ಪರಶುರಾಮನಿಗೆ ವಂಚನೆ: ನಕಲಿ ಹಿಂದುತ್ವವಾದಿಗಳ ಜೊತೆಗೆ ‘ಕೈ’ ಜೋಡಿಸಿದೆಯೇ ಸರಕಾರ?

Update: 2023-10-21 08:50 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪದಕೀಯದ ಆಡಿಯೋ ಆಲಿಸಿ

Full View

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಕಳಕ್ಕೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಗೋಮಟೇಶ್ವರ ವಿಗ್ರಹ ಮತ್ತು ಜೈನ ಬಸದಿಗಳಿಗಾಗಿ ಈ ಊರು ರಾಜ್ಯಮಟ್ಟದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಇಲ್ಲಿರುವ ಗೋಮಟೇಶ್ವರ ವಿಗ್ರಹವನ್ನು ಕೇಂದ್ರವಾಗಿಟ್ಟುಕೊಂಡು ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಅವಕಾಶ ಈಗಲೂ ಇದೆ. ಕಾರ್ಕಳ, ಮೂಡಬಿದ್ರೆ, ವೇಣೂರು, ಧರ್ಮಸ್ಥಳ...ಹೀಗೆ ಜೈನ ಅರಸರು ಮತ್ತು ಜೈನಸಂತರ ಹೆಜ್ಜೆ ಗುರುತುಗಳು ಕರಾವಳಿಯ ಇತಿಹಾಸಕ್ಕೆ ಬೇರೆಯೇ ದಿಕ್ಕೊಂದನ್ನು ನೀಡುತ್ತವೆ. ಕಾರ್ಕಳದ ಐತಿಹಾಸಿಕ ಸ್ಥಳಗಳನ್ನು, ಗೋಮಟೇಶ್ವರನನ್ನು ಅರಸುತ್ತಾ ಪ್ರತಿ ದಿನ ನೂರಾರು ಜನರು ಆಗಮಿಸುತ್ತಿರುತ್ತಾರೆ. ಜೈನ ಸಾಂಸ್ಕೃತಿಕ ಕೇಂದ್ರವಾಗಿರುವ ಕಾರ್ಕಳದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಹೊಸ ಪ್ರಯತ್ನದ ಅಗತ್ಯವಿಲ್ಲ. ಇರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಕಾರ್ಕಳವನ್ನು ರಾಷ್ಟ್ರಮಟ್ಟದ ಪ್ರವಾಸಿ ತಾಣವಾಗಿಸುವ ಅವಕಾಶ ರಾಜ್ಯ ಸರಕಾರಕ್ಕಿದೆ. ಇಷ್ಟಿದ್ದರೂ, ಕಾರ್ಕಳದ ನೆಲಕ್ಕೆ ಯಾವ ರೀತಿಯಲ್ಲೂ  ಸಾಂಸ್ಕೃತಿಕವಾಗಿ ಒಗ್ಗದ ಪರಶುರಾಮನನ್ನು  ಈ ಹಿಂದಿನ ಬಿಜೆಪಿ ಸರಕಾರ ಎಳೆದು ತಂದಿತು. ಕಾರ್ಕಳದಲ್ಲಿ ಪರಶುರಾಮನ ಹೆಸರಿನಲ್ಲಿ ಥೀಮ್ ಪಾರ್ಕನ್ನು ನಿರ್ಮಿಸಲು ಮುಂದಾಯಿತು. 

