ಕೊರೋನ ಹಗರಣ: ನಾಡಿನ ಬೆನ್ನಿಗೆ ಚೂರಿ

Update: 2024-10-11 00:47 GMT

ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದಿರುವ ಕೋವಿಡ್ ಹಗರಣವನ್ನು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಸಿಟ್) ರಚಿಸುವುದಕ್ಕೆ ಸಂಪುಟ ಸಭೆ ತೀರ್ಮಾನಿಸಿದೆ. ಕೋವಿಡ್ ಹಗರಣಕ್ಕೆ ಸಂಬಂಧಿಸಿ ನ್ಯಾ. ಮೈಕೆಲ್ ಡಿಕುನ್ಹಾ ಅವರ ವಿಚಾರಣಾ ಆಯೋಗ ಮಧ್ಯಂತರ ವರದಿಯನ್ನು ನೀಡಿದ ಬಳಿಕ ಸರಕಾರ ಹಗರಣದ ಮುಂದಿನ ಗತಿಯನ್ನು ನಿರ್ಧರಿಸುವ ನಿಟ್ಟಿನಲ್ಲಿ ಮಹತ್ತರ ತೀರ್ಮಾನವನ್ನು ತೆಗೆದುಕೊಂಡಿದೆ. ಈಗಾಗಲೇ ವಿಚಾರಣಾ ಆಯೋಗವು 11 ಸಂಪುಟಗಳಲ್ಲಿ ವರದಿ ನೀಡಿದ್ದು, 7,223.64 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎನ್ನುವುದನ್ನು ವರದಿಯು ಉಲ್ಲೇಖಿಸಿದೆ. ವಿಚಾರಣಾ ಆಯೋಗದ ವರದಿ ಸಂಪೂರ್ಣವಾದರೆ, ಹಲವು ಕಂಪೆನಿಗಳು ಕಪ್ಪು ಪಟ್ಟಿಗೆ ಸೇರಲಿವೆ ಮಾತ್ರವಲ್ಲ, ಈ ಕಂಪೆನಿಗಳ ಮೂಲಕ ನಾಡಿನ ಜನತೆಗೆ ವಂಚಿಸಿದ ಅಂದಿನ ಸರಕಾರದ ಹಲವು ಅಧಿಕಾರಿಗಳು ಮತ್ತು ಸಚಿವರು ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ.

ಬಿಜೆಪಿಯ ಹಲವು ನಾಯಕರು ಇಂದು ಮುಡಾ ಹಗರಣವನ್ನು ಗುಡ್ಡ ಮಾಡಿ, ಸಿದ್ದರಾಮಯ್ಯ ಅಧಿಕಾರದಿಂದ ಇಳಿಯಲೇ ಬೇಕು ಎಂದು ಒತ್ತಾಯಿಸುವುದರ ಹಿಂದೆ, ಈ ಕೋವಿಡ್ ಹಗರಣದ ತನಿಖೆಯ ಭಯವೂ ಇದೆ. ಮುಖ್ಯವಾಗಿ ಮುಡಾ ಹಗರಣವನ್ನು ಸಿದ್ದರಾಮಯ್ಯ ನೇತೃತ್ವದ ನೂತನ ಸರಕಾರದ ಹಗರಣವೆಂಬಂತೆ ಬಿಂಬಿಸಿ ಸಾರ್ವಜನಿಕವಾಗಿ ರಾಡಿ ಎಬ್ಬಿಸುವುದರ ಹಿಂದೆಯೇ ದುರುದ್ದೇಶ ಇದೆ. ಈ ಮೂಲಕ, ತಮ್ಮ ವಿರುದ್ದದ ಹಗರಣಗಳ ಕರಾಳತೆಯನ್ನು ತಿಳಿಗೊಳಿಸುವುದು ಬಿಜೆಪಿ ನಾಯಕರ ಒಂದು ಉದ್ದೇಶ. ಜೊತೆ ಜೊತೆಗೇ ಕೊರೋನ ಹಗರಣದ ತನಿಖೆಗೆ ಇಳಿದಿರುವ ಸಿದ್ದರಾಮಯ್ಯ ಸರಕಾರದ ವಿಶ್ವಾಸಾರ್ಹತೆಯನ್ನು ಕುಗ್ಗಿಸಿ ಪರೋಕ್ಷವಾಗಿ ಸರಕಾರವನ್ನು ಬ್ಲ್ಯಾಕ್‌ಮೇಲ್ ನಡೆಸಿ ಒತ್ತಡ ಹೇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಕೊರೋನದಿಂದ ರಾಜ್ಯಕ್ಕೆ ರಾಜ್ಯವೇ ತತ್ತರಿಸಿ ಕುಳಿತ ಹೊತ್ತಿನಲ್ಲಿ, ಅದೇ ಕೊರೋನದ ಹೆಸರಿನಲ್ಲಿ ನಡೆದ ಕೋಟ್ಯಂತರ ರೂಪಾಯಿ ಹಗರಣಕ್ಕೆ, ಸ್ವತಃ ಬಿಜೆಪಿಯ ವರಿಷ್ಠರೇ ಕಂಗಾಲಾಗಿದ್ದರು. ಅಂದಿನ ಬಿಜೆಪಿ ಸರಕಾರ ಈ ಹಗರಣಗಳ ವೈಫಲ್ಯದಿಂದ ಮುಖ ಉಳಿಸಿಕೊಳ್ಳಲು ಕೊರೋನಾ ವಾರ್ ರೂಂನಲ್ಲಿರುವ ಸ್ವಯಂ ಸೇವಕರ ನಡುವೆ 'ಹಿಂದೂ-ಮುಸ್ಲಿಮ್' ಎಂದು ಭೇದವನ್ನು ಹುಟ್ಟಿಸುವ ಪ್ರಯತ್ನ ನಡೆಸಿತ್ತು. ಬಿಬಿಎಂಪಿ ಆಸ್ಪತ್ರೆಗಳ ವಾರ್ ರೂಂಗೆ ನುಗ್ಗಿ ಬಿಜೆಪಿ ಮುಖಂಡ ತೇಜಸ್ವಿ ಸೂರ್ಯ ನಡೆಸಿದ ಅವಾಂತರವನ್ನು ಜನರು ಇನ್ನೂ ಮರೆತಿಲ್ಲ. ಆಸ್ಪತ್ರೆಯ ಮಂಚಗಳನ್ನೇ ಲಕ್ಷಾಂತರ ರೂಪಾಯಿಗಳಿಗೆ ಗುಟ್ಟಾಗಿ ಮಾರಾಟ ಮಾಡಿರುವ ಪ್ರಕರಣಗಳಲ್ಲಿ ಬಿಜೆಪಿ ನಾಯಕರು ಶಾಮೀಲಾಗಿರುವುದು ಮಾಧ್ಯಮಗಳಲ್ಲಿ ಬಹಿರಂಗವಾಗಿತ್ತು. ಅಂತಿಮವಾಗಿ ಅಂದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸುವುದಕ್ಕಾಗಿ ಬಿಜೆಪಿ ನಾಯಕರೇ ಕೊರೋನ ಹಗರಣವನ್ನು ಅಸ್ತ್ರವಾಗಿ ಬಳಸಿಕೊಂಡರು. ಕೊರೋನ ಕಾಲದ ಎಲ್ಲ ವೈಫಲ್ಯಗಳನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ತಲೆಗೆ ದಿಲ್ಲಿ ವರಿಷ್ಠರು ಕಟ್ಟಿದ್ದರು. ಕೊರೋನ ಹಗರಣದಲ್ಲಿ ಸಾವಿರಾರು ಕೋಟಿ ರೂ. ಹಗರಣಗಳು ನಡೆದಿವೆ ಎನ್ನುವ

ಆರೋಪ ಬರೇ ಹಣಕ್ಕೆ ಸಂಬಂಧಿಸಿದ್ದಷ್ಟೇ ಅಲ್ಲ. ಆ ಸಂದರ್ಭದಲ್ಲಿ ನೂರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಆ ಸಾವು, ನೋವುಗಳಲ್ಲಿ ಈ ಹಗರಣಗಳ ಪಾತ್ರ ಬಹುದೊಡ್ಡದಿದೆ. ಬೃಹತ್ ಕಂಪೆನಿಗಳ ಜೊತೆಗೆ ಒಳ ಒಪ್ಪಂದಗಳನ್ನು ಮಾಡಿಕೊಂಡು