ಕುಸ್ತಿಯನ್ನು ಸೋಲಿಸಿದ ಭ್ರಷ್ಟ ರಾಜಕೀಯ

Update: 2023-08-26 04:46 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದ ಮಣ್ಣಿನ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಕುಸ್ತಿ ಕ್ರೀಡೆ ವಿಶ್ವ ಮಟ್ಟದಲ್ಲಿ ಮಣ್ಣು ಮುಕ್ಕುವ ಹಂತಕ್ಕೆ ಬಂದು ನಿಂತಿದೆ. ಭಾರತದ ಅತ್ಯಂತ ಪ್ರಾಚೀನ, ಸಾಂಪ್ರದಾಯಿಕ ಕ್ರೀಡೆಯೊಂದು ಇಲ್ಲಿನ ಅನೈತಿಕ ರಾಜಕಾರಣಕ್ಕೆ ಸಿಲುಕಿ ವಿಶ್ವಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಕುಸ್ತಿ ಪಟುಗಳು ಅಸ್ಪಶ್ಯರಾಗಬೇಕಾದ ಸ್ಥಿತಿಗೆ ಬಂದು ನಿಂತಿದ್ದಾರೆ. ತಾನು ನೀಡಿದ ಅಂತಿಮ ಗಡುವಿಗೆ ಮೊದಲು ಭಾರತ ಕುಸ್ತಿ ಫೆಡರೇಶನ್‌ನ ಚುನಾವಣೆಯನ್ನು ನಡೆಸಲು ವಿಫಲವಾದ ಕಾರಣದಿಂದ ವಿಶ್ವ ಕುಸ್ತಿ ಒಕ್ಕೂಟದಿಂದ ಫೆಡರೇಶನ್‌ನ ಸದಸ್ಯತ್ವ ಅಮಾನತುಗೊಂಡಿದೆ. ಪರಿಣಾಮವಾಗಿ ಮುಂಬರುವ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಭಾರತೀಯ ಕುಸ್ತಿಪಟುಗಳು ದೇಶದ ಧ್ವಜದಡಿಯಲ್ಲಿ ಸ್ಪರ್ಧಿಸುವಂತಿಲ್ಲ. ಎ. ೨೭ರಂದು ಭಾರತದ ಒಲಿಂಪಿಕ್ಸ್ ಸಂಸ್ಥೆಯು ಭಾರತ ಕುಸ್ತಿ ಫೆಡರೇಶನ್‌ನ ಚುನಾವಣೆಯನ್ನು ನಡೆಸಲು ಭೂಪೇಂದರ್ ಸಿಂಗ್ ಬಾಜ್ವಾ ನೇತೃತ್ವದಲ್ಲಿ ಅಡ್‌ಹಾಕ್ ಸಮಿತಿಯನ್ನು ನೇಮಿಸಿತ್ತು. ಆದರೆ ಈ ಸಮಿತಿಯು ೪೫ ದಿನಗಳಲ್ಲಿ ಚುನಾವಣೆ ನಡೆಸಲು ವಿಫಲವಾದ ಹಿನ್ನೆಲೆಯಲ್ಲಿ ಫೆಡರೇಶನ್ ಸದಸ್ಯತ್ವವನ್ನು ಅಮಾನತುಗೊಳಿಸಿದೆ. ಒಂದು ಕಾಲದಲ್ಲಿ ಮಾದಕ ದ್ರವ್ಯ ಪತ್ತೆ ಹಿನ್ನೆಲೆಯಲ್ಲಿ ಕುಸ್ತಿ ಪಟುಗಳು ಅನರ್ಹವಾದ ಉದಾಹರಣೆಗಳು ನಮ್ಮ ಮುಂದಿದ್ದವು. ಆದರೆ ಇದೇ ಮೊದಲ ಬಾರಿಗೆ ಭಾರತ ಕುಸ್ತಿ ಫೆಡರೇಶನ್ ವಿಶ್ವ ಕುಸ್ತಿಯಲ್ಲಿ ಅನರ್ಹತೆಯನ್ನು ಪಡೆದುಕೊಂಡಿದೆ. ಪರಿಣಾಮವಾಗಿ ಕುಸ್ತಿಪಟುಗಳು ಭಾರತದ ಧ್ವಜದೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಸ್ಪರ್ಧಿಸುವುದಿದ್ದರೆ ತಟಸ್ಥ ಕ್ರೀಡಾಳುಗಳೆಂದು ಗುರುತಿಸಬೇಕಾಗುತ್ತದೆ.

