ಹೆಜ್ಜೆ ಇಡುವ ಮೊದಲೇ ಕೆಸರಲ್ಲಿ ಹೂತುಹೋದ ಪಾದಯಾತ್ರೆ

Update: 2024-08-02 05:13 GMT

PC: x.com/BJP4Karnataka

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮುಡಾ ನಿವೇಶನ ಹಂಚಿಕೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಖಂಡಿಸಿ ಬಿಜೆಪಿಯು ಪಾದಯಾತ್ರೆ ಮಾಡುವುದಾಗಿ ಘೋಷಿಸಿದೆ. ಮುಡಾ ಹಗರಣ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮಗಳನ್ನು ಮುಂದಿಟ್ಟುಕೊಂಡು ಬಿಜೆಪಿಯು ಮುಖ್ಯಮಂತ್ರಿಯ ರಾಜೀನಾಮೆಯನ್ನು ಕೇಳುತ್ತಿದೆ. ಪಾದಯಾತ್ರೆ ನಡೆಸುವ ಬಗ್ಗೆ ದಿಲ್ಲಿಯ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಬಿಜೆಪಿಯ ರಾಜ್ಯ ನಾಯಕರು ತಿಳಿಸಿದ್ದಾರೆ. ಒಂದು ಕಾಲದಲ್ಲಿ ಗಣಿರೆಡ್ಡಿಗಳ ವಿರುದ್ಧ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಣ್ಣದೊಂದು ಅಣಕ ಇದು. ಅಂದಿನ ಪಾದಯಾತ್ರೆಯ ಪರಿಣಾಮವಾಗಿ ಬಿಜೆಪಿ ಸರಕಾರ ಬಿದ್ದು, ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರ ಹಿಡಿಯಿತು. ಬಿಜೆಪಿ ಇದೀಗ ಹಮ್ಮಿಕೊಳ್ಳುತ್ತಿರುವ ಮೈಸೂರು ಚಲೋ ಪಾದಯಾತ್ರೆಯ ಮುಖ್ಯ ಗುರಿ ಸಿದ್ದರಾಮಯ್ಯ ಆಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಸರಿಸಿದರೆ, ಕಾಂಗ್ರೆಸನ್ನು ಭವಿಷ್ಯದಲ್ಲಿ ಸುಲಭದಲ್ಲಿ ಸರಿಸಿ ಬಿಡಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ. ವಿರೋಧ ಪಕ್ಷದ ನಾಯಕರು ಮತ್ತು ಬಿಜೆಪಿಯ ರಾಜ್ಯಾಧ್ಯಕ್ಷರು ಈಗಾಗಲೇ ಪಾದಯಾತ್ರೆಯ ಬಗ್ಗೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದು ಸಹಜವಾಗಿಯೇ ಕಾಂಗ್ರೆಸನ್ನು ಕೆರಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯು ರಾಜ್ಯಪಾಲರನ್ನು ದುರ್ಬಳಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ನೋಟಿಸನ್ನು ಹಿಂಪಡೆಯಬೇಕು ಎಂದು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಒತ್ತಾಯಿಸಿದೆ.

