ಸಂವಿಧಾನದ ಹತ್ಯೆಯನ್ನು ಸಂಭ್ರಮಿಸಲು ಹೊರಟ ಸಂವಿಧಾನ ವಿರೋಧಿಗಳು!

Update: 2024-07-15 05:41 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜೂನ್ 25ನ್ನು ‘ಸಂವಿಧಾನ ಹತ್ಯಾ ದಿವಸ’ವನ್ನಾಗಿ ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಘೋಷಿಸಿದ್ದಾರೆ. ಮೋದಿ ಅಧಿಕಾರ ಹಿಡಿದ ದಿನದಿಂದ, ಹತ್ಯೆಗಳ ದಿನಗಳನ್ನು ಒಂದು ಆಚರಣೆಯಾಗಿಸಿ ಸಂಭ್ರಮಿಸುತ್ತ ಬರುತ್ತಿರುವುದು ದೇಶದ ಪಾಲಿಗೆ ಹೊಸತೇನೂ ಅಲ್ಲ. ಸಾವಿರಾರೂ ಅಮಾಯಕರನ್ನು ಬಲಿತೆಗೆದುಕೊಳ್ಳಲು ಕಾರಣವಾದ ಬಾಬರಿ ಮಸೀದಿ ಧ್ವಂಸಗೊಂಡ ದಿನವನ್ನು ‘ವಿಜಯ ದಿವಸ’ವೆಂದು ಆಚರಿಸಿದವರಿಗೆ, ಗುಜರಾತ್‌ನಲ್ಲಿ ನಡೆದ ಮಾರಣ ಹೋಮವನ್ನು ‘ಸಾಂಸ್ಕೃತಿಕ ಪುನರುತ್ಥಾನ’ ಎಂದು ಸಂಭ್ರಮಿಸಿದವರಿಗೆ, ಮಣಿಪುರದಲ್ಲಿ ನಡೆಯುತ್ತಿರುವ ಸಾಮೂಹಿಕ ಹತ್ಯೆ, ಅತ್ಯಾಚಾರಗಳನ್ನು ಸಮರ್ಥಿಸಿಕೊಳ್ಳುವವರಿಗೆ ‘ಸಂವಿಧಾನವನ್ನು ಹತ್ಯೆ’ ಮಾಡಿದ ದಿನ ಆಚರಣೆಗೆ ಯೋಗ್ಯ ಅನ್ನಿಸುವುದು ಸಹಜವೇ ಆಗಿದೆ. 1975, ಜೂ. 25ರಂದು ಈ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ಅಂದು ಸಂವಿಧಾನವನ್ನು ಅಮಾನತಿನಲ್ಲಿಡಲಾಯಿತು ಮತ್ತು ಅದನ್ನು ಪ್ರಶ್ನಿಸಿದ ಸಾವಿರಾರು ಜನರನ್ನು ಜೈಲಿಗೆ ತಳ್ಳಲಾಯಿತು. ಅಂದಿನ ಕರಾಳ ದಿನವನ್ನು ಸ್ಮರಿಸುವ ಸಲುವಾಗಿ ಜೂ. 25ನ್ನು ‘ಸಂವಿಧಾನ ಹತ್ಯಾ ದಿವಸ್’ ಆಗಿ ಆಚರಿಸಲಾಗುವುದು ಎಂದು ಕೇಂದ್ರ ಸರಕಾರ ಹೇಳುತ್ತಿದೆ.

