ಜಾತಿ ಗಣತಿ ವರದಿ-ಒಳಮೀಸಲಾತಿ: ರಾಜ್ಯ ಸರಕಾರ ಯಾರಿಗೆ ಹೆದರುತ್ತಿದೆ?

Update: 2024-10-04 05:09 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘‘ಜಾತಿ ಗಣತಿ ವರದಿ ಜಾರಿಗೊಳಿಸಿಯೇ ಸಿದ್ಧ’’ ಎಂದು ಇತ್ತೀಚಿನ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಜಾತಿ ಗಣತಿ ವರದಿಯನ್ನು ಜಾರಿಗೊಳಿಸುವಲ್ಲಿ ಸಿದ್ದರಾಮಯ್ಯ ಅವರನ್ನು ಈವರೆಗೆ ತಡೆದವರು ಯಾರು? ಎನ್ನುವುದನ್ನು ಮಾತ್ರ ಅವರು ಸ್ಪಷ್ಟಪಡಿಸಿಲ್ಲ. ‘‘ಈ ಹಿಂದೆ ನಡೆಸಿದ್ದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷಾ ವರದಿ ನನ್ನ ಕೈ ಸೇರಿದ್ದು ಶೀಘ್ರದಲ್ಲೇ ಕ್ಯಾಬಿನೆಟ್‌ನಲ್ಲಿ ಇಟ್ಟು ಜಾರಿಗೆ ತರುತ್ತೇನೆ. ಜಾತಿ ಗಣತಿ ವರದಿ ನಮ್ಮ ಪಕ್ಷದ ಅಜೆಂಡಾ’’ ಎಂದು ಅವರು ಹೇಳಿಕೊಂಡಿದ್ದಾರೆ. ಇಂತಹ ಹೇಳಿಕೆಯನ್ನು ಈ ಹಿಂದೆಯೂ ಹಲವು ಬಾರಿ ಅವರು ನೀಡಿರುವುದರಿಂದ, ಈ ಬಾರಿ ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಂತಿಲ್ಲ. ವಿಪರ್ಯಾಸವೆಂದರೆ, ದೇಶದಲ್ಲೇ ಮೊದಲಿಗೆ ಜಾತಿ ಗಣತಿಯನ್ನು ನಡೆಸಿರುವುದು ಕರ್ನಾಟಕ. ನಮ್ಮ ರಾಜ್ಯದಲ್ಲಿ ನಡೆದ ಬಳಿಕ ಬಿಹಾರದಲ್ಲಿ ಈ ಗಣತಿ ನಡೆಯಿತು. ಆದರೆ, ವರದಿ ಮೊದಲು ಮಂಡನೆಯಾದದ್ದು ಬಿಹಾರದಲ್ಲಿ. 2015ರಲ್ಲಿ ಸಿದ್ದರಾಮಯ್ಯ ಸರಕಾರವೇ ಜಾತಿ ಗಣತಿಗೆ ಆದೇಶ ನೀಡಿತ್ತು. ಆದರೆ ಈ ವರದಿಯನ್ನು ಸ್ವೀಕರಿಸಲು ಆ ಬಳಿಕದ ಸರಕಾರಗಳು ಹಿಂದೇಟು ಹಾಕಿದವು. ವಿಪರ್ಯಾಸವೆಂದರೆ, ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರದ ಅವಧಿಯಲ್ಲೂ ಜಾತಿ ಗಣತಿ ವರದಿ ನನೆಗುದಿಗೆ ಬಿತ್ತು. ಇದೇ ಸಂದರ್ಭದಲ್ಲಿ ಜಾತಿ ಗಣತಿಯ ಅಧಿಕೃತತೆಯನ್ನು ಕೆಲವರು ಪ್ರಶ್ನಿಸತೊಡಗಿದರು. ವರದಿ ಸೋರಿಕೆಯಾಗಿದೆ ಎನ್ನುವುದು ಕೆಲವರ ಆರೋಪವಾಗಿದ್ದರೆ, ಸಮೀಕ್ಷೆಗೆ ಬಳಸಿರುವ ಮಾನದಂಡವೇ ಸರಿಯಿಲ್ಲ ಎಂದು ಕೆಲವರು ತಕರಾರು ತೆಗೆದರು. ಅವರಿಗೆ ಜಾತಿ ಗಣತಿ ವರದಿಯನ್ನು ಸರಕಾರ ಸ್ವೀಕರಿಸುವುದೇ ಬೇಡವಾಗಿತ್ತು. ಕಾಂಗ್ರೆಸ್ ತನ್ನ ಒಳಗಿರುವ ನಾಯಕರಿಗೆ ಹೆದರಿಯೇ ಜಾತಿ ಗಣತಿ ವರದಿಯನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಾ ಬಂದಿದೆ. ಜೆಡಿಎಸ್ ಮುಖಂಡ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗಲೂ ಜಾತಿ ಗಣತಿ ವರದಿಗೆ ಮುಕ್ತಿ ದೊರಕಲಿಲ್ಲ. ಬಿಜೆಪಿಯಂತೂ ಜಾತಿ ಗಣತಿಯ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುತ್ತಾ ಬಂದಿರುವುದರಿಂದ, ಅದು ವರದಿಯನ್ನು ಸ್ವೀಕರಿಸಿ ಜಾರಿಗೊಳಿಸುವ ಪ್ರಶ್ನೆಯೇ ಬರುವುದಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಸಿದ್ದರಾಮಯ್ಯ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾದ ಬೆನ್ನಿಗೇ ಜಾತಿ ಗಣತಿ ವರದಿ ಮುನ್ನೆಲೆಗೆ ಬಂತು. ಈ ಬಾರಿ ವರದಿಯನ್ನು ಸ್ವೀಕರಿಸಲೇ ಬೇಕಾದ ಅನಿವಾರ್ಯ ಕಾಂಗ್ರೆಸ್ ಸರಕಾರಕ್ಕೆ ಎದುರಾಯಿತು. ಆದರೆ ಸರಕಾರದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಒಕ್ಕಲಿಗ ಮತ್ತು ಲಿಂಗಾಯತ ಮುಖಂಡರು ತಮ್ಮ ತಮ್ಮ ಜಾತಿ ಸಭೆಗಳಲ್ಲಿ ಈ ಜಾತಿಗಣತಿಗೆ ವಿರೋಧ ವ್ಯಕ್ತಪಡಿಸಿದರು. ಈ ಎಲ್ಲ ವಿರೋಧಗಳ ನಡುವೆಯೇ ಕಳೆದ ಫೆಬ್ರವರಿ ತಿಂಗಳಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಕಾಂತರಾಜು ಸಮಿತಿ ದತ್ತಾಂಶ ಪ್ರಕಾರ ಸಿದ್ಧಪಡಿಸಿದ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದರು. ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ಸಮುದಾಯಗಳ ಜನಸಂಖ್ಯೆ ಮತ್ತು ಅವರ ಶೈಕ್ಷಣಿಕ, ಸಾಮಾಜಿಕ ಸ್ಥಾನಮಾನಗಳನ್ನು ಈ ಸಮೀಕ್ಷೆ ಒಳಗೊಂಡಿರುವುದರಿಂದ, ನಾಡಿನ ಒಟ್ಟು ಅಭಿವೃದ್ಧಿಯ ರೂಪುರೇಷೆಯಲ್ಲಿ ಈ ವರದಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದುದರಿಂದ, ವರದಿ ಸ್ವೀಕರಿಸಿದ ಬೆನ್ನಿಗೇ ಅದನ್ನು ಸಂಪೂರ್ಣ ಅಧ್ಯಯನ ಮಾಡಿ, ಸಂಪುಟದಲ್ಲಿ ಮಂಡಿಸುವ ಕೆಲಸವನ್ನು ಮುಖ್ಯಮಂತ್ರಿ ಆದ್ಯತೆಯ ಮೇಲೆ ಮಾಡಬೇಕಾಗಿತ್ತು. ವರದಿ ಸ್ವೀಕರಿಸಿದ ಸಂದರ್ಭದಲ್ಲಿ ‘‘ವರದಿಯನ್ನು ಸಂಪುಟದ ಮುಂದಿಟ್ಟು ಚರ್ಚೆ ನಡೆಸಿ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ’’ ಎಂದು ಅವರು ಭರವಸೆ ನೀಡಿದ್ದರು. ಇದಾದ ಬಳಿಕ ಹಲವು ವೇದಿಕೆಗಳಲ್ಲಿ, ವರದಿ ಮಂಡನೆಯ ಬಗ್ಗೆ ಭರವಸೆ ನೀಡುತ್ತಾ ಬಂದಿದ್ದಾರಾದರೂ ಆ ಭರವಸೆ ನಿಜವಾಗಲೇ ಇಲ್ಲ. ಇದೀಗ ಮುಡಾ ಹಗರಣದಲ್ಲಿ ವಿಪಕ್ಷಗಳು ರಾಜೀನಾಮೆಗಾಗಿ ಒತ್ತಡ ಹೇರುತ್ತಿರುವ ಸಂದರ್ಭದಲ್ಲಿ ‘‘ಜಾತಿ ಗಣತಿ ವರದಿಯನ್ನು ಜಾರಿಗೊಳಿಸಿಯೇ ಸಿದ್ಧ’’ ಎಂದು ಮುಖ್ಯಮಂತ್ರಿ ಘೋಷಿಸಿರುವುದನ್ನು ಜನರು ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎನ್ನುವ ಗೊಂದಲದಲ್ಲಿದ್ದಾರೆ.

