ಗೋರಕ್ಷಕರ ವೇಷದಲ್ಲಿ ನರಭಕ್ಷಕರು!

Update: 2024-09-04 04:43 GMT

ಸಾಂದರ್ಭಿಕ ಚಿತ್ರ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇಲ್ಲಿ ಗೋಭಕ್ಷಣೆಯನ್ನು ನಿಷೇಧಿಸಲಾಗಿದೆ. ಬದಲಿಗೆ ನರಭಕ್ಷಣೆಯನ್ನು ಮಾನ್ಯಗೊಳಿಸಲಾಗಿದೆ. ಗೋವಿನ ಮೇಲೆ ಪ್ರೀತಿಯನ್ನು ನಟಿಸುತ್ತ ಮನುಷ್ಯರನ್ನು ಸಾಯಿಸುವುದಕ್ಕೆ ಪರೋಕ್ಷ ಪರವಾನಿಗೆಯನ್ನು ನೀಡಿದ ಏಕೈಕ ದೇಶ ನಮ್ಮದು. ಪರಿಣಾಮವಾಗಿ ನಗರ ಪ್ರದೇಶಗಳಲ್ಲಿ ಹಾಡುಹಗಲೇ ಮನುಷ್ಯರನ್ನು ಮೃಗಗಳಂತೆ ಬೇಟೆಯಾಡಿ ಕೊಂದು ಹಾಕುವ ಒಂದು ವರ್ಗವನ್ನು ಪರೋಕ್ಷವಾಗಿ ಸರಕಾರದ ನೇತೃತ್ವದಲ್ಲೇ ಸಾಕಲಾಗುತ್ತಿದೆ. ಹಾಗೆ ಸಾಕಿಲ್ಲದೇ ಇದ್ದರೆ, ಹರ್ಯಾಣದಲ್ಲಿ ಗೋರಕ್ಷಕರೆಂದು ಕರೆಸಿಕೊಂಡ ಗೂಂಡಾಗಳ ಗುಂಪು, ಒಬ್ಬ ವಿದ್ಯಾರ್ಥಿಯೊಬ್ಬನನ್ನು ಗುಂಡಿಟ್ಟು ಕೊಂದು ಹಾಕುವ ಧೈರ್ಯವನ್ನು ತೋರಿಸುತ್ತಿರಲಿಲ್ಲ. ಈಗಾಗಲೇ ನಿರ್ದಿಷ್ಟ ಸಮುದಾಯದ ಬಡ ವರ್ಗಕ್ಕೆ ಸೇರಿದ ಅಮಾಯಕರನ್ನು ಗೋವಿನ ಹೆಸರಿನಲ್ಲಿ ಕೊಂದು ಹಾಕುವುದಕ್ಕಾಗಿಯೇ ಸರಕಾರ ‘ಗೋರಕ್ಷಕರು’ ಎಂಬ ಹೆಸರಿನಲ್ಲಿ ರೌಡಿಗಳನ್ನು, ಗೂಂಡಾಗಳನ್ನು ಅನಧಿಕೃತವಾಗಿ ಸಾಕತೊಡಗಿದೆ. ಈ ಗೋರಕ್ಷಕ ವೇಷದಲ್ಲಿರುವ ನರಭಕ್ಷಕರು ಆರಂಭದಲ್ಲಿ ಒಂದು ನಿರ್ದಿಷ್ಟ ಸಮುದಾಯದ ಜನರನ್ನಷ್ಟೇ ಆಹಾರವಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ನಿಧಾನಕ್ಕೆ ನರ ಮಾಂಸದ ರುಚಿ ಹತ್ತಿದಂತೆಯೇ ಧರ್ಮ ಮುಖ್ಯವಾಗುವುದಿಲ್ಲ. ಮಾಂಸದ ರುಚಿಗೆ ಧರ್ಮವಿಲ್ಲ ಎನ್ನುವುದು ಅವರಿಗೂ ಗೊತ್ತಾಗಿದೆ. ಪರಿಣಾಮವಾಗಿ, ಹರ್ಯಾಣದಲ್ಲಿ 19ರ ಹರೆಯದ ವಿದ್ಯಾರ್ಥಿ ಆರ್ಯನ್ ಮಿಶ್ರಾ ಎಂಬಾತನನ್ನು ಕೊಂದು ಹಾಕಿದ್ದಾರೆ. ಕೊಲೆಗಳನ್ನು ಸಂಭ್ರಮಿಸುವವರು ನಿಧಾನಕ್ಕೆ ಸಂಭ್ರಮಿಸುವುದಕ್ಕಾಗಿಯೇ ಕೊಲೆಗಳನ್ನು ಮಾಡುತ್ತಾರೆ ಎನ್ನುವುದು ಭಾರತದ ಪಾಲಿಗೆ ನಿಜವಾಗತೊಡಗಿದೆ. ಆಗ ಕೊಲೆಗಾರರಿಗೆ ಧರ್ಮ ಮುಖ್ಯವಾಗುವುದಿಲ್ಲ.

ಹರ್ಯಾಣದಲ್ಲಿ ನಡೆದಿರುವ ಕೃತ್ಯ ಆಕಸ್ಮಿಕವಾಗಿ ನಡೆದಿರುವುದೇನೂ ಅಲ್ಲ. ಮೃತ ವಿದ್ಯಾರ್ಥಿ ಮತ್ತು ಆತನ ಕುಟುಂಬ ಇರುವ ಕಾರೊಂದನ್ನು ಈ ದುಷ್ಕರ್ಮಿಗಳು ತಡೆಯಲು ಯತ್ನಿಸಿದ್ದಾರೆ. ದರೋಡೆಕೋರರು ಇರಬಹುದು ಎಂದು ಭಯಗೊಂಡ ಕುಟುಂಬ ಕಾರನ್ನು ವೇಗವಾಗಿ ಮುಂದಕ್ಕೆ ಚಲಾಯಿಸಿದ್ದಾರೆ. ದುಷ್ಕರ್ಮಿಗಳು ಸುಮಾರು 30 ಕಿ. ಮೀ.ವರೆಗೆ ಹಿಂಬಾಲಿಸಿ ಹಿಂದಿನಿಂದ ಕಾರಿನೆಡೆಗೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ 19 ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಕಾರಿನಲ್ಲಿ ಇಬ್ಬರು ಮಹಿಳೆಯರು ಮತ್ತು ಅವರ ಕುಟುಂಬಸ್ಥರು ನಗರದ ಹೊಟೇಲೊಂದರಲ್ಲಿ ಊಟ ಮುಗಿಸಿ ಮನೆಗೆ ಮರಳುತ್ತಿದ್ದರು. ಇದೀಗ ಕೃತ್ಯಕ್ಕೆ ಸಂಬಂಧಿಸಿ ಅನಿಲ್ ಕೌಶಿಕ್, ವರುಣ್, ಆದೇಶ್ ಮತ್ತು ಸೌರಭ್ ಎಂಬವರನ್ನು ಬಂಧಿಸಲಾಗಿದೆ. ಕಾರಿನಲ್ಲಿ ಗೋವುಗಳನ್ನು ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ಇವರು ಗುಂಡು ಹಾರಿಸಿದ್ದರಂತೆ. ಮಿಶ್ರಾನ ತಂದೆ ಸಿಯಾನಂದ ಮಿಶ್ರಾ ಅವರ ದೂರಿನ ಮೇರೆಗೆ ಪೊಲೀಸರು ಇದೀಗ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಬಹುಶಃ ಮೃತಪಟ್ಟವರು ಗೋವಿನ ವ್ಯಾಪಾರಿಗಳೋ, ಸಾಕುವುದಕ್ಕಾಗಿ ಗೋವನ್ನು ಸಾಗಾಟ ಮಾಡುತ್ತಿದ್ದ ಬಡ ರೈತರಾಗಿದ್ದರೆ ಇದು ಇಷ್ಟರಮಟ್ಟಿಗೆ ಸುದ್ದಿಯಾಗುತ್ತಿರಲಿಲ್ಲ. ಸಣ್ಣ ಮಟ್ಟದಲ್ಲಿ ಸುದ್ದಿಯಾದರೂ, ಆರೋಪಿಗಳ ಬಂಧನ ಇಷ್ಟು ಶೀಘ್ರದಲ್ಲಿ ಆಗುತ್ತಿರಲಿಲ್ಲ. ಜೊತೆಗೆ ಮೃತರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ, ಬಳಿಕ ಆರೋಪಿಗಳನ್ನು ಬಂಧಿಸುವ ನಾಟಕವನ್ನು ಪೊಲೀಸರು ಮಾಡುತ್ತಿದ್ದರು. ಯಾರೋ ಒಬ್ಬರನ್ನು ಕಾಟಾಚಾರಕ್ಕೆ ಬಂಧಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಮೃತರ ಸಂಗಡಿಗರ ಮೇಲೆಯೂ ಸುಳ್ಳು ಮೊಕದ್ದಮೆಗಳು ದಾಖಲಾಗಿ ಬಿಡುತ್ತಿದ್ದವು. ಆದರೆ ಈ ನಕಲಿ ಗೋರಕ್ಷಕರು ಭಕ್ಷಿಸುವುದಕ್ಕಾಗಿ ಈ ಬಾರಿ ನಗರ ಪ್ರದೇಶದ, ಮೇಲ್‌ಜಾತಿಯ, ಉನ್ನತ ವರ್ಗದ ಮನುಷ್ಯರನ್ನು ಆಯ್ಕೆ ಮಾಡಿಕೊಂಡಿದ್ದರು. ಆದುದರಿಂದ ಪೊಲೀಸರು ಅಸಹಾಯಕರಾಗಿದ್ದಾರೆ. ತಾವೇ ಸಾಕಿ ಬೆಳೆಸಿದ ನರ ಭಕ್ಷಕರನ್ನು ಬಂಧಿಸುವುದು ಅವರಿಗೆ ಅನಿವಾರ್ಯವಾಯಿತು. ಎಲ್ಲ ಆರೋಪಿಗಳು ಜೈಲು ಪಾಲಾಗುವುದು ಅನಿವಾರ್ಯವಾಯಿತು.

