ಭಾರತದ ಹಿರಿಮೆಯ ಮೇಲೆ ನಡೆಯುತ್ತಿರುವ ದ್ವೇಷದ ದಾಳಿ

Update: 2024-06-29 05:35 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತ ಸರ್ವ ಧರ್ಮಗಳ ನೆಲೆವೀಡು ಎನ್ನುವುದನ್ನು ನಾವು ವಿಶ್ವದ ಮುಂದೆ ಹೆಗ್ಗಳಿಕೆಯಾಗಿ ಹೇಳಿಕೊಂಡು ಬರುತ್ತಿದ್ದೇವೆ. ಜಗತ್ತಿನ ಎಲ್ಲ ಧರ್ಮಗಳಿಗೂ ತೊಟ್ಟಿಲು ತೂಗಿದ ತಾಯಿ ಭಾರತ ಎನ್ನುವ ಕಾರಣಕ್ಕಾಗಿಯೇ ಭಾರತವನ್ನು ವಿಶ್ವ ಅಭಿಮಾನದಿಂದ, ಗೌರವದಿಂದ ನೋಡುತ್ತಾ ಬರುತ್ತಿದೆ. ಭಾರತದ ವೈವಿಧ್ಯ ಸಂಸ್ಕೃತಿ, ಆ ವಿವಿಧತೆಯ ಮೂಲಕವೇ ಕಂಡು ಕೊಂಡ ಏಕತೆ ಈ ದೇಶದ ಪ್ರಜಾಸತ್ತೆಯ ಬಹುದೊಡ್ಡ ಹಿರಿಮೆಯಾಗಿದೆ. ವಿದೇಶ ಪ್ರವಾಸದ ಸಂದರ್ಭದಲ್ಲಿ ನಮ್ಮ ರಾಜಕೀಯ ನಾಯಕರು ಇದನ್ನು ಪದೇ ಪದೇ ಭಾಷಣಗಳಲ್ಲಿ ಉಲ್ಲೇಖಿಸುತ್ತಾ ಬಂದಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ಪ್ರವಾಸದ ಸಂದರ್ಭದಲ್ಲಿ ಭಾಷಣ ಮಾಡುತ್ತಾ ಭಾರತದ ಪ್ರಜಾಸತ್ತೆಯ ಹಿರಿಮೆ ಅದರ ವೈವಿಧ್ಯತೆಗಳಲ್ಲಿದೆ ಎಂದು ಹಲವು ಬಾರಿ ಹೇಳಿದ್ದಾರೆ. ವಿಪರ್ಯಾಸವೆಂದರೆ, ಒಂದೆಡೆ ಈ ಹಿರಿಮೆಯನ್ನು ಕೊಂಡಾಡುತ್ತಲೇ, ಇನ್ನೊಂದೆಡೆ ಈ ವಿವಿಧತೆಗಳನ್ನು ನಾಶ ಮಾಡಲು ಅದೇ ನಾಯಕರು ಮುಂಚೂಣಿಯಲ್ಲಿ ನಿಂತಿರುತ್ತಾರೆ.

ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಮರನ್ನು ಅನ್ಯಗ್ರಹದ ಜೀವಿಗಳೋ ಎಂಬಂತೆ ಬಿಂಬಿಸಿ ಪ್ರಧಾನಿ ಮೋದಿಯವರು ಪ್ರಚಾರ ಭಾಷಣ ನಡೆಸಿದರು. ಇಸ್ಲಾಂ ಧರ್ಮ ಈ ದೇಶದ ವೈವಿಧ್ಯಗಳಲ್ಲಿ ಒಂದು. ಅದು ಈ ದೇಶದ ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಬದುಕಿಗೆ ಬಹುಕೊಡುಗೆಗಳನ್ನು ನೀಡಿದೆ. ಇತಿಹಾಸ, ವರ್ತಮಾನಗಳಲ್ಲಿ ಆ ಧರ್ಮದ ಮಹತ್ತರ ಪಾತ್ರವನ್ನು ನಿರಾಕರಿಸಿ ಭಾರತವನ್ನು ವ್ಯಾಖ್ಯಾನಿಸುವುದು ಸಾಧ್ಯವಿಲ್ಲ. ಮುಸ್ಲಿಮ್ ಸಮುದಾಯದ ಅಭಿವೃದ್ಧ್ದಿಯೂ ಭಾರತದ ಅಭಿವೃದ್ಧಿಯ ಭಾಗವೇ ಆಗಿದೆ. ಇಷ್ಟಾದರೂ, ಪ್ರಧಾನಿ ಮೋದಿಯವರು ಮುಸ್ಲಿಮರನ್ನು ಭಾರತದಿಂದ ಹೊರಗಿಟ್ಟು ತನ್ನ ಚುನಾವಣಾ ಭಾಷಣವನ್ನು ನಡೆಸಿದರು. ಮುಸ್ಲಿಮ್ ದ್ವೇಷವನ್ನು ಬಿತ್ತುವ ಮೂಲಕ ಚುನಾವಣೆಯನ್ನು ಗೆಲ್ಲುವ ಪ್ರಯತ್ನವನ್ನು ಅವರು ನಡೆಸಿದರು. ಭಾರತದ ವೈವಿಧ್ಯಗಳನ್ನೇ ಸಮಸ್ಯೆಗಳೆಂಬಂತೆ ಬಿಂಬಿಸಿ, ಇವನ್ನೆಲ್ಲ ನಾಶಗೊಳಿಸಿ ಅವುಗಳ ಮೇಲೆ ಹಿಂದೂ ರಾಷ್ಟ್ರವನ್ನು ಹೇರುವ ಭರವಸೆಯನ್ನು ಅವರು ಚುನಾವಣೆಯಲ್ಲಿ ಪರೋಕ್ಷವಾಗಿ ನೀಡಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತವನ್ನು ಪಡೆಯಲು ವಿಫಲವಾಯಿತಾದರೂ, ಎನ್‌ಡಿಎ ಮೂಲಕ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆಯ ಬಳಿಕ ದೇಶದ ಮುಸ್ಲಿಮರ ಕುರಿತಂತೆ ಅವರ ನಿಲುವೇನು ಎನ್ನುವುದು ಇನ್ನಷ್ಟೇ ಹೊರ ಬರಬೇಕು.

ಇದೀಗ ಭಾರತದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ದ್ವೇಷಗಳ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆಯ ಧಾರ್ಮಿಕ ಸ್ವಾತಂತ್ರ್ಯ-2023 ವರದಿ ವಿಶ್ವದ ಗಮನವನ್ನು ಸೆಳೆದಿದೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಬುಧವಾರ 200 ದೇಶಗಳಿಗೆ ಸಂಬಂಧಿಸಿದ ರಕ್ಷಣಾ ಇಲಾಖೆಯ ಧಾರ್ಮಿಕ ಸ್ವಾತಂತ್ರ್ಯ ವರದಿ-2023ನ್ನು ಬಿಡುಗಡೆ ಮಾಡಿದ್ದಾರೆ. ಈ ವರದಿಯಲ್ಲಿ, ಭಾರತದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣಗಳು, ಜಾರಿಯಾಗುತ್ತಿರುವ ಮತಾಂತರ ವಿರೋಧಿ ಕಾನೂನುಗಳು, ಆ ಕಾನೂನುಗಳ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಮನಗಳು, ಧಾರ್ಮಿಕ ಅಲ್ಪಸಂಖ್ಯಾತರ ಮನೆ, ಪ್ರಾರ್ಥನಾ ಮಂದಿರಗಳ ಧ್ವಂಸಗಳಲ್ಲಿ ಆಗುತ್ತಿರುವ ಹೆಚ್ಚಳ ಇತ್ಯಾದಿಗಳ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಲಾಗಿದೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಮನಗಳ ಬಗ್ಗೆ ಈ ಹಿಂದಿನ ವರದಿಗಳಲ್ಲೂ ಅಮೆರಿಕ ಗಮನ ಸೆಳೆದಿತ್ತು. ಈ ವರದಿ ಹೊರ ಬಿದ್ದಾಗಲೆಲ್ಲ, ಅದನ್ನು ಭಾರತ ನಿರಾಕರಿಸುತ್ತಾ ಬಂದಿದೆ. ವಿಪರ್ಯಾಸವೆಂದರೆ, ಈ ಬಾರಿಯೂ ಅಮೆರಿಕದ ವರದಿಯನ್ನು ಭಾರತ ನಿರಾಕರಿಸಿದೆ ಮಾತ್ರವಲ್ಲ, ಅದರ ವಿರುದ್ಧ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ.