‘ವರದಿ ಜಾರಿಗೊಳಿಸುವ’ ಭರವಸೆಯನ್ನು ಮುಖ್ಯಮಂತ್ರಿ ನೀಡುತ್ತಿರುವಾಗಲೇ, ಅತ್ತ ಒಕ್ಕಲಿಗರ ಸಂಘಟನೆಯೊಂದು ‘ಹೊಸದಾಗಿ ಸಮೀಕ್ಷೆ’ಯನ್ನು ಮಾಡಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟಿದೆ. ವರದಿಯೊಳಗೆ ಏನಿದೆ, ಎಲ್ಲಿ ತಪ್ಪಾಗಿದೆ ಎನ್ನುವುದು ಇನ್ನೂ ಸ್ಪಷ್ಟವಿಲ್ಲದೇ ಇರುವಾಗ ಸಂಘಟನೆ, ಸಮೀಕ್ಷೆ ಸರಿಯಿಲ್ಲ ಎಂದು ತಕರಾರು ತೆಗೆಯುವುದೇ ವಿಚಿತ್ರವಾಗಿದೆ. ಆಳದಲ್ಲಿ ಆ ಸಂಘಟನೆಗೆ ವರದಿಯಲ್ಲಿರುವ ಸತ್ಯಾಂಶಗಳು ಬಹಿರಂಗವಾಗುವುದು ಮತ್ತು ಜಾರಿಗೊಳ್ಳುವುದು ಬೇಡವಾಗಿದೆ. ಇಂದು ಈ ವರದಿಯನ್ನು ಕುಂಟು ನೆಪ ತೆಗೆದು ತಿರಸ್ಕರಿಸುವ ಸಂಘಟನೆಗಳು ನಾಳೆ ಹೊಸದಾಗಿ ಸಮೀಕ್ಷೆ ನಡೆದರೂ ಅದನ್ನೂ ಅದು ಬೇರೆ ಬೇರೆ ನೆಪಗಳನ್ನು ಒಡ್ಡಿ ತಿರಸ್ಕರಿಸುವುದರಲ್ಲಿ ಅನುಮಾನವಿಲ್ಲ. ವಿಪರ್ಯಾಸವೆಂದರೆ, ಕಾಂಗ್ರೆಸ್‌ನೊಳಗಿರುವ ಲಿಂಗಾಯತ ಮತ್ತು ಒಕ್ಕಲಿಗ ನಾಯಕರು ಈಗಲೂ ಸಮೀಕ್ಷೆಯ ಬಗ್ಗೆ ತಮ್ಮ ತಮ್ಮ ಜಾತಿ ಸಂಘಟನೆಗಳ ಮನವೊಲಿಸುವುದರಲ್ಲಿ ವಿಫಲವಾಗಿದ್ದಾರೆ. ಜಾತಿ ಗಣತಿಯನ್ನು ಜಾರಿಗೊಳಿಸುವಲ್ಲಿ ಸಿದ್ದರಾಮಯ್ಯ ತನ್ನ ಪಕ್ಷದೊಳಗಿರುವ ಬಲಿಷ್ಟ ಜಾತಿ ಶಕ್ತಿಗಳಿಗೆ ಹೆದರುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಒಂದೆಡೆ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿಯ ಪರವಾಗಿ ಹೇಳಿಕೆಗಳನ್ನು ನೀಡುತ್ತಾ ಬಂದಿದೆ. ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತಿಗಣತಿಯನ್ನು ನಡೆಸುವುದಾಗಿ ರಾಹುಲ್‌ಗಾಂಧಿ ಭರವಸೆಯನ್ನು ನೀಡಿದ್ದಾರೆ. ಕಳೆದ ಸೆಪ್ಟಂಬರ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಕೂಡ ಜಾತಿ ಗಣತಿಯ ಬಗ್ಗೆ ಮೃದು ನಿಲುವು ತಳೆದಿದ್ದಾರೆ. ಹೀಗಿರುವಾಗ, ರಾಜ್ಯದಲ್ಲಿ ಪೂರ್ಣ ಪ್ರಮಾಣದ ಜನಬೆಂಬಲವಿರುವ ಕಾಂಗ್ರೆಸ್ ಸರಕಾರಕ್ಕೆ ಜಾತಿ ಗಣತಿಯ ಕುರಿತಂತೆ ಸ್ಪಷ್ಟ ನಿಲುವಿಗೆ ಬರಲು ಸಾಧ್ಯವಾಗದೇ ಇರುವುದು ದೊಡ್ಡ ಹಿನ್ನಡೆಯಾಗಿದೆ.