ಚುನಾವಣಾ ಬಾಂಡ್ ಸೇರಿದಂತೆ ಹಲವು ಪ್ರಮುಖ ಹಗರಣಗಳಲ್ಲಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ಅನುಮತಿಯ ಮೇರೆಗೆ ಬಿಜೆಪಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ಮುಂದಾಗಿದೆ. ತಮ್ಮ ಮೇಲೆ ಭ್ರಷ್ಟಾಚಾರ ಆರೋಪಗಳು ಬಂದಾಗ ಅದಕ್ಕೆ ಸಣ್ಣ ಸ್ಪಷ್ಟೀಕರಣವನ್ನೂ ನೀಡಲು ಸಿದ್ಧರಿರದ ಪ್ರಧಾನಿ ಮೋದಿಯವರ ಮಾರ್ಗದರ್ಶನದ ಮೇರೆಗೆ ರಾಜ್ಯ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ನಡೆಸಿ ಅವರ ರಾಜೀನಾಮೆ ಅಪೇಕ್ಷಿಸುತ್ತಿದ್ದಾರೆ. ಇದರ ಅರ್ಥ, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕ್ಲೀನ್‌ಚಿಟ್ ಕೊಡಬೇಕು ಎಂದಲ್ಲ. ಆದರೆ ಅವರಿಂದ ರಾಜೀನಾಮೆ ಪಡೆಯುವ ನೈತಿಕತೆಯನ್ನು ಬಿಜೆಪಿ ಉಳಿಸಿಕೊಂಡಿಲ್ಲ ಎನ್ನುವುದು ಪಾದಯಾತ್ರೆ ಅತಿ ದೊಡ್ಡ ಋಣಾತ್ಮಕ ಅಂಶ. ಆ ಕಾರಣದಿಂದಲೇ, ಪಾದಯಾತ್ರೆಗೆ ಹೊರಡುವ ಮುನ್ನವೇ ಬಿಜೆಪಿ ನಾಯಕರ ಪಾದಗಳು ತಮ್ಮದೇ ಕೆಸರಿನಲ್ಲಿ ಹೂತು ಬಿಟ್ಟಿವೆ. ರಾಜ್ಯ ವರಿಷ್ಠರು ಪಾದಯಾತ್ರೆಯನ್ನು ಘೋಷಿಸುತ್ತಿದ್ದಂತೆಯೇ ಅದರ ವಿರುದ್ಧ ಬಿಜೆಪಿಯೊಳಗಿರುವ ನಾಯಕರಿಂದಲೇ ಟೀಕೆಗಳು ವ್ಯಕ್ತವಾಗುತ್ತಿವೆ. ಅಷ್ಟೇ ಅಲ್ಲ, ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಜೆಡಿಎಸ್ ಕೂಡ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಹಿಂದೇಟು ಹಾಕುತ್ತಿದೆ. ಕೆಸರಲ್ಲಿ ಹೂತಿರುವ ತಮ್ಮದೇ ಪಾದಗಳನ್ನು ಮೇಲೆಳೆದುಕೊಂಡು ಅದನ್ನು ಶುಚಿಗೊಳಿಸಿ ಹೆಜ್ಜೆ ಮುಂದಿಡಬೇಕಾದ ಸ್ಥಿತಿ ಬಿಜೆಪಿ ನಾಯಕರದ್ದಾಗಿದೆ. ಒಂದು ರೀತಿಯಲ್ಲಿ, ಪಾದಯಾತ್ರೆಯು ಆರಂಭಕ್ಕೆ ಮೊದಲೇ ಹಿನ್ನಡೆಯನ್ನು ಅನುಭವಿಸಿದೆ.

