ಲಡಾಖ್‌ನ್ನು ಕಾಡುತ್ತಿರುವ ʼತ್ರೀ ಈಡಿಯಟ್ಸ್’

Update: 2024-09-11 06:08 GMT

  ಸೋನಮ್ ವಾಂಗ್ಚುಕ್ PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹೆಪ್ಪು ಗಟ್ಟಿರುವ ಲಡಾಖ್‌ನ ಆಕ್ರೋಶ ಇದೀಗ ದಿಲ್ಲಿಯ ಕಡೆಗೆ ಹರಿದು ಬರುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ಘೋಷಣೆಯಾದ ಬೆನ್ನಿಗೆ ಇತ್ತ ಲಡಾಖ್‌ನಲ್ಲಿ ಖ್ಯಾತ ಪರಿಸರವಾದಿ, ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಲಡಾಖ್ ಜನರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದಿಲ್ಲಿಯ ಕಡೆಗೆ ಪಾದಯಾತ್ರೆ ನಡೆಸಿದ್ದಾರೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಲಡಾಖ್‌ನ ವಿವಿಧ ಬೇಡಿಕೆಗಳಿಗಾಗಿ ಮೈನಸ್ 10 ಡಿಗ್ರಿವಾತಾವರಣದಲ್ಲಿ ಸುಮಾರು 21 ದಿನಗಳ ಉಪವಾಸ ಸತ್ಯಾಗ್ರಹವನ್ನು ಮಾಡಿ ಸೋನಂ ವಾಂಗ್ಚುಕ್ ದೇಶದ

ಗಮನವನ್ನು ಸೆಳೆದಿದ್ದರು. ಸಾವಿರಾರು ಲಡಾಖ್ ನಿವಾಸಿಗಳು ಈ ಸಂದರ್ಭದಲ್ಲಿ ಅವರಿಗೆ ಜೊತೆಯಾಗಿದ್ದರು. ಜಮ್ಮು-ಕಾಶ್ಮೀರವೂ ಸೇರಿದಂತೆ ಲಡಾಖ್‌ನ್ನು ಭಾರತಕ್ಕೆ ಸೇರಿಸಿದ್ದೇವೆ ಎಂದು ಪುಂಗಿ ಬಿಟ್ಟಿದ್ದ ಒಬ್ಬನೇ ಒಬ್ಬ ಬಿಜೆಪಿ ನಾಯಕರು ಲಡಾಖ್‌ನ ಜನರ ಉಪವಾಸ ಸತ್ಯಾಗ್ರಹಕ್ಕೆ ಸ್ಪಂದಿಸಿರಲಿಲ್ಲ. ಲಡಾಕ್‌ನ ಸೂಕ್ಷ್ಮ ಪರಿಸರದ ಯೋಗಕ್ಷೇಮಗಳ ಬಗ್ಗೆ ಭರವಸೆ ನೀಡಲಿಲ್ಲ. ಉಪವಾಸ ಸತ್ಯಾಗ್ರಹವನ್ನು ಅಂದು ತಾತ್ಕಾಲಿಕವಾಗಿ ಅಂತ್ಯಗೊಳಿಸಿದ್ದ ಸೋನಂ ವಾಂಗ್ಚುಕ್, ಸರಕಾರ ಬೇಡಿಕೆಗೆ ಸ್ಪಂದಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಆಮರಣ ಸತ್ಯಾಗ್ರಹ ಮಾಡಲಿದ್ದೇನೆ ಎಂದೂ ಎಚ್ಚರಿಸಿದ್ದರು. ಇದೀಗ ಲಡಾಖ್ ಜನರ ಆತಂಕಗಳನ್ನು ಭಾರತಕ್ಕೆ ತಲುಪಿಸುವುದಕ್ಕಾಗಿ ಸೆಪ್ಟಂಬರ್ 1ರಿಂದ ಲೇಹ್‌ನಿಂದ ದಿಲ್ಲಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಅಕ್ಟೋಬರ್ 2 ಗಾಂಧಿ ಜಯಂತಿಯ ದಿನ ಅವರು ದಿಲ್ಲಿಯಲ್ಲಿ ಸಮಾವೇಶ ನಡೆಸಲಿದ್ದಾರೆ.