‘‘ಅಮೆರಿಕದ ವರದಿಯು ಪಕ್ಷಪಾತದಿಂದ ಕೂಡಿದೆ ಮತ್ತು ಮತಬ್ಯಾಂಕ್ ರಾಜಕೀಯದಿಂದ ಪ್ರೇರಿತವಾಗಿರುವಂತೆ ಕಂಡು ಬರುತ್ತಿದೆ’’ ಎಂದು ಭಾರತ ಪ್ರತಿಕ್ರಿಯಿಸಿದೆ. ‘‘ಭಾರತದ ವಿರುದ್ಧದ ಪೂರ್ವಾಗ್ರಹ ಪೀಡಿತ ಮನೋಭಾವವನ್ನು ಇದು ಎತ್ತಿ ತೋರಿಸಿದೆ. ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಅರ್ಥೈಸಲು ವರದಿ ವಿಫಲವಾಗಿದೆ’’ ಎಂದೂ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿಂದೆ ಭಾರತದಲ್ಲಿ ಹೆಚ್ಚುತ್ತಿರುವ ಹಸಿವಿನ ಸೂಚ್ಯಂಕದ ಬಗ್ಗೆಯೂ ಭಾರತ ಇದೇ ರೀತಿಯಲ್ಲಿ ಪ್ರತಿಕ್ರಿಯಿಸಿತ್ತು. ಸೂಚ್ಯಂಕದಲ್ಲಿ ಭಾರತ ಮಾಡಿರುವ ಕಳಪೆ ಸಾಧನೆಗಳನ್ನು ನಿರಾಕರಿಸುತ್ತಾ, ಅನುಸರಿಸಿದ ಮಾನದಂಡವೇ ಸರಿಯಿಲ್ಲ ಎಂದು ತನ್ನನ್ನು ತಾನು ಸಮರ್ಥಿಸಿಕೊಂಡಿತ್ತು. ವಿಶ್ವದಲ್ಲೇ ಭಾರತದ ಪ್ರಜಾಸತ್ತೆ ಕಳಪೆಯಾಗಿದೆ ಎಂಬ ವರದಿಯನ್ನೂ ಭಾರತ ಇದೇ ರೀತಿಯಲ್ಲಿ ಅಲ್ಲಗಳೆದಿತ್ತು. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಗಳಿಗೆ ಧಕ್ಕೆಯುಂಟಾಗುತ್ತಿರುವುದನ್ನು ಗುರುತಿಸುವುದಕ್ಕೆ ವಿಶೇಷ ಅಧ್ಯಯನದ ಅಗತ್ಯವೇನೂ ಇಲ್ಲ. ಕಾಶ್ಮೀರದ ಮೇಲೆ ನಡೆಯುತ್ತಿರುವ ದಮನಕ್ಕೆ ಅಲ್ಲಿನ ಜನರು ಅನುಸರಿಸುತ್ತಿರುವ ಧರ್ಮವೂ ಕಾರಣವಾಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಭಾರತಕ್ಕೆ ಕಾಶ್ಮೀರದ ಭೂಮಿಯ ಮೇಲೆ ಮಾತ್ರ ಆಸಕ್ತಿಯಿದೆ. ಇದೇ ಸಂದರ್ಭದಲ್ಲಿ ಅಲ್ಲಿಯ ಜನ, ಸಂಸ್ಕೃತಿಯ ಮೇಲೆ ಅಸಹನೆಯಿದೆ. ಹೊತ್ತಿ ಉರಿಯುತ್ತಿರುವ ಮಣಿಪುರವನ್ನು ಶಾಂತಗೊಳಿಸುವಲ್ಲಿ ಸರಕಾರ ಇನ್ನೂ ಯಶಸ್ವಿಯಾಗಿಲ್ಲ. ಸ್ವತಃ ಆರೆಸ್ಸೆಸ್ ಕೂಡ ಇದರ ಬಗ್ಗೆ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿತ್ತು. ಬಿಜೆಪಿ ಆರೆಸ್ಸೆಸ್‌ನ ರಾಜಕೀಯ ಮುಖವಾಗಿದೆ. ಅಮೆರಿಕದ ವರದಿಯನ್ನು ಮೋದಿ ನೇತೃತ್ವದ ಸರಕಾರ ನಿರಾಕರಿಸಬಹುದು. ಆದರೆ ಆರೆಸ್ಸೆಸ್ ವ್ಯಕ್ತಪಡಿಸಿದ ಆತಂಕದ ಬಗ್ಗೆ ಅದು ಏನು ಹೇಳುತ್ತದೆ? ಮಣಿಪುರದಲ್ಲಿ ಕುಕಿ ಬುಡಕಟ್ಟು ಜನರು ಅನುಸರಿಸುತ್ತಿರುವ ಧರ್ಮವೇ ಅವರ ಮೇಲೆ ಭೀಕರ ದೌರ್ಜನ್ಯಗಳು ನಡೆಯುವುದಕ್ಕೆ ಪ್ರಮುಖ ಕಾರಣವಾಗಿದೆ. ಮಣಿಪುರದ ಹಿಂಸಾಚಾರದಲ್ಲಿ ನೂರಾರು ಚರ್ಚುಗಳನ್ನು ಧ್ವಂಸಗೊಳಿಸಲಾಗಿದೆ. ಬಹುಸಂಖ್ಯಾತ ಮೈತೈ ಸಮುದಾಯವನ್ನು ಈ ಕುಕಿ ಸಮುದಾಯದ ಮೇಲೆ ಎತ್ತಿ ಕಟ್ಟಲಾಗಿದೆ ಮಾತ್ರವಲ್ಲ, ಈ ಹಿಂಸಾಚಾರಕ್ಕೆ ಹಿಂದೂ-ಕ್ರಿಶ್ಚಿಯನ್ ಬಣ್ಣ ಕೊಡುವ ನೇತೃತ್ವವನ್ನು ಅಲ್ಲಿನ ಸರಕಾರವೇ ವಹಿಸಿಕೊಂಡಿದೆ.

