ಕೇಂದ್ರದ ತೆರಿಗೆ ನೀತಿ ಒಕ್ಕೂಟ ವ್ಯವಸ್ಥೆಗೆ ಮಾರಕ

Update: 2024-09-03 05:24 GMT

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೇಂದ್ರ ಸರಕಾರದ ತೆರಿಗೆ ನೀತಿ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಈ ಕುರಿತು ರಾಜ್ಯಕ್ಕೆ ಭೇಟಿ ನೀಡಿದ 16ನೇ ಹಣಕಾಸು ಆಯೋಗದ ಗಮನಕ್ಕೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯಕ್ಕೆ ಬರಬೇಕಾದ ತೆರಿಗೆ ಆದಾಯದ ಶೇ. 60ರಷ್ಟು ಪಾಲನ್ನು ನೀಡಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ. ತೆರಿಗೆ ಪಾಲು ಹಂಚಿಕೆಯ ಕುರಿತು ಹಾಗೂ ಸಹಾಯಾನುದಾನ ಪ್ರಮಾಣ ನಿರ್ಧರಿಸುವ ಸಂಬಂಧ ರಾಜ್ಯಗಳ ಜೊತೆ ಸಮಾಲೋಚನೆ ನಡೆಸಿರುವ ಅರವಿಂದ ಪನಗರಿಯಾ ಅವರ ನೇತೃತ್ವದ 16ನೇ ಹಣಕಾಸು ಆಯೋಗದ ಮುಂದೆ ಮುಖ್ಯಮಂತ್ರಿಗಳು ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

ಮುಖ್ಯಮಂತ್ರಿಗಳು ಹೇಳಿದಂತೆ ಕರ್ನಾಟಕ ಕೇಂದ್ರಕ್ಕೆ ಒಂದು ರೂಪಾಯಿ ನೀಡಿದರೆ ರಾಜ್ಯಕ್ಕೆ ವಾಪಸ್ ಬರುವುದು ಕೇವಲ 15 ಪೈಸೆ ಮಾತ್ರ. ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ನೆರವು ನೀಡಲು ನಮ್ಮ ಅಭ್ಯಂತರವಿಲ್ಲ. ಆದರೆ ಕರ್ನಾಟಕದ ಹಿತಾಸಕ್ತಿಯನ್ನು ಬಲಿಕೊಟ್ಟು ನೆರವು ನೀಡುವುದು ಸರಿಯಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತು ನ್ಯಾಯಸಮ್ಮತವಾಗಿದೆ. ಹಲವಾರು ಬಾರಿ ಮನವಿ ಮಾಡಿಕೊಂಡಾಗಲೂ 15ನೇ ಹಣಕಾಸು ಆಯೋಗವು ರಾಜ್ಯದ ಬೇಡಿಕೆಗೆ ಸ್ಪಂದಿಸಲಿಲ್ಲ. ಕರ್ನಾಟಕದ ಪಾಲಿನ ಶೇ. 4.713 ಅನುದಾನ ನೀಡದೆ ಶೇ. 3.647 ಮಾತ್ರ ನೀಡಿತ್ತು. ಇದರಿಂದ ಐದು ವರ್ಷಗಳ ಕಾಲಾವಧಿಯಲ್ಲಿ ರಾಜ್ಯಕ್ಕೆ ಎಂಭತ್ತು ಸಾವಿರ ಕೋಟಿ ರೂ. ನಷ್ಟವಾಗಿದೆ ಈ ಅನ್ಯಾಯವನ್ನು ಸರಿಪಡಿಸಬೇಕು. 15ನೇ ಹಣಕಾಸು ಆಯೋಗ ನಿಗದಿ ಮಾಡಿದ್ದ ಮಾನದಂಡಗಳನ್ನು ಪರಿಷ್ಕರಿಸಬೇಕೆಂದು ಮುಖ್ಯಮಂತ್ರಿಗಳ ಆಗ್ರಹವಾಗಿದೆ.

