ಬೆಂಗಳೂರು ಸ್ಫೋಟ: ದುಷ್ಕರ್ಮಿಗಳಿಗೆ ನೆರವಾಗುತ್ತಿರುವ ಹೇಳಿಕೆಗಳು!

Update: 2024-03-04 06:19 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View


ಬೆಂಗಳೂರಿನಲ್ಲಿ ಸಂಭವಿಸಿದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ಅಗತ್ಯ ಬಿದ್ದಲ್ಲಿ ತನಿಖೆಯನ್ನು ಎನ್‌ಐಎಗೆ ವಹಿಸುವುದಕ್ಕೂ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ವಿಪರ್ಯಾಸವೆಂದರೆ, ಸ್ಫೋಟ ನಡೆದ ಕ್ಷಣದಿಂದ ಪೊಲೀಸೇತರ ಸಂಘಟನೆಗಳೂ ತನಿಖೆಯಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುತ್ತಿವೆ. ಕೆಲವು ಗುಂಪುಗಳಂತೂ ತನಿಖೆಯನ್ನು ನಡೆಸಿ ಆರೋಪಿಗಳನ್ನು ಘೋಷಿಸಿಯೂ ಬಿಟ್ಟಿದೆ. ಶಿಕ್ಷೆಯಾಗುವುದಷ್ಟೇ ಬಾಕಿ ಉಳಿದಿದೆ. ಬಿಜೆಪಿ ಪಕ್ಷದ ಮುಖಂಡರು ಈಗಾಗಲೇ ತಮ್ಮ ತನಿಖೆಯನ್ನು ಒಂದೊಂದು ರೀತಿಯಲ್ಲಿ ವಿವರಿಸುತ್ತಿದ್ದಾರೆ. ಮಾಧ್ಯಮಗಳ ತನಿಖೆಗಳಂತೂ ‘ಪಾಕಿಸ್ತಾನ್ ಜಿಂದಾಬಾದ್’ನ ಎರಡನೇ ಅವತರಣಿಕೆಯಂತಿವೆ. ಸಂಘಪರಿವಾರದ ಮುಖಂಡರೂ ಸ್ಫೋಟಗಳ ಅವಶೇಷಗಳಿಂದ ಅದೇನೇನೋ ಹೆಕ್ಕಿ ತೆಗೆಯುತ್ತಿದ್ದಾರೆ. ಓರ್ವ ರಾಜಕೀಯ ಮುಖಂಡರಂತೂ ‘ಸರಕಾರ ಘೋಷಿಸಿರುವ ಗ್ಯಾರಂಟಿಗಳೇ ಈ ಸ್ಫೋಟಕ್ಕೆ ಕಾರಣ’ ಎಂದು ವಿಶ್ಲೇಷಿಸಿದ್ದಾರೆ. ಒಟ್ಟಿನಲ್ಲಿ ಸ್ಫೋಟದ ಬಳಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ರಾಜಕೀಯ ನಾಯಕರ ಹೇಳಿಕೆಗಳು ಪ್ರಕರಣದ ತನಿಖೆಯನ್ನು ದಾರಿತಪ್ಪಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಿಜೆಪಿ ನಾಯಕರು ತಮ್ಮ ಆಡಳಿತ ಕಾಲದಲ್ಲಿ ರಾಜ್ಯದಲ್ಲಿ ಸಂಭವಿಸಿದ ಸ್ಫೋಟಗಳನ್ನು ಸಂಪೂರ್ಣ ಮರೆತು ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯ ಭಯೋತ್ಪಾದಕರ ನೆಲೆವೀಡಾಗಿದೆ ಎಂಬಂತಹ ಸ್ಫೋಟಕ ಆರೋಪಗಳನ್ನು ಮಾಡುತ್ತಾ ಜನರನ್ನು ಆತಂಕಕ್ಕೆ ತಳ್ಳುತ್ತಿದ್ದಾರೆ.