ಪರಶುರಾಮ ತನ್ನ ಕೊಡಲಿಯನ್ನು ಕಡಲಿಗೆ ಎಸೆದು ತುಳುನಾಡನ್ನು ಸೃಷ್ಟಿಸಿದ ಎನ್ನುವ ಮೌಖಿಕ ನಂಬಿಕೆಯ ಆಧಾರವೊಂದನ್ನು ಬಿಟ್ಟರೆ ಪರಶುರಾಮನಿಗೂ ತುಳುನಾಡಿಗೂ ಬೇರಾವ ವಿಶೇಷ ಸಂಬಂಧವೂ ಇಲ್ಲ. ಗೋಮಟೇಶ್ವರ, ಕೋಟಿ ಚೆನ್ನಯ, ಇಲ್ಲಿರುವ ನೂರಾರು ಕಾರ್ನಿಕ ದೈವಗಳು, ನಾರಾಯಣಗುರುಗಳ ವಿಚಾರಧಾರೆಗಳೊಂದಿಗೆ ನೇರ ಸಂಬಂಧವನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹೊಂದಿದೆ. ಇವೆಲ್ಲವನ್ನು ಒಟ್ಟು ಸೇರಿಸಿಕೊಂಡು ತುಳುನಾಡಿನ ಸಾಂಸ್ಕೃತಿಕ ಅಸ್ಮಿತೆಯನ್ನು ಎತ್ತಿ ಹಿಡಿಯುವ ಥೀಮ್ ಪಾರ್ಕನ್ನು ಮಾಡುವ ಅವಕಾಶ ಸರಕಾರಕ್ಕಿತ್ತು. ಥೀಮ್ ಪಾರ್ಕಿಗೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ನಾರಾಯಣ ಗುರುಗಳ ಹೆಸರನ್ನು ಇಡಬಹುದಿತ್ತು. ಅಥವಾ ‘ಬಾಹುಬಲಿ ಥೀಮ್ ಪಾರ್ಕ್’ ಎಂದೂ ಅದನ್ನು ಕರೆಯುವ ಅವಕಾಶವಿತ್ತು. ಆದರೆ ರಾಜಕೀಯ ಕಾರಣಕ್ಕಾಗಿಯೇ ಸ್ಥಳೀಯ ಬಿಜೆಪಿ ನಾಯಕರು ‘ಪರಶು ರಾಮ’ನ ಹೆಸರನ್ನು ಎಳೆದು ತಂದರು. ಸುಮಾರು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಥೀಂ ಪಾರ್ಕಿನ ದೊಡ್ಡ ಹೆಗ್ಗಳಿಕೆ ಬೃಹತ್ ಕಂಚಿನ ಪರಶುರಾಮ ಮೂರ್ತಿಯಾಗಿತ್ತು. 33 ಅಡಿ ಎತ್ತರದ ಈ ಕಂಚಿನ ಪ್ರತಿಮೆಗೆ ಸುಮಾರು 2 ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತದೆ ಎಂದು ಸರಕಾರದ ಪ್ರಕಟಣೆ ತಿಳಿಸಿತ್ತು. ಪ್ರತಿಮೆ ತೂಕ 15 ಟನ್. ಪರಶುರಾಮ ನ ಕೈಯ ಕೊಡಲಿಯ ಅಳತೆ 17 ಅಡಿ ಎಂದೂ ಮಾಧ್ಯಮಗಳಲ್ಲಿ ವರದಿಯಾಯಿತು. ಮಿಂಚು ಪ್ರತಿಬಂಧಕ ವಿಶೇಷ ಪ್ರತಿಮೆ ಎನ್ನುವುದು ಇನ್ನೊಂದು ವಿಶೇಷ. ಎಲ್ಲ ಪತ್ರಿಕೆಗಳೂ ಪ್ರತಿಮೆಯ ಹೆಗ್ಗಳಿಕೆಗಳನ್ನು ಪ್ರಮುಖ ಪುಟಗಳಲ್ಲಿ ವರ್ಣನೆ ಮಾಡಿದವು. ಇದೇ ಸಂದರ್ಭದಲ್ಲಿ  ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಥಳೀಯ ಬಿಜೆಪಿ ನಾಯಕರು ‘ಪರಶು ರಾಮ’ನನ್ನು ದುರ್ಬಳಕೆ ಮಾಡುತ್ತಿದ್ದಾರೆ ಎನ್ನುವ ವ್ಯಾಪಕ ಟೀಕೆಗಳೂ ಈ ಸಂದರ್ಭದಲ್ಲಿ ಎದುರಾಯಿತು. ‘ಏನೇ ಆಗಲಿ, ಕರಾವಳಿಯಲ್ಲಿ ಈ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆಯಲ್ಲ....’ ಎನ್ನುವ ಸಮಾಧಾನದ ಮಾತುಗಳೂ ಜೊತೆ ಜೊತೆಗೇ ಕೇಳಿ ಬಂದವು. ‘‘ವಿರೋಧ ಪಕ್ಷಕ್ಕೆ ರಾಜ್ಯದಲ್ಲಿ ಪ್ರವಾಸೋದ್ಯಮ ಉದ್ಧಾರವಾಗುವುದು ಬೇಕಾಗಿಲ್ಲ’’ ಎಂದೂ ಬಿಜೆಪಿ ನಾಯಕರು ಪ್ರತಿ ಟೀಕೆ ಮಾಡಿದರು. 

