ಕುಟುಂಬ ರಾಜಕಾರಣ ಜನತಂತ್ರಕ್ಕೆ ಮಾರಕ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತದಲ್ಲಿ ಬಹುತೇಕ ಎಲ್ಲ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಬಾಪ್ರಜಾಪ್ರಭುತ್ತ ಮಾಯವಾಗಿ ಅವು ಕುಟುಂಬದ ಸ್ವಂತ ಆಸ್ತಿಯಾಗಿ ರೂಪಾಂತರಗೊಳ್ಳುತ್ತಿವೆ. ಕಾಂಗ್ರೆಸ್‌ನಲ್ಲಿನ ನೆಹರೂ ಕುಟುಂಬದ ವಂಶ ಪಾರಂಪರ್ಯವನ್ನು ಟೀಕಿಸುತ್ತ ಬಂದ ಪಕ್ಷಗಳಲ್ಲೂ ಅವುಗಳ ನಾಯಕರಿಗೆ ತಮ್ಮ ಮಕ್ಕಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಳ್ಳುವ ಕುಟುಂಬ ವ್ಯಾಮೋಹ ಹೆಚ್ಚಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಸಂಸದೀಯ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದ ನಾಯಕರು ಎಂದೂ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರಲಿಲ್ಲ. ಮಹಾತ್ಮಾ ಗಾಂಧೀಜಿ, ಮೌಲಾನಾ ಅಬುಲ್ ಕಲಾಂ ಆಝಾದ್, ಸುಭಾಷ್‌ಚಂದ್ರ ಬೋಸ್ ಅವರ ಮಕ್ಕಳು ಯಾವ ಅಧಿಕಾರ ಸ್ಥಾನದಲ್ಲೂ ಇಲ್ಲ. ನೆಹರೂ ಕುಟುಂಬದವರು ಅಧಿಕಾರವನ್ನು ಕೆಲ ಸಮಯ ಅನುಭವಿಸಿದ್ದರೂ ದೇಶಕ್ಕಾಗಿ ಅವರು ಮಾಡಿದ ತ್ಯಾಗ ಬಲಿದಾನ ಸಾಮಾನ್ಯವಾದುದಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಬಲಿದಾನ ಮಾಡಿದರು.
ಈಗ ಮನೆಯ ಆಸ್ತಿಗೆ ತಮ್ಮ ಮಕ್ಕಳನ್ನು ಉತ್ತರಾಧಿಕಾರಿಗಳನ್ನಾಗಿ ಮಾಡುವಂತೆ ಕೆಲವು ಪ್ರಾದೇಶಿಕ ಪಕ್ಷಗಳಲ್ಲಿ ಮಾತ್ರವಲ್ಲ ರಾಷ್ಟ್ರೀಯ ಪಕ್ಷಗಳಲ್ಲೂ ಪಕ್ಷದ ಸಿದ್ದಾಂತ ಮತ್ತು ತತ್ವಾದರ್ಶಗಳನ್ನು ಮರೆ ಮಾಚಿ ತಮ್ಮ ಮಕ್ಕಳನ್ನು ರಾಜಕೀಯ ಉತ್ತರಾಧಿಕಾರಿಗಳನ್ನಾಗಿ ಮಾಡುವ ಚಾಳಿ ಹೆಚ್ಚಾಗುತ್ತಿದೆ. ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಕ್ಷಕ್ಕೆ ಅವರ ಮಗನೇ ಉತ್ತರಾಧಿಕಾರಿಯಾಗಿದ್ದರೆ, ಬಾಳಾ ಠಾಕ್ರೆಯವರ ಶಿವಸೇನೆ ಈಗ ಒಂದು ಕುಟುಂಬದ ಆಸ್ತಿಯಾಗಿದೆ. ನಮ್ಮ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜಾತ್ಯತೀತ ಎಂದು ಕರೆದುಕೊಳ್ಳುವ ಜನತಾದಳವಂತೂ ಅಪ್ಪ, ಮಕ್ಕಳು, ಮೊಮ್ಮಕ್ಕಳು ಹಾಗೂ ಸೊಸೆಯಂದಿರ ಸ್ವಂತದ ಆಸ್ತಿಯಾಗಿ ಎಷ್ಟೋ ವರ್ಷಗಳಾದವು.
