ಜಾತಿ ಗಣತಿ: ಸರಕಾರದ ಪಾಲಿಗೆ ಗಂಟಲೊಳಗೆ ಇಳಿಯದ ತುತ್ತು

Update: 2024-10-07 01:40 GMT

PC: fb.com/Siddaramaiah


ಮುಡಾ ಹಗರಣ ಸರಕಾರವನ್ನು ಅಲುಗಾಡಿಸುತ್ತದೆಯೋ ಇಲ್ಲವೋ, ಮುಖ್ಯಮಂತ್ರಿಯನ್ನು ಕುರ್ಚಿಯಿಂದ ಕೆಳಗಿಳಿಸುವುದೋ ಇಲ್ಲವೋ ಎನ್ನುವ ಚರ್ಚೆ ತಣ್ಣಗಾಗುತ್ತಿರುವ ಹೊತ್ತಿಗೇ ಜಾತಿ ಗಣತಿ ವರದಿ ಚರ್ಚೆ ಮುನ್ನೆಲೆಗೆ ಬಂದಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಜಾತಿ ಗಣತಿಯನ್ನು ಜಾರಿಗೊಳಿಸುತ್ತೇವೆ ಎನ್ನುವ ಭರವಸೆಯನ್ನು ಜನತೆಗೆ ನೀಡಿತ್ತು. ಅಷ್ಟೇ ಅಲ್ಲ, ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿಯನ್ನು ನಡೆಸುವ ಹೇಳಿಕೆಯನ್ನು ರಾಹುಲ್ ಗಾಂಧಿ ಕೂಡ ನೀಡಿದ್ದರು. ರಾಜ್ಯದಲ್ಲಿ ಭರ್ಜರಿ ಬಹುಮತದ ಜೊತೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆರಂಭದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮುಂದಿದ್ದ ಅತಿ ದೊಡ್ಡ ಸವಾಲು ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿತ್ತು. ಕಾಂಗ್ರೆಸ್ ಸರಕಾರ ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಸಾಧ್ಯವಿಲ್ಲ ಎನ್ನುವ ಆತ್ಮವಿಶ್ವಾಸದಲ್ಲಿ ವಿರೋಧ ಪಕ್ಷಗಳು ‘‘ತಕ್ಷಣ ಗ್ಯಾರಂಟಿಗಳನ್ನು ಜಾರಿಗೊಳಿಸಿ’’ ಎಂದು ಬೀದಿಗಿಳಿದಿದ್ದವು. ಆದರೆ ವಿರೋಧ ಪಕ್ಷಗಳೇ ಬೆಕ್ಕಸ ಬೆರಗಾಗುವ ರೀತಿಯಲ್ಲಿ, ಸಿದ್ದರಾಮಯ್ಯ ನೇತೃತ್ವದ ಸರಕಾರ ಗ್ಯಾರಂಟಿಗಳನ್ನು ಜಾರಿಗೊಳಿಸಿತ್ತು. ಆರ್ಥಿಕ ಹೊರೆಯಿಂದ ಸರಕಾರ ನಡೆಸುವುದು ಕಷ್ಟವಾಗಬಹುದು ಎನ್ನುವ ವಿರೋಧಪಕ್ಷಗಳ ನಿರೀಕ್ಷೆಗಳನ್ನು ಸಿದ್ದರಾಮಯ್ಯ ಹುಸಿ ಮಾಡಿ ಮುಂದೆ ಸಾಗಿದರು. ಆದರೆ ಇದೀಗ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪರಿಣಾಮಕಾರಿ ಪಾತ್ರವಹಿಸಬಹುದಾದ ಜಾತಿ ಗಣತಿಯನ್ನು ಸಂಪುಟದ ಮುಂದೆ ಮಂಡಿಸಿ, ಅದನ್ನು ಜಾರಿಗೊಳಿಸಲು ಸರಕಾರ ಅಂಜುತ್ತಿದೆ.