ಈ ದೇಶದ ಧ್ವಜ ಹಿಡಿದು ಭಾರತದ ಕುಸ್ತಿ ಪಟುಗಳು ಈಗಾಗಲೇ ಹತ್ತು ಹಲವು ಸಾಧನೆಗಳನ್ನು ಮಾಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಗಳಿಸುವುದೇ ಅಪರೂಪ ಎನ್ನುವ ಹೊತ್ತಿಗೆ ಕುಸ್ತಿ ಪಟುಗಳು ಭಾರತದ ಗೌರವವನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದರು. ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಭಾರತ ಒಟ್ಟು ಏಳು ಪದಕಗಳನ್ನು ತನ್ನದಾಗಿಸಿಕೊಂಡಿದೆ. ೧೯೫೨ರಲ್ಲಿ ಕೆ. ಡಿ. ಜಾದವ್ ಅವರು ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು. ಸ್ವಾತಂತ್ರ್ಯೋತ್ತರ ಭಾರತ ತನ್ನದಾಗಿಸಿಕೊಂಡ ಮೊದಲ ಒಲಿಂಪಿಕ್ಸ್ ಪದಕ ಅದು. ಒಲಿಂಪಿಕ್ಸ್‌ನಲ್ಲಿ ಕುಸ್ತಿ ಕ್ರೀಡೆಯಲ್ಲಿ ಪದಕ ಪಡೆದ ಏಕೈಕ ಮಹಿಳೆಯಾಗಿ ಸಾಕ್ಷಿ ಮಲಿಕ್ ಗುರುತಿಸಲ್ಪಡುತ್ತಾರೆ. ಮಹಿಳೆಯರ ಕುರಿತಂತೆ ಅತ್ಯಂತ ಸಂಕುಚಿತ ದೃಷ್ಟಿಕೋನವನ್ನು ಹೊಂದಿರುವ ಭಾರತೀಯ ಸಮಾಜದಲ್ಲಿ ಮಹಿಳೆಯರು ಪುರುಷ ಪ್ರಧಾನ ಕ್ರೀಡೆಯೆಂದು ಗುರುತಿಸಲ್ಪಡುತ್ತಾ ಬಂದ ಕುಸ್ತಿಯಲ್ಲಿ ಭಾಗವಹಿಸುವುದೇ ಬಹುದೊಡ್ಡ ಸಾಧನೆ. ಇಂತಹ ಕ್ರೀಡೆಯಲ್ಲಿ ಮಹಿಳೆಯರು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವುದನ್ನು ನಮ್ಮ ಸರಕಾರ ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಕರ್ತವ್ಯವಾಗಿತ್ತು. ಆದರೆ ದುರದೃಷ್ಟವಶಾತ್ ಕೆಲವು ತಿಂಗಳುಗಳಿಂದ ಮಹಿಳಾ ಕುಸ್ತಿಪಟುಗಳ ವಿರುದ್ಧವೇ ಭಾರತ ಕುಸ್ತಿ ಫೆಡರೇಶನ್ ಕುಸ್ತಿಗಿಳಿದಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದ ಕುಸ್ತಿ ಪಟುಗಳನ್ನು ರಾಜಕಾರಣಿಗಳು ಬೀದಿಗೆ ತಳ್ಳಿ ಅವರ ಮೇಲೆ ತಮ್ಮ ವಿಜಯ ಪತಾಕೆಯನ್ನು ಹಾರಿಸಿದ್ದಾರೆ. ಕೇಂದ್ರ ಸರಕಾರ ಏಕಕಾಲದಲ್ಲಿ ತನ್ನನ್ನು ತಾನು ಮಹಿಳಾ ವಿರೋಧಿ ಮತ್ತು ಕ್ರೀಡಾ ವಿರೋಧಿ ಎನ್ನುವುದನ್ನು ವಿಶ್ವಮಟ್ಟದಲ್ಲಿ ಸಾಬೀತು ಪಡಿಸಿದೆ.

ಭಾರತ ಕುಸ್ತಿ ಫೆಡರೇಶನ್ ವಿರುದ್ಧ ಕೆಲವು ರಾಜ್ಯದ ಕುಸ್ತಿ ಸಂಘಗಳು ನ್ಯಾಯಾಲಯದ ಮೆಟ್ಟಿಲೇರಿರುವುದು ಚುನಾವಣೆ ವಿಳಂಬವಾಗುವುದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಎಲ್ಲವೂ ಸರಿಯಾಗಿದ್ದರೆ, ಕಳೆದ ಜುಲೈ ೧೧ರಂದು ಫೆಡರೇಶನ್ ಚುನಾವಣೆ ನಡೆಯಬೇಕಾಗಿತ್ತು. ಆದರೆ ಇದೇ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮನವಿ ಮಾಡಿ ಅಸ್ಸಾಂ ಕುಸ್ತಿ ಸಂಘ ಹೈಕೋರ್ಟ್‌ಗೆ ಹೋಯಿತು. ಪರಿಣಾಮವಾಗಿ ಚುನಾವಣೆಗೆ ತಡೆ ಬಿತ್ತು. ವಿವಿಧ ಸಂಘಟನೆಗಳು ಚುನಾವಣೆಯಲ್ಲಿ ಭಾಗವಹಿಸುವ ಹಕ್ಕುಗಳಿಗೆ ಸಂಬಂಧಿಸಿ ವಾದ-ಪ್ರತಿವಾದಗಳನ್ನು ಮಂಡಿಸುತ್ತಾ ಹೋದಂತೆಯೇ ಚುನಾವಣೆ ಪದೇ ಪದೇ ಮುಂದಕ್ಕೆ ಹೋಯಿತು. ಅಂತಿಮವಾಗಿ ವಿಶ್ವ ಕುಸ್ತಿ ಒಕ್ಕೂಟ ನೀಡಿದ ಗಡುವಿಗೆ ಸರಿಯಾಗಿ ಚುನಾವಣೆ ನಡೆಸಲು ಅಸಾಧ್ಯವಾಯಿತು. ಮೇಲ್ನೋಟಕ್ಕೆ ಕೆಲವು ಕುಸ್ತಿ ಸಂಘಗಳೊಳಗಿನ ಭಿನ್ನಮತಗಳು ಚುನಾವಣೆ ಮುಂದೂಡಿಕೆಯಾಗಲು ಕಾರಣವೆಂದು ಹೇಳಲಾಗಿದೆಯಾದರೂ, ಭಾರತೀಯ ಕುಸ್ತಿ ಫೆಡರೇಶನ್‌ನೊಳಗೆ ರಾಜಕೀಯ ವ್ಯಕ್ತಿಗಳು ನಡೆಸುತ್ತಿರುವ ಹಸ್ತಕ್ಷೇಪವೇ ಇಂದು ಭಾರತೀಯ ಕುಸ್ತಿಗೆ ವಿಶ್ವಮಟ್ಟದಲ್ಲಿ ಸೋಲಾಗಿದೆ. ಚುನಾವಣೆ ಒಂದು ನೆಪ ಮಾತ್ರ.

