ಸಿಬಿಐಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ ಪ್ರತಿಪಕ್ಷಗಳನ್ನು ಮತ್ತು ಬಿಜೆಪಿಯೇತರ ಚುನಾಯಿತ ರಾಜ್ಯ ಸರಕಾರಗಳನ್ನು ಉರುಳಿಸಲು ನಡೆಸುತ್ತಿರುವ ಹುನ್ನಾರ ಮಿತಿ ಮೀರಿದೆ. ಹಾಗಾಗಿ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ‘‘ಸಿಬಿಐ ಎಂಬ ತನಿಖಾ ಸಂಸ್ಥೆ ಕೇಂದ್ರ ಸರಕಾರದ ಪಂಜರದ ಗಿಳಿಯಾಗಬಾರದು’’ ಎಂದು ಛೀಮಾರಿ ಹಾಕಿದೆ. ಅಬಕಾರಿ ನೀತಿ ಕುರಿತ ಹಗರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನದ ಅಗತ್ಯ ಹಾಗೂ ಸಮಯದ ಬಗ್ಗೆ ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗಳಾದ ಸೂರ್ಯಕಾಂತ್ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠ ಅರವಿಂದ ಕೇಜ್ರಿವಾಲ್ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಿ ಈ ತೀರ್ಪು ನೀಡಿತು.
ತನಿಖಾ ಸಂಸ್ಥೆಯು ಪಂಜರದಗಿಳಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಭಾವನೆ ಜನರಲ್ಲಿದೆ. ಈ ಭಾವನೆಯನ್ನು ಹೋಗಲಾಡಿಸಬೇಕೆಂದು ಹೇಳಿದ ನ್ಯಾಯಮೂರ್ತಿ ಭುಯಾನ್ ಸೀಸರ್ ಪತ್ನಿ ಉಪಮೆಯನ್ನು ಉಲ್ಲೇಖಿಸಿ ಸಿಬಿಐ ತನಿಖಾ ಸಂಸ್ಥೆ ಸಂಶಯಾತೀತವಾಗಿರಬೇಕೆಂದು ಹೇಳಿದರು. ಕೇಜ್ರಿವಾಲ್ ಅವರನ್ನು ಬಂಧಿಸಿರುವ ಕ್ರಮ ನ್ಯಾಯ ಸಮ್ಮತವಾಗಿಲ್ಲ ಹಾಗೂ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ ಎಂದು ಹೇಳಿದರು.
ಸಂವಿಧಾನಾತ್ಮಕವಾದ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ಕೈವಶ ಮಾಡಿಕೊಂಡ ಮೋದಿ ಸರಕಾರ ಅವುಗಳನ್ನು ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಬಳಸಿಕೊಳ್ಳುತ್ತಿದೆ. ಚುನಾವಣಾ ಆಯೋಗವನ್ನು ಸಹ ತನ್ನ ರಾಜಕೀಯ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಏಕನಾಥ ಶಿಂದೆಯವರ ಭಿನ್ನಮತೀಯ ಬಣಕ್ಕೆ ಚುನಾವಣಾ ಆಯೋಗ ಮಾನ್ಯತೆ ನೀಡಿತು. ಕೇಂದ್ರ ಸರಕಾರದ ಈ ವರ್ತನೆ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇದೆ. ಹಿಂದೆ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಆರ್.ಎಂ.ಲೋಧಾ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಕೂಡ ‘‘ಕೇಂದ್ರೀಯ ತನಿಖಾ ಸಂಸ್ಥೆ ಯಜಮಾನನ ರೀತಿ ಮಾತಾಡುವ ಪಂಜರದ ಗಿಳಿ ಇದ್ದಂತೆ’’ ಎಂದು ಹೇಳಿತ್ತು. ಅದನ್ನು ಮತ್ತೆ ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.
ಸಿಬಿಐ ಒಂದು ಮಹತ್ವದ ತನಿಖಾ ಸಂಸ್ಥೆಯಾಗಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಈ ಸಂಸ್ಥೆಗೆ ಉನ್ನತ ಸ್ಥಾನ ನೀಡಲಾಗಿದೆ. ಆದರೆ ಯಾವುದೇ ತನಿಖೆಗಳು ನ್ಯಾಯಯುತವಾಗಿ ನಡೆದಿಲ್ಲ. ಇಲ್ಲವೇ ಪಕ್ಷಪಾತದಿಂದ ಕೂಡಿವೆ ಎಂಬ ಭಾವನೆ ಮೂಡದಂತೆ ನಡೆದುಕೊಳ್ಳುವುದು ತನಿಖಾ ಸಂಸ್ಥೆಗಳ ಹೊಣೆಗಾರಿಕೆಯಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ತನಿಖಾ ಸಂಸ್ಥೆಗಳ ವರ್ತನೆ ಬಗ್ಗೆ ಪದೇ ಪದೇ ಆಕ್ಷೇಪ ವ್ಯಕ್ತಪಡಿಸಿದ ಅವರು ‘‘ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಗಾಗಲೇ ಕಠಿಣ ಕರಾರುಗಳೊಂದಿಗೆ ಜಾಮೀನು ನೀಡಿರುವಾಗ ಮತ್ತೆ ಅದೇ ಅಪರಾಧಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಬಂಧನಕ್ಕೆ ಗುರಿಪಡಿಸಿರುವುದು ಸಂಪೂರ್ಣವಾಗಿ ಅಸಮರ್ಥನೀಯ’’ ಎಂದಿದ್ದಾರೆ.