ಕೊರೋನ ಕಿಟ್‌ಗಳನ್ನು, ಉಪಕರಣಗಳನ್ನು ದುಬಾರಿ ಬೆಲೆಯಲ್ಲಿ ಕೊಂಡು ಕೊಳ್ಳಲಾಯಿತು. ಹಲವು ಉಪಕರಣಗಳನ್ನು ಕೊಂಡು ಕೊಂಡಿರುವ ದಾಖಲೆಗಳು ಕಡತಗಳಲ್ಲಿ ಮಾತ್ರ ಇವೆ. ಅವುಗಳು ಆಸ್ಪತ್ರೆಗಳಿಗೆ ತಲುಪಲೇ ಇಲ್ಲ. ಕಂಪೆನಿಗಳಿಗೆ ಲಾಭ ಮಾಡಿಕೊಡುವುದಕ್ಕಾಗಿ ಆದೇಶಗಳನ್ನು ಮೀರಿ ಅನಗತ್ಯ ಉಪಕರಣಗಳನ್ನು ಕೊಂಡುಕೊಂಡಿರುವ ಬಗ್ಗೆಯೂ ವರದಿ ಹೇಳುತ್ತದೆ. ಕೊರೋನ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ವ್ಯಯ ಮಾಡಬೇಕಾಗಿರುವ ನೂರಾರು ಕೋಟಿ ಹಣವನ್ನು ಕಂಪೆನಿಗಳು, ಸರಕಾರಿ ಅಧಿಕಾರಿಗಳು ಮತ್ತು ಸಚಿವರು ಹಂಚಿಕೊಂಡರು. ಸರಕಾರ ಕೋಟ್ಯಂತರ ರೂಪಾಯಿಯನ್ನು ಬಿಡುಗಡೆ ಮಾಡಿದರೂ ಅದು ಅಂತಿಮವಾಗಿ ಕೊರೋನ ಸಂತ್ರಸ್ತರ ಜೀವ ಉಳಿಸಲು ನೆರವಾಗಲಿಲ್ಲ. ಒಂದೆಡೆ ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳಿರಲಿಲ್ಲ. ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದವು. ಮಗದೊಂದೆಡೆ ಆಕ್ಸಿಜನ್ ಸಿಲಿಂಡರ್‌ಗಳ ಕೊರತೆಯಿಂದ ಆಸ್ಪತ್ರೆಗಳಲ್ಲಿ ಜನರು ಸಾಲು ಸಾಲಾಗಿ ಸಾಯತೊಡಗಿದ್ದರು. ಇಂತಹ ಹೊತ್ತಿನಲ್ಲಿ, ಸರಕಾರದೊಳಗಿರುವ ಮುಖಂಡರು ಕೊರೋನ ಹಣವನ್ನು ಸದ್‌ಬಳಕೆ ಮಾಡುವ ಬದಲು, ಅದರಿಂದ ತಾನೆಷ್ಟು ಉಳಿಸಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕತೊಡಗಿದರು. ರಾಜಕಾರಣಿಗಳ ಈ ಅವ್ಯವಹಾರ ರಾಜ್ಯದಲ್ಲಿ ಕೊರೋನ, ಲಾಕ್ ಡೌನ್‌ಗಳನ್ನು ಇನ್ನಷ್ಟು ಭೀಕರವಾಗಿಸಿತ್ತು. ಸರಕಾರದ ನೇತೃತ್ವದಲ್ಲೇ ರಾಜ್ಯದ ಜನತೆಯ ಮೇಲೇ ನಡೆದ ಈ ಅನ್ಯಾಯಗಳು ತನಿಖೆಗೊಳಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ಜೈಲು ಸೇರಲೇಬೇಕಾಗಿದೆ. ಈ ನಿಟ್ಟಿನಲ್ಲಿ ಸಿಟ್ ಹಗರಣಗಳ ಆಳಕ್ಕೆ ಇಳಿದು ಆರೋಪಿಗಳನ್ನು ಗುರುತಿಸುವ ಕೆಲಸವನ್ನು ಮಾಡಬೇಕು.