ಭಾರತ ಅತ್ಲೆಟಿಕ್‌ನಲ್ಲಿ ಪದಕಗಳನ್ನು ಪಡೆಯಲು ಹರಸಾಹಸ ನಡೆಸುತ್ತಾ ಬಂದಿದೆ. ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನದ ಪದಕ ಪಡೆದರೂ ಅದು ಭಾರತದ ಪಾಲಿಗೆ ಸಂಭ್ರಮದ ವಿಷಯವಾಗಿ ಬಿಡುತ್ತಿತ್ತು. ಕುಸ್ತಿಯಲ್ಲಿ ಭಾರತದ ಮಹಿಳೆಯರ ಸಾಧನೆಯಂತೂ ಹೆಮ್ಮೆ ಪಡುವಂತಹದ್ದು. ಭಾರತೀಯ ಸಮಾಜದ ಎಲ್ಲ ಅಡೆತಡೆಗಳನ್ನು ಮೀರಿ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಲಗ್ಗೆಯಿಟ್ಟ ಈ ಮಹಿಳೆಯರು ಭಾರತದ ನಿಜವಾದ ಅಸ್ಮಿತೆಯಾಗಿದ್ದಾರೆ. ಈ ಮಹಿಳೆಯರನ್ನು ಪ್ರೋತ್ಸಾಹಿಸಿ ಬೆಳೆಸಲು ಸರ್ವಕ್ರಮವನ್ನು ತೆಗೆದುಕೊಳ್ಳುವ ಹೊಣೆಗಾರಿಕ್ನೆ ಭಾರತ ಕುಸ್ತಿ ಫೆಡರೇಶನ್ ಹೆಗಲ ಮೇಲಿತ್ತು. ವಿಪರ್ಯಾಸವೆಂದರೆ, ಈ ಮಹಿಳೆಯರ ಮೇಲೆ ಕುಸ್ತಿ ಫೆಡರೇಶನ್‌ನ ಅಧ್ಯಕ್ಷರೇ ಲೈಂಗಿಕ ದೌರ್ಜನ್ಯಗಳನ್ನು ಮಾಡಿರುವ ಬಗ್ಗೆ ಆರೋಪಗಳು ಕೇಳಿ ಬಂದವು. ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಿಳೆಯರೇ ಈ ಆರೋಪವನ್ನು ಮಾಡಿದಾಗ ಸರಕಾರ ತಕ್ಷಣ ಆರೋಪಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಮೊದಲು ಆತನನ್ನು ಫೆಡರೇಶನ್‌ನಿಂದ ಹೊರ ಹಾಕಿ,ಜೊತೆ ಜೊತೆಗೆ ಬಿಜೆಪಿಯಿಂದಲೂ ವಜಾಗೊಳಿಸಲು ಪ್ರಧಾನಿ ಮೋದಿ ಕ್ರಮ ತೆಗೆದುಕೊಳ್ಳಬೇಕಾ

ಗಿತ್ತು. ಈ ದೇಶದ ಕ್ರೀಡೆಯನ್ನು ಉಳಿಸಬೇಕೋ ಅಥವಾ ತನ್ನ ಸಹೋದ್ಯೋಗಿಯನ್ನು ಉಳಿಸಬೇಕೋ ಎನ್ನುವ ಆಯ್ಕೆಯಲ್ಲಿ ಕೇಂದ್ರ ಸರಕಾರ ತನ್ನ ಸಹೋದ್ಯೋಗಿಯ ಪರವಾಗಿ ನಿಂತಿತು. ವಿಶ್ವಮಟ್ಟದ ಕುಸ್ತಿಗಾಗಿ ತಯಾರಿ ನಡೆಸಬೇಕಾಗಿದ್ದ ಕುಸ್ತಿ ಪಟುಗಳು ಬೀದಿಯಲ್ಲಿ ನಿಂತು ಸರಕಾರದ ವಿರುದ್ಧ ಕುಸ್ತಿಗಿಳಿಯುವ ಸ್ಥಿತಿ ನಿರ್ಮಾಣವಾಯಿತು. ಯಾವಾಗ ನ್ಯಾಯ ಕೇಳಿದ ಮಹಿಳಾ ಕುಸ್ತಿ ಪಟುಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದರೋ ಆಗಲೇ ಭಾರತದ ಕುಸ್ತಿ ಫೆಡರೇಶನ್ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತನ್ನ ಘನತೆಯನ್ನು ಕಳೆದುಕೊಂಡಿತು. ಈ ದೇಶ ಕ್ರೀಡೆಗೆ ಎಷ್ಟು ಮಹತ್ವ ನೀಡುತ್ತದೆ ಎನ್ನುವುದನ್ನು ಈ ಮೂಲಕ ಜಗತ್ತಿಗೆ ಕೇಂದ್ರ ಸರಕಾರ ಸಾಬೀತು ಮಾಡಿತ್ತು.