ಹರ್ಯಾಣದಲ್ಲಿ ಒಬ್ಬ ಅಮಾಯಕ ವಿದ್ಯಾರ್ಥಿಯ ಕಗ್ಗೊಲೆಗೆ ಪರೋಕ್ಷವಾಗಿ ವ್ಯವಸ್ಥೆಯೇ ಕಾರಣವಾಗಿದೆ. ಈ ಗೂಂಡಾಗಳು ಕಾರಿನಲ್ಲಿ ಅಕ್ರಮವಾಗಿ ಗೋಸಾಗಣೆ ಮಾಡುತ್ತಿದ್ದಾರೆ ಎಂದು ಶಂಕಿಸಿ ಗುಂಡು ಹಾರಿಸಿದರಂತೆ. ಹಾಗೆ ಶಂಕಿಸಿ ವಾಹನವನ್ನು ತಡೆಯಲು ಇವರಿಗೆ ಅಧಿಕಾರವನ್ನು ನೀಡಿದವರು ಯಾರು? ಇವರು ಪೊಲೀಸ್ ಇಲಾಖೆಯೇ ಭಾಗವೆ? ಇವರಿಗೆ ‘ಗೋರಕ್ಷಕರು’ ಎಂದು ಹಣೆಪಟ್ಟಿ ನೀಡಿ ಅವರ ಕೈಗೆ ಪಿಸ್ತೂಲನ್ನು ನೀಡಿದವರು ಯಾರು? ಈ ಪರ್ಯಾಯ ಪೊಲೀಸ್ ವ್ಯವಸ್ಥೆಗೂ ಅಸಲಿ ಪೊಲೀಸರಿಗೂ ಇರುವ ಸಂಬಂಧವೇನು? ಪೊಲೀಸರು ಮತ್ತು ಈ ನರಭಕ್ಷಕರ ನಡುವೆ ಅನೈತಿಕ ಸಂಬಂಧವಿಲ್ಲದೇ ಇದ್ದರೆ, ಹೀಗೆ ಹೆದ್ದಾರಿಯಲ್ಲಿ ಒಂದು ಕಾರನ್ನು ಬೆಂಬತ್ತುವುದು ಸಾಧ್ಯವೆ? ಈ ಎಲ್ಲ ಪ್ರಶ್ನೆಗಳಿಗೆ ಹರ್ಯಾಣ ಸರಕಾರ ಮತ್ತು ಪೊಲೀಸರು ಉತ್ತರಿಸಬೇಕು. ಈ ಕೊಲೆಗೆ ಸಂಬಂಧಿಸಿ ಕೇವಲ ದುಷ್ಕರ್ಮಿಗಳನ್ನಷ್ಟೇ ಬಂಧಿಸುವುದರಿಂದ ಇಂತಹ ಕೃತ್ಯಗಳನ್ನು ತಡೆಯಲು ಸಾಧ್ಯವಿಲ್ಲ. ಸ್ಥಳೀಯ ಪೊಲೀಸರನ್ನು ಕೂಡ ಈ ಕೃತ್ಯಕ್ಕೆ ಸಂಬಂಧಿಸಿ ವಜಾಗೊಳಿಸಬೇಕಾಗಿದೆ. ಅಕ್ರಮ ಗೋಸಾಗಾಟದ ಹೆಸರಿನಲ್ಲಿ ಅಮಾಯಕರನ್ನು ಸಾಯಿಸುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ದೇಶದ ವಿವಿಧೆಡೆಗಳಲ್ಲಿ ಇಂತಹ ಕೃತ್ಯಗಳು ಜರಗಿವೆ. ಗೋವುಗಳನ್ನು ಸಾಕುವುದಕ್ಕಾಗಿ ಕೊಂಡೊಯ್ಯುತ್ತಿದ್ದ ರೈತರ ಮೇಲೆಯೇ ದಾಳಿ ನಡೆದಿವೆ. ಇದೇ ಹರ್ಯಾಣದಲ್ಲಿ ಕಳೆದ ವಾರ ಗೋಮಾಂಸವನ್ನು ಸೇವಿಸಿದ್ದಾನೆ ಎಂದು ಆರೋಪಿಸಿ ಕಾರ್ಮಿಕನೊಬ್ಬ ಥಳಿಸಿ ಹತ್ಯೆಗೈದಿದ್ದಾರೆ. ಈ ದೇಶದಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುವುದು ತಪ್ಪಾಗಿರಬಹುದು. ಆದರೆ ಗೋಮಾಂಸ ಸೇವಿಸುವುದು ಅಪರಾಧವೆ? ಗೋವಾ, ಕೇರಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಗೋಮಾಂಸ ಸೇವನೆಯನ್ನು ಬಹಿರಂಗವಾಗಿ ಬೆಂಬಲಿಸುತ್ತಿದೆ. ಈ ದೇಶದ ಬಹುಸಂಖ್ಯಾತರು ಗೋಮಾಂಸವನ್ನು ಸೇವಿಸುತ್ತಾರೆ. ಹೀಗಿರುವಾಗ, ಒಬ್ಬ ಅಮಾಯಕ ಕಾರ್ಮಿಕನನ್ನು ಗೋಮಾಂಸ ಸೇವಿಸಿದ್ದಾನೆ ಎಂದು ಶಂಕಿಸಿ ಹತ್ಯೆಗೈಯಬೇಕಾದರೆ ಹರ್ಯಾಣದಲ್ಲಿ ನರಭಕ್ಷಕರು ಯಾವ ಹಂತಕ್ಕೆ ತಲುಪಿರಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಹರ್ಯಾಣದಲ್ಲಿ ಗೋಮಾಂಸವನ್ನು ನಿಷೇಧಿಸಿ, ನರಮಾಂಸವನ್ನು ಮಾನ್ಯ ಮಾಡಲಾಗಿದೆಯೇ ಎಂದು ನಾಗರಿಕರು ಶಂಕಿಸುವ ವಾತಾವರಣ ನಿರ್ಮಾಣವಾಗಿದೆ.

ದೇಶದಲ್ಲಿ ಸಾಂಕ್ರಾಮಿಕ ರೋಗದಂತೆ ಗೋರಕ್ಷಣೆಯ ಹೆಸರಿನಲ್ಲಿ ಹರಡುತ್ತಿರುವ ರೆಂಬಿಗಳನ್ನು ನಿರ್ಮಾಣಮಾಡಿರುವುದೇ ಸರಕಾರದ ಜಾನುವಾರು ಮಾರಾಟ ನಿಯಂತ್ರಣ ಕಾನೂನು. ಈ ಕಾನೂನು ಯಾವ ರೀತಿಯಲ್ಲೂ ರೈತರಿಗೆ ಪ್ರಯೋಜನಕಾರಿಯಾಗಿಲ್ಲ. ಬದಲಿಗೆ ಗೋವುಗಳನ್ನು ಸಾಕುವ ರೈತರಿಗೆ ಮಾರಕವಾಗಿದೆ. ತಮ್ಮ ಅನುಪಯುಕ್ತ ಗೋವುಗಳನ್ನು ಮಾರುವುದಕ್ಕೆ ಇವರಿಗೆ ಸಾಧ್ಯವಾಗುತ್ತಿಲ್ಲ. ಇದು ಗೋಸಾಕಣೆಯನ್ನು ಇವರಿಗೆ ದುಬಾರಿಯಾಗಿಸಿದೆ. ಗೋವುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಾಟ ಮಾಡಬೇಕಾದರೆ ಜೀವವನ್ನೇ ಒತ್ತೆಯಿಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗೋಸಾಕಣೆಗಳನ್ನು ತಡೆದು ಹೈನೋದ್ಯಮವನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಪೊರೇಟ್ ವಶಕ್ಕೆ ಒಪ್ಪಿಸುವುದಕ್ಕಾಗಿಯೇ ಈ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಇದರಿಂದಾಗಿ ನಿಜವಾದ ಗೋರಕ್ಷಕರು ಆತಂಕದಲ್ಲಿ ಬದುಕುತ್ತಿದ್ದು, ಗೋವಿನೊಂದಿಗೆ ಯಾವ ಸಂಬಂಧವೂ ಇಲ್ಲದ ಹೆದ್ದಾರಿ ದರೋಡೆಕೋರರು ‘ಗೋರಕ್ಷಕರೆಂದು’ ಬಿಂಬಿಸಲ್ಪಡುತ್ತಿದ್ದಾರೆ. ಒಂದೆಡೆ ದೇಶದಲ್ಲಿ ಶೇ. 