ದಿಲ್ಲಿ ಮುಖ್ಯಮಂತ್ರಿಯನ್ನು 2013ರ ಮಾರ್ಚ್ ತಿಂಗಳಲ್ಲಿ ವಿಚಾರಣೆಗೆ ಒಳಪಡಿಸಿತ್ತು. ಆಗ ಅದಕ್ಕೆ ಬಂಧಿಸುವ ಅಗತ್ಯ ಕಾಣಲಿಲ್ಲ. 22 ತಿಂಗಳವರೆಗೆ ಸುಮ್ಮನಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ ಪ್ರಕರಣದಲ್ಲಿ ಅವರಿಗೆ ಜಾಮೀನು ದೊರೆತ ಕೂಡಲೇ ಸಿಬಿಐ ಸಕ್ರಿಯವಾಗಿ ಕೇಜ್ರಿವಾಲ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿತು. ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಕೇಜ್ರಿವಾಲ್ ಅವರು ಬಿಡುಗಡೆಯಾಗುವ ಸಂದರ್ಭ ಅವರನ್ನು ಬಂಧಿಸಲೇ ಬೇಕಾದ ತುರ್ತು ಅಗತ್ಯವೇನಿತ್ತು ಎಂದು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
‘‘ಅರವಿಂದ ಕೇಜ್ರಿವಾಲ್ ಅವರ ಬಂಧನಕ್ಕೆ ಸಿಬಿಐ ಖಚಿತ ಸಮರ್ಥನೆಯನ್ನು ನೀಡಿಲ್ಲ. ಅದರ ಬದಲಿಗೆ ಕೇಜ್ರಿವಾಲ್ ಅವರು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಬಂಧನ ಪ್ರಕ್ರಿಯೆಯನ್ನು ಮುಂದುವರಿಸಿದೆ’’ ಎಂದು ನ್ಯಾಯಮೂರ್ತಿ ವಿಶ್ಲೇಷಣೆ ಮಾಡಿದ್ದಾರೆ. ಇಲ್ಲಿ ಜಾಮೀನು ನೀಡಿರುವುದು ಒಂದೆಡೆಯಾದರೆ ತೀರ್ಪು ನೀಡುವಾಗ ನ್ಯಾಯಪೀಠವು ಹೇಳಿರುವ ಮಾತುಗಳು ಯಾವುದೇ ವ್ಯಕ್ತಿಯನ್ನು ಸುದೀರ್ಘ ಕಾಲ ಜೈಲಿನಲ್ಲಿಡುವುದು ಅದರಲ್ಲೂ ವಿಶೇಷವಾಗಿ ವಿಚಾರಣೆಯು ಸದ್ಯದಲ್ಲಿ ಮುಗಿಯುವುದಿಲ್ಲ ಎಂದು ತಿಳಿದಿರುವಾಗಲೂ ಜಾಮೀನು ನೀಡದೆ ಇರುವುದು ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತದೆ ಎಂಬುದನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಸ್ಪಷ್ಟವಾಗಿ ಹೇಳಿದ್ದಾರೆ. ಯಾವುದೇ ವ್ಯಕ್ತಿಗೆ ತನಿಖಾ ಪ್ರಕ್ರಿಯೆ ಎಂಬುದು ಶಿಕ್ಷೆಯಂತಾಗಬಾರದು ಎಂದು ನ್ಯಾಯಮೂರ್ತಿಗಳು ಸಿಬಿಐಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಯಾವುದೇ ವ್ಯಕ್ತಿಯನ್ನು ಬಂಧಿಸಿ ಸೆರೆಮನೆಗೆ ಹಾಕಬಹುದು. ಇಲ್ಲವಾದರೆ ಜಾಮೀನು ನೀಡಬೇಕೆಂಬುದು ನಿಯಮ ಎಂದಿರುವ ನ್ಯಾಯಾಲಯ ಸಂವಿಧಾನದ 21ನೇ ವಿಧಿಯ ಅನ್ವಯ ನೀಡಲಾದ ಸ್ವಾತಂತ್ರ್ಯದ ಹಕ್ಕಿನ ಮೌಲ್ಯವನ್ನು ಮತ್ತೊಮ್ಮೆ ಪ್ರತಿಪಾದಿಸಿದೆ.
ಸುಪ್ರೀಂ ಕೋರ್ಟಿನ ಈ ತೀರ್ಪು ಯಾಕೆ ಮಹತ್ವದ್ದಾಗಿದೆ ಅಂದರೆ ನ್ಯಾಯಮೂರ್ತಿ ಭುಯಾನ್ ಅವರು ಕೇಜ್ರಿವಾಲ್ ಅವರ ಬಂಧನದ ಅಗತ್ಯವನ್ನು ಕುರಿತು ನೀಡಿರುವ ಪ್ರತ್ಯೇಕ ತೀರ್ಪಿನಲ್ಲಿ ಸಿಬಿಐ ನಡೆಯ ಬಗ್ಗೆ ಎತ್ತಿದ ಪ್ರಶ್ನೆಗಳಿಂದಾಗಿ. ಸಿಬಿಐ ಬಂಧನ ಪ್ರಕ್ರಿಯೆಯ ಬಗ್ಗೆ ನ್ಯಾಯಮೂರ್ತಿ ಸೂರ್ಯಕಾಂತ್ ಹೆಚ್ಚಿಗೆ ಹೇಳಿಲ್ಲವಾದರೂ ನ್ಯಾಯಮೂರ್ತಿ ಭುಯಾನ್ ಮಾತ್ರ ಸಿಬಿಐ ನಡೆಯ ಬಗ್ಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ‘‘ಈ ತನಿಖಾ ಸಂಸ್ಥೆಯ ವರ್ತನೆ ಲೋಪದಿಂದ ಕೂಡಿದೆ’’ ಎಂದಿದ್ದಾರೆ. ಸಿಬಿಐ ನಡೆಯ ಹಿಂದೆ ದುರುದ್ದೇಶವಿದೆ. ಪಿಎಂಎಲ್‌ಎ ಪ್ರಕರಣದಲ್ಲಿ ಜಾಮೀನು ಮಂಜೂರಾದ ನಂತರವೂ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು ಅವರ ಬಿಡುಗಡೆಯನ್ನು ವಿಫಲಗೊಳಿಸುವ ಹುನ್ನಾರವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಸೆರೆಮನೆ ಸೇರಿ ಆರು ತಿಂಗಳ ನಂತರ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ದಿಂದಾಗಿ ಕೇಜ್ರಿವಾಲ್ ಬಿಡುಗಡೆಯಾಗಿದ್ದಾರೆ. ಸದರಿ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕೇಜ್ರಿವಾಲ್ ಇದು ತಮ್ಮ ನೈತಿಕ ವಿಜಯ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವಾಗಿರುವ ಕೇಜ್ರಿವಾಲ್ ದಿಲ್ಲಿ ವಿಧಾನಸಭೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಸಲು ಆಗ್ರಹಿಸಿದ್ದಾರೆ. ವಾಸ್ತವವಾಗಿ ಸುಪ್ರೀಂ ಕೋರ್ಟ್ ಜಾಮೀನು ನೀಡುವಾಗ ಹಾಕಿರುವ ಷರತ್ತುಗಳ ಪ್ರಕಾರ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ತಮ್ಮ ಕಚೇರಿಗೆ ಹೋಗುವಂತಿಲ್ಲ. ಕಡತಗಳಿಗೆ ಸಹಿ ಹಾಕುವಂತಿಲ್ಲ. ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವುದು ಕಷ್ಟಕರವಾದುದರಿಂದ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವ ನಿರ್ಧಾರಕ್ಕೆ ಬಂದಿರುವ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬರಲು ತೀರ್ಮಾನಿಸಿದ್ದಾರೆ. ಜೈಲಿಗೆ ಹಾಕಿ ದುರ್ಬಲಗೊಳಿಸಲು ಸಾಧ್ಯವಿಲ್ಲ. ಭಾರತವನ್ನು ದುರ್ಬಲಗೊಳಿಸಲು ಹುನ್ನಾರ ನಡೆಸಿರುವ ದೇಶದ್ರೋಹಿ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಸಿಬಿಐ ಬಿಜೆಪಿಯನ್ನು ವಿರೋಧಿಸುವ ಅನೇಕ ರಾಜಕೀಯ ನಾಯಕರ ವಿರುದ್ಧ ಇದೇ ರೀತಿ ವರ್ತಿಸಿದೆ.ಅವರಿಗೆಲ್ಲ ನ್ಯಾಯ ಸಿಗಬೇಕಾಗಿದೆ.