ಕನಿಷ್ಠ ಮಹಿಳೆಯರು ಎನ್ನುವ ಕಾರಣಕ್ಕಾಗಿಯಾದರೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬಹುದಿತ್ತು. ಆದರೆ ಮಹಿಳೆಯರ ಮಾನ, ಪ್ರಾಣದ ಬಗ್ಗೆ ತನ್ನ ಕಾಳಜಿಯೆಷ್ಟು ಎನ್ನುವುದು ಕೂಡ ಸಾಬೀತಾಗಿ ಬಿಟ್ಟಿತು. ರಾಜಕಾರಣಿಯೊಬ್ಬ ಕುಸ್ತಿ ಫೆಡರೇಶನ್‌ನ ಅಧ್ಯಕ್ಷನಾಗಿ, ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಗಳ ತನಿಖೆ ನಡೆಸುವುದಕ್ಕಾಗಿಯೇ ಬಹುದೊಡ್ಡ ಸಂಘರ್ಷವೊಂದು ಇಲ್ಲಿ ನಡೆಯಿತು. ತನಿಖೆ ನಡೆಸುವುದೇ ಇಷ್ಟು ಕಷ್ಟವಾದರೆ, ಆ ತನಿಖೆ ನೀಡುವ ಫಲಿತಾಂಶವಾದರೂ ಹೇಗಿರಬಹುದು? ಭಾರತದ ಕುಸ್ತಿ ಫೆಡರೇಶನನ್ನು ರಾಜಕೀಯಗಳಿಗೆ ಬಲಿಕೊಟ್ಟ ಭಾಗವಾಗಿಯೇ ಇಂದು ವಿವಿಧ ರಾಜ್ಯಗಳ ಕುಸ್ತಿ ಸಂಘಟನೆಗಳಲ್ಲಿ ಅಪಸ್ವರಗಳು ಎದ್ದಿವೆ. ಭಾರತದ ಸಾಂಪ್ರದಾಯಿಕ ಕುಸ್ತಿಯನ್ನು ಉಳಿಸಿ, ಬೆಳೆಸುವ ಸಣ್ಣ ಕಾಳಜಿಯಾದರೂ ಸರಕಾರದ ಬಳಿ ಇದ್ದಿದ್ದರೆ ಕ್ರೀಡಾಪಟುಗಳು ದೂರು ನೀಡಿದ ಬೆನ್ನಿಗೇ ಸರಕಾರ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿತ್ತು. ಚುನಾವಣೆ ನಡೆಸದೇ ಇದ್ದರೆ ಅಮಾನತು ಮಾಡುವ ಬಗ್ಗೆ ವಿಶ್ವ ಕುಸ್ತಿ ಒಕ್ಕೂಟ ಈ ಹಿಂದೆಯೇ ಎಚ್ಚರಿಕೆಯನ್ನು ನೀಡಿದ್ದರೂ, ಭಿನ್ನಾಭಿಪ್ರಾಯಗಳನ್ನು ಬಗೆ ಹರಿಸುವ ಇಚ್ಛಾಶಕ್ತಿ ಫೆಡರೇಶನ್‌ಗೆ ಇದ್ದಿರಲಿಲ್ಲ. ಭಾರತವನ್ನು ಕ್ರೀಡಾ ಕ್ಷೇತ್ರದಲ್ಲಿ ಗೆಲ್ಲಿಸುತ್ತಾ ಬಂದ ಕುಸ್ತಿಯನ್ನು ಕೊನೆಗೂ ಇಲ್ಲಿನ ಭ್ರಷ್ಟ ರಾಜಕೀಯ ಸೋಲಿಸಿ ತನ್ನ ವಿಜಯ ಧ್ವಜವನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News