ಸೋನಂ ವಾಂಗ್ಚುಕ್ ಎಂದಾಗ ನೆನಪಾಗುವುದು ‘ತ್ರೀ ಈಡಿಯಟ್ಸ್’. ಸೋನಂ ವಾಂಗ್ಚುಕ್ ಬದುಕನ್ನು ಆಧರಿಸಿ ಆಮಿರ್ ಖಾನ್ ‘ತ್ರೀ ಈಡಿಯಟ್ಸ್’ ಸಿನೆಮಾ ಮಾಡಿದ್ದರು. ಅವರ ಬದುಕನ್ನು ಆಮಿರ್ ಖಾನ್ ಅಭಿನಯಿಸಿ ದೇಶದಲ್ಲಿ ಅಪಾರ ಜನಮನ್ನಣೆಗಳಿಸಿದರು. ಇದೀಗ ಲಡಾಖ್‌ನ್ನು ಕಾಡುತ್ತಿರುವ ರಾಜಕಾರಣಿಗಳು, ಗಣಿ ಉದ್ಯಮಿಗಳು, ಸೇನೆಗಳೆನ್ನುವ ಈಡಿಯಟ್ಸ್ ವಿರುದ್ಧ ಸ್ವತಃ ವಾಂಗ್ಚುಕ್ ಹೋರಾಡಬೇಕಾಗಿ ಬಂದಿದೆ. ಮೂಲತಃ ಇಂಜಿನಿಯರ್ ಆಗಿರುವ ಸೋನಂ ವಾಂಗ್ಚುಕ್ ತಮ್ಮ ಉದ್ಯಮ, ಸಂಶೋಧನೆ, ಲಡಾಖ್‌ನ ಪರಿಸರ ಮತ್ತು ಬುಡಕಟ್ಟು ಜನರ ಕುರಿತಂತೆ ವಹಿಸಿರುವ ಕಾಳಜಿಗಾಗಿ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದವರು. ತಂತ್ರಜ್ಞಾನ, ಉದ್ಯಮ, ಶಿಕ್ಷಣ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ವಿಸ್ತರಿಸಿದವರು. ಲಡಾಖ್‌ನ ಆತ್ಮಸಾಕ್ಷಿಯಂತೆ ಬದುಕುತ್ತಿರುವವರು. ಲಡಾಖ್‌ನ ಹೃದಯ ಬಡಿತವನ್ನು ಅರಿತವರು. ಜಮ್ಮು-ಕಾಶ್ಮೀರದ ಮೇಲಿನ 370ನೇ ವಿಧಿಯನ್ನು ರದ್ದುಗೊಳಿಸಿ ಅದರ ವಿಶೇಷ ಸ್ಥಾನಮಾನವನ್ನು ಹಿಂದೆಗೆದಾಗ ಇವರು ಆ ನಿರ್ಧಾರವನ್ನು ಬೆಂಬಲಿಸಿದ್ದರು. ಮೋದಿ ಸರಕಾರ ಚೀನಾದ ವಸ್ತುಗಳಿಗೆ ಬಹಿಷ್ಕಾರದ ಕರೆಯನ್ನು ನೀಡಿದಾಗ ವಾಂಗ್ಚುಕ್ ಆ ಚಳವಳಿಯ ಜೊತೆಗೆ ನಿಂತರು ಮಾತ್ರವಲ್ಲ, ಚೀನಾದ ವಸ್ತುವನ್ನು ಬಹಿಷ್ಕರಿಸುವ

ಆಂದೋಲನದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಜಮ್ಮು-ಕಾಶ್ಮೀರದಿಂದ ಲಡಾಖ್‌ನ್ನು ಬೇರ್ಪಡಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿಸಿದಾಗ ಮುಂದೆ ಲಡಾಖ್‌ಗೆ ಒಳಿತಿನ ದಿನಗಳು