ಇನ್ನು ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಅಲ್ಲದಿದ್ದರೂ ಪ್ರಾದೇಶಿಕ ಮಟ್ಟದಲ್ಲಿ ನಾಯಕರು ಮತ್ತು ಅವರ ಮಕ್ಕಳ ಸೊತ್ತಾಗಿದೆ. ಉದಾಹರಣೆಗೆ ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ರಾಜಕೀಯ ಉತ್ತರಾಧಿಕಾರಿಯಾಗಿ ಬಿಂಬಿಸಲ್ಪಡುತ್ತಿರುವ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಘಟಕದ ಅಧ್ಯಕ್ಷನನ್ನಾಗಿ ಮಾಡಲಾಗಿದೆ. ಇದನ್ನು ಬಹಿರಂಗವಾಗಿ ವಿರೋಧಿಸುತ್ತಿರುವ ಬಿಜಾಪುರದ ಬಿಜೆಪಿಯ ಹಿರಿಯ ನಾಯಕ ಹಾಗೂ ಶಾಸಕ ಬಸನಗೌಡ ಪಾಟೀಲ್, ರಮೇಶ್ ಜಾರಕಿಹೊಳಿ ಮುಂತಾದವರು ತಮ್ಮ ಬೆಂಬಲಿಗರ ಸಭೆಯನ್ನು ಆಗಾಗ ನಡೆಸುತ್ತಿದ್ದಾರೆ. ಇದರರ್ಥ ಬಹುತೇಕ ಪಕ್ಷಗಳು ಪ್ರಜಾತಂತ್ರದ ಮೂಲ ಆಶಯಗಳಿಗೆ ಅಪಚಾರ ಮಾಡುತ್ತಿರುವುದು ಗುಟ್ಟಿನ ಸಂಗತಿಯಲ್ಲ.
ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು ಮೂಲತಃ ಈ ದೇಶದ ಬಹುದೊಡ್ಡ ನಾಯಕ ಪೆರಿಯಾರ್ ರಾಮಸ್ವಾಮಿ ಅವರಿಂದ ಸೈದ್ಧಾಂತಿಕವಾಗಿ ಪ್ರೇರಣೆ ಪಡೆದು ಜನ್ಮತಾಳಿದ ಪಕ್ಷ. ಅದರ ವೈಚಾರಿಕ ಬದ್ಧತೆ ಒಂದು ಕಾಲದಲ್ಲಿ ಪ್ರಶ್ನಾತೀತವಾಗಿತ್ತು. ಈಗ ಈ ಪಕ್ಷಕ್ಕೂ ವಂಶಾಡಳಿತದ ಚಾಳಿ ಅಂಟಿಕೊಂಡಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರ ಉತ್ತರಾಧಿಕಾರಿಯಾದವರು ಪಕ್ಷದ ಕಾರ್ಯಕರ್ತನಲ್ಲ, ಬದಲಾಗಿ ಅವರ ಪುತ್ರ ಸ್ಟಾಲಿನ್ ಉತ್ತರಾಧಿಕಾರಿಯಾಗಿ ರಾಜ್ಯದ ಮುಖ್ಯಮಂತ್ರಿಯಾದರು.
ಈಗ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಡಿಎಂಕೆಯಲ್ಲಿ ಅನೇಕ ಹಿರಿಯ ನಾಯಕರಿದ್ದರೂ ಅವರನ್ನು ಕಡೆಗಣಿಸಿ ಸ್ಟಾಲಿನ್ ಅವರು ತಮ್ಮ ಮಗನನ್ನು ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡಿದ್ದಾರೆ. ಉದಯನಿಧಿ ಅವರನ್ನು ರಾಜಕೀಯದಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿ ತರುವ ಯತ್ನ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ಕರುಣಾನಿಧಿ ಅವರ ನಂತರ ಅವರ ಪುತ್ರ ಸ್ಟಾಲಿನ್ ಮುಖ್ಯಮಂತ್ರಿಯಾದಂತೆ ಈಗ ಉದಯ ನಿಧಿ ತಮ್ಮ ತಂದೆಯ ಉನ್ನತ ಸ್ಥಾನವನ್ನು ಆಲಂಕರಿಸಲಿದ್ದಾರೆ.
ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಉತ್ತರ ಭಾರತದ ಹಿಂದಿ ಹೇರಿಕೆ ವಿರುದ್ಧ ಧ್ವನಿಯೆತ್ತುತ್ತಾ ಬಂದ ಪಕ್ಷವೊಂದು ಅದರಲ್ಲೂ ಮೂಢನಂಬಿಕೆ, ಕಂದಾಚಾರ ವಿರೋಧಿಸುತ್ತಾ ವೈಚಾರಿಕ ಸಿದ್ದಾಂತವನ್ನು ಪ್ರತಿಪಾದಿಸುತ್ತ ಬಂದ ಡಿಎಂಕೆ ಈ ರೀತಿ ವಂಶಾಡಳಿತಕ್ಕೆ ಮೊರೆ ಹೋಗಿದ್ದು ಸರಿಯಲ್ಲ. ತಮಿಳುನಾಡಿನ ಜನಸಾಮಾನ್ಯರ ಮನಸ್ಸನ್ನು ಗೆದ್ದ ದ್ರಾವಿಡ ಪಕ್ಷ ಈ ರೀತಿ ದಾರಿ ತಪ್ಪಬಾರದಿತ್ತು. ಈಗ ಡಿಎಂಕೆ ಅಂದರೆ ಕರುಣಾನಿಧಿ ಅವರ ಮಕ್ಕಳು, ಮೊಮ್ಮಕ್ಕಳ ಪಕ್ಷವಾಗಿ ರೂಪಾಂತರಗೊಂಡಿರುವುದು ಒಂದು ದುರಂತವಲ್ಲದೆ ಬೇರೇನೂ ಅಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವ ನಿಜವಾದ ಅರ್ಥದಲ್ಲಿ ಸಾಕಾರಗೊಂಡಿಲ್ಲ.
ಬ್ರಿಟಷರು ಬಂದು ಹೋದ ನಂತರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆಡಳಿತ ಪದ್ಧತಿಯನ್ನಾಗಿ ಒಪ್ಪಿಕೊಂಡಿತು. ಇದಕ್ಕೆ ಕಾರಣ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ನಮ್ಮ ನಾಯಕರು ಮತ್ತು ಸಂವಿಧಾನ ನಿರ್ಮಾಪಕ ಬಾಬಾಸಾಹೇಬ ಅಂಬೇಡ್ಕರ್ ಅವರ ನಿರಂತರ ಪ್ರಯತ್ನದಿಂದ ಭಾರತ ಪ್ರಜಾಪ್ರಭುತ್ವವಾಗಿ ಹೊರ ಹೊಮ್ಮಿತು. ಬ್ರಿಟಿಷರು ಬರುವ ಮುಂಚೆ ಭಾರತದಲ್ಲಿ ನೂರಾರು ರಾಜ ಮಹಾರಾಜರು ಇದ್ದರು. ಅವರ ನಂತರ ತಮ್ಮ ಮಕ್ಕಳನ್ನೇ ಉತ್ತರಾಧಿಕಾರಿಯನ್ನಾಗಿ ಸಿಂಹಾಸನದ ಮೇಲೆ ಕೂರಿಸುತ್ತಿದ್ದರು. ಇದೇ ಮನೋಭಾವ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಮುಂದುವರಿದಿದೆ. ಮುಖ್ಯಮಂತ್ರಿಯ ಮಗ ತಂದೆಯ ನಂತರ ತಂದೆಯ ಪೀಠವನ್ನು ಅಲಂಕರಿಸುತ್ತಿದ್ದಾರೆ. ಅದೇ ರೀತಿ ಶಾಸಕನ ಮಗ ಶಾಸಕನಾಗಿ, ಜಿ.ಪಂ ಸದಸ್ಯನ ಮಗ ಜಿ.ಪಂ ಸದಸ್ಯರಾಗುತ್ತಿದ್ದಾರೆ.
ರಾಜಕಾರಣಿಗಳು ತಮ್ಮ ಪಕ್ಷದ ಎರಡನೇ ಹಂತದ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿ ತಮ್ಮ ಮಕ್ಕಳನ್ನು, ಅಳಿಯಂದಿರನ್ನು ಉತ್ತರಾಧಿಕಾರಿಗಳನ್ನಾಗಿ ಮಾಡುತ್ತಿದ್ದಾರೆ. ಆದರೆ ವಂಶಾಡಳಿತವನ್ನು ತೆಗೆದು ಹಾಕುವುದು ಅಷ್ಟು ಸುಲಭದ ಸಂಗತಿಯಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಜಕಾರಣಕ್ಕೆ ಬರುವವರು ದೇಶಭಕ್ತಿಯಿಂದ, ಸೇವಾ ಮನೋಭಾವದಿಂದ ಬರುತ್ತಿದ್ದರು. ಆದರೆ ಈಗ ಬಹುತೇಕ ರಾಜಕೀಯ ಪಕ್ಷಗಳಲ್ಲಿ ಇರುವವರಿಗೆ ಹಣ ಮಾಡಿಕೊಳ್ಳುವುದೇ ಏಕೈಕ ಉದ್ದೇಶವಾಗಿದೆ.
ಇನ್ನು ಕೆಲವರಿಗೆ ಗಳಿಸಿದ ಹಣವನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ರಾಜಕೀಯ ಅಧಿಕಾರಬೇಕಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಕ್ರಮೇಣ ಅರ್ಥ ಕಳೆದುಕೊಳ್ಳುತ್ತದೆ. ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ದೇಶದ ಜನಸಾಮಾನ್ಯರು ದೃಢ ಸಂಕಲ್ಪ ಮಾಡಬೇಕಾಗಿದೆ.