ವೈಫಲ್ಯ ಮುಚ್ಚಿಡಲು ಸುಳ್ಳಿನ ಸುರಿಮಳೆ

Update: 2024-10-01 05:28 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹರ್ಯಾಣದ ಚುನಾವಣಾ ಪ್ರಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಗಲು ರಾತ್ರಿಯೆನ್ನದೇ ಸಂಚರಿಸುತ್ತ ಭಾಷಣ ಮಾಡುತ್ತಿದ್ದಾರೆ. ಮೋದಿಯವರಿಗಿಂತ ಮೊದಲಿನ ಯಾವ ಪ್ರಧಾನಿಯೂ ವಿಧಾನಸಭಾ ಚುನಾವಣೆಯಲ್ಲಿ ಇಷ್ಟೊಂದು ಸಕ್ರಿಯವಾಗಿ ಪಾಲ್ಗೊಂಡಿರಲಿಲ್ಲ. ಕಳೆದ ಹತ್ತು ವರ್ಷಗಳಿಂದ ಅಧಿಕಾರದ ಸೂತ್ರ ಹಿಡಿದಿರುವ ಅವರು ಮತ್ತು ಅವರ ಪಕ್ಷದವರು ಕೇಂದ್ರದಲ್ಲಿಯ ತಮ್ಮ ಸರಕಾರದ ಸಾಧನೆಗಳನ್ನು ಹೇಳಿಕೊಳ್ಳಬಹು ದಾಗಿತ್ತು. ಆದರೆ ಎಂದೂ ಬಿಜೆಪಿ ಸರಕಾರದ ಸಾಧನೆಗಳ ಬಗ್ಗೆ ಬಾಯಿ ಬಿಚ್ಚದ ಮೋದಿಯವರು ಕರ್ನಾಟಕದಲ್ಲಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಬಗ್ಗೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ಓಡಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಯ ಒಡಕು ಬೀದಿಗೆ ಬಂದಿದ್ದರೂ ಅದನ್ನು ಮರೆ ಮಾಚಲು ನರೇಂದ್ರ ಮೋದಿಯವರು ಕರ್ನಾಟಕದ ಕಾಂಗ್ರೆಸ್ ಸರಕಾರದಲ್ಲಿ ಹಾಗೂ ಪಕ್ಷದಲ್ಲಿ ಒಳ ಜಗಳ ನಡೆದಿದೆ, ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ಸ್ಥಿರವಾದ ಸರಕಾರ ನೀಡಲು ಸಾಧ್ಯವಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿರುವುದನ್ನು ಮುಚ್ಚಿಟ್ಟು ಕಾಂಗ್ರೆಸ್‌ನ ನಿಂದಾಸ್ತುತಿಯಲ್ಲಿ ಮುಳುಗಿದ್ದಾರೆ. ಕರ್ನಾಟಕದಲ್ಲಿ ಜನಾದೇಶ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ರಾಜಭವನದ ಮೂಲಕ ಹೇಗೆ ಮಸಲತ್ತು ನಡೆದಿದೆ ಎಂಬುದನ್ನು ರಾಜ್ಯದ ಜನ ಮರೆಯಲು ಸಾಧ್ಯವಿಲ್ಲ. ಸುಳ್ಳು ಹೇಳುವವರನ್ನು ಜನ ನಂಬುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ರಾಜ್ಯದ ಕಾಂಗ್ರೆಸ್ ಹೇಗೆ ಅಚಲವಾಗಿ ನಿಂತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಕರ್ನಾಟಕದ ಬಿಜೆಪಿ ನಾಯಕರು ನಡುಬೀದಿಯಲ್ಲಿ ಕಚ್ಚಾಡುತ್ತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ವಿಜಯೇಂದ್ರ ಮತ್ತು ಸಂತೋಷ್ ಗುಂಪುಗಳ ಕಿತ್ತಾಟ ಎಲ್ಲರಿಗೂ ಗೊತ್ತಿದೆ.

ಪ್ರಧಾನಮಂತ್ರಿಯಂತಹ ಉನ್ನತ ಸ್ಥಾನದಲ್ಲಿ ಇರುವ ವ್ಯಕ್ತಿ ಈ ರೀತಿ ಸುಳ್ಳು ಪ್ರಚಾರದಲ್ಲಿ ತೊಡಗಬಾರದು. ಯಾವ ಪರಿ ಅವರು ಸುಳ್ಳು ಹೇಳುತ್ತಿದ್ದಾರೆಂದರೆ ‘‘ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರಕಾರ ಬಂದ ನಂತರ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’’ ಎಂದು ಹೇಳಿದ್ದಾರೆೆ. ದಿಲ್ಲಿಯಲ್ಲಿ ರೈತರು ಯಾವ ಪಕ್ಷದ ಸರಕಾರದ ವಿರುದ್ಧ ಹೋರಾಡಿದರೆಂಬುದು ಗುಟ್ಟಿನ ವಿಷಯವೇನಲ್ಲ. ಆದರೂ ಪ್ರತೀ ದಿನದ ಪ್ರಚಾರದಲ್ಲಿ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದಾರೆ. ರೈತರ ಬಗ್ಗೆ ಮಾತ್ರವಲ್ಲ ಕಾಂಗ್ರೆಸ್ ಪಕ್ಷ ದಲಿತ ವಿರೋಧಿ ಎಂಬ ಇನ್ನೊಂದು ಸುಳ್ಳು ಹರಿಬಿಟ್ಟಿದ್ದಾರೆ.

