ಕೇಜ್ರಿವಾಲ್ ಮುತ್ಸದ್ದಿ ನಡೆ

Update: 2024-09-19 06:21 GMT

PC:PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದಿಲ್ಲಿ ರಾಜಕೀಯ ತಂತ್ರ-ಪ್ರತಿ ತಂತ್ರಗಳ ಚದುರಂಗದಾಟ ಕುತೂಹಲಕಾರಿ ತಿರುವು ಪಡೆದಿದೆ. ನ್ಯಾಯಾಲಯ ಮತ್ತು ಲೆ. ಗವರ್ನರ್ ಮರೆಯಲ್ಲಿ ನಿಂತು ಕೇಂದ್ರ ಸರಕಾರ ದಿಲ್ಲಿಯ ಪ್ರಜಾಸತ್ತಾತ್ಮಕವಾದ ಸರಕಾರದ ವಿರುದ್ಧ ಬಾಣಗಳನ್ನು ಬಿಡುತ್ತಿದೆ. ಈಗಾಗಲೇ ಹಲವು ಪ್ರಮುಖ ಕಾಯಿಗಳು ಉರುಳಿವೆಯಾದರೂ, ಕೇಜ್ರಿವಾಲ್ ನೇತೃತ್ವದ ಆಪ್ ಸರಕಾರ ಸೋಲೊಪ್ಪಿಕೊಂಡಿಲ್ಲ. ಬದಲಿಗೆ ತನ್ನೆಲ್ಲ ಶಕ್ತಿಯನ್ನು ಸೇರಿಸಿಕೊಂಡು ಸರಕಾರದ ತಂತ್ರಕ್ಕೆ ಪ್ರತಿತಂತ್ರಗಳನ್ನು ಹೂಡುತ್ತಿದೆ. ಇದೀಗ ಬಂಧನದಲ್ಲಿದ್ದ ಕೇಜ್ರಿವಾಲ್ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ. ಆದರೆ ಈ ಜಾಮೀನಿಗೆ ಅವರು ಬಹುದೊಡ್ಡದನ್ನೇ ತೆರಬೇಕಾಯಿತು. ಕೊನೆಗೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವ ಕೇಜ್ರಿವಾಲ್, ತನ್ನ ಸ್ಥಾನಕ್ಕೆ ಆತಿಶಿ ಅವರನ್ನು ತಂದಿದ್ದಾರೆ. ಮುಖ್ಯಮಂತ್ರಿ ಸ್ಥಾನವನ್ನೇರಿದರೂ, ತಾನು ಕೇಜ್ರಿವಾಲ್ ಅವರನ್ನು ಪ್ರತಿನಿಧಿಸುತ್ತಿದ್ದೇನೆ ಎನ್ನುವುದನ್ನು ಆತಿಶಿ ಸ್ಪಷ್ಟ ಪಡಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಯಲ್ಲಿ ಕೇಜ್ರಿವಾಲ್ ಮುಂದುವರಿಯಲು ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿತ್ತು. ರಾಜೀನಾಮೆ ನೀಡದೇ ಇದ್ದಿದ್ದರೆ ಅದನ್ನು ಬಳಸಿಕೊಂಡು ಕೇಂದ್ರ ಸರಕಾರ ಇನ್ನಷ್ಟು ಕಿರುಕುಳಗಳನ್ನು ಕೊಡುವ ಸಾಧ್ಯತೆಗಳಿತ್ತು. ಆದುದರಿಂದಲೇ, ಕೇಜ್ರಿವಾಲ್ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವ ಜಾಣ ನಡೆಯನ್ನು ಆರಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದೊಂದು ಹಿನ್ನಡೆಯಂತೆ ಕಂಡರೂ, ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕೇಜ್ರಿವಾಲ್ ಅವರದು ಮುತ್ಸದ್ದಿ ನಡೆಯಾಗಿದೆ. ದಿಲ್ಲಿಯು ಶೀಘ್ರವೇ ಚುನಾವಣೆಯನ್ನು ಎದುರಿಸಲಿರುವುದರಿಂದ, ಮುಂದಿನ ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸುವುದಕ್ಕಾಗಿ ಕೇಜ್ರಿವಾಲ್ ತನ್ನನ್ನು ಮೀಸಲಿಟ್ಟಂತಿದೆ.

