ಅಭಿವ್ಯಕ್ತಿ ಸ್ವಾತಂತ್ರ್ಯ ದಮನಕ್ಕೆ ಮತ್ತೊಂದು ಕಾಯ್ದೆ

Update: 2024-07-30 05:06 GMT

PC: PTI

ಪ್ರಭುತ್ವ ಎಂಬುದು ಫ್ಯಾಶಿಸ್ಟ್ ಶಕ್ತಿಗಳ ಕೈಗೆ ಸಿಕ್ಕಾಗ ಏನಾಗುತ್ತದೆ ಎಂಬುದು ನಮ್ಮ ದೇಶದ ಎಲ್ಲರಿಗೂ ತಿಳಿಯದ ಸಂಗತಿಯಲ್ಲ. ಫ್ಯಾಶಿಸ್ಟ್ ನಿರಂಕುಶ ಪ್ರಭುಗಳು ಭಿನ್ನಾಭಿಪ್ರಾಯವನ್ನು ಎಂದೂ ಸಹಿಸುವುದಿಲ್ಲ. ಬಾಯಿ ಬಿಟ್ಟರೆ ಅದನ್ನು ಮುಚ್ಚಿಸುವ ಎಲ್ಲ ಹುನ್ನಾರಗಳನ್ನು ಮಾಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರ. ಅಲ್ಲಿನ ಬಿಜೆಪಿ-ಶಿವಸೇನೆಯ ಮೈತ್ರಿ ಸರಕಾರ ಈಗ ‘ನಗರ ನಕ್ಸಲ’ರನ್ನು ಹತ್ತಿಕ್ಕಲು ಹೊಸ ಕಾಯ್ದೆಯೊಂದನ್ನು ತರಲು ತಯಾರಿ ನಡೆಸಿದೆ. ಯಾವುದೇ ಕಾನೂನನ್ನು ಉಲ್ಲಂಘಿಸಿದವರಿಗೆ ದಂಡನೆಗೆ ಒಳಪಡಿಸಲು ಈಗಾಗಲೇ ದೇಶದಲ್ಲಿ ಭಾರತೀಯ ನ್ಯಾಯ ಸಂಹಿತೆ ಸೇರಿದಂತೆ ಯುಎಪಿಎ ಮತ್ತು ಪಿಎಂಎಲ್‌ಎ ಮುಂತಾದ ಅತ್ಯಂತ ಕಠಿಣ ಕಾನೂನುಗಳು ಜಾರಿಯಲ್ಲಿವೆ. ಈ ಕಾನೂನುಗಳು ಸಾಲದೆಂಬಂತೆ ಮಹಾರಾಷ್ಟ್ರ ಸರಕಾರ ‘ವಿಶೇಷ ಸಾರ್ವಜನಿಕ ಭದ್ರತಾ ಕಾಯ್ದೆ’ ಎಂಬ ಹೊಸ ಶಾಸನವನ್ನು ತರಲು ಹೊರಟಿದೆ. ಈಗ ಸಾರ್ವಜನಿಕ ಜೀವನದಲ್ಲಿ ಹಾಗೂ ಸರಕಾರೇತರ ಸಂಸ್ಥೆಗಳಲ್ಲಿ ಇರುವ ನಗರ ನಕ್ಸಲರು ತಮ್ಮ ಸರಕಾರದ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ.ಅವರನ್ನು ನಿಗ್ರಹಿಸಲು ಈ ಕಾಯ್ದೆಯನ್ನು ತರುತ್ತಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಗೃಹ ಮತ್ತು ಕಾನೂನು ಖಾತೆಯ ಸಚಿವ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಈ ಕುರಿತು ಸದನದಲ್ಲಿ ವಿಧೇಯಕವನ್ನು ಮಂಡಿಸಿದ್ದಾರೆ.