ವಾಲ್ಮೀಕಿ ನಿಗಮದ ಅಕ್ರಮಗಳು ಹಾಗೂ ಮುಡಾ ಹಗರಣವನ್ನು ಮುಂದಿಟ್ಟು ಬಿಜೆಪಿಯು ಗದ್ದಲ ಎಬ್ಬಿಸುತ್ತಿದ್ದಂತೆಯೇ ಕಾಂಗ್ರೆಸ್ ಸರಕಾರ, ಹಳೆಯ ಹಗರಣಗಳಿಗೆ ಜೀವಕೊಡುವುದಾಗಿ ಬಿಜೆಪಿಯನ್ನು ಬೆದರಿಸುತ್ತಿದೆ. ಸರಕಾರ ಈ ಮೂಲಕ ವಿರೋಧ ಪಕ್ಷಕ್ಕೆ ‘ಕೊಡು-ಕೊಳ್ಳುವಿಕೆ’ಯ ಕೊಡುಗೆಯನ್ನು ನೀಡಿದೆ. ಕಾಂಗ್ರೆಸ್ ಅಧಿಕಾರ ಹಿಡಿದಿರುವುದು ಬಿಜೆಪಿಯ ಹಗರಣಗಳನ್ನು, ಭ್ರಷ್ಟಾಚಾರಗಳನ್ನು ಮುಂದಿಟ್ಟುಕೊಂಡು. ಶೇ. 40 ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಭಾರೀ ಆಂದೋಲನವನ್ನೇ ನಡೆಸಿತ್ತು. ಅಧಿಕಾರ ಹಿಡಿದಾಕ್ಷಣ ಭ್ರಷ್ಟಾಚಾರದಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರನ್ನು ಜೈಲಿಗೆ ಕಳುಹಿಸುವುದು ಬಿಜೆಪಿಯ ಕರ್ತವ್ಯವಾಗಿತ್ತು. ಆದರೆ ಅಧಿಕಾರ ಹಿಡಿದ ಬೆನ್ನಿಗೇ, ಕಾಂಗ್ರೆಸ್ ಸರಕಾರ ಬಿಜೆಪಿಯ ಭ್ರಷ್ಟರನ್ನು ರಕ್ಷಿಸುವ ಕಾಯಕದಲ್ಲಿ ತೊಡಗಿತು. ಕಾಂಗ್ರೆಸ್ ತನ್ನ ಹೊಣೆಗಾರಿಕೆಯನ್ನು ಮರೆತರೂ, ವಿರೋಧ ಪಕ್ಷದಲ್ಲಿ ಕೂತಿದ್ದ ಬಿಜೆಪಿ ಮರೆತಿರಲಿಲ್ಲ. ಸಿದ್ದರಾಮಯ್ಯ ಸರಕಾರ ವರ್ಷ ಪೂರೈಸುತ್ತಿದ್ದಂತೆಯೇ ಮುಡಾ, ವಾಲ್ಮೀಕಿಯನ್ನು ಮುಂದಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅವರ ಕರ್ತವ್ಯವನ್ನು ನೆನಪಿಸಿಕೊಡುತ್ತಿದೆ. ಇದೀಗ ತನ್ನ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷ ಬಿಜೆಪಿಯ ಹಳೆಯ ಹಗರಣಗಳನ್ನು ಕೈಗೆತ್ತಿಕೊಳ್ಳಲೇ ಬೇಕಾಗಿದೆ. ಬಿಜೆಪಿಯ ಹಗರಣಗಳಿಗೆ ತನ್ನ ಹಗರಣವನ್ನು ಹೋಲಿಸಿಕೊಂಡು, ತನಗೆ ತಾನೇ ಕ್ಲೀನ್ ಚಿಟ್ ನೀಡಲು ಮುಂದಾಗಿದೆ. ಕಾಂಗ್ರೆಸ್ ಸರಕಾರಕ್ಕೆ ತನ್ನ ಕರ್ತವ್ಯವನ್ನು ನೆನಪು ಮಾಡಿಕೊಡುವ ನಿಟ್ಟಿನಲ್ಲಿ, ಬಿಜೆಪಿಯ ಪ್ರಯತ್ನಗಳನ್ನು ಈ ಸಂದರ್ಭದಲ್ಲಿ ನಾವು ಶ್ಲಾಘಿಸಲೇಬೇಕು.