50ಕ್ಕೂ ಅಧಿಮಂದಿ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಹಸಿವಿನ ಸೂಚ್ಯಂಕದಲ್ಲಿ ದೇಶ ಅತ್ಯಂತ ಕಳಪೆ ಸ್ಥಾನದಲ್ಲಿದೆ. ಇದೇ ಹೊತ್ತಿಗೆ, ಜನರ ಕೈಯಿಂದ ಅತ್ಯಂತ ಪೌಷ್ಟಿಕ ಆಹಾರವನ್ನು ‘2 ಶೇ. ಜನರ ಭಾವನೆಗಳನ್ನು’ ಮುಂದಿಟ್ಟುಕೊಂಡು ಕಸಿಯಲಾಗುತ್ತಿದೆ. ಮಾತ್ರವಲ್ಲ, ಕಸಿದು ಅದನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಅನುಪಯುಕ್ತ ಗೋವುಗಳನ್ನು ಸಾಕಲು ಗೋಶಾಲೆಗಳನ್ನು ನಿರ್ಮಿಸಿ ಜನರ ತೆರಿಗೆಯ ಹಣವನ್ನು ಇದಕ್ಕೆ ಸುರಿಯಲಾಗುತ್ತಿದೆ. ಗೋಶಾಲೆಗಳು ಅಕ್ರಮಗಳ ಗೂಡಾಗಿವೆ. ರೋಗರುಜಿನ, ಹಸಿವಿನಿಂದ ಗೋಶಾಲೆಗಳಲ್ಲಿ ಗೋವುಗಳು ಸಾಯುತ್ತಿವೆ. ರಾತ್ರೋ ರಾತ್ರಿ ಗೋಶಾಲೆಗಳಿಂದ ಈ ಅನುಪಯುಕ್ತ ಗೋವುಗಳು ಅಕ್ರಮವಾಗಿ ಬೃಹತ್ ಮಾಂಸ ಸಂಸ್ಕರಣಾ ಘಟಕಗಳಿಗೆ ರವಾನೆಯಾಗಿ ಅಲ್ಲಿಂದ ವಿದೇಶಗಳಿಗೆ ಸಾಗುತ್ತಿವೆೆ. ಭಾರತದ ಹೈನೋದ್ಯಮವನ್ನು ಜಾನುವಾರು ಮಾರಾಟ ಕಾನೂನಿನ ಮೂಲಕವೇ ಹಂತ ಹಂತವಾಗಿ ನಾಶ ಮಾಡಲಾಗುತ್ತಿದೆ. ಇದನ್ನು ಹಿಂದೆಗೆದು ಗೋವುಗಳನ್ನು, ನಿಜವಾದ ಗೋರಕ್ಷಕರನ್ನು ಹಾಗೂ ಬೀದಿಯಲ್ಲಿ ಓಡಾಡುವ ಅಮಾಯಕ ಜನರನ್ನು ಜೊತೆಯಾಗಿ ರಕ್ಷಿಸುವುದಕ್ಕೆ ಸರಕಾರ ಇನ್ನಾದರೂ ಮುಂದಾಗಬೇಕು. ಶರ್ಮಾ ಎನ್ನುವ ವಿದ್ಯಾರ್ಥಿಯ ಹತ್ಯೆಯ ಹೊಣೆಯನ್ನು ಈ ಕಾನೂನನ್ನು ಜಾರಿಗೆ ತಂದ ಸರಕಾರವೇ ಹೊತ್ತುಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News