ವಿಶ್ವಾಸಾರ್ಹತೆ ಕಳೆದುಕೊಂಡ ಸಿಬಿಐ

Update: 2024-09-27 05:26 GMT

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಿಬಿಐ ತನಿಖೆಗೆ ಮುಕ್ತ ಅವಕಾಶ ನೀಡುವ ಅಧಿಸೂಚನೆಯನ್ನು ರಾಜ್ಯ ಸರಕಾರ ಹಿಂದಕ್ಕೆ ತೆಗೆದುಕೊಂಡಿದೆ. ಇನ್ನು ಮುಂದೆ ರಾಜ್ಯದಲ್ಲಿ ಸಿಬಿಐ ಯಾವುದೇ ತನಿಖೆಯನ್ನು ನಡೆಸಬೇಕಾದರೂ ರಾಜ್ಯ ಸರಕಾರದ ಅನುಮತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಾಚೆಗೆ ತನಿಖೆಯಲ್ಲಿ ಹಸ್ತಕ್ಷೇಪ ನಡೆಸಲೇಬೇಕಾದ ಅನಿವಾರ್ಯ ಸ್ಥಿತಿ ಎದುರಾದರೆ ಅದು ಸುಪ್ರೀಂಕೋರ್ಟ್‌ನಿಂದ ಅನುಮತಿ ಪಡೆಯುವುದು ಅಗತ್ಯವಾಗುತ್ತದೆ. ರಾಜ್ಯದಲ್ಲಿ ರಾಜ್ಯಪಾಲರನ್ನು ಕೇಂದ್ರ ಸರಕಾರ ತನ್ನ ರಾಜಕೀಯ ದುರುದ್ದೇಶಕ್ಕಾಗಿ ದುರ್ಬಳಕೆ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದ್ದುದರಿಂದ ಸಿಬಿಐ ತನಿಖೆಯ ವಿರುದ್ಧ ಸರಕಾರ ಇಂತಹದೊಂದು ತೀರ್ಮಾನ ತೆಗೆದುಕೊಳ್ಳುವುದು ಅನಿರೀಕ್ಷಿತವಾಗಿರಲಿಲ್ಲ. ಈಗಾಗಲೇ ಕೆಲವು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜ್ಯದ ಹಲವು ರಾಜಕೀಯ ನಾಯಕರನ್ನು ಬಗ್ಗು ಬಡಿಯುವ ಪ್ರಯತ್ನವನ್ನು ಕೇಂದ್ರ ಸರಕಾರ ನಡೆಸಿದೆ. ಸಿಬಿಐಗೆ ತನಿಖಾವಕಾಶವನ್ನು ಮುಂದುವರಿಸಿದರೆ, ಅದು ನೇರವಾಗಿ ರಾಜ್ಯದ ಮುಖ್ಯಮಂತ್ರಿಯನ್ನು ಗುರಿಯಾಗಿಸುವ ಅನುಮಾನವಿದ್ದುದರಿಂದ ತರಾತುರಿಯಲ್ಲಿ ಸರಕಾರ ಅಧಿಸೂಚನೆಯನ್ನು ವಾಪಸ್ ತೆಗೆದುಕೊಂಡಿದೆ. ಈ ಹಿಂದೆ ಆಂಧ್ರ ಪ್ರದೇಶ, ಪಶ್ಚಿಮಬಂಗಾಳವೂ ಇದೇ ತೀರ್ಮಾನವನ್ನು ತೆಗೆದುಕೊಂಡು ಕೇಂದ್ರ ಸರಕಾರಕ್ಕೆ ತಪರಾಕಿ ನೀಡಿದ್ದವು. ಇದೀಗ ಆ ರಾಜ್ಯಗಳ ಸಾಲಿಗೆ ಕರ್ನಾಟಕವೂ ಸೇರಿದಂತಾಗಿದೆ.

