ಹಸ್ತಕ್ಕೇ ಕುತ್ತಾಗಲಿರುವ ಆಪರೇಷನ್

Update: 2023-08-21 04:03 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View


ಬಹುಮತವನ್ನು ಪಡೆಯದ ಹಿನ್ನೆಲೆಯಲ್ಲಿ ಈ ಹಿಂದೆ ಬಿಜೆಪಿಯು ಆಪರೇಷನ್ ಕಮಲದ ಮೂಲಕ ಎರಡೆರಡು ಬಾರಿ ಸರಕಾರ ರಚಿಸಿತ್ತು. ಈ ಆಪರೇಷನ್ ನಡೆಸುವ ಸಂದರ್ಭದಲ್ಲಿ ನೂರಾರು ಕೋಟಿ ರೂ.ಗಳು ಕೈ ಬದಲಾದವು. ಹಣ, ಅಧಿಕಾರದ ಆಮಿಷ ನೀಡಿ ಶಾಸಕರನ್ನು ಕೊಂಡುಕೊಳ್ಳಲಾಯಿತು. ಬಳಿಕ ಉಪಚುನಾವಣೆಯ ಸಂದರ್ಭದಲ್ಲಿ ಅದೇ ಶಾಸಕರನ್ನು ಅಭ್ಯರ್ಥಿಗಳಾಗಿ ನಿಲ್ಲಿಸಿ ಹಣವನ್ನು ಚೆಲ್ಲಿ ಮತ್ತೆ ಗೆಲ್ಲಿಸಲಾಯಿತು. ಹೀಗೆ ಹಣದ ಮೂಲಕವೇ ಅಧಿಕಾರ ಹಿಡಿದ ಶಾಸಕರು ಸಚಿವರಾಗಿ ಜನರ ತೆರಿಗೆ ಹಣವನ್ನು ಕೊಳ್ಳೆ ಹೊಡೆಯುವುದನ್ನೇ ಗುರಿಯಾಗಿಸಿಕೊಂಡರು. ಶೇ. ೪೦ ಕಮಿಶನ್‌ಗಾಗಿ ಬಿಜೆಪಿ ಸರಕಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಆ ಆಪರೇಷನ್ ಕಮಲದಿಂದ ನಾಡಿಗೆ ಆದ ಅನ್ಯಾಯಗಳಿಂದ ರೊಚ್ಚಿಗೆದ್ದ ಜನ, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ತಿರುಗಿ ಬಿದ್ದರು. ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿಯಿತು. ಅತಂತ್ರ ಫಲಿತಾಂಶದಿಂದಾದ ಅನಾಹುತಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಕಾಂಗ್ರೆಸನ್ನು ಸುಮಾರು ೧೩೫ ಸ್ಥಾನಗಳಿಂದ ಜನರು ಅಧಿಕಾರಕ್ಕೇರಿಸಿದರು. ಫಲಿತಾಂಶ ಹೇಗೆಯೇ ಬರಲಿ, ಅದನ್ನು ‘ಆಪರೇಶನ್ ಕಮಲ’ದ ಮೂಲಕ ಬದಲಿಸುತ್ತೇವೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದ ನಾಯಕರು, ಕಾಂಗ್ರೆಸ್‌ನ ಭರ್ಜರಿ ಗೆಲುವಿಗೆ ತತ್ತರಿಸಿ ತೆಪ್ಪಗೆ ಮೂಲೆ ಸೇರಿದರು.