ಕೊರೋನ ಹಗರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರು ಆರೋಪ ಮಾಡುವುದಕ್ಕೆ ಮೊದಲೇ, ಬಿಜೆಪಿಯ ನಾಯಕರು ಅದರ ವಿರುದ್ಧ ಧ್ವನಿಯೆತ್ತಿದ್ದರು. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರದ ಅವಧಿಯಲ್ಲಿ ಕೋವಿಡ್ ಸಂಬಂಧಿತ ಖರೀದಿಯಲ್ಲಿ 40,000 ಕೋಟಿ ರೂಪಾಯಿಗಳ ಹಗರಣಗಳು ನಡೆದಿವೆ ಎಂದು ಆರೋಪಿಸಿರುವುದು ಯಾವುದೇ ಕಾಂಗ್ರೆಸ್ ನಾಯಕರಲ್ಲ. ಬಿಜೆಪಿಯ ಮುಖಂಡರೆಂದು ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್, 45 ರೂಪಾಯಿಯ ಮುಖಗವಸನ್ನು ಈ ಸಂದರ್ಭದಲ್ಲಿ 485 ರೂಪಾಯಿಗಳಿಗೆ ಖರೀದಿಸಲಾಗಿತ್ತು ಎಂದು ಅವರು ಮಾಧ್ಯಮಗಳ ಮುಂದೆ ಆರೋಪಿಸಿದ್ದರು. ಹಾಸಿಗೆಗಳ ಖರೀದಿಯಲ್ಲೂ ನಡೆದಿರುವ ಬೃಹತ್ ಅವ್ಯವಹಾರವನ್ನು ಅವರು ಮಾಧ್ಯಮಗಳ ಮುಂದಿಟ್ಟಿದ್ದರು. ಯತ್ನಾಳ್ ಆರೋಪವನ್ನು ಸುಳ್ಳು ಎಂದು ಯಾವುದೇ ಬಿಜೆಪಿ ನಾಯಕರು ಈವರೆಗೆ ಹೇಳಿಲ್ಲ. ಅಷ್ಟೇ ಅಲ್ಲ, ಯತ್ನಾಳ್ ಬಿಜೆಪಿ ಸರಕಾರದ ವಿರುದ್ಧವೇ ಇಂತಹದೊಂದು ಗಂಭೀರ ಆರೋಪ ಮಾಡಿದಾಗ ಬಿಜೆಪಿ ವರಿಷ್ಠರು ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಅಂದರೆ, ಬಿಜೆಪಿ ವರಿಷ್ಠರೇ ತಮ್ಮ ಮೌನದ ಮೂಲಕ ಯತ್ನಾಳ್ ಆರೋಪವನ್ನು ಅನುಮೋದಿಸಿದ್ದರು. ಈ ನಿಟ್ಟಿನಲ್ಲಿ, ಯತ್ನಾಳ್ ಅವರು ಕೂಡ ತನಿಖೆಗೆ ಸಹಕರಿಸಬೇಕಾಗಿದೆ. ತನಿಖಾಧಿಕಾರಿಗಳು ಯತ್ನಾಳ್ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಅವರಿಂದ ಹೇಳಿಕೆಗಳನ್ನು ಸಂಗ್ರಹಿಸಬೇಕು.