ಭಾರತ ಒಕ್ಕೂಟದ ಕೆಲವು ರಾಜ್ಯಗಳು ಅದರಲ್ಲೂ ವಿಶೇಷವಾಗಿ ದಕ್ಷಿಣದ ರಾಜ್ಯಗಳು ಕೇಂದ್ರದಿಂದ ತಮಗೆ ನ್ಯಾಯಯುತವಾಗಿ ಬರಬೇಕಿದ್ದ ತೆರಿಗೆ ಪಾಲು ಬರುತ್ತಿಲ್ಲ ಎಂದು ಆಕ್ಷೇಪಿಸುತ್ತಲೇ ಬಂದಿವೆ. ಕೆಲವು ಸಲ ಪ್ರತಿಭಟನೆಯನ್ನೂ ನಡೆಸಿವೆ. ತೆರಿಗೆ ಸಂಗ್ರಹದಲ್ಲಿ ತಮ್ಮ ಪಾಲಿನ ಅನುದಾನವನ್ನು ಕೇಂದ್ರ ಸರಕಾರ ನ್ಯಾಯ ಸಮ್ಮತವಾಗಿ ಹಂಚಿಕೆ ಮಾಡುತ್ತಿಲ್ಲ ಎಂಬುದು ಈ ರಾಜ್ಯಗಳ ಆಕ್ಷೇಪಕ್ಕೆ ಕಾರಣವಾಗಿದೆ. ಕಾರ್ಪೊರೇಟ್ ತೆರಿಗೆ, ಆದಾಯ ತೆರಿಗೆ, ಕೇಂದ್ರೀಯ ಜಿಎಸ್‌ಟಿ, ಸಮಗ್ರ ಸರಕು ಮತ್ತು ಸೇವಾ ತೆರಿಗೆ(ಐಜಿಎಸ್‌ಟಿ) ಕೇಂದ್ರೀಯ ಪಾಲಿನಲ್ಲಿ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಈ ಹಂಚಿಕೆ ನಡೆಯುವುದು ಹಣಕಾಸು ಆಯೋಗದ ಶಿಫಾರಸಿನ ಮೇಲೆ. ಆದರೆ 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನಿಗದಿ ಪಡಿಸಿದ್ದ ಅನುದಾನವನ್ನು ನೀಡಲಿಲ್ಲ ಎಂಬುದು ಕರ್ನಾಟಕದ ಅಸಮಾಧಾನಕ್ಕೆ ಕಾರಣ.

15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ, 5,495 ಕೋಟಿ ರೂ. ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿತ್ತು. ಆದರೆ ಕರ್ನಾಟಕದಿಂದ ರಾಜ್ಯಸಭೆಗೆ ಹೋಗಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 15ನೇ ಹಣಕಾಸು ಶಿಫಾರಸು ಮಾಡಿದ್ದ ಅನುದಾನವನ್ನು ನೀಡಲಿಲ್ಲ. ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವುದರಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ ಎಂದು ದತ್ತಾಂಶಗಳ ಸಹಿತ ವರದಿಯನ್ನು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಆಯೋಗಕ್ಕೆ ನೀಡಿದ್ದಾರೆ.

ಸಂವಿಧಾನದ 270ನೇ ವಿಧಿಯ ಪ್ರಕಾರ ಕೇಂದ್ರ ಮತ್ತು ರಾಜ್ಯಗಳ ತೆರಿಗೆ ಹಂಚಿಕೆಯ ಬಗ್ಗೆ ಉಲ್ಲೇಖಿಸಲಾಗಿದೆ. ಕೇಂದ್ರ ಸರಕಾರ ರಾಜ್ಯಗಳಿಗೆ ತೆರಿಗೆಯ ಪಾಲನ್ನು ಹಂಚುವುದಲ್ಲದೆ ಕೇಂದ್ರ ಹಣಕಾಸು ನಿಗದಿ ಪಡಿಸಿದ ಅನುದಾನವನ್ನೂ ನೀಡಬೇಕಾಗುತ್ತದೆ. ಆದರೆ ಕೇಂದ್ರ ಸರಕಾರ ವಸೂಲಿ ಮಾಡುವ ಸೆಸ್ ಮತ್ತು ಸರ್‌ಚಾರ್ಜ್‌ಗಳಲ್ಲಿ ರಾಜ್ಯಗಳಿಗೆ ಪಾಲು ನೀಡುವುದಿಲ್ಲ. ಈ ಬಗ್ಗೆ ಕರ್ನಾಟಕ ಮಾತ್ರವಲ್ಲ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳು ಪ್ರತಿಭಟನೆ ಮಾಡುತ್ತಾ ಬಂದಿದ್ದರೂ ಕೇಂದ್ರ ಸರಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ. ಕೇಂದ್ರ ಸರಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ. 41ರಷ್ಟು ಮೊತ್ತವನ್ನು ರಾಜ್ಯಗಳಿಗೆ 14 ಕಂತುಗಳಲ್ಲಿ ನೀಡಬೇಕೆಂದು 15ನೇ ಹಣಕಾಸು ಆಯೋಗ ವಿವಿಧ ಮಾನದಂಡಗಳ ಆಧಾರದಲ್ಲಿ ಶಿಫಾರಸು ಮಾಡಿತ್ತು. ಆದರೆ ಕರ್ನಾಟಕದಂಥ ದಕ್ಷಿಣದ ರಾಜ್ಯಗಳಿಗೆ ಹಣಕಾಸು ಆಯೋಗ ನಿಗದಿಪಡಿಸಿದ ಅನುದಾನ ಸಿಗಲಿಲ್ಲ.