ಈ ‘ನಗರ ನಕ್ಸಲರು’ ಎಂಬ ಪದ ಯಾವಾಗ ಬಳಕೆಗೆ ಬಂತು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುವ ಎಲ್ಲರನ್ನು ಹತ್ತಿಕ್ಕಲು ಈ ‘ನಗರ ನಕ್ಸಲರು’ ಪದ ಬಳಕೆಗೆ ಬಂದು ವಿಶೇಷವಾಗಿ ಲೇಖಕರು, ಕಲಾವಿದರು ಸೇರಿದಂತೆ ಸಾಂಸ್ಕೃತಿಕ ಲೋಕದ ಚಿಂತಕರನ್ನು ಬಾಯಿ ಮುಚ್ಚಿಸಲು ಈ ಪದಕ್ಕೆ ಅಪರಾಧದ ನಂಟು ಕಲ್ಪಿಸಲಾಯಿತು. ಇದನ್ನು ಪ್ರತಿಭಟಿಸಿ ಜ್ಞಾನಪೀಠ ಪುರಸ್ಕೃತ ಲೇಖಕ ಗಿರೀಶ್‌ಕಾರ್ನಾಡರು ನಗರ ನಕ್ಸಲ್ ಎಂಬ ಬೋರ್ಡನ್ನು ಕೊರಳಿಗೆ ನೇತು ಹಾಕಿಕೊಂಡು 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು.

ಮಹಾರಾಷ್ಟ್ರದಲ್ಲಿರುವುದು ಆಪರೇಶನ್ ಕಮಲದ ಮೂಲಕ ಅಸ್ತಿತ್ವಕ್ಕೆ ಬಂದ ಸರಕಾರ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಈ ಸರಕಾರದ ಪಾಲುದಾರ ಪಕ್ಷಗಳು ಹೀನಾಯ ಸೋಲನ್ನು ಅನುಭವಿಸಿದ್ದವು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಈ ಸರಕಾರದಲ್ಲಿದ್ದವರಿಗಿಲ್ಲ.ಆದರೂ ಭಿನ್ನಾಭಿಪ್ರಾಯವನ್ನು ಅಪರಾಧ ಎಂಬಂತೆ ವ್ಯಾಖ್ಯಾನಿಸುವ ಈ ಕರಾಳ ಕಾನೂನನ್ನು ತರಲು ಹೊರಟಿದ್ದಾರೆ. ಯಾರೊಂದಿಗೂ ಸಮಾಲೋಚಿಸದೆ ಸದನದ ಅಧಿವೇಶನದ ಕೊನೆಯಲ್ಲಿ ಇದರ ಪ್ರಸ್ತಾವ ಮಾಡಿದ್ದಾರೆ. ಸರಕಾರದ ಜನವಿರೋಧಿ ನೀತಿ, ಧೋರಣೆಗಳನ್ನು ವಿರೋಧಿಸುವವರನ್ನೆಲ್ಲ ನಗರ ನಕ್ಸಲರೆಂದು ಕರೆದು ದಮನ ಮಾಡುವುದು ಇದರ ಉದ್ದೇಶವಾಗಿದೆ.

ಮಹಾರಾಷ್ಟ್ರದಲ್ಲಿ ತರಲು ಹೊರಟಿರುವ ಈ ವಿಧೇಯಕ ಕಾಯ್ದೆಯಾಗಿ ಜಾರಿಗೆ ಬಂದರೆ ಅದು ಅತ್ಯಂತ ಅಪಾಯಕಾರಿಯಾಗಿ, ದಮನಕಾರಿಯಾಗಿ ಪರಿಣಮಿಸಲಿದೆ. ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುವ ಇದು ದುರುಪಯೋಗ ವಾಗುವ ಸಾಧ್ಯತೆಯೇ ಜಾಸ್ತಿ. ಮಹಾರಾಷ್ಟ್ರದಲ್ಲಿ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ಈಗಾಗಲೇ ಜಾರಿಯಲ್ಲಿದೆ. ಅದನ್ನು ಬಹುತೇಕ ಇಂಥದೇ ಉದ್ದೇಶಗಳಿಗಾಗಿ ಜಾರಿಗೆ ತರಲಾಗಿದೆ. ಕೇಂದ್ರ ಸರಕಾರದ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ನು(ಯುಎಪಿಎ)ಭಯೋತ್ಪಾದನೆ ನಿಗ್ರಹಕ್ಕಾಗಿ ಬಳಸಲಾಗುತ್ತದೆ. ಆದರೂ ನಗರ ನಕ್ಸಲರನ್ನು ನಿಯಂತ್ರಿಸಲು ಈ ಕಾಯ್ದೆಗಳು ಪರಿಣಾಮಕಾರಿಯಾಗಿಲ್ಲ. ಅದಕ್ಕಾಗಿ ಹೊಸ ಕಾಯ್ದೆಯನ್ನು ತರಲಾಗುವುದಂತೆ.