ಒಂದು ಕಾಲದಲ್ಲಿ ಸಿಬಿಐ ತನಿಖೆ ಎಂದರೆ ರಾಜಕಾರಣಿಗಳು ಬೆಚ್ಚಿ ಬೀಳುತ್ತಿದ್ದರು. ಸರಕಾರ ಕಂಪಿಸುತ್ತಿತ್ತು. ಯಾರೂ ಭೇದಿಸಲಸಾಧ್ಯವಾಗಿರುವ ಪ್ರಕರಣಗಳನ್ನು ಸಿಬಿಐ ಭೇದಿಸಿ, ಆರೋಪಿಗಳು ಅದೆಷ್ಟು ಉನ್ನತ ಹುದ್ದೆಯಲ್ಲಿದ್ದರೂ ಅವರನ್ನು ಹುಡುಕಿ ಬಂಧಿಸಿ ಜೈಲಿಗೆ ತಳ್ಳುತ್ತದೆ ಎಂದು ಜನರು ನಂಬಿದ್ದರು. ಭಾರತದ ಶ್ರೀಸಾಮಾನ್ಯರ ಮಟ್ಟಿಗೆ ಸಿಬಿಐಗಿಂತ ಉನ್ನತ ತನಿಖಾ ಸಂಸ್ಥೆ ಇನ್ನೊಂದಿರಲಿಲ್ಲ. ಈ ಕಾರಣದಿಂದಲೇ, ಸಿಬಿಐ ಅಧಿಕಾರಿಗಳನ್ನು, ತನಿಖೆಗಳನ್ನು ವಸ್ತುವಾಗಿಟ್ಟುಕೊಂಡು ಹಲವು ಭಾರತೀಯ ಸಿನೆಮಾಗಳು ಸಾಲು ಸಾಲಾಗಿ ಬಂದಿದ್ದವು. ವಿಪರ್ಯಾಸವೆಂದರೆ, ಇಂದು ಸಿಬಿಐ ತನಿಖಾ ಸಂಸ್ಥೆಗಳು ಆ ವರ್ಚಸ್ಸನ್ನು ಉಳಿಸಿಕೊಂಡಿಲ್ಲ. ಮಾತ್ರವಲ್ಲ, ಇಂದು ಸಿಬಿಐಯನ್ನು ಭ್ರಷ್ಟ ರಾಜಕಾರಣಿಗಳೇ ತಮ್ಮ ರಾಜಕೀಯ ಚದುರಂಗದಾಟಗಳಿಗೆ ಕಾಲಾಳುವಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಜಕಾರಣಿಗಳು ‘ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ’ ಎಂದರೆ, ಪ್ರಕರಣವನ್ನು ಪರೋಕ್ಷವಾಗಿ ಮುಚ್ಚಿ ಹಾಕಲು ಹವಣಿಸುತ್ತಿದ್ದಾರೆ ಎಂದು ಜನರು ಅನುಮಾನಿಸುವಂತಾಗಿದೆ.

ರಾಜಕೀಯ ಪಕ್ಷಗಳು ತನಿಖಾ ಸಂಸ್ಥೆಗಳನ್ನು ದುರುಪಯೋಗಗೊಳಿಸುತ್ತಾ ಬಂದಿರುವುದು ಇಂದು ನಿನ್ನೆಯೇನೂ ಅಲ್ಲ. ಕೇಂದ್ರದಲ್ಲಿ ಆಗಿ ಹೋಗಿರುವ ಎಲ್ಲ ಸರಕಾರಗಳು ತಮ್ಮ ತಮ್ಮ ಮಿತಿಯಲ್ಲಿ ಸಿಬಿಐಯನ್ನು ತಮ್ಮ ಎದುರಾಳಿಗಳನ್ನು ಬಗ್ಗು ಬಡಿಯಲು ದುರ್ಬಳಕೆ ಮಾಡುತ್ತಲೇ ಬಂದಿವೆೆ. ಆದರೆ ಇವೆಲ್ಲದರ ನಡುವೆಯೂ ಸಿಬಿಐ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿತ್ತು. ಕೆಲವೊಮ್ಮೆ ಕೇಂದ್ರ ಸರಕಾರದ ವಿರುದ್ಧವೂ ಅದು ತನ್ನ ಅಧಿಕಾರವನ್ನು ಬಳಸಿಕೊಂಡದ್ದಿದೆ. ಆದರೆ ಯಾವಾಗ ಸಿಬಿಐ ಪ್ರಧಾನಿ ಮೋದಿಯ ರಫೇಲ್ ಹಗರಣದ ಬಗ್ಗೆ ಆಸಕ್ತಿ ತೋರಿಸಿತೋ, ಅಲ್ಲಿಂದ ಸಿಬಿಐ ಸಂಸ್ಥೆಯ ಬೆನ್ನುಮೂಳೆಯನ್ನು ಪೂರ್ಣವಾಗಿ ಮುರಿಯಲಾಯಿತು. ಅಂದಿನ ಸಿಬಿಐ ಮುಖ್ಯಸ್ಥರನ್ನೇ ಮೂಲೆಗುಂಪು ಮಾಡಿ, ಭ್ರಷ್ಟಾಚಾರದಲ್ಲಿ ಗುರುತಿಸಿಕೊಂಡ ಅಧಿಕಾರಿಯ ಕೈಗೆ ಸಿಬಿಐಯ ಚುಕ್ಕಾಣಿಯನ್ನು ನೀಡಲಾಯಿತು. ಸಿಬಿಐಯ ನೈತಿಕ ಶಕ್ತಿಯನ್ನು ಸಂಪೂರ್ಣ ಉಡುಗಿಸಲಾಯಿತು. ಕೇಂದ್ರ ಸರಕಾರದ ವಿರುದ್ಧ ಅದರಲ್ಲೂ ಪ್ರಧಾನಿಯ ವಿರುದ್ಧ ಕಾರ್ಯನಿರ್ವಹಿಸಿದರೆ ಅವರ ಸ್ಥಿತಿ ಏನಾಗುತ್ತದೆ ಎನ್ನುವುದು ರಫೇಲ್ ಹಗರಣದಲ್ಲಿ ಸಿಬಿಐಯ ನೇತೃತ್ವ ವಹಿಸಿದವರಿಗೆ ಸ್ಪಷ್ಟಪಡಿಸಲಾಯಿತು. ಆ ದಿನದಿಂದ ಸಿಬಿಐ ತನಿಖಾ ಸಂಸ್ಥೆ ರೆಕ್ಕೆ ಮುರಿದ ಹಕ್ಕಿಯಂತಾಯಿತು. ಇಂದು, ಸಿಬಿಐ ಎನ್ನುವುದು ರಾಜಕೀಯ ಎದುರಾಳಿಗಳನ್ನು ಬ್ಲ್ಯ್ಲಾಕ್‌ಮೇಲ್ ಮಾಡಲು ಕೇಂದ್ರ ಸರಕಾರ ಬಳಸುತ್ತಿರುವ ಹಲವು ಅಸ್ತ್ರಗಳಲ್ಲಿ ಒಂದು ಎಂದು ಜನರು ಆರೋಪಿಸುವಂತಾಗಿದೆ. ಕೇಂದ್ರದ ವಿರುದ್ಧ ಧ್ವನಿಯೆತ್ತಿದ ಎಲ್ಲ ರಾಜ್ಯಗಳ ವಿರುದ್ಧವೂ ಸಿಬಿಐಯನ್ನು ಬಳಸುವ ಪ್ರಯತ್ನ ನಡೆದಿದೆ.

ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರವನ್ನು ಅಭದ್ರಗೊಳಿಸಲು ಮತ್ತು ಅವರ ಮೇಲೆ ನಿಯಂತ್ರಣ ಸಾಧಿಸಲು ಸಿಬಿಐಯನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಂಡಾಗ ಅದರ ವಿರುದ್ಧ ಮಮತಾ ಅವರು ಧ್ವನಿಯೆತ್ತಿದರು. ೨೦೧೮ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ತಿಕ್ಕಾಟ ತೀವ್ರವಾದಾಗ ಆಂಧ್ರ ಪ್ರದೇಶ ಮತ್ತು ಪಶ್ಚಿಮಬಂಗಾಳ ರಾಜ್ಯಗಳು ಸಿಬಿಐ ತನಿಖೆಯ ಅಧಿಕಾರವನ್ನು ಕಿತ್ತುಕೊಂಡವು. ಸಿಬಿಐ ಕುರಿತಂತೆ ರಾಜ್ಯಗಳು ವ್ಯಕ್ತಪಡಿಸಿರುವ ಅಪನಂಬಿಕೆ ಪರೋಕ್ಷವಾಗಿ ಒಕ್ಕೂಟ ವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರಿದೆ. ಮುಖ್ಯವಾಗಿ ರಾಜ್ಯಗಳು ಕೇಂದ್ರ ಸರಕಾರದ ಬಗ್ಗೆ ನಂಬಿಕೆಯನ್ನು ಕಳೆದುಕೊಂಡಿದ್ದವು. ಮುಂದೆ, ಈ ನಿಲುವನ್ನು ಹಲವು ರಾಜ್ಯಗಳು ಅನುಸರಿಸಿಕೊಂಡು ಬಂದವು. ಇದೀಗ ಕರ್ನಾಟಕ ಸಿಬಿಐ ವಿರುದ್ಧ ತೆಗೆದುಕೊಂಡ ನಿರ್ಧಾರದಿಂದ ಹಳೆಯ ತನಿಖೆಗಳಿಗೆ ಯಾವುದೇ ಅಡ್ಡಿಯೂ ಆಗುವುದಿಲ್ಲ. ಹೊಸದಾಗಿ ತನಿಖೆ ನಡೆಸಬೇಕಾದರೆ ಸಿಬಿಐ ರಾಜ್ಯದ ಅನುಮತಿಯನ್ನು ಪಡೆದುಕೊಳ್ಳಲೇಬೇಕು ಅಥವಾ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್‌ನ ಸಮ್ಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಹಿಂದೆ ನಡೆದಂತೆ ಐಟಿ, ಈಡಿ.ಯನ್ನು ಬಳಸಿಕೊಂಡು ರಾಜ್ಯದ ನಾಯಕರನ್ನು ಬೆದರಿಸಿದಂತೆ ಸಿಬಿಐಯನ್ನು ಬಳಸಿ ಬೆದರಿಸಲು ಸಾಧ್ಯವಾಗುವುದಿಲ್ಲ.