ಆಪರೇಷನ್ ಕಮಲದ ಸಂತ್ರಸ್ತರು ಅಂತಿಮವಾಗಿ ಜನಸಾಮಾನ್ಯರೇ ಆಗಿದ್ದರೂ, ಅದರ ತಕ್ಷಣದ ನೇರ ಸಂತ್ರಸ್ತ ಪಕ್ಷ ಕಾಂಗ್ರೆಸ್ ಆಗಿತ್ತು. ಕಾಂಗ್ರೆಸ್ ಸಾಕಿ ಬೆಳೆಸಿದ ಸಮಯ ಸಾಧಕ ನಾಯಕರು, ಮೃದು ಹಿಂದುತ್ವವಾದಿ ಶಾಸಕರು ಬಿಜೆಪಿಗೆ ಮಾರಾಟವಾಗಲು ತುದಿಗಾಲಲ್ಲಿ ನಿಂತಿದ್ದ ಕಾರಣದಿಂದ, ಆಪರೇಷನ್ ಕಮಲ ಸುಲಭಸಾಧ್ಯವಾಯಿತು. ಆಪರೇಷನ್ ಕಮಲದ ಮೂಲಕ ಬಿಜೆಪಿ ಸಂವಿಧಾನವನ್ನು ಬುಡಮೇಲು ಗೊಳಿಸಿದೆ ಎಂದು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎಲ್ಲಾ ಸಭೆಗಳಲ್ಲೂ ಗೋಳಾಡುತ್ತಿದ್ದರು. ವಿಪರ್ಯಾಸವೆಂದರೆ, ಆಪರೇಷನ್ ಕಮಲವನ್ನು ಕಟುವಾಗಿ ವಿರೋಧಿಸಿ ಹೇಳಿಕೆ ನೀಡಿರುವ ಅದೇ ಕಾಂಗ್ರೆಸ್ ಪಕ್ಷ, ಇದೀಗ ಬಿಜೆಪಿಗೆ ಆಪರೇಷನ್ ಮಾಡಲು ಕತ್ತರಿ ಹಿಡಿದುಕೊಂಡು ಓಡಾಡುತ್ತಿದೆ. ‘‘ಬಿಜೆಪಿ ಮಾಡಿದರೆ ಸರಿ, ಕಾಂಗ್ರೆಸ್ ಮಾಡಿದರೆ ತಪ್ಪೆ?’’ ಎಂದು ಡಿಕೆಶಿ ಕೇಳುತ್ತಿದ್ದಾರೆ.

ಮುಖ್ಯವಾಗಿ ಆಪರೇಷನ್ ಕಮಲ ತಪ್ಪು ಎನ್ನುವ ಕಾರಣಕ್ಕಾಗಿಯೇ ಈ ಬಾರಿ ಬಿಜೆಪಿಯ ವಿರುದ್ಧ ಮತದಾರ ದೊರೆಗಳು ತೀರ್ಪು ನೀಡಿರುವುದು. ಮೈತ್ರಿ ಸರಕಾರ ರಚನೆಯಾದರೆ ಅದು ಆಪರೇಷನ್ ಕಮಲಕ್ಕೆ ಕಾರಣವಾಗಬಹುದು ಎಂದು ಕಾಂಗ್ರೆಸನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಿದ್ದಾರೆ. ಹೀಗಿರುವಾಗ, ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯ ನಾಯಕರನ್ನು ಸೇರಿಸಿಕೊಳ್ಳುವುದಕ್ಕೆ ಸೃಷ್ಟಿಯಾದ ಅನಿವಾರ್ಯ ಏನು? ‘‘ಬಿಜೆಪಿ ಮಾಡಿದರೆ ಸರಿ’’ ಎಂದವರಾದರೂ ಯಾರು? ಆಪರೇಷನ್ ಕಮಲ ಬಿಜೆಪಿಗೆ ಸರಿ ಇರಬಹುದು, ಆದರೆ ಈ ನಾಡಿನ ಜನತೆ ಅದನ್ನು ತಪ್ಪು ಎಂದು ಸ್ಪಷ್ಟವಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ವರಿಷ್ಠರು ಆಪರೇಷನ್ ಕಮಲವನ್ನು ಟೀಕಿಸುತ್ತಾ ಬಂದಿದ್ದಾರೆ. ಇದೀಗ ಬಿಜೆಪಿ ಮಾಡಿತ್ತು ಎಂದು ಆ ಪಕ್ಷವನ್ನು ಕಾಂಗ್ರೆಸ್ ಅನುಕರಿಸಲು ಹೊರಡುವುದು ಎಷ್ಟು ಸರಿ? ಇಷ್ಟಕ್ಕೂ ಕಾಂಗ್ರೆಸ್ ಪಕ್ಷ ಬಿಜೆಪಿಯಿಂದ ತನ್ನ ಪಕ್ಷಕ್ಕೆ ಕರೆಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವುದಾದರೂ ಯಾರನ್ನು? ಒಮ್ಮೆ ಕಾಂಗ್ರೆಸ್‌ನಲ್ಲಿದ್ದು ಚುನವಾಣೆಗೆ ನಿಂತು ಗೆದ್ದು ಅಧಿಕಾರ, ಹಣಕ್ಕಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಅದೇ ಶಾಸಕರು ಕಾಂಗ್ರೆಸ್‌ಗೆ ಮರಳಲು ಸಿದ್ಧತೆ ನಡೆಸುತ್ತಿದ್ದಾರೆ. ಬಿಜೆಪಿಯ ಸಿದ್ಧಾಂತದ ಮೇಲೆ ಬೇಸರ ಅಥವಾ ಕಾಂಗ್ರೆಸ್ ಸಿದ್ಧಾಂತದ ಬಗ್ಗೆ ಮತ್ತೆ ಪ್ರೀತಿ ಮೊಳಕೆ ಒಡೆದ ಕಾರಣಕ್ಕೆ ಅವರು ಮರಳುತ್ತಿರುವುದಲ್ಲ. ಅಧಿಕಾರ ಕಳೆದುಕೊಂಡ ಬಿಜೆಪಿಯೊಳಗೆ ಈ ಶಾಸಕರು ಈಗ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮುಂದಿನ ಐದು ವರ್ಷಗಳ ಕಾಲ ಕಾಂಗ್ರೆಸ್ ಸರಕಾರವನ್ನು ಯಾವ ಆಪರೇಷನ್ ಕೂಡ ಉರುಳಿಸುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಇವರಿಗೆ ಅರ್ಥವಾಗಿದೆ. ಅಧಿಕಾರವಿಲ್ಲದೆ ಬದುಕುವುದು ಇವರಿಗೆ ಕಷ್ಟವಾಗುತ್ತಿದೆ. ಕಾಂಗ್ರೆಸ್ ಮನೆಯ ಕಡೆಗೆ ಆಸೆಗಣ್ಣಿನಿಂದ ನೋಡುತ್ತಿರುವ ಹಲವು ಬಿಜೆಪಿ ಶಾಸಕರು ‘ಅಶ್ಲೀಲ ಸೀಡಿ’ಗಳಿಗಾಗಿ ಹೆಸರಾದವರು. ಇವರನ್ನು ಕರೆಸಿ ಅವರಿಗೆ ಸ್ಥಾನಮಾನಗಳನ್ನು ಕೊಡುವ ಮೂಲಕ ಕಾಂಗ್ರೆಸ್ ಪಕ್ಷ ಈ ನಾಡಿಗೆ ಯಾವ ಸಂದೇಶವನ್ನು ನೀಡಲು ಹೊರಟಿದೆ?

ಕಳೆದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ಹಲವು ನಾಯಕರು ಕಾಂಗ್ರೆಸ್‌ಗೆ ವಲಸೆ ಬಂದರು. ಆದರೆ ಇವರಲ್ಲಿ ಹಲವರು ಆರೆಸ್ಸೆಸ್‌ನ ಗರಡಿಯಲ್ಲಿ ಪಳಗಿದವರು. ಬಿಜೆಪಿಯೊಳಗಿರುವ ಕೆಲವು ನಾಯಕರ ಜೊತೆಯಿರುವ ಅಸಮಾಧಾನದಿಂದ, ಅವರಿಗೆ ಪಾಠ ಕಲಿಸುವ ಏಕೈಕ ಉದ್ದೇಶವನ್ನು ಹೊತ್ತು ಕಾಂಗ್ರೆಸ್‌ಗೆ ಬಂದವರಿವರು. ಕಾಂಗ್ರೆಸ್‌ಗೆ ಬಂದ ಬಳಿಕವೂ ‘‘ನಾನು ಆರೆಸ್ಸೆಸ್‌ನ ಹಿನ್ನೆಲೆಯಿಂದ ಬಂದಿರುವುದರ ಬಗ್ಗೆ ಹೆಮ್ಮೆಯಿದೆ’’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈಗಲೂ ಅದೇ ಹೇಳಿಕೆಗೆ ಬದ್ಧರಾಗಿದ್ದಾರೆ. ಒಂದೆಡೆ ಕಾಂಗ್ರೆಸ್‌ನ ವರಿಷ್ಠರು ಆರೆಸ್ಸೆಸ್ ವಿರುದ್ಧ ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ. ‘‘ಎಲ್ಲ ಸಂವಿಧಾನ ಸಂಸ್ಥೆಗಳನ್ನು ಆರೆಸ್ಸೆಸ್ ಕೈವಶ ಮಾಡಿಕೊಂಡು ಸರಕಾರವನ್ನು ನಿಯಂತ್ರಿಸುತ್ತಿದೆ’’ ಎಂದು ರಾಹುಲ್ ಗಾಂಧಿ ಹೊಸದಿಲ್ಲಿಯಲ್ಲಿ ಹೇಳಿಕೆ ನೀಡುತ್ತಿದ್ದರೆ, ಇತ್ತ ಕರ್ನಾಟಕದಲ್ಲಿ ಕಾಂಗ್ರೆಸ್ ಸೇರಿರುವ ಮಾಜಿ ಬಿಜೆಪಿಗರು ‘‘ಆರೆಸ್ಸೆಸ್‌ನ ಕುರಿತಂತೆ’’ ಹೆಮ್ಮೆಯನ್ನು ಪ್ರಕಟಿಸುತ್ತಿದ್ದಾರೆ. ಬಿಜೆಪಿಯಿಂದ ಸಂಬಂಧ ಕಳಚಿಕೊಂಡು ಕಾಂಗ್ರೆಸ್‌ಗೆ ಬರುವ ನಾಯಕರು ಆರೆಸ್ಸೆಸ್‌ನೊಂದಿಗೆ ಇರುವ ಸಂಬಂಧಗಳನ್ನು ಕಳಚಿಕೊಂಡಿರುವುದಿಲ್ಲ ಎನ್ನುವ ಸತ್ಯ ಕಾಂಗ್ರೆಸ್ ಮುಖಂಡರಿಗೆ ತಿಳಿಯದ್ದೇನೂ ಅಲ್ಲ. ಆರೆಸ್ಸೆಸ್‌ನ್ನು ತಾಯಿ ಎಂದು ಪ್ರಾಮಾಣಿಕವಾಗಿ ನಂಬಿರುವ ಶಾಸಕರು ಕಾಂಗ್ರೆಸ್‌ಗೆ ಕಾಲಿಟ್ಟರೆ ಅದರಿಂದ ಕಾಂಗ್ರೆಸ್‌ಗಿಂತಲೂ ಹೆಚ್ಚು ಲಾಭವನ್ನು ತನ್ನದಾಗಿಸಿಕೊಳ್ಳುವುದು ಆರೆಸ್ಸೆಸ್. ಕಾಂಗ್ರೆಸ್‌ಗಾಗಿ ಪ್ರಾಮಾಣಿಕವಾಗಿ ದುಡಿದ, ಜಾತ್ಯತೀತ ಸಿದ್ಧಾಂತಗಳ ಮೇಲೆ ಬಲವಾದ ನಂಬಿಕೆಗಳುಳ್ಳ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ನಾಯಕರು ಎಡವಿದ್ದಾರೆ ಎನ್ನುವ ಟೀಕೆಗಳು ವ್ಯಾಪಕವಾಗಿವೆ. ಚುನಾವಣಾ ಫಲಿತಾಂಶದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ಸಂಘಟಿತವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೆ ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಈ ಸಮುದಾಯವನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯ ಆಡಳಿತ ಕಾಲದಲ್ಲಿ ಶೋಷಿತ ಸಮುದಾಯಕ್ಕೆ ಆದ ಅನ್ಯಾಯಗಳನ್ನು ಸರಿಪಡಿಸುವುದಕ್ಕೆ ಕಾಂಗ್ರೆಸ್ ಮುಂದಾಗಬೇಕು. ಅದರ ಬದಲಿಗೆ ಬಿಜೆಪಿಯಲ್ಲಿರುವ ತ್ಯಾಜ್ಯಗಳಿಗೆ ಅವಕಾಶ ನೀಡಲು ಕಾಂಗ್ರೆಸ್ ಮುಂದಾಗಿದೆ. ಈ ತ್ಯಾಜ್ಯಗಳಿಂದ ಕಾಂಗ್ರೆಸ್ ಇನ್ನಷ್ಟು ಗಬ್ಬು ನಾರಬಹುದೇ ಹೊರತು, ಬೇರೆ ಲಾಭ ಇಲ್ಲ. ಈ ಮೂಲಕ ಕಾಂಗ್ರೆಸ್ ಆಪರೇಷನ್ ಕಮಲದ ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತದೆ. ಜೊತೆಗೆ ಇದು ರಾಜ್ಯದಲ್ಲಿ ಇನ್ನಷ್ಟು ಭ್ರಷ್ಟಾಚಾರ, ಅಕ್ರಮಗಳಿಗೆ ಅವಕಾಶ ಮಾಡಿಕೊಡುತ್ತದೆ. ಕಾಂಗ್ರೆಸ್ ಶೇ. ೪೦ ಕಮಿಶನ್ ಆಡಳಿತದ ಭಾಗ ಎರಡರ ನೇತೃತ್ವ ವಹಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಅನಗತ್ಯ ‘ಆಪರೇಷನ್ ಹಸ್ತ’ ಮಾಡಲು ಹೋಗಿ ಇರುವ ಹಸ್ತಕ್ಕೆ ಕುತ್ತು ತಂದುಕೊಳ್ಳುವ ಬದಲು, ಸರಕಾರದೊಳಗಿರುವ ಅವ್ಯವಸ್ಥೆಗಳಿಗೆ ಆಪರೇಷನ್ ನಡೆಸುವ ಕಡೆಗೆ ಗಮನ ನೀಡಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News