ನ್ಯಾಯಮೂರ್ತಿಯೇ ಸ್ಥಾನದ ಘನತೆಯನ್ನು ದುರ್ಬಳಕೆ ಮಾಡಿಕೊಂಡರೆ?

Update: 2024-09-14 05:00 GMT

PC: x.com/narendramodi

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಾರ್ವಜನಿಕ ವ್ಯಕ್ತಿಗಳು ಅದರಲ್ಲೂ ಮುಖ್ಯವಾಗಿ ದೇಶದ ರಾಷ್ಟ್ರಪತಿ, ಪ್ರಧಾನಮಂತ್ರಿ, ನ್ಯಾಯಾಧೀಶರು, ವಿಜ್ಞಾನಿಗಳು ಇವರೆಲ್ಲರೂ ಧಾರ್ಮಿಕ ನಂಬಿಕೆಗಳನ್ನು ಹೊಂದಿರಬಾರದು ಎಂದು ನಿರೀಕ್ಷಿಸುವಂತಿಲ್ಲ. ಸಂವಿಧಾನವೇ ಅವರಿಗೆ ನೀಡಿರುವ ಹಕ್ಕುಗಳಲ್ಲಿ ಧಾರ್ಮಿಕ ನಂಬಿಕೆಗಳೂ ಸೇರಿಕೊಂಡಿವೆ. ಎಲ್ಲ ಶ್ರೀಸಾಮಾನ್ಯರಂತೆ ಹಬ್ಬಗಳನ್ನು ಆಚರಿಸುವ, ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುವ ಸರ್ವ ಸ್ವಾತಂತ್ರ್ಯ ಅವರಿಗಿದೆ. ಆದರೆ ತಮ್ಮ ನಂಬಿಕೆ ತಾವು ನಿರ್ವಹಿಸುತ್ತಿರುವ ಹುದ್ದೆಯ ಘನತೆಗೆ ಯಾವ ರೀತಿಯಲ್ಲೂ ಚ್ಯುತಿ ತರದಂತೆ ನೋಡಿಕೊಳ್ಳುವುದು ಅವರ ಹೊಣೆಗಾರಿಕೆಯಾಗಿದೆ. ನ್ಯಾಯಮೂರ್ತಿಯೊಬ್ಬ ತಾನು ಯಾವ ಸಮಾರಂಭದಲ್ಲಿ ಭಾಗವಹಿಸಿದೆ ಎನ್ನುವುದರಷ್ಟೇ, ಯಾರು ಹಮ್ಮಿಕೊಂಡ ಸಮಾರಂಭದಲ್ಲಿ ಭಾಗವಹಿಸಿದ್ದೇನೆ ಎನ್ನುವುದು ಕೂಡ ಮುಖ್ಯವಾಗಿದೆ. ಇದೀಗ ದೇಶಕ್ಕೆ ಗಣೇಶ ಉತ್ಸವದ ಸಂಭ್ರಮ. ದೇಶಕ್ಕೆ ದೇಶವೇ ಈ ಉತ್ಸವದಲ್ಲಿ ಪಾಲುಗೊಳ್ಳುತ್ತಿದೆ. ರಾಜಕಾರಣಿಗಳು, ನಟರು, ಅಧಿಕಾರಿಗಳು, ಶ್ರೀಸಾಮಾನ್ಯರು ಎನ್ನದೇ ಎಲ್ಲ ವರ್ಗದ ಜನರೂ ಇದರಲ್ಲಿ ಸೇರಿಕೊಂಡಿದ್ದಾರೆ. ಎಲ್ಲರಂತೆಯೇ, ಈ ದೇಶದ ಮುಖ್ಯ ನ್ಯಾಯ ಮೂರ್ತಿಗಳು ತಮ್ಮ ನಿವಾಸದಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಿದ್ದಾರೆ. ಹೀಗೆ ಸಲ್ಲಿಸುವುದರಲ್ಲಿ ಯಾವ ವಿಶೇಷವೂ ಇಲ್ಲ. ಆದರೆ ಇದೇ ಸಂದರ್ಭದಲ್ಲಿ, ಗಣೇಶ ಪೂಜೆಯ ಈ ಖಾಸಗಿ ಕಾರ್ಯಕ್ರಮಕ್ಕೆ ಈ ದೇಶದ ಪ್ರಧಾನಮಂತ್ರಿಗೆ ಆಹ್ವಾನವನ್ನು ನೀಡಿದ್ದು, ಆಹ್ವಾನವನ್ನು ಮನ್ನಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಧಾರ್ಮಿಕ ಸಮಾರಂಭವೊಂದರಲ್ಲಿ ನ್ಯಾಯಮೂರ್ತಿಯ ಮನೆಗೆ ಪ್ರಧಾನಿಯ ಈ ಭೇಟಿಯ ಬಗ್ಗೆ ಹಲವರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಪ್ರಧಾನಿಯು ಒಬ್ಬ ರಾಜಕೀಯ ವ್ಯಕ್ತಿಯಾಗಿರುವುದರಿಂದ ತನಗೆ ರಾಜಕೀಯ ಲಾಭವಿದ್ದಲ್ಲೆಲ್ಲ ತಲೆತೂರಿಸುವ ಪ್ರಯತ್ನವನ್ನು ಮಾಡುವುದು ಸಹಜ. ಪ್ರಧಾನಿ ನರೇಂದ್ರ ಮೋದಿಯವರು ತನ್ನ ಸ್ಥಾನದ ಘನತೆಯನ್ನು ಮರೆತು ಈ ಹಿಂದೆಯೂ ಹಲವು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅಂಬಾನಿಯ ಮದುವೆಯಲ್ಲೂ ಸಂಭ್ರಮಿಸಿದ್ದಾರೆ. ಅಷ್ಟೇ ಏಕೆ, ದೇಶದ ಪ್ರಧಾನಿಯಾಗಿದ್ದಾಗಲೇ ಅಮೆರಿಕಕ್ಕೆ ಹೋಗಿ, ಟ್ರಂಪ್ ಪರವಾಗಿ ಚುನಾವಣಾ ಪ್ರಚಾರವನ್ನೂ ಮಾಡಿದ್ದಾರೆ. ಆದುದರಿಂದ, ಆಮಂತ್ರಣ ಸಿಕ್ಕಿದಾಕ್ಷಣ ಪ್ರಧಾನಿ ಮೋದಿಯವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಚಂದ್ರ ಚೂಡ್ ನಿವಾಸದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಯಾರಿಗೂ ಅಚ್ಚರಿಯನ್ನು ತಂದಿಲ್ಲ. ಆದರೆ ತನ್ನ ಮನೆಯ ಖಾಸಗಿ ಕಾರ್ಯಕ್ರಮಕ್ಕೆ ದೇಶದ ಪ್ರಧಾನಿಯನ್ನು ಆಹ್ವಾನಿಸುವ ಅನಿವಾರ್ಯತೆ, ಅಗತ್ಯ ನ್ಯಾಯಮೂರ್ತಿಗೆ ಏನಿತ್ತು ಎನ್ನುವ ಪ್ರಶ್ನೆ ನ್ಯಾಯವ್ಯವಸ್ಥೆಯ ಬಗ್ಗೆ ಕಾಳಜಿ ಹೊಂದಿರುವ ಜನರು ಕೇಳುತ್ತಿದ್ದಾರೆ. ಗಣೇಶ ಪೂಜೆಯಲ್ಲಿ ಪ್ರಧಾನಿ ಭಾಗವಹಿಸಿರುವುದನ್ನು ಪ್ರಶ್ನೆ ಮಾಡುವುದೇ ಅಪರಾಧವೇನೋ ಎಂಬಂತೆ ಬಿಜೆಪಿ ವರ್ತಿಸುತ್ತಿದೆ. ‘‘ಗಣೇಶ ಪೂಜೆಯಲ್ಲಿ ಪ್ರಧಾನಿ ಭಾಗವಹಿಸಿದರೆ ತಪ್ಪೇನು?’’ ಎಂದು ಮರು ಪ್ರಶ್ನಿಸಿ ಅವರು ವಿಷಯಾಂತರ ಮಾಡುವ ಪ್ರಯತ್ನ ನಡೆಸಿದ್ದಾರೆ. ಇಲ್ಲಿ ಪ್ರಶ್ನೆ ಪ್ರಧಾನಿ ‘ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದಲ್ಲ’. ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬ ಗಣೇಶ ಪೂಜೆ ಮಾಡಿದ್ದು ಕೂಡ ಅಲ್ಲ. ಶಾಸಕಾಂಗ ವ್ಯವಸ್ಥೆಯ ನಾಯಕನೊಬ್ಬ, ನ್ಯಾಯಾಂಗದ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನ್ಯಾಯಾಂಗದ ವಿಶ್ವಾಸಾರ್ಹತೆಯ ಮೇಲೆ ಪರಿಣಾಮವನ್ನು ಬೀರುವುದಿಲ್ಲವೆ? ಎನ್ನುವುದರ ಬಗ್ಗೆಯಷ್ಟೇ ಕೆಲವರ ಆತಂಕ.