ಈ ಥೀಮ್ ಪಾರ್ಕನ್ನು ಸ್ವತಃ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೇ ಉದ್ಘಾಟಿಸಿದ್ದರು. ಸಮಾರಂಭದಲ್ಲಿ ‘‘ಪರಶುರಾಮನ ಭಕ್ತನಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಇಲ್ಲಿನ ಪರಶುರಾಮ ಥೀಮ್ ಪಾರ್ಕ್ ಟೂರಿಸಂ ಕೇಂದ್ರದ ಜೊತೆಗೆ ಪುಣ್ಯ ಭೂಮಿ ಕೂಡ ಆಗಲಿದೆ’’ ಎಂದು ಘೋಷಿಸಿದ್ದರು. ಅಷ್ಟೇ ಅಲ್ಲ ‘‘ಪರಶುರಾಮನ ಪುತ್ಥಳಿ ಸ್ಥಾಪನೆಯ ಆನಂತರ ತುಳುನಾಡು ಬಂಗಾರದ ನಾಡಾಗಲಿದೆ. ಇದೊಂದು ಐತಿಹಾಸಿಕ ದಿನ’’ ಎಂದು ಬಣ್ಣಿಸಿದ್ದರು.  ಥೀಮ್ ಪಾರ್ಕಿನ ನೇತೃತ್ವವನ್ನು ವಹಿಸಿದ್ದ ಅಂದಿನ ಸಚಿವ ಸುನೀಲ್ ಕುಮಾರ್ ಇಡೀ ಸಮಾರಂಭದ ಕೇಂದ್ರ ಬಿಂದುವಾಗಿದ್ದರು. ವಿಧಾನಸಭಾಚುನಾವಣೆಯ ಸಂದರ್ಭದಲ್ಲಿ ಹಿಂದುತ್ವದ ಜಾಗೃತಿಗಾಗಿ ‘ಪರಶುರಾಮ’ನನ್ನು ಗರಿಷ್ಠ ಪ್ರಮಾಣದಲ್ಲಿ ಈ ಸಚಿವರು ಬಳಸಿಕೊಂಡಿದ್ದರು. ಇಷ್ಟೆಲ್ಲ ಆದ ಮೇಲೆ ಇದೀಗ ‘ಪರಶುರಾಮ ಪ್ರತಿಮೆಯ ಅಸಲಿ’ತನ ಬೆಳಕಿಗೆ ಬಂದಿದೆ. ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ, ಕಾರ್ಕಳದಲ್ಲಿ ನಿರ್ಮಿಸಲ್ಪಟ್ಟ  ಪರಶುರಾಮನ ಕಂಚಿನ ಪ್ರತಿಮೆ ಅಸಲಿಯಲ್ಲ, ಇದಕ್ಕೆ ಕಂಚಿನ ಬಣ್ಣವನ್ನಷ್ಟೇ ಲೇಪಿಸಲಾಗಿದೆ. ಇದನ್ನು ಫೈಬರ್ ಬಳಸಿ ನಿರ್ಮಿಸಲಾಗಿದೆ ಎನ್ನುವ ಆರೋಪ ಕೇಳಿ ಬರತೊಡಗಿದ್ದವು. ಬರೇ ಪ್ರತಿಮೆ ಮಾತ್ರ ಅಲ್ಲ ಇಡೀ ಥೀಮ್ ಪಾರ್ಕಿನಲ್ಲಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆಯೂ ಸಾರ್ವಜನಿಕರು ಆರೋಪಿಸತೊಡಗಿದ್ದರು. ಅಂತಿಮವಾಗಿ ಥೀಮ್ ಪಾರ್ಕಿಗೆ ಭೇಟಿ ನೀಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ‘‘ಪ್ರತಿಮೆಯಲ್ಲಿ ಅಕ್ರಮವಾಗಿರುವುದು ನಿಜ’’ ಎನ್ನುವುದನ್ನು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು. ವಿಪರ್ಯಾಸವೆಂದರೆ ಸ್ವತಃ ಸಚಿವೆಯೇ ಅಕ್ರಮ ನಡೆದಿರುವುದನ್ನು ಸ್ಪಷ್ಟ ಪಡಿಸಿದ ಬಳಿಕವೂ ಅಕ್ರಮ ನಡೆಸಿದವರ ವಿರುದ್ಧ ಜಿಲ್ಲಾಡಳಿತ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಅಕ್ರಮ ನಡೆದಿರುವುದು ನಿಜವೇ ಆಗಿದ್ದರೆ ಆ ಅಕ್ರಮ ಎಸಗಿದವರ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಕೂಡ ಉಸ್ತುವಾರಿ ಸಚಿವೆಯ ಕರ್ತವ್ಯವಾಗಿದೆ. ಆದರೆ ಆ ಬಗ್ಗೆ ಯಾವ ಭರವಸೆಯನ್ನೂ ಅವರು ನೀಡಲಿಲ್ಲ. ಇದೀಗ ನೋಡಿದರೆ ರಾತ್ರೋ ರಾತ್ರಿ ಪರಶುರಾಮನ ಪ್ರತಿಮೆ ಕಾಣೆಯಾಗಿದೆ. ‘ಅಸಲಿ ಪ್ರತಿಮೆ ಇನ್ನಷ್ಟೇ ನಿರ್ಮಾಣವಾಗಬೇಕಾಗಿದೆ. ಇದು ನಕಲಿ ಪ್ರತಿಮೆ’ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸ್ವತಃ ಅಂದಿನ ಬಿಜೆಪಿ ಸರಕಾರದ ಮುಖ್ಯಮಂತ್ರಿಯೇ ಉದ್ಘಾಟಿಸಿದ ಪರಶುರಾಮ ಪ್ರತಿಮೆಯನ್ನು ಏಕಾಏಕಿ ತೆರವುಗೊಳಿಸಬೇಕಾದರೆ ಅದಕ್ಕೆ ಜಿಲ್ಲಾಡಳಿತ ಸಕಾರಣವನ್ನು ನೀಡಬೇಕಾಗಿದೆ. ‘‘ಪ್ರತಿಮೆಯಲ್ಲಿ ಅಕ್ರಮ ನಡೆದಿದೆ’’ ಎಂದಾದರೆ ಆ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕೇ ಹೊರತು, ಸ್ವತಃ ಪ್ರತಿಮೆಯನ್ನು ಬದಲಿಸಿ ಹೊಸ ಪ್ರತಿಮೆಯನ್ನು ತಂದು ನಿಲ್ಲಿಸುವುದಲ್ಲ. ನಾಳೆ ಹೊಸದಾಗಿ ಅಸಲಿ ಪ್ರತಿಮೆಯನ್ನು ತಂದು ನಿಲ್ಲಿಸಿದರೂ ಮಾಡಿದ ಅಕ್ರಮ ಸಕ್ರಮವಾಗುವುದಿಲ್ಲ. ‘ನಕಲಿ ಪ್ರತಿಮೆ’ಯನ್ನು ಅಸಲಿ ಪ್ರತಿಮೆಯೆಂದು ಥೀರ್ಮ್ ಪಾರ್ಕ್‌ನಲ್ಲಿ ನಿಲ್ಲಿಸಿ ವಂಚಿಸಿದವರು ಯಾರು? ಸರಕಾರವನ್ನು ವಂಚಿಸಿರುವುದು