ಆದರೆ ಬಿಜೆಪಿಯು ಕಾಂಗ್ರೆಸ್‌ಗಿಂತ ಬಿಜೆಪಿಯೊಳಗಿರುವ ನಾಯಕರುಗಳಿಂದಲೇ ಪಾದಯಾತ್ರೆಗೆ ವಿರೋಧಗಳನ್ನು ಎದುರಿಸುತ್ತಿದೆ. ‘ಪಾದಯಾತ್ರೆ’ಯನ್ನು ಟೀಕಿಸಿರುವ ಯತ್ನಾಳ್, ‘ಈ ಹೋರಾಟ ಸಿದ್ದರಾಮಯ್ಯರನ್ನು ಕೆಳಗಿಳಿಸಿ ಡಿ.ಕೆ. ಶಿವಕುಮಾರ್‌ರನ್ನು ಅಧಿಕಾರಕ್ಕೇರಿಸುವ ಗುರಿಯನ್ನಷ್ಟೇ ಹೊಂದಿದೆ’ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಬಿಜೆಪಿ ನಾಯಕರು ಪಾದಯಾತ್ರೆಗೆ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲ, ಅದರ ವಿರುದ್ಧ ಪಕ್ಷದ ಇತರ ನಾಯಕರನ್ನು ಸಂಘಟಿಸುವ ಪ್ರಯತ್ನದಲ್ಲಿದ್ದಾರೆ. ಈ ಸಂಬಂಧ ಪ್ರತ್ಯೇಕ ಸಭೆಯನ್ನು ನಡೆಸಿರುವ ಬಗ್ಗೆಯೂ ಮಾಹಿತಿಗಳಿವೆ. ವಿಪರ್ಯಾಸವೆಂದರೆ, ಸಿದ್ದರಾಮಯ್ಯ ವಿರುದ್ಧ ಸದಾ ಭುಸುಗುಡುತ್ತಿದ್ದ , ಮೈತ್ರಿ ಪಕ್ಷವಾಗಿರುವ ಜೆಡಿಎಸ್‌ನ ನಾಯಕ ಕುಮಾರಸ್ವಾಮಿಯವರ ಬೆಂಬಲವನ್ನು ಪಡೆಯುವುದಕ್ಕೂ ಬಿಜೆಪಿಯ ರಾಜ್ಯ ನಾಯಕರು ವಿಫಲವಾಗಿದ್ದಾರೆ. ಪಾದಯಾತ್ರೆಗೆ ಸಂಬಂಧಿಸಿದ ಸಭೆಯಲ್ಲಿ ಮಾಜಿ ಶಾಸಕ ಪ್ರೀತಮ್ ಗೌಡರನ್ನು ಸೇರಿಸಿಕೊಂಡ ಬಗ್ಗೆ ಕುಮಾರಸ್ವಾಮಿ ತೀವ್ರ ಸಿಟ್ಟುಗೊಂಡಿದ್ದಾರೆ. ‘‘ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟವನೊಂದಿಗೆ ವೇದಿಕೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಚುನಾವಣಾ ಮೈತ್ರಿ ಬೇರೆ, ರಾಜಕೀಯ ಬೇರೆ’’ ಎಂದು ಬಿಜೆಪಿ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ.

ಮುಖ್ಯವಾಗಿ ಮುಡಾ ಹಗರಣವನ್ನು ರಾಜ್ಯಮಟ್ಟದ ಹಗರಣವಾಗಿಸಲು ಹೋಗಿ ಬಿಜೆಪಿ ಎಡವಿದೆ. ಯಾಕೆಂದರೆ, ಸಿದ್ದರಾಮಯ್ಯ ಅವರ ಆರೋಪವನ್ನು ಸಾಬೀತು ಪಡಿಸಲು ಹೊರಟರೆ, ಮುಡಾದಲ್ಲಿ ತಾವು ಮಾಡಿದ ಅಕ್ರಮಗಳು ಒಂದೊಂದಾಗಿ ಬಯಲಾಗುವ ಸಾಧ್ಯತೆಗಳಿವೆ ಎನ್ನುವ ಭಯ ಬಿಜೆಪಿ, ಜೆಡಿಎಸ್‌ನೊಳಗಿರುವ ನಾಯಕರಲ್ಲೂ ಇವೆ. ಪೆನ್‌ಡ್ರೈವ್ ಹಗರಣದ ಕುಣಿಕೆಯನ್ನು ರಾಜ್ಯ ಸರಕಾರ ಬಿಗಿ ಮಾಡಿದರೆ ಇನ್ನಷ್ಟು ಮುಜುಗರವನ್ನು ಎದುರಿಸಬೇಕಾಗುತ್ತದೆ ಎನ್ನುವ ಆತಂಕ ಜೆಡಿಎಸ್ ನಾಯಕರೊಳಗಿದೆ. ಬಿಜೆಪಿಯು ಪಾದಯಾತ್ರೆಯಿಂದ ವರ್ಚಸ್ಸು ಬೆಳೆಸಿಕೊಂಡಷ್ಟೂ ಜೆಡಿಎಸ್‌ಗೆ ನಷ್ಟವಿದೆ ಎನ್ನುವುದು ಕುಮಾರಸ್ವಾಮಿಗೂ ಸ್ಪಷ್ಟವಾಗತೊಡಗಿದೆ. ಬಿಜೆಪಿ ನಾಯಕರು ಈ ಹಿಂದೆ ಮಾಡಿರುವ ಭ್ರಷ್ಟಾಚಾರಗಳಿಗೆ ಹೋಲಿಸಿದರೆ ಸಿದ್ದರಾಮಯ್ಯ ಅವರು ಗುರುತಿಸಿಕೊಂಡಿರುವ ಮುಡಾ ಪ್ರಕರಣ ತೀರಾ ಸಣ್ಣದು.

ಬಿಜೆಪಿ ಪಾದಯಾತ್ರೆ ರಾಜಕೀಯ ವಲಯದಲ್ಲಿ ವಿಶೇಷ ಪರಿಣಾಮ ಬೀರುವ ಸೂಚನೆಗಳು ಕಾಣುತ್ತಿಲ್ಲ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕಾನೂನು ಉಲ್ಲಂಘಿಸಿದ್ದಾರೆ ಎಂದಾದರೆ ಆ ಬಗ್ಗೆ ಸ್ಪಷ್ಟ ತನಿಖೆಗೆ ಅವಕಾಶವನ್ನು ನೀಡಬೇಕು. ಎಷ್ಟೇ ಸಣ್ಣ ಹಗರಣ ಆಗಿರಲಿ, ಕಾನೂನಿನ ಉರುಳು ಮುಖ್ಯಮಂತ್ರಿಯ ಕೊರಳಿಗೆ ಬಿದ್ದರೆ ಅವರು ರಾಜೀನಾಮೆ ನೀಡಲೇ ಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ಆದುದರಿಂದ ತನಿಖೆಗೆ ಅಗತ್ಯವಿರುವ ದಾಖಲೆಗಳನ್ನು ಬಿಜೆಪಿ ಮುಂದಿಡಬೇಕು. ತನಿಖೆಯಲ್ಲಿ ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಹಸ್ತಕ್ಷೇಪ ನಡೆಸಕೂಡದು. ಮುಡಾ ನಿವೇಶನ ಹಂಚಿಕೆಯಲ್ಲಿ ಸಿದ್ದರಾಮಯ್ಯ ಅವರು ಅಕ್ರಮ ಎಸಗಿರುವುದು ತನಿಖೆಯಿಂದ ಸಾಬೀತಾದರೆ, ಕಾಂಗ್ರೆಸ್‌ನೊಳಗೇ ಅವರನ್ನು ಇಳಿಸುವ ಕಾರ್ಯಾಚರಣೆ ಆರಂಭವಾಗುತ್ತದೆ. ಬಿಜೆಪಿ ಅನಗತ್ಯ ಗದ್ದಲ ಎಬ್ಬಿಸಿದಷ್ಟೂ ತನ್ನ ಕೆಸರಿನಿಂದ ತಾನೇ ಮೈ ಹೊಲಸು ಮಾಡಿಕೊಂಡಂತಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News