುತ್ತಿಲ್ಲ? ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರು ಸವಾಲು ಹಾಕಿದ್ದಾರೆ.

ಖರ್ಗೆ ಕುಟುಂಬ ನಡೆಸುತ್ತಿರುವ ಟ್ರಸ್ಟ್‌ಗೆ ಮಂಜೂರಾಗಿರುವ ಭೂಮಿಯ ಬಗ್ಗೆ ರಾಜ್ಯಪಾಲರು ವಿವರಣೆ ಕೇಳಿದ ಬೆನ್ನಿಗೇ ಕಾಂಗ್ರೆಸ್ ಮುಖಂಡರಿಗೆ ಆರೆಸ್ಸೆಸ್ ಸಂಘಟನೆಗಳು ಹಿಂದಿನ ಬಿಜೆಪಿ ಸರಕಾರದಿಂದ ಪಡೆದಿರುವ ಭೂಮಿ ನೆನಪಾಗುತ್ತಿದೆ. ಹಿಂದಿನ ಬಿಜೆಪಿ ಸರಕಾರವು ಆರೆಸ್ಸೆಸ್‌ನ ಸಹ ಸಂಸ್ಥೆಗಳಿಗೆ ನೀಡಿರುವ ಭೂಮಿಯ ಬಗ್ಗೆಯೂ ರಾಜ್ಯಪಾಲರು ವಿವರಣೆ ಕೇಳಲಿ ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸುತ್ತಿದ್ದಾರೆ. ರಾಜ್ಯದಲ್ಲಿ ಸದ್ಯಕ್ಕಿರುವುದು ಕಾಂಗ್ರೆಸ್ ಸರಕಾರ. ಹಿಂದಿನ ಬಿಜೆಪಿ ಸರಕಾರ ಆರೆಸ್ಸೆಸ್ ಸಹ ಸಂಘಟನೆಗಳಿಗೆ ಅಕ್ರಮವಾಗಿ ಭೂಮಿಯನ್ನು ವಿತರಿಸಿದೆ ಅಥವಾ ನೀಡಿರುವ ಜಮೀನನ್ನು ಈ ಸಂಸ್ಥೆಗಳು ದುರುಪಯೋಗ ಪಡಿಸಿಕೊಂಡಿವೆ ಎನ್ನುವುದು ಗೊತ್ತಿದೆಯಾದರೆ, ಅದರ ವಿರುದ್ಧ ಇಲ್ಲಿಯವರೆಗೆ ಸರಕಾರ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಎಂದು ನಾಡಿನ ಜನತೆ ಸರಕಾರವನ್ನು ಮರು ಪ್ರಶ್ನಿಸುತ್ತಿದ್ದಾರೆ. ‘ಯಾಕೆ ವಿವರಣೆ ಕೇಳಿಲ್ಲ?’ ಎನ್ನುವ ಪ್ರಶ್ನೆಯನ್ನು ರಾಜ್ಯಪಾಲರಿಗೆ ಕೇಳುವ ಮೊದಲು, ಸರಕಾರ ಯಾಕೆ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ಉತ್ತರಿಸಬೇಕಾಗಿದೆ. ಆರೆಸ್ಸೆಸ್‌ನ್ನು ತನ್ನ ಮಾತೃ ಸಂಸ್ಥೆ ಎಂದು ಬಿಜೆಪಿ ಬಹಿರಂಗವಾಗಿಯೇ ಹೇಳಿಕೊಳ್ಳುತ್ತಾ ಬಂದಿದ್ದು, ಆ ಕಾರಣಕ್ಕಾಗಿಯೇ ಭೂಮಿಯನ್ನು ಮಂಜೂರು ಮಾಡಿದೆ. ಅದನ್ನು ಪಾವಸ್ ಕೊಡಿ ಎಂದು ಕೇಳಬೇಕಾದವರು ಆರೆಸ್ಸೆಸ್ ನೀತಿಯ ವಿರುದ್ಧ ಹೋರಾಡುತ್ತಾ ಬಂದಿರುವ ಕಾಂಗ್ರೆಸ್ ನಾಯಕರು. ಬಿಜೆಪಿಯು ಖರ್ಗೆ ಕುಟುಂಬದ ಟ್ರಸ್ಟ್‌ಗೆ ನೀಡಿದ ಜಮೀನನ್ನು ಪ್ರಶ್ನಿಸಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಇದೀಗ ಕಾಂಗ್ರೆಸ್ ನಾಯಕರು ಆರೆಸ್ಸೆಸ್ ಪಡೆದಿರುವ ಜಮೀನಿನ ಬಗ್ಗೆ ಆಕ್ಷೇಪ ಮಾಡುತ್ತಿದ್ದಾರೆಯೇ ಹೊರತು, ಉಳಿದಂತೆ ಅವರಿಗೆ ಆರೆಸ್ಸೆಸ್ ಜಮೀನು ಪಡೆದಿರುವ ಬಗ್ಗೆ ಯಾವ ತಕರಾರು ಇದ್ದಂತೆ ಕಾಣುತ್ತಿಲ್ಲ.

ಸಚಿವರೇ ಹೇಳುವಂತೆ, ಬಿಜೆಪಿ ಸರಕಾರದ ಅವಧಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ ಐದು ಎಕರೆ ಜಮೀನು ಹಾಗೂ ಚಾಣಕ್ಯ ವಿಶ್ವವಿದ್ಯಾನಿಲಯಕ್ಕೆ 116 ಎಕರೆ ಭೂಮಿಯನ್ನು ನೀಡಲಾಗಿತ್ತು. ರಾಷ್ಟ್ರೋತ್ಥಾನ ಪರಿಷತ್‌ಗೆ ಹೈಟೆಕ್ ಡಿಫೆನ್ಸ್ ಪಾರ್ಕಿನಲ್ಲಿ ವಿವಿಧೋದ್ದೇಶ ವಾಣಿಜ್ಯ ಸಂಕೀರ್ಣಕ್ಕೆಂದು 2013ರಲ್ಲಿ ಜಮೀನು ನೀಡಲಾಗಿತ್ತಾದರೂ, ಇನ್ನೂ ಅದರಲ್ಲಿ ಯಾವ ಯೋಜನೆಯೂ ಕಾರ್ಯರೂಪಕ್ಕೆ ಬಂದಿಲ್ಲ. ಹತ್ತು ವರ್ಷದ ಬಳಿಕ ಅಂದರೆ 2023ರಲ್ಲಿ ಮತ್ತೆ ಎರಡು ವರ್ಷ ಕಾಲಾವಧಿಯನ್ನು ಸಂಸ್ಥೆ ಕೇಳಿದೆ. ಚಾಣಕ್ಯ ವಿಶ್ವವಿದ್ಯಾನಿಲಯವು ತಾನು ಪಡೆದ 116 ಎಕರೆ ಭೂಮಿಯನ್ನು ಪೂರ್ಣವಾಗಿ ಉಪಯೋಗಿಸಿಕೊಂಡಿಲ್ಲ. ಇಷ್ಟು ವಿಶಾಲ ಭೂಮಿಯನ್ನು ಸಂಸ್ಥೆಗೆ ಬರೇ 50 ಕೋಟಿ ರೂಪಾಯಿಗೆ ನೀಡಿದ್ದು, ಇದರಿಂದ ಸರಕಾರಕ್ಕೆ ನೂರಾರು ಕೋಟಿ ರೂಪಾಯಿ ನಷ್ಟವಾಗಿದೆ. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಬಿಜೆಪಿಯ ಭ್ರಷ್ಟಾಚಾರಗಳನ್ನು, ಅಕ್ರಮಗಳನ್ನು ಗುರುತಿಸಿ ಅದರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಆದರೆ ಬಿಜೆಪಿಯೇ ಸರಕಾರದ ಅಕ್ರಮಗಳನ್ನು ಒಂದೊಂದಾಗಿ ಬಹಿರಂಗ ಮಾಡತೊಡಗಿತು. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್ ಅನಿವಾರ್ಯವಾಗಿ ಬಿಜೆಪಿ ಮತ್ತು ಆರೆಸ್ಸೆಸ್‌ನ ಭೂ ಅಕ್ರಮಗಳನ್ನು ಒಲ್ಲದ ಮನಸ್ಸಿನಿಂದ ಸಾರ್ವಜನಿಕವಾಗಿ ಬಹಿರಂಗಗೊಳಿಸುತ್ತಿದೆ.

