ವಿಶ್ವಾಸಾರ್ಹತೆ ಕಳೆದುಕೊಂಡ ಡಿಕೆಶಿ ವಿರುದ್ಧದ ಸಿಬಿಐ ತನಿಖೆ

Update: 2023-11-27 04:19 GMT

photo: facebook

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯ ಕಾಂಗ್ರೆಸ್‌ನ ಪಾಲಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಜೋಡೆತ್ತುಗಳು. ಒಂದು ರೀತಿಯಲ್ಲಿ ರಾಜ್ಯ ರಾಜಕೀಯದ ಎರಡು ಮುಖಗಳು ಇವರು. ಸಿದ್ದರಾಮಯ್ಯರ ಮುತ್ಸದ್ದಿತನದಿಂದ, ಅವರ ಜನಪರ ನೀತಿಗಳಿಂದಷ್ಟೇ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿತು ಎಂದರೆ ಸುಳ್ಳು. ಡಿಕೆಶಿಯವರ ಹಣ, ಜಾತಿ ಬಲವೂ ಕಾಂಗ್ರೆಸ್‌ಗೆ ತನ್ನದೇ ಕೊಡುಗೆಗಳನ್ನು ನೀಡಿವೆ. ಈ ಎತ್ತುಗಳು ಜೊತೆಯಾಗಿ ಸಾಗುವವರೆಗೆ ಸರಕಾರ ಸುಗಮವಾಗಿ ಸಾಗುತ್ತದೆ. ಒಂದು ಏರಿಗೆ-ಇನ್ನೊಂದು ನೀರಿಗೆ ಎಳೆಯಲು ಶುರು ಹಚ್ಚಿದರೆ ಖಂಡಿತವಾಗಿಯೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದಿಲ್ಲ ಮಾತ್ರವಲ್ಲ, ಕಾಂಗ್ರೆಸ್ ಪಕ್ಷವೂ ಇರುವುದಿಲ್ಲ. ಗುಜರಾತ್‌ನಲ್ಲಿ ಕಾಂಗ್ರೆಸ್ ಶಾಸಕರನ್ನು ಕೊಂಡುಕೊಳ್ಳಲು ಬಿಜೆಪಿ ಸಂಚು ನಡೆಸಿದಾಗ ಅವರನ್ನು ರೆಸಾರ್ಟ್ ನಲ್ಲಿಟ್ಟು ಕಾಪಾಡಿದ್ದು ಇದೇ ಡಿ.ಕೆ. ಶಿವಕುಮಾರ್. ಸಿದ್ದರಾಮಯ್ಯ ಅವರ ಮೊದಲ ಅಧಿಕಾರಾವಧಿ ಮುಗಿದು ಚುನಾವಣೆ ನಡೆದಾಗ ಕಾಂಗ್ರೆಸ್ ಬಹುಮತ ಪಡೆಯಲು ವಿಫಲವಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಂಡದ್ದೂ ಡಿಕೆಶಿ. ಹಲವು ಸಂದರ್ಭದಲ್ಲಿ ತನ್ನ ಹಣಬಲ ಮತ್ತು ಜಾತಿ ಬಲದ ಮೂಲಕ ಕಾಂಗ್ರೆಸನ್ನು ಉಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಡಿಕೆಶಿ-ಸಿದ್ದರಾಮಯ್ಯ ಬಣದ ಶೀತಲ ಸಮರ ಕಾಂಗ್ರೆಸ್‌ಗೆ ಹಲವು ಬಾರಿ ಸಮಸ್ಯೆಗಳನ್ನು ತಂದಿಟ್ಟಿದೆ. ಡಿಕೆಶಿಯ ಭ್ರಷ್ಟಾಚಾರದ ಆರೋಪಗಳನ್ನು ಕಾಂಗ್ರೆಸ್ ಮೇಲಿನ ಎಲ್ಲ ಕಾರಣಗಳಿಗಾಗಿ ಸಹಿಸಿಕೊಳ್ಳಬೇಕಾಗಿ ಬಂದಿದೆ. ಡಿಕೆಶಿಯನ್ನು ಹೊರಗಿಟ್ಟು ಸರಕಾರ ನಡೆಸಲು ಸಿದ್ದರಾಮಯ್ಯ ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗಿರುವುದು ಇದೇ ಕಾರಣಕ್ಕೆ.