ಜನನಿಬಿಡ ಸ್ಥಳದಲ್ಲಿ ನಡೆಯುವ ಯಾವುದೇ ಸ್ಫೋಟ ಕೃತ್ಯಗಳು ಈ ನಾಡಿನ ಕಾನೂನು ಸುವ್ಯವಸ್ಥೆಗೆ ದುಷ್ಕರ್ಮಿಗಳು ಒಡ್ಡುವ ಸವಾಲು ಎನ್ನುವುದರಲ್ಲಿ ಎರಡು ಮಾತಿಲ್ಲ. ಕೃತ್ಯಕ್ಕೆ ಕಾರಣ ಏನೇ ಇರಲಿ, ಅದರ ನೇರ ಸಂತ್ರಸ್ತರು ಜನಸಾಮಾನ್ಯರು, ಅಮಾಯಕರು. ಅವರ ಉದ್ದೇಶ ಸಮಾಜದಲ್ಲಿ ಭಯವನ್ನು , ಅರಾಜಕತೆಯನ್ನು ಸೃಷ್ಟಿಸುವುದು. ಈ ಕೃತ್ಯ ನಡೆದ ಬೆನ್ನಿಗೇ ರಾಜಕಾರಣಿಗಳು, ಪತ್ರಿಕೆಗಳು ತಮ್ಮ ಹೇಳಿಕೆಗಳ ಮೂಲಕ ಜನರನ್ನು ಇನ್ನಷ್ಟು ಭಯಭೀತಗೊಳಿಸಿದರೆ ದುಷ್ಕರ್ಮಿಗಳ ಉದ್ದೇಶಕ್ಕೆ ಕೈ ಜೋಡಿಸಿದಂತಾಗುತ್ತದೆ. ಮೊನ್ನೆ ನಡೆದಿರುವ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನುವುದೇನೋ ನಿಜ. ಆದರೆ ದುಷ್ಕರ್ಮಿಗಳ ಗುರಿ ಸಾವುನೋವುಗಳೇ ಆಗಿತ್ತು. ಅದು ಅದೃಷ್ಟವಶಾತ್ ನೆರವೇರಿಲ್ಲ. ಇಂತಹ ಸಂದರ್ಭದಲ್ಲಿ ದುಷ್ಕರ್ಮಿಗಳ ಉದ್ದೇಶವನ್ನು ಸರ್ವರೀತಿಯಲ್ಲೂ ವಿಫಲಗೊಳಿಸಬೇಕಾದರೆ ಸರಿಯಾದ ದಾರಿಯಲ್ಲಿ ತನಿಖೆ ನಡೆಯಬೇಕು. ಭದ್ರತಾ ವೈಫಲ್ಯ ಘಟನೆಗೆ ಕಾರಣವಾದರೂ, ಮುಂದೆ ಇಂತಹ ಘಟನೆ ಪುನರಾವರ್ತನೆಯಾಗದೇ ಇರಲು ಆರೋಪಿಗಳ ಬಂಧನವಾಗಿ ಅವರಿಗೆ ಶಿಕ್ಷೆಯಾಗಬೇಕಾದುದು ಅತ್ಯಗತ್ಯ. ರಾಜಕೀಯ ಕಾರಣಗಳಿಗಾಗಿ ಆರೋಪ-ಪ್ರತ್ಯಾತಾರೋಪಗಳನ್ನು ಮಾಡುತ್ತಾ ತನಿಖೆಯ ದಾರಿ ತಪ್ಪಿಸಿದರೆ ಅದರ ಲಾಭವನ್ನು ದುಷ್ಕರ್ಮಿಗಳು ತನ್ನದಾಗಿಸಿಕೊಳ್ಳುತ್ತಾರೆ. ಇಂತಹ ದುಷ್ಕೃತ್ಯಗಳು ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲೂ ನಡೆದಿದ್ದವು ಎನ್ನುವುದನ್ನು ಬಿಜೆಪಿ ನಾಯಕರು ಮರೆಯಬಾರದು. 2008ರಿಂದ ರಾಜ್ಯದಲ್ಲಿ ನಾಲ್ಕು ಬಾರಿ ಬಾಂಬ್ ಸ್ಫೋಟ ನಡೆದಿತ್ತು. ಈ ಬಾರಿ ನಡೆದ ಸ್ಫೋಟಕ್ಕೆ ಕಾಂಗ್ರೆಸ್ ಸರಕಾರ ಕಾರಣವೆಂದಾದರೆ, ಈ ಹಿಂದೆ ತನ್ನ ಅಧಿಕಾರಾವಧಿಯಲ್ಲಿ ನಡೆದಿರುವ ಹಲವು ಸ್ಫೋಟಗಳಿಗೆ ಬಿಜೆಪಿ ಸರಕಾರ ಕಾರಣ ಎನ್ನುವುದನ್ನು ಬಿಜೆಪಿ ನಾಯಕರು ಪರೋಕ್ಷವಾಗಿ ಒಪ್ಪಿಕೊಂಡಂತೆಯೇ ಆಗುತ್ತದೆ.