1975ರಲ್ಲಿ ಇಂದಿರಾಗಾಂಧಿ ಈ ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿಯನ್ನು ನಾವೆಲ್ಲರೂ ಪ್ರತಿ ವರ್ಷ ನೆನೆದುಕೊಳ್ಳಲೇ ಬೇಕು. ನಾಯಕನೊಬ್ಬ ತಾನು ಸಂವಿಧಾನಕ್ಕಿಂತ, ಪ್ರಜಾಸತ್ತೆಗಿಂತ ದೊಡ್ಡವನಾಗಲು ಹೊರಟರೆ ಅದರ ಪರಿಣಾಮ ಏನಾಗಬಹುದು ಎನ್ನುವುದಕ್ಕೆ ತುರ್ತು ಪರಿಸ್ಥಿತಿಯ ದಿನಗಳು ಅತ್ಯುತ್ತಮ ಉದಾಹರಣೆಯಾಗಿದೆ. ಆದರೆ ಆ ಪ್ರಯತ್ನದಲ್ಲಿ ಇಂದಿರಾಗಾಂಧಿ ಯಶಸ್ವಿಯಾಗಲಿಲ್ಲ . ಸಂವಿಧಾನವನ್ನು ಹತ್ಯೆಗೈಯುವ ಪ್ರಯತ್ನವನ್ನು ಈ ದೇಶದ ಜನತೆ ಸಂಘಟಿತವಾಗಿ ವಿಫಲಗೊಳಿಸಿದರು. ತುರ್ತು ಪರಿಸ್ಥಿತಿಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ವ್ಯಕ್ತವಾದವು. ಹೊಸ ಜನಚಳವಳಿಗಳು ಹುಟ್ಟಿಕೊಂಡವು. ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಹೋರಾಟ ಎಂದೂ ಕೆಲವರು ಕರೆದರು. ಆ ಹೋರಾಟದ ಫಲವಾಗಿ ದೇಶದಲ್ಲಿ ಸಂವಿಧಾನ ಪುನರ್ ಸ್ಥಾಪನೆಗೊಂಡಿತು. ಇಂದು ನಾವು ಆಚರಿಸಬೇಕಾಗಿರುವುದು ಸಂವಿಧಾನ ಪುನರ್ ಸ್ಥಾಪನೆಯಾಗಿರುವ ದಿನವನ್ನೇ ಹೊರತು, ಹತ್ಯೆಯಾಗಿರುವ ದಿನವನ್ನಲ್ಲ. ಆದರೆ ಸರಕಾರ ಜೂ. 25ನ್ನು ಸಂವಿಧಾನ ಹತ್ಯಾ ದಿವಸವೆಂದು ಘೋಷಿಸುವ ಮೂಲಕ, ಸಂವಿಧಾನ ಪುನರ್ ಸ್ಥಾಪನೆಯಾಗಿರುವುದನ್ನು ಮರೆ ಮಾಚಲು ಹೊರಟಿದೆ.

ಈ ದೇಶದಲ್ಲಿ ಸಂವಿಧಾನ ಹತ್ಯೆಯಾಗಿಯೇ ಇಲ್ಲ. ಅದು ಅಷ್ಟು ಸುಲಭವೂ ಇಲ್ಲ. ತುರ್ತು ಪರಿಸ್ಥಿತಿಯ ದಿನಗಳಲ್ಲಿ ಸಂವಿಧಾನವನ್ನು ಇಂದಿರಾಗಾಂಧಿ ಅಮಾನತಿನಲ್ಲಿಟ್ಟರು. ಆದರೆ ಜನಸಾಮಾನ್ಯರು ಸಂಘಟಿತರಾಗಿ ಸಂವಿಧಾನವನ್ನು ಪುನರ್ ಸ್ಥಾಪಿಸಿದರು. ಸಂವಿಧಾನವನ್ನು ಬದಲಿಸುತ್ತೇವೆ, ಅದನ್ನು ಇಲ್ಲವಾಗಿಸುತ್ತೇವೆ ಎಂದು ಹೊರಡುವ ಎಲ್ಲರಿಗೂ ತುರ್ತುಪರಿಸ್ಥಿತಿ ದಿನಗಳು ಒಂದು ಎಚ್ಚರಿಕೆಯಾಗಿದೆ. ತುರ್ತುಪರಿಸ್ಥಿತಿಯ ಬಳಿಕ ಇಂದಿರಾಗಾಂಧಿ ತನ್ನ ಕೃತ್ಯಕ್ಕಾಗಿ ಕೆಲ ಕಾಲ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಯಿತು. ಆದರೆ ಮೋದಿ ನೇತೃತ್ವದ ಬಿಜೆಪಿಗೆ ಪುನರ್ ಸ್ಥಾಪನೆಯಾಗಿರುವ ಸಂವಿಧಾನವನ್ನು ಒಪ್ಪಿಕೊಳ್ಳುವ ಮನಸ್ಸಿಲ್ಲ. ಆದುದರಿಂದಲೇ, ಸಂವಿಧಾನ ಪುನರ್ ಸ್ಥಾಪನೆಯಾಗಿರುವುದನ್ನು ಮರೆ ಮಾಚಿ, ಸಂವಿಧಾನ ಹತ್ಯೆಯಾಗಿದೆಯೆನ್ನುವುದನ್ನು ಆಚರಿಸಲು ಹೊರಟಿದೆ. ಬಿಜೆಪಿಯ ದೃಷ್ಟಿಯಲ್ಲಿ ನೋಡುವುದಾದರೆ, ಪರೋಕ್ಷವಾಗಿ ಈ ದೇಶದಲ್ಲಿ ಸಂವಿಧಾನ ಹಲವು ಬಾರಿ ಹತ್ಯೆಯಾಗಿದೆ. ಗುಜರಾತ್‌ನಲ್ಲಿ ಹತ್ಯಾಕಾಂಡಗಳು ನಡೆದಾಗ, ಬಾಬರಿ ಮಸೀದಿ ಧ್ವಂಸವಾದಾಗ, ಕಂಬಾಲಪಲ್ಲಿ, ಖೈರ್ಲಾಂಜಿಯಂತಹ ದುರಂತದಲ್ಲಿ ದಲಿತರು ಭೀಕರವಾಗಿ ಕೊಲ್ಲಲ್ಪಟ್ಟಾಗ ಸಂವಿಧಾನ ಪರೋಕ್ಷವಾಗಿ ಹತ್ಯೆಯಾಗಿತ್ತು. ಈ ದೇಶದಲ್ಲಿ ಸಂವಿಧಾನ ಜೀವಂತವಾಗಿದ್ದಿದ್ದರೆ ಅಂತಹ ಕೃತ್ಯಗಳು ನಡೆಯುತ್ತಿರಲಿಲ್ಲ. ನಡೆದರೂ, ಆ ಕೃತ್ಯಕ್ಕೆ ಕಾರಣರಾದವರು ಎಂದೋ ಗಲ್ಲಿಗೇರಿಸಲ್ಪಡುತ್ತಿದ್ದರು. ಈ ದೇಶದಲ್ಲಿ ಸಂವಿಧಾನ ಜೀವಂತವಾಗಿದ್ದರೆ ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ, ಅವರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆಯಲು ಸಾಧ್ಯವಿತ್ತೆ? ಸಂವಿಧಾನದ ಹತ್ಯೆಯ ದಿನವನ್ನು ಆಚರಿಸುವುದೇ ಆಗಿದ್ದರೆ ಈ ದೇಶ ಪ್ರತಿ ದಿನವನ್ನು ಒಂದೊಂದು ಕಾರಣಕ್ಕಾಗಿ ಸಂವಿಧಾನ ಹತ್ಯೆ ದಿನ ಎಂದು ಆಚರಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿತ್ತು. ಬೆನ್ನಿಗೆ ಹಲವು ಬಾರಿ ಚೂರಿ ಚುಚ್ಚಿ

ಸಿಕೊಂಡೂ ಇನ್ನೂ ಪ್ರಾಣವನ್ನು ಉಳಿಸಿಕೊಂಡಿರುವುದು ನಮ್ಮ ಸಂವಿಧಾನದ ಹೆಗ್ಗಳಿಕೆಯಾಗಿದೆ. ನಾವು ಆಚರಿಸಬೇಕಾದುದು ಆ ಹೆಗ್ಗಳಿಕೆಯನ್ನೇ ಹೊರತು, ಸಂವಿಧಾನಕ್ಕೆ ನಮ್ಮ ರಾಜಕೀಯ ನಾಯಕರು ಮಾಡಿರುವ ವಂಚನೆಗಳನ್ನಲ್ಲ.

ವಿಪರ್ಯಾಸವೆಂದರೆ, ಎರಡು ವರ್ಷಗಳ ಹಿಂದೆ ನರೇಂದ್ರ ಮೋದಿ ನೇತೃತ್ವದ ಸರಕಾರ, ಆಗಸ್ಟ್ 14ನ್ನು ‘ದೇಶ ವಿಭಜನೆಯ ಕರಾಳ ದಿನ’ ಎಂದು ಆಚರಿಸಲು ನಿರ್ಧರಿಸಿತು. ಈ ಮೂಲಕ ದೇಶವಿಭಜನೆಯಲ್ಲಾದ ಹಿಂಸಾಚಾರಗಳನ್ನು ನೆನಪಿಸುವುದು ಸರಕಾರದ ಉದ್ದೇಶವಂತೆ. ಆದರೆ ಅವರ ನಿಜವಾದ ಉದ್ದೇಶ ಅದರ ಹೆಸರಿನಲ್ಲಿ ದೇಶವನ್ನು ಇನ್ನಷ್ಟು ಹಿಂಸಾಚಾರಕ್ಕೆ ತಳ್ಳುವುದೇ ಆಗಿತ್ತು. ಭಾರತ ಹುಟ್ಟಿದ್ದೇ ವಿಭಜನೆಯ ಗಾಯಗಳೊಂದಿಗೆ. ಆದರೆ ಆ ಗಾಯಗಳಿಗೆ ಮುಲಾಮು ಹಚ್ಚಿ ದೇಶವನ್ನು ಅಭಿವೃದ್ಧಿಯ ಕಡೆಗೆ ಮುನ್ನಡೆಸಲು ಹಿಂದಿನ ನಾಯಕರು ಗರಿಷ್ಠವಾಗಿ ಶ್ರಮಿಸಿದರು. ನಿಧಾನಕ್ಕೆ ವಿಭಜನೆಯ ಗಾಯಗಳು ಒಣಗಿ ಮತ್ತೆ ಮನಸ್ಸುಗಳು ಒಂದಾದವು. ಸರ್ವ ಧರ್ಮೀಯರು ಜೊತೆಗೂಡಿ ಈ ದೇಶವನ್ನು ಅಭಿವೃದ್ಧಿಯ ಕಡೆಗೆ ಮುನ್ನಡೆಸಿದರು. ಆದರೆ ಮೋದಿ ನೇತೃತ್ವದ ಸರಕಾರ, ಆ ಒಣಗಿದ ವಿಭಜನೆಯ ಗಾಯವನ್ನು ಮತ್ತೆ ಕೆದಕುವುದಕ್ಕೆ ಆರಂಭಿಸಿತು. ವಿಭಜನೆಯ ದಿನವನ್ನು ಆಚರಿಸುವ ನೆಪದಲ್ಲಿ ಇಂದಿನ ಭಾರತವನ್ನು ಮತ್ತೆ ಮತ್ತೆ ವಿಭಜಿಸಲು ಯತ್ನಿಸಿದಂತೆಯೇ, ಸಂವಿಧಾನ ಹತ್ಯೆಗೆ ಒಂದು ದಿನವನ್ನು ಘೋಷಿಸಿ, ಸಂವಿಧಾನವನ್ನು ಹಂತ ಹಂತವಾಗಿ ಹತ್ಯೆಗೈಯಲು ಮುಂದಾಗಿದೆ.

ಈ ದೇಶದ ಲಕ್ಷಾಂತರ ಜನರ ತ್ಯಾಗ ಬಲಿದಾನದ ತಳಹದಿಯ ಮೇಲೆ ಪ್ರಜಾಸತ್ತೆ ಸ್ಥಾಪನೆಯಾಗಿದೆ. ಅಂಬೇಡ್ಕರ್ ಈ ದೇಶಕ್ಕೆ ಕೊಟ್ಟ ಸಂವಿಧಾನವನ್ನು ಹತ್ಯೆಗೈಯುವುದು ಮೋದಿ ಅಥವಾ ಅಮಿತ್ ಶಾ ಊಹಿಸಿದಷ್ಟು ಸುಲಭವಿಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನದ ಹತ್ಯೆಯ ವಿಫಲ ಪ್ರಯತ್ನವಷ್ಟೇ ನಡೆಯಿತು. ಅಂತಹ ಪ್ರಯತ್ನ ಬಿಜೆಪಿ ಅಧಿಕಾರಾವಧಿಯಲ್ಲೂ ಮುಂದುವರಿದಿದೆ. ಚುನಾವಣೆಯ ಸಂದರ್ಭದಲ್ಲಿ ಹಲವರು ಸಂವಿಧಾನ ಬದಲಾವಣೆಯ ಮಾತುಗಳನ್ನು ಆಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ‘ಸಂವಿಧಾನ ವಿರೋಧಿ’ಗಳಿಗೆ ದೇಶ ನೀಡಿದ ಸ್ಪಷ್ಟ ಉತ್ತರವಾಗಿತ್ತು. ದೇಶವಿಂದು ಆಚರಿಸಬೇಕಾದುದು ತುರ್ತು ಪರಿಸ್ಥಿತಿ ಘೋಷಣೆಯಾದ ದಿನವನ್ನಲ್ಲ. ತುರ್ತು ಪರಿಸ್ಥಿತಿಯಿಂದ ಈ ದೇಶಕ್ಕೆ ಮುಕ್ತಿ ಸಿಕ್ಕಿದ ದಿನವನ್ನು. ನಾವು ಆಚರಿಸಬೇಕಾದುದು ಸಂವಿಧಾನ ಹತ್ಯೆಯಾದ ದಿನವನ್ನಲ್ಲ, ಸಂವಿಧಾನ ಪುನರ್ ಸ್ಥಾಪನೆಯಾದ ದಿನವನ್ನು. ಆದುದರಿಂದ ಸರಕಾರ ತಕ್ಷಣ ಸಂವಿಧಾನ ಹತ್ಯೆ ದಿವಸ ಘೋಷಣೆಯ ನಿರ್ಧಾರದಿಂದ ಹಿಂದೆ ಸರಿಯಬೇಕಾಗಿದೆ. ಮತ್ತು ಆಚರಿಸಲೇ ಬೇಕೆಂದಿದ್ದರೆ ‘ಸಂವಿಧಾನ ಪುನರ್ ಸ್ಥಾಪನಾ ದಿನ’ವನ್ನು ಆಚರಿಸಲು ಮುಂದಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News