‘‘ಜಾತಿ ಗಣತಿಯನ್ನು ಜಾರಿಗೊಳಿಸಿಯೇ ಸಿದ್ಧ’’ ಎಂದು ಇತ್ತೀಚೆಗೆ ಸಿದ್ದರಾಮಯ್ಯ ಸಾರ್ವಜನಿಕ ವೇದಿಕೆಯೊಂದರಲ್ಲಿ ಹೇಳಿಕೆ ನೀಡಿದ ಬೆನ್ನಿಗೇ ಕೆಲವು ಅಪಸ್ವರಗಳು ಸರಕಾರದೊಳಗಿಂದಲೇ ಎದ್ದಿವೆ. ‘‘ಜಾತಿ ಗಣತಿ ವಿಚಾರದಲ್ಲಿ ಸಿಎಂ ಎಚ್ಚರಿಕೆಯ ಹೆಜ್ಜೆ ಇಡಬೇಕು’’ ಎಂದು ಡಿ.ಕೆ. ಸುರೇಶ್ ಅವರು ಸಲಹೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ ಅವರು ‘‘ನಾವು ಹಳೇ ಜಾತಿ ಗಣತಿ ಒಪ್ಪುವುದಿಲ್ಲ. ಸರಕಾರ ಹೊಸದಾಗಿ ಗಣತಿ ಮಾಡಲಿ ಎಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ವೀರಶೈವ ಲಿಂಗಾಯತರ ಒಳ ಪಂಗಡಗಳನ್ನು ಬೇರೆ ಬೇರೆಯಾಗಿ ಗಣತಿ ಮಾಡಿ ವೀರಶೈವ ಲಿಂಗಾಯತರ ಒಟ್ಟು ಸಂಖ್ಯೆ ಕಡಿಮೆ ತೋರಿಸಲಾಗಿದೆ’’ ಎಂದು ಹೇಳಿದ್ದಾರೆ. ಒಕ್ಕಲಿಗರ ಸಂಘಟನೆ ಈಗಾಗಲೇ ಜಾತಿ ಗಣತಿಯನ್ನು ವಿರೋಧಿಸಿ ಹೇಳಿಕೆಯನ್ನು ನೀಡಿದೆ. ಲಿಂಗಾಯತ ಸಂಘಟನೆಗಳು ಕೂಡ ಒಳಗೊಳಗೆ ಜಾತಿ ಗಣತಿಯ ವಿರುದ್ಧ ಕತ್ತಿ ಮಸೆಯುತ್ತಿವೆ. ಆರಂಭದಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಜಾತಿ ಗಣತಿ ವರದಿಯ ವಿರುದ್ಧ ಹೇಳಿಕೆಗಳನ್ನು ನೀಡಿತ್ತು. ‘ಜಾತಿ ಗಣತಿ ಹಿಂದೂ ಸಮಾಜವನ್ನು ಒಡೆಯುತ್ತದೆ’ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ‘ಜಾತಿ ಗಣತಿಗಾಗಿ ಅನಗತ್ಯವಾಗಿ ಸಮಯ, ಹಣವನ್ನು ಕಾಂಗ್ರೆಸ್ ಸರಕಾರ ವ್ಯಯಿಸಿದೆ’ ಎಂದು ದೂರಿದ್ದರು. ಅಂತಹ ಬಿಜೆಪಿ ಇದೀಗ ಮೌನವಾಗಿದೆ. ಯಾಕೆಂದರೆ ಕೇಂದ್ರದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಜಾತಿಗಣತಿಯ ವಿರುದ್ಧ ಮೃದು ನಿಲುವನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರದ ಆಪ್ತ ಮಿತ್ರರಾಗಿರುವ ನಿತೀಶ್ ಕೂಮಾರ್ ಅವರು ಜಾತಿಗಣತಿಯ ಬೆಂಬಲಿಗರಾಗಿರುವುದರಿಂದ ಅದನ್ನು ವಿರೋಧಿಸುವುದು ಕೇಂದ್ರ ಸರಕಾರಕ್ಕೆ ಕಷ್ಟಕರವಾಗಿದೆ. ಅಷ್ಟೇ ಅಲ್ಲ, ದೇಶಾದ್ಯಂತ ಜಾತಿ ಗಣತಿಗಾಗಿ ಒತ್ತಾಯಗಳು ಕೇಳಿ ಬರುತ್ತಿರುವುದರಿಂದ, ಜಾತಿ ಗಣತಿಯನ್ನು ಹಿಂದೂ ವಿರೋಧಿ ಗಣತಿಯೆಂದು ಕರೆದ ಮೋದಿಯವರೇ ತಮ್ಮ ಹೇಳಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಆರೆಸ್ಸೆಸ್ ಕೂಡ ಜಾತಿಗಣತಿಯ ಬಗ್ಗೆ ಮೆದುವಾಗಿದೆ. ಈ ಕಾರಣದಿಂದಲೇ ಜಾತಿ ಗಣತಿ ವರದಿ ಜಾರಿಯಾಗಬೇಕು ಎನ್ನುವ ಒತ್ತಾಯಕ್ಕೆ ರಾಜ್ಯದ ಬಿಜೆಪಿ ನಾಯಕರು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿಲ್ಲ.

ವಿಪರ್ಯಾಸವೆಂದರೆ, ಕಳೆದ ಒಂದು ವರ್ಷದಿಂದ ಜಾತಿಗಣತಿಯ ವಿರುದ್ಧ ಕಾಂಗ್ರೆಸ್ ಸರಕಾರದೊಳಗಿಂದಲೇ ಭಿನ್ನಮತಗಳು ಕೇಳಿ ಬರುತ್ತಿವೆ. ಇಂದು ಜಾತಿ ಗಣತಿ ವರದಿಗಾಗಿ ಸಿದ್ದರಾಮಯ್ಯ ಅವರಿಗೆ ಬಿಜೆಪಿಯ ಭಯವಿಲ್ಲ. ಬದಲಿಗೆ, ತನ್ನ ಸರಕಾರದೊಳಗಿರುವ ನಾಯಕರ ಕುರಿತಂತೆ ಆತಂಕವಿದೆ. ವರದಿಯ ಕಾರಣದಿಂದ ಲಿಂಗಾಯತ ಮತ್ತು ಒಕ್ಕಲಿಗ ನಾಯಕರು ಕಾಂಗ್ರೆಸ್‌ನೊಳಗೆ ಬಂಡೆದ್ದರೆ ಅದರಿಂದ ಸರಕಾರಕ್ಕೆ ಧಕ್ಕೆಯಾಗಬಹುದು ಎಂದು ಅವರು ಭಯಪಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಕಾಂಗ್ರೆಸ್‌ನ ಹಿರಿಯ ನಾಯಕರಾಗಿರುವ ಬಿ. ಕೆ. ಹರಿಪ್ರಸಾದ್ ಅವರು ‘‘ಸರಕಾರ ಬಿದ್ದರೆ ಬೀಳಲಿ, ಜಾತಿ ಗಣತಿ ವರದಿ ಜಾರಿ ಮಾಡಲೇ ಬೇಕು’’ ಎಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಒತ್ತಾಯಿಸಿದ್ದಾರೆ.

ಜಾತಿ ಗಣತಿ ವರದಿ ಜಾರಿಯಾದರೆ ಸರಕಾರ ಹೇಗೆ ಬೀಳುತ್ತದೆ? ಸರಕಾರವನ್ನು ಬೀಳಿಸುವವರು ಯಾರು? ಎನ್ನುವುದನ್ನು ಅವರು ಮಾತಿನಲ್ಲಿ ಸ್ಪಷ್ಟ ಪಡಿಸಿಲ್ಲ. ಆದರೆ, ಜಾತಿ ಗಣತಿ ವರದಿ ಜಾರಿಯಾದರೆ ಪಕ್ಷದ ಒಳಗಿರುವವರೇ ಸರಕಾರವನ್ನು ಬೀಳಿಸುತ್ತಾರೆ ಎನ್ನುವುದು ಅವರ ಮಾತಿನಿಂದಲೂ ಸ್ಪಷ್ಟವಾಗಿದೆ. ಇದು ನಿಜಕ್ಕೂ ವಿಪರ್ಯಾಸವೇ ಸರಿ.