ಈಗಾಗಲೇ ಹಲವು ನಾಯಕರು ಜೈಲು ಪಾಲಾಗಿರುವುದರಿಂದ, ಆಪ್‌ನ್ನು ಮುನ್ನಡೆಸಲು ನಾಯಕರೇ ಇಲ್ಲ ಎನ್ನುವಂತಹ ಸ್ಥಿತಿ ದಿಲ್ಲಿಯಲ್ಲಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲ, ಈ ಸಂದರ್ಭವನ್ನು ಬಿಜೆಪಿಯು ಬಳಸಿಕೊಳ್ಳುತ್ತಿದೆ. ಪಕ್ಷದೊಳಗೇ ಪರಸ್ಪರರನ್ನು ಎತ್ತಿಕಟ್ಟುತ್ತಿದೆ. ಈಗಾಗಲೇ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಳ್ ಪಕ್ಷ ಮುಖಂಡರ ವಿರುದ್ಧ ತಿರುಗಿ ಬಿದ್ದರು. ಇದು ಆಪ್‌ನ್ನು ಸಾಕಷ್ಟು ಮುಜುಗರಕ್ಕೆ ತಳ್ಳಿತು. ಮನೀಶ್ ಸಿಸೋಡಿಯಾರಂತಹ ನಾಯಕರು ಜೈಲು ಸೇರಿದರು. ಪಕ್ಷದೊಳಗೆ ಇದು ಇತರ ನಾಯಕರಲ್ಲೂ ಆತಂಕ, ಅಭದ್ರತೆಯನ್ನು ಸೃಷ್ಟಿಸಿತು. ಕೇಜ್ರಿವಾಲ್ ಜೈಲು ಸೇರಿದ ಬಳಿಕವಂತೂ ಆಪ್ ಅನಾಥವಾಯಿತು. ಆಪ್‌ನ್ನು ಅಸಹಾಯಕಗೊಳಿಸಿ ಕಳೆದ ಲೋಕಸಭೆಯಲ್ಲಿ ಎನ್‌ಡಿಎ ಏಳೂ ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ದಿಲ್ಲಿಯಲ್ಲಿ ‘ಇಂಡಿಯಾ’ ಒಕ್ಕೂಟ ಅತ್ಯಂತ ಹೀನಾಯ ಸೋಲನ್ನು ಕಂಡಿತು. ಸದ್ಯಕ್ಕೆ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಮುಂದುವರಿಯುವುದಕ್ಕಿಂತ, ಅವರು ಜಾಮೀನು ಮೇಲೆ ಹೊರಗಿರುವುದು ಪಕ್ಷಕ್ಕೆ ಅತ್ಯಗತ್ಯವಾಗಿತ್ತು. ಜಾಮೀನು ನೀಡುವ ಸಂದರ್ಭದಲ್ಲಿ ಕೇಜ್ರಿವಾಲ್‌ಗೆ ನ್ಯಾಯಾಲಯ ಹಲವು ಕಠಿಣ ಶರತ್ತುಗಳನ್ನು ವಿಧಿಸಿರುವುದರಿಂದ, ದಿಲ್ಲಿಯ ಆಡಳಿತದಿಂದ ದೂರವಿದ್ದು ಪರೋಕ್ಷ ಮುಖ್ಯಮಂತ್ರಿಯಾಗುವುದಲ್ಲದೇ ಬೇರೆ ಮಾರ್ಗ ಕೇಜ್ರಿವಾಲ್‌ಗೆ ಇರಲಿಲ್ಲ. ಆತಿಶಿ ಮೂಲಕ ದಿಲ್ಲಿಯನ್ನು ನಿಯಂತ್ರಿಸುತ್ತಾ, ಮುಂದಿನ ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸುವುದು ಅವರ ಪಾಲಿಗೆ ಅತ್ಯಂತ ಯೋಗ್ಯ ತೀರ್ಮಾನವಾಗಿತ್ತು.

ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್ ನೇತೃತ್ವದ ಸರಕಾರ ನಿರಪರಾಧಿ ಖಂಡಿತ ಅಲ್ಲ. ಈಗಾಗಲೇ ಹಲವು ಗಣ್ಯರು ಈ ಹಗರಣಕ್ಕೆ ಸಂಬಂಧಿಸಿ ಜೈಲು ಪಾಲಾಗಿದ್ದಾರೆ. ತನಿಖಾ ಸಂಸ್ಥೆಗಳು ಹಗರಣದ ಪ್ರತೀ ಸಂದುಗಳನ್ನೂ ಜಾಲಾಡಿಸಿವೆ. ಆದರೆ ದಿಲ್ಲಿಯ ಸರಕಾರದ ಹಗರಣಗಳ ಬಗ್ಗೆ ಅತ್ಯಂತ ಬಿರುಸಿನಿಂದ ತನಿಖೆ ನಡೆಸಿದ ತನಿಖಾ ಸಂಸ್ಥೆಗಳು ಕೇಂದ್ರ ಸರಕಾರದ ಸಚಿವರು ಭಾಗಿಯಾಗಿದ್ದಾರೆನ್ನಲಾಗಿರುವ ಹಗರಣಗಳ ಬಗ್ಗೆ ಯಾಕೆ ಮೃದು ನೀತಿ ತಳೆದಿವೆೆ ಎನ್ನುವುದು ವಿರೋಧ ಪಕ್ಷಗಳ ಪ್ರಶ್ನೆಯಾಗಿದೆ. ಅದಾನಿಯ ಹಗರಣ, ಚುನಾವಣಾ ಬಾಂಡ್, ರಫೇಲ್ ಹಗರಣ ಇವೆಲ್ಲದರ ಬಗ್ಗೆ ಮೌನವಾಗಿದ್ದು, ಕೇಜ್ರಿವಾಲ್ ಅವರು ಒಳಗೊಂಡಿದ್ದಾರೆ ಎನ್ನಲಾಗಿರುವ ಮದ್ಯ ಹಗರಣದ ಬಗ್ಗೆ ಮಾತ್ರ ಆಸಕ್ತಿ ವಹಿಸಿ ತನಿಖೆ ನಡೆಸಲಾಗಿದೆ. ಹಲವು ಪ್ರಮುಖ ನಾಯಕರನ್ನು ಜೈಲಿಗೆ ತಳ್ಳಲಾಗಿದೆ. ಲೆ. ಗವರ್ನರ್ ಮೂಲಕ ಕೇಜ್ರಿವಾಲ್ ಸರಕಾರಕ್ಕೆ ಗರಿಷ್ಠ ಕಿರುಕುಳವನ್ನು ನೀಡಿರುವ ಕೇಂದ್ರ, ತನಿಖಾ ಸಂಸ್ಥೆಗಳ ಮೂಲಕವೂ ಆಪ್ ಸರಕಾರವನ್ನು ಬಗ್ಗು ಬಡಿಯಲು ನೋಡಿತು. ಆದರೆ, ಬಡಿದಷ್ಟು ಸೆಟೆದು ನಿಲ್ಲುತ್ತಿರುವ ಕೇಜ್ರಿವಾಲ್, ಕೇಂದ್ರ ಸರಕಾರಕ್ಕೆ ಈಗಲೂ ಬಹುದೊಡ್ಡ ಸವಾಲೇ ಆಗಿದ್ದಾರೆ. ಆತಿಶಿಗೆ ದಿಲ್ಲಿಯ ಹೊಣೆಗಾರಿಕೆಯನ್ನು ವಹಿಸಿದ ಬೆನ್ನಿಗೇ, ‘ನವೆಂಬರ್‌ನಲ್ಲಿ ಚುನಾವಣೆ ನಡೆಯಲಿ’ ಎಂದು ಕೇಜ್ರಿವಾಲ್ ಒತ್ತಾಯಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆಪ್ ನಾಯಕರ ಕೈಕಾಲುಗಳನ್ನು ಕಟ್ಟಿ ಹಾಕಿ ಚುನಾವಣಾ ಕಣದಲ್ಲಿ ಬಿಜೆಪಿ ಗೆಲುವನ್ನು ಘೋಷಿಸಿಕೊಂಡಿತ್ತು. ಈ ಬಾರಿ ಅಧಿಕಾರಕ್ಕಿಂತಲೂ, ಜಾಮೀನಿನ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕೇಜ್ರಿವಾಲ್‌ಗೆ ಮುಖ್ಯವಾಗಿದೆ. ಜೈಲಿನಲ್ಲಿದ್ದುಕೊಂಡು ವಿಧಾನಸಭಾ ಚುನಾವಣೆಯನ್ನು ಗೆಲ್ಲುವುದು ಸುಲಭವಿಲ್ಲ ಎನ್ನುವುದು ಅವರಿಗೆ ಅರ್ಥವಾಗಿದೆ.

ದಿಲ್ಲಿಯ ಪಾಲಿಗೆ ನೂತನ ಮುಖ್ಯಮಂತ್ರಿಯಾಗಿ ಆತಿಶಿ ಸರಿಯಾದ ಆಯ್ಕೆಯೇ ಆಗಿದ್ದಾರೆ. ಕೇಜ್ರಿವಾಲ್ ಜೈಲಿನಲ್ಲಿರುವ ಹೊತ್ತಿಗೆ ಪಕ್ಷದ ಕಾರ್ಯಕರ್ತರಿಗೆ ಮತ್ತು ದಿಲ್ಲಿಯ ಜನತೆಗೆ ಧೈರ್ಯ ತುಂಬಿದವರು ಆತಿಶಿ. ದಿಲ್ಲಿಯು ನೀರಿನ ಸಮಸ್ಯೆಯನ್ನು ಎದುರಿಸಿದಾಗ, ಅದರ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿ ಮಾಧ್ಯಮಗಳಲ್ಲಿ ಸುದ್ದಿಯಾದವರು ಆತಿಶಿ. ಉಪವಾಸ ಸತ್ಯಾಗ್ರಹದ ಮೂಲಕ ಬಿಜೆಪಿಗೆ ತೀವ್ರ ಮುಜುಗರವನ್ನು ಅವರು ಉಂಟು ಮಾಡಿದ್ದರು. ಅನಿವಾರ್ಯವಾಗಿ, ಬಿಜೆಪಿ ಈ ಪ್ರತಿಭಟನೆಯನ್ನು ವಿಫಲಗೊಳಿಸಲು ತನ್ನ ಗೂಂಡಾ ಪಡೆಯನ್ನು ಬಳಸಿತ್ತು. 2015ರಿಂದಲೇ ಜಲಸತ್ಯಾಗ್ರಹದ ಮೂಲಕ ಗುರುತಿಸಲ್ಪಟ್ಟಿದ್ದ ಆತಿಶಿ, ಬೇರೆ ಬೇರೆ ಚಳವಳಿಗಳಲ್ಲಿ ಕಾಣಿಸಿಕೊಂಡವರು. ದಿಲ್ಲಿ ಸರಕಾರದಲ್ಲಿ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರ ರಾಜೀನಾಮೆಯ ಬಳಿಕ ಕೇಜ್ರಿವಾಲ್‌ನ ನಂಬಿಕಸ್ತರೆಂದು ಗುರುತಿಸಲ್ಪಡುತ್ತಾ ಬಂದದ್ದು ಆತಿಶಿ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿನಿಯಾಗಿರುವ ಇವರು, ಹಣಕಾಸು, ಶಿಕ್ಷಣ, ಜಲಸಂರಕ್ಷಯಂಥ ಹಲವು ವಿಷಯಗಳಲ್ಲಿ ಪರಿಣಿತರಾಗಿ ಗುರುತಿಸಲ್ಪಟ್ಟವರು.