ಬರಲಿವೆ ಎಂದು ನಂಬಿದವರಲ್ಲಿ ಈ ಸೋನಂ ವಾಂಗ್ಚುಕ್ ಕೂಡ ಒಬ್ಬರು. ಯಾಕೆಂದರೆ ಜಮ್ಮು-ಕಾಶ್ಮೀರದ ಭಾಗವಾಗಿದ್ದಾಗ ಲಡಾಖ್‌ನ ಜನರಿಗೆ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಭಾವನೆಯಿತ್ತು. ಕಾಶ್ಮೀರದಿಂದ ಬೇರ್ಪಟ್ಟಾಗ ಸಹಜವಾಗಿಯೇ ಇನ್ನು ನಮ್ಮ ಅಭಿವೃದ್ಧಿಯನ್ನು ನಾವೇ ನಿರ್ಧರಿಸಬಹುದು ಎಂದು ಭಾವಿಸಿದ್ದರು. ದಿಲ್ಲಿ ಸರಕಾರ ತನ್ನ ಅಗತ್ಯ ಸಂದರ್ಭದಲ್ಲಿ ಈ

ಸೋನಂ ವಾಂಗ್ಚುಕ್ ಅವರನ್ನು ಸರ್ವ ರೀತಿಯಲ್ಲಿ ಬಳಸಿಕೊಂಡಿತ್ತು. ಆದರೆ ಈಗ ಸೋನಂ ವಾಂಗ್ಚುಕ್ ದಿಲ್ಲಿಗೆ ಬೇಕಾಗಿಲ್ಲ. ಬದಲಿಗೆ ಲಡಾಖ್‌ನ ಬೆನ್ನಿಗೆ ಕೇಂದ್ರ ಸರಕಾರ ಚೂರಿ ಹಾಕಲು ಹೊರಟಿದೆ. ಇದರ ವಿರುದ್ಧ ವಾಂಗ್ಚುಕ್ ಅಹಿಂಸಾ ಹೋರಾಟವನ್ನು ನಡೆಸುತ್ತಿದ್ದಾರೆ. ಆದರೆ ಈ ಹೋರಾಟದ ಕಡೆಗೆ ಕಣ್ಣೆತ್ತಿಯೂ ಸರಕಾರ ನೋಡುತ್ತಿಲ್ಲ. ವಾಂಗ್ಚುಕ್ ಹಲವು ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರಾದರೂ, ಪ್ರಧಾನಿ ಮೋದಿಯವರು ಜಾಣ ಕಿವುಡು ನಟಿಸುತ್ತಿದ್ದಾರೆ.

ಜಮ್ಮುಕಾಶ್ಮೀರದಿಂದ ಬೇರ್ಪಡಿಸಿದ್ದು ಲಡಾಖ್‌ನ್ನು ಉಳಿಸುವುದಕ್ಕಾಗಿಯಲ್ಲ, ಕಾರ್ಪೊರೇಟ್ ಧನಿಗಳಿಗೆ ಬಲಿಕೊಡುವುದಕ್ಕೆ ಎನ್ನುವುದು ತಿಳಿಯುವಷ್ಟರಲ್ಲಿ ತಡವಾಗಿತ್ತು. ಪ್ರಾಕೃತಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಲಡಾಖ್‌ನಲ್ಲಿ ಕೈಗಾರಿಕೋದ್ಯಮಿಗಳ ಸಣ್ಣ ಹಸ್ತಕ್ಷೇಪವೂ ಭಾರೀ ದುಷ್ಪರಿಣಾಮಗಳನ್ನು ಬೀರಬಹುದು. ಇದನ್ನು ಲಡಾಖ್ ಜನರು ಈಗಾಗಲೇ ಅನುಭವಿಸುತ್ತಿದ್ದಾರೆ. ತುಸು ಏರುಪೇರಾದರೆ ಹಿಮಾಲಯ ಕರಗತೊಡಗುತ್ತದೆ. ನೆರೆ ಅವರ ಬದುಕನ್ನು ಕೊಚ್ಚಿಕೊಂಡು ಹೋಗುತ್ತದೆ. ಇರುವ ಸೀಮಿತ ಕುಡಿಯುವ ನೀರನ್ನು ಪ್ರವಾಸೋದ್ಯಮ, ಕೈಗಾರಿಕೆ ಎಂದು ಉದ್ಯಮಿಗಳು ಕಸಿದುಕೊಳ್ಳತೊಡಗಿದ್ದಾರೆ. ಪ್ರವಾಸೋದ್ಯಮದ ಹೆಸರಿನಲ್ಲಿ ಲಡಾಖ್‌ನ ಪರಿಸರದ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ವಿಪರ್ಯಾಸವೆಂದರೆ ಕೇಂದ್ರಾಡಳಿತ ಪ್ರದೇಶವಾದ ದಿನದಿಂದ ಇಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಶೇ. 25ಕ್ಕಿಂತಲೂ ಅಧಿಕ ನಿರುದ್ಯೋಗಿಗಳು ಇಲ್ಲಿದ್ದಾರೆ. ಗಣಿ ಕಂಪೆನಿಗಳು ಗಣಿಗಾರಿಕೆಗಳಿಗೆ ಭೂಮಿಯನ್ನು ಖರೀದಿಸುತ್ತಿರುವುದು ಕೂಡ ಇಲ್ಲಿಯ ಜನರನ್ನು ಆತಂಕಕ್ಕೆ ತಳ್ಳಿದೆ. ಈ ಕಾರಣದಿಂದ ಅಸ್ಸಾಂ, ಮೇಘಾಲಯ, ತ್ರಿಪುರಾ, ಮಿಜೋರಾಂನಂತಹ ಈಶಾನ್ಯ ರಾಜ್ಯಗಳಲ್ಲಿ ಜಾರಿಯಲ್ಲಿರುವ ಆರ್ಟಿಕಲ್ 244(2)ನ್ನು ಲಡಾಖ್‌ಗೂ ಅನ್ವಯಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ. ಈಶಾನ್ಯ ಭಾರತದಲ್ಲಿರುವಂತೆಯೇ ಲಡಾಖ್‌ನಲ್ಲೂ ಬುಡಕಟ್ಟು ಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಆರನೇ ಶೆಡ್ಯೂಲ್‌ನ್ನು ಜಾರಿಗೊಳಿಸಿದರೆ, ಇಲ್ಲಿನ ಭೂಪ್ರದೇಶಗಳನ್ನು ಹೊರಗಿನ ಜನರು ಕೊಂಡುಕೊಳ್ಳುವುದು ಕಷ್ಟವಾಗುವುದರಿಂದ, ಗಣಿಗಾರಿಕೆಗಳಂತಹ ಪರಿಸರ ವಿರೋಧಿ ಉದ್ಯಮಗಳು ಕಾಲಿಡುವುದನ್ನು ತಡೆಯಬಹುದು. ಇದು ಸೋನಮ್ ವಾಂಗ್ಚುಕ್ ಸೇರಿದಂತೆ ಲಡಾಖ್ ಜನರ ಕಳಕಳಿಯಾಗಿದೆ. ಆದರೆ ಈ ಜನರ ಬೇಡಿಕೆಯನ್ನು ಈಡೇರಿಸಿದ್ದೇ ಆದರೆ ಕಾರ್ಪೊರೇಟ್ ಕುಳಗಳಿಗೆ ತೊಂದರೆ ಯಾಗುತ್ತದೆ.