ಇದೀಗ ಕಾಂಗ್ರೆಸ್ ನಾಯಕರು ಕೆಲವು ಪ್ರಶ್ನೆಗಳಿಗೆ ಉತ್ತರಿಸಲೇ ಬೇಕು. ವಿಧಾನಸಭಾ ಚುನಾವಣೆಯಲ್ಲಿ ಜಾತಿ ಗಣತಿಯನ್ನು ಜಾರಿಗೊಳಿಸುತ್ತೇವೆ ಎನ್ನುವ ಭರವಸೆಯ ಜೊತೆಗೇ ಮತ ಯಾಚನೆ ಮಾಡಿದ್ದರು. ಇದೀಗ ಜಾತಿ ಗಣತಿ ಜಾರಿಗೆ ಹಿಂದೇಟು ಹಾಕಿದರೆ ಜನಸಾಮಾನ್ಯರನ್ನು ವಂಚಿಸಿದಂತಲ್ಲವೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನನ್ನು ತಾನು ಶೋಷಿತ ಸಮುದಾಯದ ಪ್ರತಿನಿಧಿ ಎಂದು ಕರೆದುಕೊಳ್ಳುತ್ತಾರೆ. ಜಾತಿ ಗಣತಿ ಶೋಷಿತ ಸಮುದಾಯದ ಹಿತಾಸಕ್ತಿಯನ್ನು ಹೊಂದಿದೆ. ಈ ಹಿತಾಸಕ್ತಿಯನ್ನು ತನ್ನ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಬಲಿಕೊಡುತ್ತಾರೆಯೆ? ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಜಾತಿ ಗಣತಿಯನ್ನು ದೇಶಾದ್ಯಂತ ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ರಾಹುಲ್‌ಗಾಂಧಿ ಜಾತಿಗಣತಿಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಹೀಗಿರುವಾಗ ರಾಜ್ಯದ ಕೆಲವು ಕಾಂಗ್ರೆಸ್ ನಾಯಕರು ಜಾತಿ ಗಣತಿಯ ವಿರುದ್ಧ ಮಾತನಾಡುವುದು ಎಂದರೆ, ವರಿಷ್ಠರ ವಿರುದ್ಧ ನಿಂತಂತಲ್ಲವೆ? ಅವರ ವಿರುದ್ಧ ಕೆಪಿಸಿಸಿ ನಾಯಕರು ಕ್ರಮ ತೆಗೆದುಕೊಳ್ಳುತ್ತಾರೆಯೆ? ‘ನಾವು ಹಳೆ ಜಾತಿ ಗಣತಿಯನ್ನು ಒಪ್ಪುವುದಿಲ್ಲ’ ಎಂದು ಕಾಂಗ್ರೆಸ್‌ನ ಲಿಂಗಾಯತ ನಾಯಕರೊಬ್ಬರು ಹೇಳಿದ್ದಾರೆ. ಅವರಿಗಾಗಿ ಕಾಂಗ್ರೆಸ್ ಪಕ್ಷ ಹೊಸದಾಗಿ ಗಣತಿಯನ್ನು ನಡೆಸುತ್ತದೆಯೆ? ಹೊಸ ಗಣತಿಯ ಖರ್ಚು ವೆಚ್ಚವನ್ನು ಸರಕಾರ ಭರಿಸುತ್ತದೆಯೆ ಅಥವಾ ಲಿಂಗಾಯತ ನಾಯಕರೇ ಭರಿಸುತ್ತಾರೆಯೆ? ಹೊಸದಾಗಿ ಗಣತಿ ನಡೆಸಿರುವುದು ಇನ್ನಾವುದೋ ಜಾತಿ ಮುಖಂಡರಿಗೆ ಪಥ್ಯವಾಗದೇ ಇದ್ದರೆ ಅವರಿಗಾಗಿ ಮತ್ತೊಮ್ಮೆ ಗಣತಿ ನಡೆಸಲು ಸರಕಾರ ಸಿದ್ಧವಿದೆಯೆ?