ಪ್ರತಿಮೆಯನ್ನು ನಿರ್ಮಿಸಿದ ಶಿಲ್ಪಿಗಳೇ ಆಗಿದ್ದರೆ ಅವರ ಬಂಧನವಾಗಲಿ ಅಥವಾ ಥೀಮ್ ಪಾರ್ಕ್‌ನ ಸಮಿತಿಯ ಮುಖ್ಯಸ್ಥರು ಇದರಲ್ಲಿ ಭಾಗಿಯಾಗಿದ್ದರೆ ಆಗಿದ್ದರೆ ಮೊತ್ತ ಮೊದಲು ಅವರ ಮೇಲೆ ಪ್ರಕರಣ ದಾಖಲಾಗಬೇಕು. ಪ್ರತಿಮೆಯಲ್ಲಿ ಮಾತ್ರವಲ್ಲ, ಥೀಮ್ ಪಾರ್ಕ್‌ನಲ್ಲಿ ನಡೆದಿರುವ ಅಕ್ರಮಗಳು ಕೂಡ  ತನಿಖೆಗೆ ಒಳಪಡಬೇಕು. ಆದರೆ ನೂತನ ಸರಕಾರ ಈವರೆಗೆ ಯಾವುದೇ ತನಿಖೆಗೆ ಆದೇಶವನ್ನು ನೀಡಿಲ್ಲ. ಪ್ರತಿಮೆ ಕಾಣೆಯಾಗಿದ್ದರೂ, ಉಸ್ತುವಾರಿ ಸಚಿವರು ತುಟಿ ಬಿಚ್ಚಿಲ್ಲ. ನಕಲಿ  ಪರಶುರಾಮನನ್ನು ತಂದಿಟ್ಟು ತುಳು ನಾಡಿನ ಜನರನ್ನು ಏಮಾರಿಸಿದ  ನಕಲಿ ಹಿಂದುತ್ವವಾದಿಗಳ ಜೊತೆಗೆ ನೂತನ ರಾಜ್ಯ ಸರಕಾರವೂ ಕೈಜೋಡಿಸಿದೆಯೇ  ಎನ್ನುವ ಅನುಮಾನವನ್ನು ಕರಾವಳಿಯ ಜನರು ವ್ಯಕ್ತಪಡಿಸುತ್ತಿದ್ದಾರೆ.

ಕಂಚಿನ ಪ್ರತಿಮೆಯೆಂದು ಪರಶುರಾಮನ ನಕಲಿ ಫೈಬರ್ ಪ್ರತಿಮೆಯನ್ನು ತಂದಿಟ್ಟು ವಂಚಿಸುವ ಮೂಲಕ ಕರಾವಳಿಯ ನಕಲಿ ಹಿಂದುತ್ವವಾದಿಗಳು ತುಳುನಾಡಿನ ಜನರ ಧಾರ್ಮಿಕ ನಂಬಿಕೆಗೆ ದ್ರೋಹ ಬಗೆದಿದ್ದಾರೆ. ‘ಪರಶುರಾಮನ  ಈ ನಕಲಿ ಪುತ್ಥಳಿಯಿಂದ ತುಳುನಾಡು ಬಂಗಾರವಾಗುವುದು ಹೇಗೆ?’ ಎಂದು ಜನರು ಅಂದಿನ ಮುಖ್ಯಮಂತ್ರಿ ಬೊಮ್ಮಾಯಿಯನ್ನು ಪ್ರಶ್ನಿಸುತ್ತಿದ್ದಾರೆ. ನಕಲಿ ಹಿಂದುತ್ವವಾದಿಗಳು ಕರಾವಳಿಯಲ್ಲಿ ಹಿಂದೂ ಧರ್ಮಕ್ಕೆ ಯಾವ ಸ್ಥಿತಿ ತಂದಿಟ್ಟಿದ್ದಾರೆ ಎನ್ನುವುದಕ್ಕೆ ‘ಕಾಣೆಯಾಗಿರುವ ಪರಶುರಾಮ ಪ್ರತಿಮೆ’ಯೇ ಉದಾಹರಣೆ.  