ಕೇಂದ್ರ ಸರಕಾರ ಕಿರುಕುಳಗಳ ಮೂಲಕ ಹಲವು ಆಪ್ ನಾಯಕರನ್ನು ಜೈಲುಪಾಲಾಗುವಂತೆ ಮಾಡಿದೆಯಾದರೂ, ಇದು ಆಪ್ ಪಕ್ಷವನ್ನು ಆಂತರ್ಯದಲ್ಲಿ ಇನ್ನಷ್ಟು ಗಟ್ಟಿಗೊಳಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೇಜ್ರಿವಾಲ್ ಕೇಂದ್ರಿತವಾಗಿದ್ದ ಆಪ್‌ನಲ್ಲಿ ಹೊಸ ಹೊಸ ನಾಯಕರು ಹುಟ್ಟಲು ಪರೋಕ್ಷವಾಗಿ ಕೇಂದ್ರ ಸರಕಾರವೂ ಕಾರಣವಾಗಿದೆ. ಇಲ್ಲವಾದರೆ ಕೇಜ್ರಿವಾಲ್ ಮತ್ತು ಸಿಸೋಡಿಯಾ ನಿಯಂತ್ರಣದಲ್ಲಿ ಉಳಿದ ಮುತ್ಸದ್ದಿ ನಾಯಕರು ಅವಕಾಶ ವಂಚಿತರಾಗುತ್ತಿದ್ದರು. ಆತಿಶಿಯಂತಹ ಮುತ್ಸದ್ದಿ ಮಹಿಳೆ ಮುಖ್ಯಮಂತ್ರಿಯಂತಹ ಸ್ಥಾನವನ್ನು ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಮುಂದಿನ ಚುನಾವಣೆಯ ಸಂದರ್ಭದಲ್ಲಿ ಇದು ಆಪ್‌ಗೆ ಪೂರಕವಾಗುವ ಸಾಧ್ಯತೆಗಳಿವೆ. ಇದೇ ಸಂದರ್ಭದಲ್ಲಿ, ಕೇಜ್ರಿವಾಲ್ ಅಧಿಕಾರ ತ್ಯಜಿಸುವ ಮೂಲಕ ದಿಲ್ಲಿಯ ಜನರ ಅನುಕಂಪವನ್ನು ತನ್ನದಾಗಿಸಿಕೊಂಡಿದ್ದಾರೆ. ಅದನ್ನೇ ಅವರು ಮುಂದಿನ ಚುನಾವಣೆಗೆ ಬಂಡವಾಳವಾಗಿಸಿಕೊಳ್ಳಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯ ಗೆಲುವು ಅವರ ರಾಜಕೀಯ ಬದುಕಿನ ಅಳಿವು ಉಳಿವಿನ ಪ್ರಶ್ನೆಯಾಗಲಿದೆ. ಸರ್ವ ಬಲವನ್ನು ಬಳಸಿಕೊಂಡು ಅವರು ಈ ಚುನಾವಣೆಯನ್ನು ಗೆಲ್ಲಲೇಬೇಕಾಗಿದೆ. ಆದಕ್ಕಾಗಿ ಅವರು ಈ ಹೊತ್ತಿಗೆ ಎರಡು ಹೆಜ್ಜೆಗಳನ್ನು ಹಿಂದಿಡುವುದು ಅನಿವಾರ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News