ಭಾರತ ಒಕ್ಕೂಟ ರಾಷ್ಟ್ರ ಎಂಬುದನ್ನು ಈಗಿರುವ ಕೇಂದ್ರ ಸರಕಾರ ಮರೆತಂತೆ ಕಾಣುತ್ತದೆ. ಅನುದಾನ ಹಂಚಿಕೆಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳನ್ನು ಕಡೆಗಣಿಸಿ ಉತ್ತರದ ರಾಜ್ಯಗಳಿಗೆ ಹೆಚ್ಚು ಅನುದಾನವನ್ನು ನೀಡಲಾಗುತ್ತದೆ. ದಕ್ಷಿಣದ ರಾಜ್ಯಗಳು ಮಾತ್ರವಲ್ಲ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಪಂಜಾಬ್ ಮತ್ತು ಪಶ್ಚಿಮ ಬಂಗಾಳಗಳ ಬಗೆಗೂ ತಾರತಮ್ಯವನ್ನು ಮಾಡಲಾಗುತ್ತದೆ. ವಾಸ್ತವವಾಗಿ ಹೆಚ್ಚಿನ ಅನುದಾನವನ್ನು ಪಡೆದರೂ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನದಂಥ ರಾಜ್ಯಗಳು ಅಭಿವೃದ್ಧಿಯ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ಇಂದಿಗೂ ಶಿಕ್ಷಣ, ಆರೋಗ್ಯ, ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಹಿಂದೆ ಉಳಿದಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರಂತೂ ಗುಡಿ, ಗುಂಡಾರಗಳನ್ನು ಕಟ್ಟುವಲ್ಲಿ ತೋರಿಸುವ ಆಸಕ್ತಿಯನ್ನು ಅಭಿವೃದ್ಧಿ ಕಾರ್ಯಗಳ ಬಗ್ಗೆ ತೋರಿಸುತ್ತಿಲ್ಲ.

ಕರ್ನಾಟಕದ ಪಾಲಿನ ಅನುದಾನವನ್ನು ಪಡೆಯಲು ಬರೀ ಮುಖ್ಯಮಂತ್ರಿ ಗಳು ಪ್ರಯತ್ನಿಸಿದರೆ ಸಾಲದು. ಸಂಸತ್ತಿನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸಂಸದರು ರಾಜಧಾನಿ ದಿಲ್ಲಿಯಲ್ಲಿ ಲಾಬಿ ಮಾಡಬೇಕು. ಆದರೆ ವಿಷಾದದ ಸಂಗತಿಯೆಂದರೆ ನಮ್ಮ ಸಂಸದರು ಈ ಬಗ್ಗೆ ಸ್ಪಂದಿಸಿರುವುದು ಅಪರೂಪ.ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವಿದ್ದಾಗಲೂ ಪ್ರವಾಹ ಪರಿಹಾರ ನೀಡಲು ಮೋದಿ ಸರಕಾರ ಹಿಂದೆ ಮುಂದೆ ನೋಡಿತು. ಕೊರೋನ ಸಮಯದಲ್ಲಿ ಆಕ್ಸಿಜನ್ ನೀಡಲು ಸತಾಯಿಸಿತು. ಪ್ರಧಾನಿ ಅವರನ್ನು ಭೇಟಿಯಾಗಲು ದಿಲ್ಲಿಗೆ ಹೋದ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಭೇಟಿಯ ಅವಕಾಶವೂ ಸಿಗಲಿಲ್ಲ. ಆಗ ರಾಜ್ಯದಿಂದ ಬಿಜೆಪಿ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿದ್ದರು. ಆ ಸಂಸದರುಗಳು ರಾಜ್ಯದ ಬೇಡಿಕೆಗೆ ಸ್ಪಂದಿಸಲಿಲ್ಲ ಮಾತ್ರವಲ್ಲ ‘‘ರಾಜ್ಯದ ಖಜಾನೆಯಲ್ಲಿ ಸಾಕಷ್ಟು ಹಣವಿದೆ ಕೇಂದ್ರದ ನೆರವಿನ ಅಗತ್ಯವಿಲ್ಲ’’ ಎಂದು ಹೇಳಿದ್ದರು.

ಒಕ್ಕೂಟ ವ್ಯವಸ್ಥೆ ಸುರಕ್ಷಿತವಾಗಿ ಇರಬೇಕೆಂದರೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಚೆನ್ನಾಗಿರಬೇಕು. ಯಾವುದೇ ರಾಜ್ಯಕ್ಕೆ ತಾರತಮ್ಯದ ಭಾವನೆ ಬರದಂತೆ ನೋಡಿಕೊಳ್ಳಬೇಕು. 16ನೇ ಹಣಕಾಸು ಆಯೋಗದಿಂದಾದರೂ ಕರ್ನಾಟಕದ ತೆರಿಗೆ ಪಾಲು ಸಂದಾಯವಾಗಲಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News