ಹಾಗೆ ನೋಡಿದರೆ ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಆರೆಸ್ಸೆಸ್‌ನ ಸಹ ಸಂಘಟನೆಗಳಿಗೆ ಭೂಮಿ ನೀಡಿರುವುದು ಈ ಎರಡು ಪ್ರಕರಣಗಳಲ್ಲಿ ಮಾತ್ರವಲ್ಲ. ಜನಸೇವೆಯ ಮುಖವಾಡದಲ್ಲಿರುವ ಆರೆಸ್ಸೆಸ್‌ನ ಸರಕಾರೇತರ ಸಂಸ್ಥೆಗಳು ರಾಜ್ಯದ ವಿವಿಧೆಡೆಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಅತ್ಯಲ್ಪ ಬೆಲೆಗೆ ತನ್ನದಾಗಿಸಿಕೊಂಡಿವೆ. ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಕಾನೂನು ಮತ್ತು ಆರ್ಥಿಕ ಇಲಾಖೆ ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿ ಸಂಘಪರಿವಾರದ ಅಂಗಸಂಸ್ಥೆಗಳಾಗಿರುವ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್, ವಿಶ್ವ ಹಿಂದೂ ಪರಿಷತ್ ಸಂಸ್ಥೆಗಳಿಗೆ ಗೋಮಾಳ, ಸಿಎ ನಿವೇಶನ ಮಂಜೂರು ಮಾಡುವ ಮೂಲಕ ಸರಕಾರದ ಬೊಕ್ಕಸಕ್ಕೆ 150 ಕೋಟಿ ರೂಪಾಯಿಗೂ ಅಧಿಕ ನಷ್ಟವನ್ನುಂಟು ಮಾಡಿದೆ. 2019ರಿಂದ 2023ರ ಮಾರ್ಚ್‌ವರೆಗೆ 147 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದ್ದು ಇದರಲ್ಲಿ ಬಹುತೇಕ ಗೋಮಾಳಗಳಾಗಿವೆ. ಒಂದೆಡೆ ಗೋವುಗಳ ಬಗ್ಗೆ ‘ಮೊಸಳೆ ಕಣ್ಣೀರು’ ಸುರಿಸುತ್ತಲೇ, ಈ ಆರೆಸ್ಸೆಸ್ ಅಂಗಸಂಸ್ಥೆಗಳು ಹಲವು ಎಕರೆ ಗೋಮಾಳಗಳನ್ನು ನುಂಗಿ ನೀರು ಕುಡಿದಿವೆ. ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ಹೊಸಪೇಟೆ, ಮಂಡ್ಯ, ಯಾದಗಿರಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿರುವ 20 ಎಕರೆ ವಿಸ್ತೀರ್ಣದ ಗೋಮಾಳಗಳನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಿದ ಆರೋಪ ಈ ಹಿಂದೆ ಮಾಧ್ಯಮಗಳಲ್ಲಿ ಕೇಳಿ ಬಂದಿತ್ತು. ರಾಷ್ಟ್ರೋತ್ಥಾನ ಪರಿಷತ್ ಅದಾಗಲೇ ಬಹಳಷ್ಟು ಭೂಮಿಯನ್ನು ಹೊಂದಿದ್ದರೂ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯಲ್ಲಿ ಪ್ರಚಲಿತ ಮಾರುಕಟ್ಟೆಯಲ್ಲಿ 7 ಕೋಟಿ ರೂಪಾಯಿಗೂ ಅಧಿಕ ಬೆಲೆಬಾಳುವ ಭೂಮಿಯನ್ನು ಕೇವಲ 1.86 ಕೋಟಿ ರೂಪಾಯಿಗೆ ಮಂಜೂರು ಮಾಡಿಸಿಕೊಂಡಿತ್ತು. ಬಿಜೆಪಿ ಸರಕಾರದ ಅವಧಿಯಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಇದನ್ನೆಲ್ಲ ಮೌನವಾಗಿ ಅನುಮೋದಿಸಿತ್ತು. ಇದೀಗ ತನ್ನ ಭೂಮಂಜೂರಾತಿಗಳನ್ನು ಬಿಜೆಪಿ ಪ್ರಶ್ನಿಸಲು ಶುರು ಹಚ್ಚಿದಂತೆಯೇ ಕಾಂಗ್ರೆಸ್ ನಾಯಕರಿಗೆ ಹಿಂದಿನ ಸರಕಾರ ಮಾಡಿರುವ ಭೂಮಂಜೂರಾತಿಯಲ್ಲಿ ತಪ್ಪುಗಳು ಕಾಣಿಸಿಕೊಳ್ಳುತ್ತಿದೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಆರೆಸ್ಸೆಸ್ ಸಹ ಸಂಘಟನೆಗಳು ಕಡಿಮೆ ಬೆಲೆಯಲ್ಲಿ ಜಮೀನುಗಳನ್ನು ತನ್ನದಾಗಿಸಿಕೊಂಡಿರುವುದು ಸರಕಾರದ ಬೊಕ್ಕಸಕ್ಕೆ ಮಾಡಿರುವ ಆರ್ಥಿಕ ವಂಚನೆಯಷ್ಟೇ ಅಲ್ಲ. ಈ ಭೂಮಿಯನ್ನು ಬಳಸಿಕೊಂಡು ಈ ಸಂಘಟನೆಗಳು ನಾಡಿಗೆ ನೀಡುವ ಕೊಡುಗೆಗಳು ಏನು ಎನ್ನುವುದು ಕಾಂಗ್ರೆಸ್‌ಗೆ ಚೆನ್ನಾಗಿಯೇ ಗೊತ್ತಿದೆ. ಚಾಣಕ್ಯ ವಿಶ್ವವಿದ್ಯಾನಿಲಯದ ಹೆಸರಿನಲ್ಲಿ ಆರೆಸ್ಸೆಸ್ ಈ ನಾಡಿಗೆ ಎಂತಹ ಶಿಕ್ಷಣವನ್ನು, ಸಿದ್ಧಾಂತವನ್ನು ಹರಡಲು ಹೊರಟಿದೆ ಎನ್ನುವುದನ್ನು ವಿವರಿಸುವ ಅಗತ್ಯವಿಲ್ಲ. ಈ ವಿಶ್ವವಿದ್ಯಾನಿಲಯದ ಬಗ್ಗೆ ನಾಡಿನ ಹಲವು ಹಿರಿಯರು ಈಗಾಗಲೇ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಸಾಂಸ್ಕೃತಿಕ ಮುಖವಾಡದಲ್ಲಿರುವ ರಾಷ್ಟ್ರೋತ್ಥಾನವು ಆರೆಸ್ಸೆಸ್‌ನ ಹಿಂದುತ್ವ ಚಿಂತನೆಗಳನ್ನು ಸಾಹಿತ್ಯ, ಸಂಸ್ಕೃತಿಯ ಹೆಸರಿನಲ್ಲಿ ಹರಡುವುದಕ್ಕಾಗಿಯೇ ಇರುವ ಸಂಸ್ಥೆ. ರಾಜಕೀಯವಾಗಿ ಬಿಜೆಪಿಯು ಇದರ ಲಾಭವನ್ನು ತನ್ನದಾಗಿಸಿಕೊಳ್ಳುತ್ತದೆ. ಇದನ್ನು ಪ್ರಶ್ನಿಸದೇ ಕಾಂಗ್ರೆಸ್ ಪಕ್ಷ ಸ್ವತಃ ತನ್ನ ಬುಡಕ್ಕೆ ತಾನೇ ಕೊಡಲಿಯಿಟ್ಟುಕೊಂಡಿದೆ. ಆದುದರಿಂದ, ಬಿಜೆಪಿಯ ಅಧಿಕಾರಾವಧಿಯಲ್ಲಿ ರಾಷ್ಟ್ರೋತ್ಥಾನ ಮತ್ತು ಜನಸೇವಾ ಟ್ರಸ್ಟ್‌ಗೆ

ನೀಡಲಾಗಿರುವ ಎಲ್ಲ ಸರಕಾರಿ ಭೂಮಿ, ಗೋಮಾಳಗಳ ವಿವರಗಳನ್ನು ಕಲೆಹಾಕಿ ಅದನ್ನು ವಾಪಸ್ ಪಡೆದುಕೊಳ್ಳುವುದಕ್ಕೆ ರಾಜ್ಯ ಸರಕಾರ ಸನ್ನದ್ಧವಾಗಬೇಕು. ಅನಗತ್ಯವಾಗಿ ರಾಜ್ಯಪಾಲರ ಕಡೆಗೆ ಬೆರಳು ತೋರಿಸಿ ಕಾಲಹರಣ ಮಾಡದೆ, ತನ್ನ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಮೂಲಕ ಬಿಜೆಪಿ ಆರೋಪಗಳಿಗೆ ಉತ್ತರಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News