2017ರ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಶಾಸಕರ ಕುದುರೆ ವ್ಯಾಪಾರದಲ್ಲಿ ವಿಫಲರಾದ ಬಳಿಕ ಕೇಂದ್ರದ ಬಿಜೆಪಿ ವರಿಷ್ಠರು ಡಿ.ಕೆ. ಶಿವಕುಮಾರ್ ಹಿಂದೆ ಬಿದ್ದರು. ಡಿಕೆಶಿ ವಿರುದ್ಧ ಮೊದಲ ಮಹತ್ವದ ದಾಳಿ ನಡೆದಿರುವುದೇ ಗುಜರಾತ್‌ನ ಶಾಸಕರನ್ನು ರೆಸಾರ್ಟ್‌ನಲ್ಲಿ ಇರಿಸಿಕೊಂಡಾಗ. ಈ ಸಂದರ್ಭದಲ್ಲಿ ಡಿಕೆಶಿ ಅವರ ಅಕ್ರಮ ಆಸ್ತಿಗೆ ಸಂಬಂಧಿಸಿ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ವಿವಿಧ ತನಿಖಾ ಸಂಸ್ಥೆಗಳಿಂದ ಡಿಕೆಶಿ ಅವರ ವಿರುದ್ಧ ಸರಣಿ ದಾಳಿಗಳು ಆರಂಭವಾದವು. ಡಿಕೆಶಿಯವರ ಒಂದೊಂದೇ ಹಗರಣಗಳನ್ನು ಕೇಂದ್ರ ಕೆದಕತೊಡಗಿತು. ಈ ಮೂಲಕ ಡಿಕೆಶಿಯನ್ನು ಕಾಂಗ್ರೆಸ್‌ನೊಳಗೆ ಸುಮ್ಮನಿರಿಸುವುದು ಮಾತ್ರವಲ್ಲ, ಸಾಧ್ಯವಾದರೆ ಒತ್ತಡಗಳ ಮೂಲಕ ಅವರನ್ನು ಬಿಜೆಪಿಗೆ ಪಕ್ಷಾಂತರವಾಗುವಂತೆ ನೋಡಿಕೊಳ್ಳುವುದು ಕೇಂದ್ರ ಬಿಜೆಪಿ ನಾಯಕರ ಉದ್ದೇಶವಾಗಿತ್ತು. ಡಿಕೆಶಿ ಹಿಂದಿರುವ ಒಕ್ಕಲಿಗ ಶಕ್ತಿಯ ಮೇಲೆ ಬಿಜೆಪಿಯ ಕಣ್ಣಿತ್ತು. ‘‘ಬಿಜೆಪಿ ಸೇರಲು ಕೇಂದ್ರ ಬಿಜೆಪಿ ವರಿಷ್ಠರು ತನ್ನ ಮೇಲೆ ಒತ್ತಡಗಳನ್ನು ಹಾಕುತ್ತಿದ್ದಾರೆ’’ ಎಂದು ಡಿಕೆಶಿಯವರೇ ಒಂದು ಸಂದರ್ಭದಲ್ಲಿ ಹೇಳಿಕೆಗಳನ್ನು ನೀಡಿದ್ದರು. ಎಸ್. ಎಂ. ಕೃಷ್ಣ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿದಂತೆಯೇ ಡಿಕೆಶಿಯ ಮೇಲೆ ಅವರು ಒತ್ತಡಗಳನ್ನು ಹಾಕತೊಡಗಿದ್ದರು. ಕೇಂದ್ರ ಸರಕಾರದ ದಾಳಿಗಳು ಅಂತಿಮವಾಗಿ ಡಿಕೆಶಿ ಜೈಲು ಸೇರುವಂತಹ ಸ್ಥಿತಿಯನ್ನು ನಿರ್ಮಿಸಿತ್ತು. ಡಿಕೆಶಿ ನೇತೃತ್ವದಲ್ಲಿ ರಾಜ್ಯದಲ್ಲಿ ಸ್ಥಾಪನೆಯಾಗಿದ್ದ ಜೆಡಿಎಸ್-ಕಾಂಗ್ರೆಸ್ ಸರಕಾರವನ್ನು ಉರುಳಿಸಿದ ಬೆನ್ನಿಗೇ ಆಪರೇಶನ್ ಕಮಲದ ಮೂಲಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರಕಾರ ಡಿಕೆಶಿ ಅಕ್ರಮ ಆಸ್ತಿ ಗಳಿಕೆಯನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತ್ತು.