ಪ್ರಧಾನಿ ಮೋದಿಯವರು ಮೂರನೇ ಬಾರಿ ಅಧಿಕಾರಕ್ಕೇರಿ ಒಂದು ತಿಂಗಳೂ ಆಗಿಲ್ಲ, ಅಷ್ಟರಲ್ಲೇ ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಮುಸ್ಲಿಮರು ಎನ್ನುವ ಕಾರಣಕ್ಕಾಗಿಯೇ ಗುಂಪುಗಳು ಹಲ್ಲೆ ನಡೆಸಿ ನಾಲ್ವರು ಅಮಾಯಕರನ್ನು ಕೊಂದು ಹಾಕಿವೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಗೋಮಾಂಸವಿದೆ ಎನ್ನುವ ಆರೋಪದಲ್ಲಿ ಹಲವು ಮನೆಗಳನ್ನು ಗುಂಪುಗಳು ಧ್ವಂಸಗೊಳಿಸಿದ್ದವು. ವಿಪರ್ಯಾಸವೆಂದರೆ ಒಂದೆಡೆ ದುಷ್ಕರ್ಮಿಗಳಿಂದ ಅಲ್ಪಸಂಖ್ಯಾತರು ಭೀಕರವಾಗಿ ಹಲ್ಲೆಗೊಳಗಾಗಿದ್ದರೆ, ಮಗದೊಂದೆಡೆ ಪೊಲೀಸರು ಸಂತ್ರಸ್ತರ ಮೇಲೆಯೇ ಕೇಸು ದಾಖಲಿಸಿದ್ದಾರೆ. ಹಲವರನ್ನು ಗೋಮಾಂಸದ ಹೆಸರಿನಲ್ಲಿ ಬಂಧಿಸಿದ್ದಾರೆ. ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇವೆಲ್ಲವೂ ನಡೆದಿರುವುದು ದೂರದ ಪಾಕಿಸ್ತಾನದಲ್ಲೋ, ಬಾಂಗ್ಲಾದಲ್ಲೋ ಅಲ್ಲ. ಭಾರತದಲ್ಲೇ ಆಗಿದೆ. ಇವೆಲ್ಲವನ್ನೂ ಭಾರತ ಸರಕಾರ ಹೇಗೆ ನಿರಾಕರಿಸುತ್ತದೆ? ಇವೆಲ್ಲವೂ ಭಾರತದ ಸಾಮಾಜಿಕ ವ್ಯವಸ್ಥೆಯ ಭಾಗವೆಂದು ಸಮರ್ಥಿಸಿಕೊಳ್ಳುತ್ತದೆಯೆ?

ಬಿಹಾರದಲ್ಲಿ ಒಂದೇ ವಾರದಲ್ಲಿ ನಾಲ್ಕು ಸೇತುವೆಗಳು ಕುಸಿತಕಂಡಿರುವುದು ಮಾಧ್ಯಮಗಳಲ್ಲಿ ಚರ್ಚೆಯಲ್ಲಿದೆ. ವಿಮಾನ ನಿಲ್ದಾಣಗಳ ಛಾವಣಿಗಳೂ ಒಂದೊಂದಾಗಿ ಕುಸಿಯುತ್ತಿವೆ. ಆದರೆ ಭಾರತೀಯ ಮನಸ್ಸುಗಳ ನಡುವೆ ಕಟ್ಟಿದ ಸೇತುವೆಗಳು ಒಂದೊಂದಾಗಿ ಕುಸಿದು ಬೀಳುತ್ತಿರುವ ಅಥವಾ ಅವುಗಳು ನಮ್ಮನ್ನಾಳುವವರ ನೇತೃತ್ವದಲ್ಲೇ ಧ್ವಂಸಗೊಳ್ಳುತ್ತಿರುವುದರ ಬಗ್ಗೆ ನಾವು ಮೊದಲು ಆತಂಕ ಪಡಬೇಕಾಗಿದೆ. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದಾಳಿಗಳು ಈ ಭಾರತವನ್ನು ಬೆಸೆದಿರುವ ವೈವಿಧ್ಯ ಸಂಸ್ಕೃತಿಯ ಮೇಲೆ ನಡೆಯುತ್ತಿರುವ ದಾಳಿಗಳಾಗಿವೆ. ಇದು ಪರೋಕ್ಷವಾಗಿ ಈ ದೇಶದ ಪ್ರಜಾಸತ್ತೆಯ ಮೇಲೆ ನಡೆಯುತ್ತಿರುವ ದಾಳಿಯೂ ಆಗಿದೆ. ಅಮೆರಿಕದ ವರದಿಯನ್ನು ನಿರಾಕರಿಸುವ ಮೂಲಕ ಭಾರತದಲ್ಲಿ ನಡೆಯುತ್ತಿರುವುದನ್ನು ಮುಚ್ಚಿಡುವುದು ಸಾಧ್ಯವಿಲ್ಲ ಎನ್ನುವುದು ಮೋದಿ ನೇತೃತ್ವದ ಸರಕಾರಕ್ಕೆ ಇನ್ನಾದರೂ ಅರ್ಥವಾಗಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News