2014ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮೋದಿಯವರು ದೇಶದ ಪ್ರಧಾನಿಯಾಗುವ ಹುರುಪಿನಲ್ಲಿ ನಮ್ಮ ರೈತರನ್ನು ನೇಣಿಗೆ ತಳ್ಳಬಾರದು, ನಮ್ಮ ರೈತರನ್ನು ಸಾಲಗಾರರನ್ನಾಗಿ ಮಾಡಬಾರದು.ಸಾಹುಕಾರರ ಮನೆ ಬಾಗಿಲು ಕಾಯುವ ಪರಿಸ್ಥಿತಿ ಅವರಿಗೆ ಬರಬಾರದು ಎಂದೆಲ್ಲಾ ಮೊಸಳೆ ಕಣ್ಣೀರು ಹಾಕಿದ್ದರು. ಆದರೆ ಹೀಗೆ ಹೇಳಿದ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಏನು ಮಾಡಿದರೆಂಬುದು ಎಲ್ಲರಿಗೂ ತಿಳಿದ ಸಂಗತಿ. ಅಂಬಾನಿ, ಅದಾನಿಯಂಥ ಕೋಟ್ಯಧೀಶರಿಗೆ ದೇಶದ ಸಂಪತ್ತನ್ನು ಧಾರೆ ಎರೆದು ಉಳಿದ ಭಾರತೀಯರನ್ನು ದುಸ್ಥಿತಿಗೆ ತಳ್ಳಿದರು. ಮೋದಿಯವರ ಅಧಿಕಾರಾವಧಿಯ ಕಳೆದ ಹತ್ತು ವರ್ಷಗಳಲ್ಲಿ ಸಾಲದ ಬಲೆಗೆ ಸಿಕ್ಕಿದ ರೈತರ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ. ಅಂಕಿಸಂಖ್ಯೆಗಳ ಕಸರತ್ತು ನಡೆಸಿ ರೈತರ ಸಾಲದ ಪ್ರಮಾಣ ಶೇ.52 ರಿಂದ 50ರಷ್ಟು ತಗ್ಗಿದೆ ಎಂದು ಸುಳ್ಳು ಹೇಳಲಾಗುತ್ತಿದೆ. ಆದರೆ ಅಧಿಕೃತ ಅಂಕಿ ಅಂಶಗಳ ಪ್ರಕಾರ ರೈತರ ಸಾಲದ ಪ್ರಮಾಣ ಈ ಅವಧಿಯಲ್ಲಿ 9.02 ಕೋಟಿ ರೂ.ಯಿಂದ 9.30 ಕೋಟಿ ರೂ.ಗೆ ತಲುಪಿದೆ. ಅಂದರೆ 2013ಕ್ಕಿಂತ 1.6 ಪಟ್ಟು ಹೆಚ್ಚಾಗಿದೆ.

ಪದೇ ಪದೇ ಕಿಸಾನ್ ಸಮ್ಮಾನ್ ನಿಧಿಯ ಬಗ್ಗೆ ಹೇಳುತ್ತಿದ್ದರೂ ಅದರಿಂದ ಯಾರಿಗೆ ಪ್ರಯೋಜನವಾಗಿದೆ ಎಂಬುದನ್ನು ಹುಡುಕಲು ಹೊರಟರೆ ಅದರ ಪ್ರಯೋಜನವನ್ನು ಪಡೆದವರು ಸಾಮಾನ್ಯ ಬಡ ಹಾಗೂ ಮಧ್ಯಮ ವರ್ಗದ ರೈತರಲ್ಲ, ಬದಲಾಗಿ ಶ್ರೀಮಂತ ಭೂಮಾಲಕ ರೈತರು ಎಂಬುದನ್ನು ಅಂಕಿ ಸಂಖ್ಯೆಗಳೇ ಹೇಳುತ್ತವೆ.

ಕಳೆದ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಶೇ. 99ರಷ್ಟು ಜನರಿಗೆ ಧಾರಾಳವಾಗಿ ನೀಡಿದ್ದು ಬರೀ ಮಾತುಗಳನ್ನು ಮಾತ್ರ. ಅವರ ಬಹುತೇಕ ಯೋಜನೆಗಳು ವಿಫಲಗೊಂಡಿವೆ.ರೈತಾಪಿ ವರ್ಗದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ರೈತರ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ವಿನಾಶಕಾರಿ ಹವಾಮಾನದ ವೈಪರೀತ್ಯಗಳಿಂದಾಗಿ ರೈತನ ಬೆಳೆ ಹಾಳಾಗಿ ಆತನ ಬದುಕು ದಾರುಣ ಸ್ಥಿತಿಗೆ ತಲುಪಿದೆ. ಇದರ ಜೊತೆಗೆ ಏರುತ್ತಿರುವ ಸಾಲದ ಭಾರ, ಅನಿಶ್ಚಿತತೆಯಿಂದಾಗಿ ರೈತರ ಆತ್ಮಹತ್ಯೆಯ ಪ್ರಮಾಣ ಹೆಚ್ಚುತ್ತಿದೆ.