ಈಗಾಗಲೇ ಕೇಂದ್ರ ಸರಕಾರದ ನಿರ್ಧಾರಗಳ ವಿರುದ್ಧ ಹಲವರು ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದ್ದಾರೆ. ಪ್ರಧಾನಿಗೆ ಸಂಬಂಧಿಸಿದ ಹಲವು ಹಗರಣಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ತನ್ನ ತೀರ್ಪುಗಳನ್ನು ನೀಡಿದೆ. ಮುಂದೆಯೂ ಪ್ರಧಾನಿಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡುವುದಕ್ಕಿದೆ. ಇಂತಹ ಹೊತ್ತಿಗೆ ನ್ಯಾಯಮೂರ್ತಿಗಳು ಏಕಾಏಕಿ ಪ್ರಧಾನಿಯನ್ನು ತನ್ನ ಖಾಸಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿರುವ ಉದ್ದೇಶವೇನು? ಮತ್ತು ಆತುರಾತುರವಾಗಿ ಎಲ್ಲ ಕಾರ್ಯಕ್ರಮಗಳನ್ನು ಬದಿಗಿಟ್ಟು ಪ್ರಧಾನಿ ನರೇಂದ್ರ ಮೋದಿ ನ್ಯಾಯಮೂರ್ತಿ ಚಂದ್ರಚೂಡ್ ಅವರ ಮನೆಗೆ ಧಾವಿಸಿದ್ದೇಕೆ? ಈ ಭೇಟಿಯನ್ನು ಒಂದು ಸೌಹಾರ್ದ ಭೇಟಿಯೆಂದು ಕರೆಯಬೇಕೆ? ನ್ಯಾಯಾಂಗ-ಶಾಸಕಾಂಗದ ನಡುವೆ ಸೌಹಾರ್ದ ಇರಬೇಕು ನಿಜ. ಆದರೆ ಅದರ ಸ್ವರೂಪ ಹೇಗಿರಬೇಕು? ಇತ್ಯಾದಿ ಚರ್ಚೆಗಳಿಗೆ ಈ ಭೇಟಿ ಅವಕಾಶ ಮಾಡಿಕೊಟ್ಟಿದೆ. ನ್ಯಾಯಮೂರ್ತಿಯ ಈ ವರ್ತನೆಯನ್ನು ಇತರ ಕೆಳಗಿನ ನ್ಯಾಯಾಲಯಗಳ ನ್ಯಾಯಾಧೀಶರು ಮಾದರಿಯಾಗಿಸಿಕೊಂಡರೆ, ಮುಂದಿನ ದಿನಗಳಲ್ಲಿ ಇದು ನ್ಯಾಯಾಧೀಶರು ನೀಡುವ ತೀರ್ಪುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿಲ್ಲವೆ? ಎಂದು ಶ್ರೀಸಾಮಾನ್ಯರು ಆತಂಕ ಪಡುವಂತಾಗಿದೆ. ಮುಸ್ಲಿಮರ ಬಕ್ರೀದ್ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಟೋಪಿ ಧರಿಸಿ ಪ್ರದರ್ಶನ ನೀಡುವುದು, ಸಾರ್ವಜನಿಕ ಗಣೇಶೋತ್ಸವಗಳಲ್ಲಿ ರಾಜಕಾರಣಿಗಳು ಕೇಸರಿ ಶಾಲು ಧರಿಸಿ ಕುಣಿಯುವುದನ್ನು ನಾವು ನೋಡುತ್ತಿದ್ದೇವೆ. ಅನಿವಾರ್ಯವಾಗಿ ಒಪ್ಪಿಕೊಂಡಿದ್ದೇವೆ. ಆದರೆ ಈ ಸಂಪ್ರದಾಯ ನ್ಯಾಯಾಲಯದ ಅಂಗಳವನ್ನೂ ತುಳಿದರೆ, ಸಂವಿಧಾನವನ್ನು ಕಾಪಾಡುವವರು ಯಾರು?