ಮಹಾರಾಷ್ಟ್ರ ಸರಕಾರ ತರಲು ಹೊರಟಿರುವ ಈ ಕರಾಳ ಶಾಸನಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮತ್ತು ಜನಪರ ಸಂಘಟನೆಗಳು ತೀವ್ರವಾಗಿ ವಿರೋಧವನ್ನು ವ್ಯಕ್ತಪಡಿಸಿವೆ. ‘ಕಾನೂನು ಬಾಹಿರ’ ಎನ್ನುವ ಪದದ ವಿವರಣೆ ಸೇರಿದಂತೆ ಹಲವು ವಿಧಿಗಳು ಸ್ಪಷ್ಟತೆಯಿಂದ ಕೂಡಿಲ್ಲ. ಹೀಗಾಗಿ ದುರುಪಯೋಗ ವಾಗುವ ಅಪಾಯವಿದೆ ಎನ್ನುವ ವಿರೋಧಿಗಳ ವಾದದಲ್ಲಿ ಹುರುಳಿಲ್ಲದಿಲ್ಲ. ಈ ವಿಧೇಯಕದ ಪ್ರಕಾರ ವಿಚಾರಣೆಗೆ ಮುನ್ನವೇ ಆರೋಪಿಯನ್ನು ಪೊಲೀಸರು ಅವರ ಮನೆಯಿಂದ ವಶಕ್ಕೆ ಪಡೆಯಬಹುದಾಗಿದೆ. ಚರಾಸ್ತಿ ವಶಕ್ಕೆ ಪಡೆಯಬಹುದಾಗಿದೆ. ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬಹುದಾಗಿದೆ. ಈ ಕಾಯ್ದೆಯಡಿ ಬಂಧನಕ್ಕೊಳಪಟ್ಟವರು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯವನ್ನು ಸಂಪರ್ಕಿಸುವಂತಿಲ್ಲ. ಹೀಗೆ ಅನೇಕ ದಮನಕಾರಿ ಅಂಶಗಳು ಈ ವಿಧೇಯಕ ದಲ್ಲಿವೆ.

ಈ ವಿಧೇಯಕದ 5ನೇ ಕಲಮಿನ ಪ್ರಕಾರ ಯಾವುದೇ ಸಂಸ್ಥೆ ಕಾನೂನು ಬಾಹಿರ ಎಂದು ತೀರ್ಮಾನಿಸಲು ಸರಕಾರ ಒಂದು ಸಲಹಾ ಮಂಡಳಿಯನ್ನು ರಚಿಸುತ್ತದೆ. ಮೂವರು ಸದಸ್ಯರನ್ನೊಳಗೊಂಡ ಮಂಡಳಿಯಲ್ಲಿ ನಿವೃತ್ತ ಇಲ್ಲವೇ ಹಾಲಿ ಹೈಕೋರ್ಟ್ ನ್ಯಾಯಾಧೀಶರು ಇರುತ್ತಾರೆ. ಅವರ ಪೈಕಿ ಒಬ್ಬರನ್ನು ಸರಕಾರವೇ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತದೆ. ಸಲಹಾ ಮಂಡಳಿಯ ರಚನೆಯಲ್ಲಿ ಸರಕಾರದ ಪಾತ್ರವೇ ಪ್ರಮುಖವಾಗಿರುವುದರಿಂದ ಸಹಜವಾಗಿ ಪಕ್ಷಪಾತಕ್ಕೆ ಅವಕಾಶವಿರುತ್ತದೆ. ಇದನ್ನು ಬಳಸಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಪ್ರತಿಭಟನೆಯ ಹಕ್ಕನ್ನು ದಮನ ಮಾಡಲು ಸರಕಾರ ಮಸಲತ್ತು ನಡೆಸಿದೆ ಎಂಬುದು ನಾಗರಿಕ ಹಕ್ಕು ಸಂಘಟನೆಗಳ ವಾದವಾಗಿದೆ.