ದಲಿತರ ಮತ್ತು ಅಲ್ಪಸಂಖ್ಯಾತರ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹಾಗೂ ಹಿಂಸಾಚಾರ ಹೆಚ್ಚಾಗಿದೆ. ಅಲ್ಲಿನ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ದಲಿತರಿಗೆ ರಕ್ಷಣೆ ನೀಡುವ ಬದಲಾಗಿ ಅತ್ಯಾಚಾರ ಮತ್ತು ಕೊಲೆ ಮಾಡಿದ ಮೇಲ್ವರ್ಗಗಳನ್ನು ಆರೋಪಗಳಿಂದ ಮುಕ್ತಗೊಳಿಸಲು ಮಸಲತ್ತು ನಡೆಸುತ್ತಿದೆ. ಮುಸ್ಲಿಮ್ ಮತ್ತು ಕ್ರೈಸ್ತ ಅಲ್ಪಸಂಖ್ಯಾತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಜನಿಸಿದ ಸ್ವಂತ ನೆಲದಲ್ಲೇ ಅವರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಸರಕಾರ ಮತ್ತು ಕೋಮುವಾದಿ ಸಂಘಟನೆಗಳು ಕಾಣುತ್ತಿವೆ. ಇಂಥ ಪರಿಸ್ಥಿತಿಯಲ್ಲೂ ಪ್ರಧಾನಿ ಮೋದಿಯವರು ಬಹುಸಂಖ್ಯಾತರ ವೋಟ್ ಬ್ಯಾಂಕ್ ನಿರ್ಮಿಸಲು ಅಲ್ಪಸಂಖ್ಯಾತರ ಬಗ್ಗೆ ಸುಳ್ಳಿನ ಕತೆಯನ್ನು ಕಟ್ಟುತ್ತಿದ್ದಾರೆ.

ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿ, ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ಅಧಿಕಾರ ಸ್ವೀಕರಿಸಿದ ಮೋದಿಯವರು ಅದೇ ಸಂವಿಧಾನವನ್ನು ನಾಶ ಮಾಡಿ ಅದರ ಬದಲಿಗೆ ಮನುಸ್ಮತಿಯನ್ನು ರಾಜ್ಯಾಂಗದ ಸ್ಥಾನದಲ್ಲಿ ಪ್ರತಿಷ್ಠಾಪಿಸಲು ಅವ್ಯಾಹತವಾಗಿ ಯತ್ನಿಸುತ್ತಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ‘ಒಂದು ದೇಶ ಒಂದು ಚುನಾವಣೆ’ ಎಂದು ಹೇಳಿ ಪ್ರಜಾಪ್ರಭುತ್ವದ ಕತ್ತು ಹಿಸುಕಲು ಹೊರಟಿದ್ದಾರೆ. ಅವರು ಸಂವಿಧಾನಕ್ಕೆ ನಿಷ್ಠೆಯಿಂದ ನಡೆದುಕೊಳ್ಳುತ್ತಿಲ್ಲ ಮಾತ್ರವಲ್ಲ, ತಾನು ಬೆಳೆದು ಬಂದ ಸಂಘ ಪರಿವಾರದ ಸಿದ್ಧಾಂತವನ್ನು ದೇಶದ ಮೇಲೆ ಹೇರಲು ಹೊರಟಿದ್ದಾರೆ.ಅದಕ್ಕಾಗಿ ಸುಳ್ಳಿನ ರೈಲನ್ನು ಬಿಡುತ್ತಿದ್ದಾರೆ. ಸುಳ್ಳಿನ ಮೂಲಕ ಜನಸಾಮಾನ್ಯರನ್ನು ದಾರಿ ತಪ್ಪಿಸುವುದು ಫ್ಯಾಶಿಸ್ಟ್ ಸರ್ವಾಧಿಕಾರಿಗಳಾಗಿದ್ದ ಹಿಟ್ಲರ್ ಮತ್ತು ಮುಸ್ಸೋಲಿನಿಗಳ ತಂತ್ರ. ಮೋದಿಯವರು ಅದೇ ವಿನಾಶಕಾರಿ ಮಾರ್ಗವನ್ನು ತುಳಿಯುತ್ತಿದ್ದಾರೆ. ಆದರೆ ಬಹುತ್ವ ಭಾರತದಲ್ಲಿ ಈ ವಿಭಜನಕಾರಿ ಆಟ ಬಹಳ ದಿನ ನಡೆಯುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News