ಈಗಾಗಲೇ ಕೆಲವು ನಿವೃತ್ತ ನ್ಯಾಯಾಧೀಶರು ವಿಶ್ವ ಹಿಂದೂ ಪರಿಷತ್‌ನ ಸಮಾವೇಶವೊಂದರಲ್ಲಿ ಭಾಗವಹಿಸಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ವಿಶ್ವ ಹಿಂದೂ ಪರಿಷತ್ ಈ ದೇಶದ ಸಂವಿಧಾನದ ಬಗ್ಗೆ ಇಟ್ಟಿರುವ ನಂಬಿಕೆಯೆಷ್ಟು ಎನ್ನುವುದು ಎಲ್ಲರಿಗೂ ಗೊತ್ತಿದೆ. ಹತ್ತು ಹಲವು ಸಂವಿಧಾನವಿರೋಧಿ ಕೃತ್ಯಗಳಲ್ಲಿ ಗುರುತಿಸಿಕೊಂಡ ಆರೋಪವನ್ನು ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು, ನಾಯಕರು ಹೊಂದಿದ್ದಾರೆ. ಇವರು ಆರೋಪಿಗಳಾಗಿರುವ ಹಲವು ಪ್ರಕರಣಗಳನ್ನು ಇವರ ಸಮಾವೇಶದಲ್ಲಿ ಭಾಗವಹಿಸಿರುವ ನ್ಯಾಯಾಧೀಶರೇ ವಿಚಾರಣೆ ನಡೆಸಿರುವ ಸಂದರ್ಭಗಳಿವೆ. ಸಂಘಪರಿವಾರದ ಭಾಗವಾಗಿರುವ ವಿಎಚ್‌ಪಿಯ ಸಮಾವೇಶದಲ್ಲಿ ಭಾಗವಹಿಸಿದ ನ್ಯಾಯಾಧೀಶರು ಸಂಘಪರಿವಾರದ ನಾಯಕರು ಒಳಗೊಂಡಿರುವ ಪ್ರಕರಣಗಳನ್ನು ಯಾವ ರೀತಿಯಲ್ಲಿ ನಿಭಾಯಿಸಿರಬಹುದು? ಎನ್ನುವ ಅನುಮಾನ ದೇಶದ ಜನತೆಯನ್ನು ಈ ಸಂದರ್ಭದಲ್ಲಿ ಕಾಡದೇ ಇರದು. ದೇಶಾದ್ಯಂತ ಸುದ್ದಿ ಮಾಡಿದ ಕರ್ನಾಟಕದ ಹಿಜಾಬ್ ಪ್ರಕರಣದಲ್ಲಿ ರಾಜ್ಯದ ಅಂದಿನ ಬಿಜೆಪಿ ಸರಕಾರದ ಆದೇಶವನ್ನು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಹೇಮಂತ್ ಗುಪ್ತಾ ಅವರೂ ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ನ್ಯಾಯಾಧೀಶರ ಈ ನಿರ್ಧಾರದಿಂದಾಗಿ ರಾಜ್ಯದ ಮುಸ್ಲಿಮ್ ಸಮುದಾಯಕ್ಕೆ ಸೇರಿದ ನೂರಾರು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಶಾಲೆಗಳಿಂದ ಬಹಿಷ್ಕರಿಸಲ್ಪಟ್ಟಿದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಮುಂಬೈಯ ಶಾಲೆಯೊಂದರ ಪ್ರಕರಣವೊಂದರ ವಿಚಾರಣೆ ನಡೆಸಿ ಹಿಜಾಬ್ ಧರಿಸುವುದು ವಿದ್ಯಾರ್ಥಿನಿಯರ ಹಕ್ಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿತು. ಹಿಜಾಬ್‌ಗೆ ನಿಯಮ ಅನ್ವಯವಾಗುವುದಾದರೆ, ಇತರ ಧಾರ್ಮಿಕ ಸಂಕೇತಗಳಿಗೂ ಅದು ಅನ್ವಯವಾಗಬೇಕು ಎಂದು ಅಭಿಪ್ರಾಯಪಟ್ಟಿತ್ತು. ಈ ವಿರೋಧಾಭಾಸಗಳನ್ನೊಳಗೊಂಡ ಬೇರೆ ಬೇರೆ ತೀರ್ಪುಗಳ ಹಿಂದೆ ಸಂವಿಧಾನದ ಬದಲು ನ್ಯಾಯಾಧೀಶರ ವೈಯಕ್ತಿಕ ನಂಬಿಕೆಗಳು ಪರಿಣಾಮ ಬೀರಿದೆ ಎಂದು ಯಾರಾದರೂ ಶಂಕಿಸಿದರೆ ಅದಕ್ಕೆ ಹೊಣೆ ಯಾರು? ಇವನ್ನೆಲ್ಲ ತಡೆದು ನ್ಯಾಯ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಎತ್ತಿ ಹಿಡಿಯಬೇಕಾದವರು ನ್ಯಾಯಮೂರ್ತಿ ಚಂದ್ರಚೂಡ್. ಇದೀಗ ಅವರೇ ತನ್ನ ಸ್ಥಾನದ ಘನತೆಯನ್ನು ದುರ್ಬಳಕೆಗೀಡು ಮಾಡಿ ದೇಶದ ಪ್ರಧಾನಿಗೆ ತನ್ನ ನಿವಾಸದ ಖಾಸಗಿ ಕಾರ್ಯಕ್ರಮದಲ್ಲಿ ಆತಿಥ್ಯ ನೀಡಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News