ಬಿಜೆಪಿ ಸರಕಾರ ಹಾಗೂ ಬಿಜೆಪಿ ನಾಯಕರು ತಮ್ಮ ಕೋಮುವಾದಿ ಸಿದ್ಧಾಂತವನ್ನು ಮತ್ತು ದುರಾಡಳಿತವನ್ನು ವಿರೋಧಿಸುವವರನ್ನು ‘ನಗರ ನಕ್ಸಲ’ರೆಂದು ಕರೆದು ಬಾಯಿ ಮುಚ್ಚಿಸಲು ಯತ್ನಿಸುತ್ತಾರೆ. ಇತ್ತೀಚಿನ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಆಮ್‌ಆದ್ಮಿ ಪಕ್ಷದ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ ಗೃಹ ಸಚಿವ ಅಮಿತ್ ಶಾ ‘‘ನಗರ ನಕ್ಸಲರಿಗೆ ಮತ ನೀಡಬೇಡಿ’’ ಎಂದು ಕರೆ ನೀಡಿದರು. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾತ್ರವಲ್ಲ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಬಿಜೆಪಿ ನಾಯಕರು ನಗರ ನಕ್ಸಲ್ ಎಂದು ಟೀಕಿಸಿದರು. ರಾಜಕೀಯ ವಿರೋಧಿಗಳನ್ನು ಮಾತ್ರವಲ್ಲ ಸರಕಾರದ ಜನ ವಿರೋಧಿ ನೀತಿ, ಧೋರಣೆಗಳನ್ನು ವಿರೋಧಿಸುವ ರೈತ, ಕಾರ್ಮಿಕ, ವಿದ್ಯಾರ್ಥಿ ನಾಯಕರನ್ನು ವಿಶೇಷವಾಗಿ ಹೋರಾಟ ಗಾರ್ತಿ ಮೇಧಾ ಪಾಟ್ಕರ್ ಅವರನ್ನು ನಗರ ನಕ್ಸಲರೆಂದು ಟೀಕಿಸುತ್ತಾ ಬಂದಿದ್ದಾರೆ.

ಜ್ಯೋತಿಬಾ ಫುಲೆ, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಅರಿವು ಮತ್ತು ಜನತಾಂತ್ರಿಕ ಚಳವಳಿಗಳ ಬಹುದೊಡ್ಡ ಪರಂಪರೆಯನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಪ್ರತಿರೋಧದ ಧ್ವನಿಯನ್ನು ಅತ್ಯಂತ ಕುತಂತ್ರದಿಂದ ಹತ್ತಿಕ್ಕಲು ಅಲ್ಲಿನ ಮನುವಾದಿ, ಕೋಮುವಾದಿ ಸರಕಾರ ಹೊರಟಿರುವುದು ಖಂಡನೀಯವಾಗಿದೆ.ಮುಂಬೈ ಸೇರಿದಂತೆ ಅಲ್ಲಿನ ಬಹುತೇಕ ನಗರಗಳಲ್ಲಿ 144ನೇ ಕಲಮಿನನ್ವಯ ನಿಷೇಧಾಜ್ಞೆ ಸದಾ ಜಾರಿಯಲ್ಲಿರುತ್ತದೆ. ಶಾಂತಿಯುತ ಪ್ರತಿಭಟನೆಗಳನ್ನೂ ಕಾನೂನುಬಾಹಿರ ಎಂದು ಘೋಷಿಸುತ್ತಿರುವುದು ಸರಿಯಲ್ಲ. ಇಂತಹ ಬೆದರಿಕೆಯ ವಾತಾವರಣದಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಮುಕ್ತವಾಗಿ ನಡೆಯಲು ಸಾಧ್ಯವಿಲ್ಲ. ಇದು ಉಳಿದ ರಾಜ್ಯಗಳಿಗೂ ಪ್ರವೇಶಿಸಬಹುದು. ಹಾಗಾಗಿ ಈ ಕರಾಳ ಕಾನೂನು ಜಾರಿಯಾಗಕೂಡದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News