ಜಾತಿ ಗಣತಿಯ ಕುರಿತಂತೆ ಕಾಂಗ್ರೆಸ್‌ನೊಳಗಿರುವ ಭಿನ್ನಾಭಿಪ್ರಾಯಗಳಿಂದ ಅರ್ಥವಾಗುವುದೇನೆಂದರೆ, ಜಾತಿಗಣತಿಯ ಅಗತ್ಯ ಮತ್ತು ಅನಿವಾರ್ಯತೆಯ ಬಗ್ಗೆ ಕಾಂಗ್ರೆಸ್‌ನೊಳಗಿರುವ ನಾಯಕರಿಗೆ ಪ್ರಾಥಮಿಕ ಅರಿವೂ ಇಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರು ತನ್ನ ಪಕ್ಷದ ಎಲ್ಲ ಜಾತಿ ಮುಖಂಡರನ್ನು ಕರೆಸಿ ಅವರಿಗೆ ಒಂದು ವಾರ ಜಾತಿ ಗಣತಿಯ ಬಗ್ಗೆ ತರಗತಿಯನ್ನು ಏರ್ಪಡಿಸಿ ಅವರನ್ನು ಶಿಕ್ಷಿತರನ್ನಾಗಿಸಬೇಕು. ಕಾಂಗ್ರೆಸ್‌ನೊಳಗಿರುವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಮುಖಂಡರು ತಮ್ಮ ತಮ್ಮ ಸಮುದಾಯಕ್ಕೆ ಈ ಬಗ್ಗೆ ಮನವರಿಕೆ ಮಾಡಿಸಬೇಕು. ಇಂದು ರಾಜ್ಯದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯ ಬಿಜೆಪಿ ಮತ್ತು ಆರೆಸ್ಸೆಸ್‌ನ ಪಿತೂರಿಯ ಪರಿಣಾಮವಾಗಿ ಜಾತಿಗಣತಿಯ ವಿರುದ್ಧ ಮಾತನಾಡುತ್ತಿದೆ. ನೇರವಾಗಿ ವಿರೋಧಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಆರೆಸ್ಸೆಸ್ ನಾಯಕರು ಬಲಾಢ್ಯ ಜಾತಿ ಸಂಘಟನೆಯೊಳಗಿರುವ ತಮ್ಮ ಪ್ರತಿನಿಧಿಗಳಿಂದ ಮಾತನಾಡಿಸುತ್ತಿದ್ದಾರೆ. ಇವರಿಗೆ ಕಾಂಗ್ರೆಸ್‌ನೊಳಗಿರುವ ಆಯಾ ಜಾತಿ ಮುಖಂಡರು ಉತ್ತರ ನೀಡಬೇಕೇ ಹೊರತು, ಆ ಪ್ರತಿನಿಧಿಗಳ ಪರವಾಗಿ ಕಾಂಗ್ರೆಸ್ ಪಕ್ಷವನ್ನೇ ಬ್ಲ್ಯಾಕ್‌ಮೇಲ್ ಮಾಡುವಂತಹ ಸ್ಥಿತಿಗೆ ಇಳಿಯಬಾರದು. ಅಂತಹ ನಾಯಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕಾಂಗ್ರೆಸ್ ವರಿಷ್ಠರು ಹಿಂಜರಿಯಬಾರದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News