ವಿಶೇಷವೆಂದರೆ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹಸಚಿವರು ಈ ಕೃತ್ಯಕ್ಕೂ ಮಂಗಳೂರಿನಲ್ಲಿ ನಡೆದಿರುವ ಕುಕ್ಕರ್ ಬಾಂಬ್ ಸ್ಫೋಟಕ್ಕೂ ಸಾಮ್ಯತೆಯಿದೆ ಎಂದು ಹೇಳಿದ್ದಾರೆ. ಇಂತಹ ಹೇಳಿಕೆ ಪ್ರಕರಣಕ್ಕೆ ಬೇರೆ ಬೇರೆ ಆಯಾಮಗಳನ್ನು ನೀಡುತ್ತದೆ. ಮುಖ್ಯವಾಗಿ ಅಂದು ಮಂಗಳೂರಿನಲ್ಲಿ ರಿಕ್ಷಾವೊಂದರಲ್ಲಿ ನಡೆದ ಸ್ಫೋಟದ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಹಲವು ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದರು. ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯ ನಾಯಕರೇ ಇಂತಹದೊಂದು ಸ್ಫೋಟಕ್ಕೆ ಪರೋಕ್ಷ ವಾತಾವರಣವನ್ನು ಸೃಷ್ಟಿಸಿದ್ದರು ಎನ್ನುವ ವಾದಗಳು ಸೃಷ್ಟಿಯಾಗಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಅಂದು ಸ್ಫೋಟ ಆರೋಪಿಯಾಗಿ ಗುರುತಿಸಿಲ್ಪಟ್ಟವನು ಪೊಲೀಸರ ಕಣ್ಗಾವಲಲ್ಲಿ ಇದ್ದ. ಹೀಗಿದ್ದೂ ಆತ ಸ್ವಯಂ ಕುಕ್ಕರ್ ಬಾಂಬ್‌ನ್ನು ತಯಾರಿಸಿ ಸ್ಫೋಟ ನಡೆಸಲು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಯನ್ನು ಹಲವರು ಎತ್ತಿದ್ದರು. ಗುಪ್ತಚರ ವೈಫಲ್ಯವನ್ನು ಸ್ಪಷ್ಟವಾಗಿ ಗುರುತಿಸಲಾಗಿತ್ತು. ಇದೀಗ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟವು ಮಂಗಳೂರಿನಲ್ಲಿ ನಡೆದಿರುವ ಸ್ಫೋಟವನ್ನು ಹೋಲುತ್ತದೆ ಎಂದಾದರೆ, ಮತ್ತೆ ಪ್ರಶ್ನೆಗಳು, ಶಂಕೆಗಳು ಪುನರಾವರ್ತನೆಯಾಗುತ್ತವೆ. ಆರೋಪಿಯನ್ನು ಶೀಘ್ರವಾಗಿ ಬಂಧಿಸಲಾಗುತ್ತದೆ ಎಂದು ಗೃಹ ಸಚಿವರು ನೀಡಿರುವ ಹೇಳಿಕೆ ಒಂದಿಷ್ಟು ಸಮಾಧಾನ ತಂದಿದೆ. ಆದರೆ ಈ ಹಿಂದೆಯೂ ಆರೋಪಿಯ ಬಂಧನವಾಗಿತ್ತು. ಆದರೆ ಆತನಿಗೆ ಕುಕ್ಕರ್ ಬಾಂಬ್ ತಯಾರಿಸಲು ಹೇಗೆ ಸಾಧ್ಯವಾಯಿತು? ಅದರ ಹಿಂದೆ ಯಾರ್ಯಾರು ಇದ್ದರು ಎನ್ನುವುದನ್ನು ಬಹಿರಂಗಗೊಳಿಸುವುದಕ್ಕೆ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಇದೀಗ ಬೆಂಗಳೂರು ಸ್ಫೋಟದ ಹಿಂದಿರುವ ವ್ಯಕ್ತಿಯನ್ನು ಬಂಧಿಸುವುದಷ್ಟೇ ಅಲ್ಲ, ಆತನಿಗೆ ಈ ಕೃತ್ಯ ಎಸಗಲು ನೆರವಾದವರ ಹೆಸರುಗಳೂ ಬಹಿರಂಗವಾಗಬೇಕು. ಅಗತ್ಯ ಬಿದ್ದರೆ ತನಿಖೆಯನ್ನು ಎನ್‌ಐಎಗೆ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಆದರೆ ಎನ್‌ಐಎ ತನಿಖೆ ಭಾಗಶಃ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆ.ಕೇಂದ್ರ ಸರಕಾರದ ಮೂಗಿನ ನೇರಕ್ಕೆ ಎನ್‌ಐಎ ತನಿಖೆ ನಡೆಸುತ್ತಿವೆ ಎನ್ನುವ ಆರೋಪಗಳಿವೆ. ಹಲವು ಸ್ಫೋಟ ಪ್ರಕರಣಗಳನ್ನು ಅದು ನಿರ್ವಹಿಸಿದ ರೀತಿಯ ಬಗ್ಗೆ ಈಗಾಗಲೇ ಆಕ್ಷೇಪಗಳಿವೆ. ಆದುದರಿಂದ ಬೆಂಗಳೂರು ಸ್ಫೋಟ ತನಿಖೆಯನ್ನು ಎನ್‌ಐಎಗೆ ಒಪ್ಪಿಸುವುದರಿಂದ ವಿಶೇಷ ಪ್ರಯೋಜನವೇನೂ ಇಲ್ಲ. ಎನ್‌ಐಎ ತನಿಖೆಯನ್ನು ಮುಂದಿಟ್ಟುಕೊಂಡು ಮಾಧ್ಯಮಗಳು ಒಂದಿಷ್ಟು ಕಾಗಕ್ಕ ಗುಬ್ಬಕ್ಕ ಕತೆಗಳನ್ನು ಹೆಣೆಯಬಹುದಷ್ಟೇ.