ಬಿಜೆಪಿಯ ಅಧಿಕಾರಾವಧಿಯಲ್ಲಿ ಹಲವು ನಾಯಕರು ಹಲವು ಭ್ರಷ್ಟಾಚಾರಗಳಲ್ಲಿ ಗುರುತಿಸಿದ್ದಾರೆ. ಆದರೆ ಅವೆಲ್ಲವೂ ಬಿಡಿ ಬಿಡಿಯಾದ ಹಗರಣಗಳು. ಸಿದ್ದರಾಮಯ್ಯ ಅವರ ಮುಡಾ ಹಗರಣದ ಜೊತೆಗೆ ಆ ಎಲ್ಲ ಹಗರಣಗಳ ತನಿಖೆಯೂ ನಡೆಯಲಿ. ಆದರೆ, ಕೊರೋನ ಹಗರಣ ಭಿನ್ನವಾದದ್ದು. ಕೊರೊನಾ ಸಂದರ್ಭದಲ್ಲಿ ಸಾವು ನೋವುಗಳಿಂದ ಹಾಹಾಕಾರ ನಡೆಸುತ್ತಿದ್ದ ಜನರ ಜೊತೆಗೆ ನಿಲ್ಲಬೇಕಾಗಿದ್ದ ಸರಕಾರ ಹಗರಣಗಳ ಮೂಲಕ ಜನರ ಬೆನ್ನಿಗೆ ಚೂರಿ ಹಾಕಿತು. ಆ ಗಾಯಗಳು ಇನ್ನೂ ಒಣಗಿಲ್ಲ. ನೂತನ ಸರಕಾರ ನೀಡಿರುವ ಗ್ಯಾರಂಟಿ ಯೋಜನೆಗಳು ಆ ಗಾಯಗಳಿಗೆ ಸಣ್ಣ ಪ್ರಮಾಣದ ಮುಲಾಮು ಹಚ್ಚಿದೆ.ಆದರೆ, ಎಲ್ಲಿಯವರೆಗೆ ಈ ಹಗರಣಗಳಲ್ಲಿ ಶಾಮೀಲಾದವರಿಗೆ ಶಿಕ್ಷೆಯಾಗುವುದಿಲ್ಲವೋ ಅಲ್ಲಿಯವರೆಗೆ ಈ ಗಾಯಗಳು ಪೂರ್ಣ ಪ್ರಮಾಣದಲ್ಲಿ ಒಣಗುವುದಿಲ್ಲ. ಆದುದರಿಂದ, ಸಿಟ್ ನೇತೃತ್ವದಲ್ಲಿ ಶೀಘ್ರ ತನಿಖೆ ನಡೆದು, ಆರೋಪಿಗಳನ್ನು ಕಟಕಟೆಗೆ ಎಳೆದು ತರುವ ಕೆಲಸವಾಗಬೇಕು. ಹಗರಣದಲ್ಲಿ ಭಾಗಿಯಾದ ಸಂಸ್ಥೆಗಳು ಎಷ್ಟೇ ದೊಡ್ಡದಿರಲಿ ಅವುಗಳು ಕಪ್ಪು ಪಟ್ಟಿಗೆ ಸೇರಬೇಕು. ಅವುಗಳೊಂದಿಗೆ ಶಾಮೀಲಾಗಿರುವ ರಾಜಕೀಯ ನಾಯಕರು ಎಷ್ಟು ದೊಡ್ಡ ಸ್ಥಾನದಲ್ಲೇ ಇರಲಿ ಅವರಿಗೆ ಶಿಕ್ಷೆಯಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News