ಅಕ್ರಮ ಆಸ್ತಿ ಗಳಿಕೆಯ ಆರೋಪ ಅವರಿಗೆ ಅದೇ ಮೊದಲಲ್ಲ. ಆದರೆ ಕೋಟಿ ಕೋಟಿ ಹಣವನ್ನು ಸುರಿದು ಶಾಸಕರನ್ನು ಕೊಂಡು ಕೊಂಡು ರಚನೆಯಾದ ಸರಕಾರವೊಂದು ಡಿಕೆಶಿಯ ಅಕ್ರಮ ಆಸ್ತಿಯನ್ನು ಆತುರಾತುರವಾಗಿ ಸಿಬಿಐ ತನಿಖೆಗೆ ಒಳಪಡಿಸಿರುವುದು ಸಹಜವಾಗಿಯೇ ಪ್ರಶ್ನೆಗೊಳಗಾಯಿತು. ಡಿಕೆಶಿಗೆ ಅನ್ವಯವಾಗಿರುವ ತನಿಖೆ ರಾಜ್ಯದ ಇತರ ಬಿಜೆಪಿ ನಾಯಕರಿಗೆ ಯಾಕೆ ಅನ್ವಯವಾಗುವುದಿಲ್ಲ ಎನ್ನುವ ಪ್ರಶ್ನೆಯನ್ನು ಕಾಂಗ್ರೆಸ್ ಕೇಳ ತೊಡಗಿತು. ಇದೀಗ, ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರಕಾರ ಸಹಜವಾಗಿಯೇ ಸಿಬಿಐ ತನಿಖೆ ಆದೇಶವನ್ನು ಹಿಂದೆಗೆದುಕೊಂಡಿದೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತನಿಖೆಗೆ ಅನುಮತಿ ನೀಡಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಆದೇಶವನ್ನು ಸಚಿವ ಸಂಪುಟ ಹಿಂದಕ್ಕೆ ಪಡೆಯಲು ತೀರ್ಮಾನಿಸಿದೆ. ಬಿಜೆಪಿಯೊಳಗಿರುವ ಭ್ರಷ್ಟಾತಿ ಭ್ರಷ್ಟರೆಂದು ಗುರುತಿಸಿಕೊಂಡಿದ್ದ ಮಾಜಿ ಸಚಿವರೆಲ್ಲರೂ ಇದೀಗ ಆಕಾಶ ಭೂಮಿ ಒಂದಾದಂತೆ ಬೊಬ್ಬಿಡುತ್ತಿದ್ದಾರೆ. ನಿಜಕ್ಕೂ ಸಿಬಿಐ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದ್ದಿದ್ದರೆ, ಶೇ. 40 ಕಮಿಷನ್ ಆರೋಪಕ್ಕಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿ ದ್ದ ಬಿಜೆಪಿ ಸರಕಾರದ ಅರ್ಧಕ್ಕರ್ಧ ಸಚಿವರು ಇಂದು ಜೈಲಿನಲ್ಲಿರುತ್ತಿದ್ದರು. ಯಡಿಯೂರಪ್ಪ ನೇತೃತ್ವದ ಸರಕಾರ ಡಿಕೆಶಿ ಪ್ರಕರಣವನ್ನು ಕೇಂದ್ರ ವರಿಷ್ಠರ ನಿರ್ದೇಶನದ ಮೇರೆಗೆ ಸಿಬಿಐಗೆ ನೀಡಿತ್ತೇ ಹೊರತು, ಅದರಲ್ಲಿ ರಾಜ್ಯದ ಹಿತವೇನೂ ಅಡಗಿರಲಿಲ್ಲ. ಸಿಬಿಐ ಮೂಲಕ ಡಿಕೆಶಿಯವರನ್ನು ಬ್ಲ್ಯಾಕ್‌ಮೇಲ್ ಮಾಡುವ ತಂತ್ರಕ್ಕೆ ಕೇಂದ್ರ ಸರಕಾರ ಇಳಿದಿತ್ತು. ಮುಂದೆ ಭ್ರಷ್ಟಾಚಾರದ ಆರೋಪದಲ್ಲಿ ಇದೇ ಯಡಿಯೂರಪ್ಪ ಅವರನ್ನು ಸ್ವತಃ ಬಿಜೆಪಿಯ ಮುಖಂಡರೇ ಅಧಿಕಾರದಿಂದ ಕೆಳಗಿಳಿಸಿದ್ದು ಬೇರೆ ಮಾತು.

ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಅನುಮತಿಯನ್ನು ಹಿಂದೆಗೆದುಕೊಂಡಿರುವುದನ್ನು ವಿಪಕ್ಷ ವಿರೋಧಿಸುತ್ತಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ‘‘ತನಿಖೆಗೆ ನೀಡಿರುವ ಆದೇಶವೇ ಕಾನೂನು ಬಾಹಿರವಾಗಿರುವುದರಿಂದ ಅನುಮತಿಯನ್ನು ಹಿಂದೆಗೆದುಕೊಂಡಿದ್ದೇವೆ’’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಅಂದಿನ ಯಡಿಯೂರಪ್ಪ ಸರಕಾರ ತನಿಖೆಗೆ ಅನುಮತಿ ನೀಡುವ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ. ಆತುರಾತುರವಾಗಿ ಸಿಬಿಐ ತನಿಖೆಗೆ ಆದೇಶವನ್ನು ನೀಡಿತ್ತು ಎನ್ನುವ ಆರೋಪಗಳನ್ನು ಕಾಂಗ್ರೆಸ್ ಹಿಂದೆಯೇ ಮಾಡಿದೆ. ಶಾಸಕರಾಗಿದ್ದ ಡಿಕೆಶಿಯವರ ವಿರುದ್ಧ ತನಿಖೆಗೆ ಅನುಮತಿಸಬೇಕಾದರೆ ವಿಧಾನಸಭಾಧ್ಯಕ್ಷರ ಅನುಮತಿ ಅತ್ಯಗತ್ಯ. ಆದರೆ ಈ ಅನುಮತಿಯನ್ನು ಸರಕಾರ ಪಡೆದುಕೊಂಡಿಲ್ಲ. ಅಷ್ಟೇ ಅಲ್ಲ, ಅಡ್ವಕೇಟ್ ಜನರಲ್ ಅಭಿಪ್ರಾಯವನ್ನೂ ಅಂದಿನ ಮುಖ್ಯಮಂತ್ರಿ ಪರಿಗಣಿಸಿಲ್ಲ ಎನ್ನುವ ಅಂಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿಟ್ಟಿದ್ದಾರೆ. ಅಂದಿನ ಮುಖ್ಯಮಂತ್ರಿಯವರ ಮೌಖಿಕ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿ ಸಿಬಿಐ ತನಿಖೆಗೆ ವಹಿಸಿದ್ದಾರೆ. ಇದು ಕಾನೂನು ಬಾಹಿರ ಎನ್ನುವುದು ಅವರ ವಾದ.

ಇದೇ ಸಂದರ್ಭದಲ್ಲಿ ಬಿಜೆಪಿಯ ನಾಯಕರು ಇನ್ನೊಂದು ವಾದವನ್ನು ಮುಂದಿಡುತ್ತಿದ್ದಾರೆ. ‘‘ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ನ್ಯಾಯಾಲಯವು ಈ ಬಗ್ಗೆ ಬೇರೆ ಬೇರೆ ತೀರ್ಪುಗಳನ್ನು ನೀಡಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ ಸಿಬಿಐ ತನಿಖೆಯ ಆದೇಶವನ್ನು ಹಿಂದೆಗೆದುಕೊಳ್ಳುವುದು ಎಷ್ಟು ಸರಿ?’’ ಎನ್ನುವ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಇದೀಗ ತನಿಖೆಗೆ ಆದೇಶ ನೀಡಿರುವ ರಾಜ್ಯ ಸರಕಾರವೇ ಅದನ್ನು ವಾಪಸ್ ತೆಗೆದುಕೊಂಡಿರುವುದರಿಂದ ಸಹಜವಾಗಿಯೇ ತನಿಖೆ ನೆಲೆ ಕಳೆದುಕೊಳ್ಳುತ್ತದೆ. ಇಷ್ಟಕ್ಕೂ ನ್ಯಾಯಾಲಯದ ತೀರ್ಮಾನಗಳಿಗೆ ಯಾವುದೇ ಕಾರಣಕ್ಕೂ ಮಧ್ಯ ಪ್ರವೇಶಿಸುವುದಿಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿರುವುದರಿಂದ ವಿಪಕ್ಷದ ಗದ್ದಲಕ್ಕೆ ಯಾವ ಅರ್ಥವೂ ಇಲ್ಲ. ಡಿ.ಕೆ. ಶಿವಕುಮಾರ್ ಅವರ ಮೇಲಿರುವ ಭ್ರಷ್ಟಾಚಾರದ ಆರೋಪಗಳು ಸುಳ್ಳೆಂದು ಯಾರೂ ಹೇಳುತ್ತಿಲ್ಲ. ಆದರೆ ಪರಮಭ್ರಷ್ಟಾಚಾರಿಗಳೇ ಇನ್ನೊಬ್ಬನ ಬಗ್ಗೆ ತನಿಖೆಗೆ ಆದೇಶ ನೀಡಿದಾಗ ಆ ತನಿಖೆ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ. ಈ ಕಾರಣದಿಂದಲೇ, ವಿಪಕ್ಷಗಳ ಆಕ್ಷೇಪ, ಆತಂಕ, ಕಳವಳಗಳೆಲ್ಲ ಒಂದು ವಿಕಟ ವಿಡಂಬನೆ ಮಾತ್ರವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News