ಈಗಾಗಲೇ ಬಿಜೆಪಿ ಮತ್ತು ಕೆಲವು ಮಾಧ್ಯಮಗಳು ನಾಡಿನಲ್ಲಿ ಅನಗತ್ಯವಾಗಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಯ ಹೆಸರಿನಲ್ಲಿ ಗದ್ದಲ ಎಬ್ಬಿಸಿವೆ. ಸರಕಾರ ಮತ್ತು ಗೃಹ ಇಲಾಖೆಯ ಒಂದು ಸ್ಪಷ್ಟನೆೆಯಿಂದ ಮುಗಿಯಬಹುದಾಗಿದ್ದ ಪ್ರಕರಣವನ್ನು ‘ತನಿಖೆ’ಯ ಹೆಸರಿನಲ್ಲಿ ಗೃಹ ಸಚಿವರು ಇನ್ನಷ್ಟು ಉದ್ದ ಎಳೆದು ವಿರೋಧಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಆ ವೀಡಿಯೊದಲ್ಲಿ ಗುಂಪು ಯಾರ ಪರವಾಗಿ ಜಿಂದಾಬಾದ್ ಕೂಗಿದೆ ಎನ್ನುವುದನ್ನು ಆಲ್ಟ್ ನ್ಯೂಸ್ ಸೇರಿದಂತೆ ಕೆಲವು ಮಾಧ್ಯಮಗಳು ಬಹಿರಂಗ ಪಡಿಸಿದ್ದವು. ಅಷ್ಟೇ ಅಲ್ಲ, ಸ್ಥಳದಲ್ಲಿದ್ದ ಕೆಲವು ಪತ್ರಕರ್ತರೂ ಸತ್ಯಾಸತ್ಯತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಷ್ಟಾದ ಬಳಿಕವೂ ವೀಡಿಯೊದಲ್ಲಿ ನಿಜಕ್ಕೂ ಕೂಗಿರುವುದೇನು ಎನ್ನುವುದನ್ನು ಬಹಿರಂಗಪಡಿಸಲು ಸರಕಾರ ದಿನ ತೆಗೆದುಕೊಳ್ಳುತ್ತಿದೆ. ವೀಡಿಯೊದಲ್ಲಿ ಕೂಗಿರುವುದು ಪಾಕಿಸ್ತಾನ ಪರ ಘೋಷಣೆ ಹೌದೋ ಅಲ್ಲವೋ ಎನ್ನುವುದನ್ನು ತನಿಖೆ ನಡೆಸಲು ಇಷ್ಟು ದಿನಗಳನ್ನು ತೆಗೆದುಕೊಳ್ಳುವ ಅಗತ್ಯವಿದೆಯೇ? ಈ ಮೂಲಕ ಸರಕಾರವೇ ಪ್ರಕರಣವನ್ನು ಇನ್ನಷ್ಟು ಗೋಜಲು ಗೊಳಿಸುತ್ತಿದೆ. ಇದರ ಬೆನ್ನಿಗೇ ಏಕಾಏಕಿ ಬೆಂಗಳೂರಿನ ಕೆಫೆಯೊಂದರಲ್ಲಿ ನಡೆದಿರುವ ಸ್ಫೋಟ ಇನ್ನಷ್ಟು ಅನುಮಾನಗಳನ್ನು ಸೃಷ್ಟಿಸಿವೆ. ಆದುದರಿಂದ ಸರಕಾರ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಯ ಹಿಂದಿರುವ ಸತ್ಯಾಸತ್ಯತೆಯನ್ನು ತಕ್ಷಣ ಬಹಿರಂಗಪಡಿಸಬೇಕು. ಒಂದು ವೇಳೆ ಘೋಷಣೆ ಕೂಗಿರುವುದು ನಿಜವೇ ಆಗಿದ್ದರೆ ಆರೋಪಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಸುಳ್ಳಾದರೆ, ಅಂತಹ ವದಂತಿಗಳನ್ನು ಹರಡಿ ಸಮಾಜದ ಶಾಂತಿಯನ್ನು ಕೆಡಿಸಲು ಪ್ರಯತ್ನಿಸಿರುವುದಕ್ಕಾಗಿ ಮಾಧ್ಯಮಗಳ ಮೇಲೆ ಸ್ಪಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಹಾಗೆಯೇ ಈ ಎರಡೂ ಪ್ರಕರಣದ ಹಿಂದೆ ರಾಜಕೀಯ ಶಕ್ತಿಗಳ ಕೈವಾಡವಿದೆಯೇ ಎನ್ನುವ ತನಿಖೆಯನ್ನೂ ನಡೆಸುವ ಅಗತ್ಯವಿದೆ. ಜೊತೆಗೆ ಸ್ಫೋಟ ಪ್ರಕರಣವನ್ನು ಕೋಮು ಉದ್ವಿಗ್ನ ವಾತಾವರಣ ಸೃಷ್ಟಿಸಲು ಯಾರೇ ಬಳಸಿದರೂ ಅವರ ಮೇಲೆ ಪ್ರಕರಣ ದಾಖಲಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News