ಮೊತ್ತ ಮೊದಲು ರಾಜ್ಯ ಸರಕಾರ ಪರಶುರಾಮನ ಹೆಸರಿನಲ್ಲಿ ಕರಾವಳಿಯಲ್ಲಿ ಹಿಂದೂ ಧರ್ಮಕ್ಕೂ, ಇಲ್ಲಿನ ಪ್ರವಾಸೋದ್ಯಮಕ್ಕೂ ಆದ ಮೋಸವನ್ನು ತನಿಖೆಗೊಳಪಡಿಸಬೇಕು. ಇಲ್ಲದೇ ಇದ್ದರೆ ನಕಲಿ ಹಿಂದುತ್ವವಾದಿಗಳ ಈ ಅಕ್ರಮದಲ್ಲಿ ಕಾಂಗ್ರೆಸ್‌ನ ಸರಕಾರದೊಳಗಿರುವ ಜನರೂ ಶಾಮೀಲಾಗಿದ್ದಾರೆ ಎಂದು ಜನರು ಶಂಕಿಸುವ ಸಾಧ್ಯತೆಗಳಿವೆ. ಇದೇ ಸಂದರ್ಭದಲ್ಲಿ ನಕಲಿ ಹಿಂದುತ್ವವಾದಿಗಳಿಂದ ಅಸಲಿ ಹಿಂದೂ ಧರ್ಮವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಿವೇಕಾನಂದ, ನಾರಾಯಣಗುರುಗಳಂತಹ ಸಂತರನ್ನು ಮತ್ತೆ ಸಮಾಜದಲ್ಲಿ ಜಾಗೃತಗೊಳಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ ಎನ್ನುವುದನ್ನು ಪರಶುರಾಮನಿಗೆ ಒದಗಿದ ದುರ್ಗತಿ ಸಾರಿ ಹೇಳುತ್ತಿದೆ. ‘ಹಿಂದುತ್ವ ಯಾರಿಂದ ಅಪಾಯದಲ್ಲಿದೆ?’ ಎನ್ನುವುದು ಕರಾವಳಿಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಸ್ವಾಮಿವಿವೇಕಾನಂದ, ನಾರಾಯಣ ಗುರುಗಳು, ರಾಮಕೃಷ್ಣ ಪರಮಹಂಸ, ಮಹಾತ್ಮಾಗಾಂಧೀಜಿಯಂತಹ ಸಂತರು ಕಟ್ಟಿ  ನಿಲ್ಲಿಸಿದ ಅಸಲಿ ಹಿಂದೂ ಧರ್ಮವನ್ನು ನಕಲಿ ಹಿಂದುತ್ವವಾದಿಗಳಿಂದ ರಕ್ಷಿಸುವ ಕೆಲಸ ನಡೆಯದೇ ಇದ್ದರೆ, ಮುಂದೆ ಹಿಂದೂ ಧರ್ಮದ ಶ್ರೇಷ್ಠ ಮೌಲ್ಯಗಳ ಜಾಗದಲ್ಲಿ ಸಂಘಪರಿವಾರ ಜನರು ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಆರೆಸ್ಸೆಸ್‌ನ ನಕಲಿ ಚಿಂತನೆಗಳನ್ನು ತಂದು ನಿಲ್ಲಿಸಲಿದ್ದಾರೆ. ಕಾರ್ಕಳದಲ್ಲಿ ಸ್ಥಾಪಿಸಲ್ಪಟ್ಟ ‘ನಕಲಿ ಪರಶುರಾಮ’ ಕರಾವಳಿಯ ಹಿಂದುತ್ವವಾದಿಗಳ ನಕಲಿತನವನ್ನು ಬಹಿರಂಗಪಡಿಸಿದ್ದಾನೆ. ನಕಲಿ ಪರಶುರಾಮನನ್ನೇನೋ ರಾತ್ರೋರಾತ್ರಿ ಎತ್ತಂಗಡಿ ಮಾಡಲಾಗಿದೆ, ಜೊತೆಗೇ ಇಲ್ಲಿರುವ ನಕಲಿ ಹಿಂದುತ್ವವಾದಿ ನಾಯಕರ ಎತ್ತಂಗಡಿಯೂ ಅಷ್ಟೇ ವೇಗದಲ್ಲಿ ನಡೆಯಬೇಕಾಗಿದೆ.   

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News