ಸಿಬಿಐ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವಲ್ಲಿ ಕೇಂದ್ರದ ಪಾತ್ರ ಬಹುದೊಡ್ಡದು. ಇದರ ಲಾಭವನ್ನು ಈ ದೇಶದ ಭ್ರಷ್ಟ ರಾಜಕಾರಣಿಗಳು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಸಿಬಿಐ ತನಿಖೆ ಶುರು ಹಚ್ಚಿದರೆ ಅದು ಒಬ್ಬ ರಾಜಕಾರಣಿಯ ರಾಜಕೀಯ ಬದುಕಿನ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರುತ್ತಿತ್ತು. ಆದರೆ ಇಂದು ಸಿಬಿಐ ತನಿಖೆಯನ್ನೇ ರಾಜಕಾರಣಿಗಳು ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುತ್ತಿದ್ದಾರೆ. ಅದರ ಪಕ್ಷಪಾತಿ ನಿಲುವುಗಳನ್ನು ಎತ್ತಿ ಹಿಡಿದು, ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಜನರು, ಮಾಧ್ಯಮಗಳೂ ಸಿಬಿಐ ತನಿಖೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಭ್ರಷ್ಟರಿಗೆ ಇದು ಅನುಕೂಲ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿಯೇ, ಸಿಬಿಐ ತನಿಖೆಯ ವಿರುದ್ಧ ರಾಜ್ಯ ಸರಕಾರ ತೆಗೆದುಕೊಂಡ ನಿರ್ಧಾರವನ್ನು ತಪ್ಪು ಎಂದು ಸಾರಾಸಗಟಾಗಿ ನಿರಾಕರಿಸಲಾಗುವುದಿಲ್ಲ. ಸಿಬಿಐ ತನಿಖೆ ಪರಿಣಾಮಕಾರಿಯಾಗಬೇಕಾದರೆ, ಅದು ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಕೆಲಸ ನಿರ್ವಹಿಸಬೇಕಾದರೆ ಅದಕ್ಕೆ ಪೂರ್ಣ ಸ್ವಾಯತ್ತೆಯನ್ನು ನೀಡಬೇಕು. ಕೇಂದ್ರ ಸರಕಾರದ ಹಸ್ತಕ್ಷೇಪದಿಂದ ಸಿಬಿಐ ದೂರ ಉಳಿಯಬೇಕು. ಆಗ ಮಾತ್ರ ಸಿಬಿಐ ತನಿಖೆಯನ್ನು ದೇಶ ಗಂಭೀರವಾಗಿ ತೆಗೆದುಕೊಳ್ಳಬಹುದು. ಅದು ಸಾಧ್ಯವಾಗುವವರೆಗೆ ಕೇಂದ್ರ-ರಾಜ್ಯಗಳ ನಡುವಿನ ಈ ಬಿಕ್ಕಟ್ಟು ಹೀಗೆಯೇ ಮುಂದುವರಿಯಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News