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತು ಅದನ್ನು ಪೂರ್ಣ ಪ್ರಮಾಣದಲ್ಲಿ ಭಾರತಕ್ಕೆ ಸೇರಿಸಿದ್ದೇನೆ ಎನ್ನುವ ಪ್ರಧಾನಿಯ ಮಾತು ನಿಜವೇ ಆಗಿದ್ದರೆ ಲಡಾಖ್ ಜನರ ಬೇಡಿಕೆಗಳಿಗೆ ಭಾರತ ಯಾಕೆ ಸ್ಪಂದಿಸುತ್ತಿಲ್ಲ? ತಮ್ಮ ನೆಲದ ಯೋಗಕ್ಷೇಮವನ್ನು ನಮಗೇ ಬಿಟ್ಟು ಬಿಡಿ ಎಂದು ಅಲ್ಲಿನ ಜನರು ಕೇಳುತ್ತಿದ್ದಾರೆ. ತಮ್ಮ ಭೂಮಿ, ಪರಿಸರ, ಸಾಂಸ್ಕೃತಿಕ ಗುರುತನ್ನು ರಕ್ಷಿಸಿಕೊಳ್ಳುವ ಅಧಿಕಾರವನ್ನು ಲಡಾಖ್ ಜನರಿಗೇ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಲಡಾಖ್‌ನ ಸೂಕ್ಷ್ಮ ಪರಿಸರಕ್ಕೆ ಧಕ್ಕೆ ತರುವ ಕಾಮಗಾರಿಗಳನ್ನು ನಿಲ್ಲಿಸಲು ಒತ್ತಾಯಿಸುತ್ತಿದ್ದಾರೆ. ಶೇ.90ರಷ್ಟು ಬುಡಕಟ್ಟು ಜನರಿದ್ದರೂ, ಲಡಾಖ್‌ನ್ನು ಆರನೇ ಪರಿಚ್ಛೇದಕ್ಕೆ ಅನ್ವಯಿಸಲು ಕೇಂದ್ರ ಸರಕಾರಕ್ಕೆ ಇರುವ ಅಡ್ಡಿಯಾದರೂ ಏನು? ಒಂದೆಡೆ ಜಮ್ಮು-ಕಾಶ್ಮೀರದ ಮಾತುಗಳನ್ನು ಸೇನಾಬಲದಿಂದ ದಮನಿಸುತ್ತಿದೆ. ಸರಕಾರದ ಮೇಲಿನ ಆಕ್ರೋಶ ಹಿಂಸಾಚಾರ ರೂಪವನ್ನು ತಾಳಿದೆ. ಲಡಾಖ್‌ನಲ್ಲಿ ನಡೆಯುತ್ತಿರುವುದು ಗಾಂಧಿಯ ಅಹಿಂಸಾ ಸತ್ಯಾಗ್ರಹ. ಆದರೆ ಸರಕಾರ ಈ ಸತ್ಯಾಗ್ರಹವನ್ನು ಸಂಪೂರ್ಣ ನಿರ್ಲಕ್ಷಿಸಿ, ಲಡಾಖ್‌ನ ಜನರನ್ನು ಪರೋಕ್ಷವಾಗಿ ಹಿಂಸೆಯ ಕಡೆಗೆ ಪ್ರಚೋದಿಸುತ್ತಿದೆ. ಸೇನೆ, ರಾಜಕೀಯ, ಕಾರ್ಪೊರೇಟ್ ಈ ಮೂರು ಈಡಿಯಟ್ಸ್‌ಗಳಿಂದ ಲಡಾಖ್‌ನ್ನು ಸೋನಂ ವಾಂಗ್ಚುಕ್ ಅವರು ಕಾಪಾಡಿಕೊಳ್ಳುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ. ಲಡಾಖ್‌ನ ಹೆಪ್ಪುಗಟ್ಟಿದ ಆಕ್ರೋಶದ ಹಿಮ ಕರಗಿ ಬೃಹತ್ ಪ್ರವಾಹವಾಗುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಲಡಾಕ್ ವಿಷಯದಲ್ಲಿ ನೀಡಿದ ವಚನಗಳನ್ನು ಕೇಂದ್ರ ಸರಕಾರ ಈಡೇರಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News