ಇದೇ ಸಂದರ್ಭದಲ್ಲಿ ಒಳಮೀಸಲಾತಿಯ ಬಗ್ಗೆಯೂ ರಾಜ್ಯ ಸರಕಾರ ಗೊಂದಲದಲ್ಲಿದೆ. ಸುಪ್ರೀಂಕೋರ್ಟ್ ಒಳ ಮೀಸಲಾತಿ ಅನುಷ್ಠಾನದ ಜವಾಬ್ದಾರಿಯನ್ನು ರಾಜ್ಯಗಳ ಮೇಲೆ ಹಾಕಿದಾಗ, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದ್ದರು. ದಲಿತ ಸಮುದಾಯದ ಒಂದು ಗುಂಪು ಒಳ ಮೀಸಲಾತಿಯ ಬೇಡಿಕೆಯಿಟ್ಟಾಗ ರಾಜ್ಯ ಸರಕಾರಗಳು ಕೇಂದ್ರ ಮತ್ತು ಸುಪ್ರೀಂಕೋರ್ಟ್‌ನ ಕಡೆಗೆ ಕೈತೋರಿಸಿದ್ದವು. ಇದೀಗ ಸುಪ್ರೀಂಕೋರ್ಟ್ ಹಸಿರು ನಿಶಾನೆ ನೀಡಿದ ಬಳಿಕ ಒಳಮೀಸಲಾತಿ ಜಾರಿಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸರಕಾರ ಮೀನಾಮೇಷ ಎಣಿಸುತ್ತಿದೆ. ತೆಲಂಗಾಣದಲ್ಲಿ ಈಗಾಗಲೇ ಅಲ್ಲಿನ ಕಾಂಗ್ರೆಸ್ ಸರಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಸುಪ್ರೀಂಕೋರ್ಟ್ ತೀರ್ಪನ್ನು ಅಧ್ಯಯನ ಮಾಡಿ ಶಿಫಾರಸು ಮಾಡಲು ಒಂದು ಸಂಪುಟ ಉಪ ಸಮಿತಿಯನ್ನು ರಚಿಸಿದೆ. ಪರಿಶಿಷ್ಟ ಜಾತಿಗಳ ವಿವಿಧ ಸಂಘಸಂಸ್ಥೆಗಳಿಂದ ಈ ಸಮಿತಿ ಈಗಾಗಲೇ ಹೇಳಿಕೆಗಳನ್ನು ಆಹ್ವಾನಿಸಿದೆ. ಕನಿಷ್ಠ ಇಷ್ಟನ್ನಾದರೂ ಮಾಡಲು ರಾಜ್ಯ ಸರಕಾರ ಯಾಕೆ ಹಿಂದೇಟು ಹಾಕುತ್ತಿದೆ? ಎನ್ನುವ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ. ಜಾತಿ ಗಣತಿ ವರದಿಯನ್ನು ಸಂಪುಟದಲ್ಲಿ ಮಂಡಿಸಿ ಅದನ್ನು ಜಾರಿಗೊಳಿಸುವ ಮತ್ತು ಒಳಮೀಸಲಾತಿ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳುವ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಇನ್ನಾದರೂ ಇಚ್ಛಾಶಕ್ತಿಯನ್ನು ಪ್ರಕಟಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News