ತಪ್ಪೊಪ್ಪಿಕೊಂಡ ಕೋವಿಶೀಲ್ಡ್: ನಾಪತ್ತೆಯಾದ ಪ್ರಧಾನಿ ಮೋದಿ

Update: 2024-05-03 07:13 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೋವಿಶೀಲ್ಡ್‌ನಲ್ಲಿ ಮಾರಕ ಅಡ್ಡ ಪರಿಣಾಮಗಳನ್ನು ಕಂಪೆನಿ ಒಪ್ಪಿಕೊಂಡ ಬೆನ್ನಿಗೇ ಭಾರತದ ಕೋವಿಡ್ ಲಸಿಕೆ ಪ್ರಮಾಣ ಪತ್ರಗಳಿಂದ ಪ್ರಧಾನಿ ಮೋದಿಯವರ ಭಾವಚಿತ್ರ ಕಾಣೆಯಾಗಿದೆ. ‘ಚುನಾವಣಾ ನೀತಿ ಸಂಹಿತೆ’ಯ ಕಾರಣದಿಂದ ಭಾವಚಿತ್ರವನ್ನು ತೆಗೆಯಲಾಗಿದೆ ಎಂದು ಸಚಿವಾಲಯ ಹೇಳಿಕೆ ನೀಡಿದೆಯಾದರೂ, ಕಾಣೆಯಾಗಿರುವ ಭಾವಚಿತ್ರ ಮರಳಿ ಪ್ರಮಾಣ ಪತ್ರವನ್ನು ಸೇರುವ ಸಾಧ್ಯತೆಗಳು ತೀರಾ ಕಡಿಮೆ. ‘ಉಚಿತ ಲಸಿಕೆಯನ್ನು ವಿತರಿಸುವ ಮೂಲಕ ಪ್ರಧಾನಿ ಮೋದಿಯವರು ಲಕ್ಷಾಂತರ ಜನರ ಪ್ರಾಣವನ್ನು ಉಳಿಸಿದ್ದಾರೆ’ ಎನ್ನುವ ಬಿಜೆಪಿ ನಾಯಕರ ಹೇಳಿಕೆಗಳು ಎಷ್ಟರ ಮಟ್ಟಿಗೆ ನಿಜ ಎನ್ನುವುದು, ಕೋವಿಶೀಲ್ಡ್ ಕಂಪೆನಿ ಆ್ಯಸ್ಟ್ರಝೆನೆಕ ತಪ್ಪೊಪ್ಪಿಗೆಯಿಂದ ಸ್ಪಷ್ಟವಾಗಿದೆ. ಬೃಹತ್ ಔಷಧ ತಯಾರಿಕಾ ಕಂಪೆನಿ ಆ್ಯಸ್ಟ್ರಝೆನೆಕ ಸೋಮವಾರ ಬ್ರಿಟನ್‌ನ ನ್ಯಾಯಾಲಯದಲ್ಲಿ ಕೋವಿಶೀಲ್ಡ್‌ನ ಮಾರಕ ಅಡ್ಡ ಪರಿಣಾಮಗಳಿಗಾಗಿ ವಿಷಾದ ವ್ಯಕ್ತಪಡಿಸಿವೆ. ‘ಈ ಲಸಿಕೆಯು ರಕ್ತದ ಮಹತ್ವ ದ ಭಾಗವಾಗಿರುವ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಆ ಮೂಲಕ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು. ಈ ರಕ್ತ ಹೆಪ್ಪುಗಟ್ಟುವಿಕೆಗೆ ಅಂತಿಮವಾಗಿ ಸಾವಿನಲ್ಲಿ ಕೊನೆಗಾಣಬಹುದಾಗಿದೆ’ ಎನ್ನುವುದನ್ನು ಕಂಪೆನಿ ಒಪ್ಪಿಕೊಂಡಿದೆ. ಈ ಲಸಿಕೆಯು ಭಾರೀ ಸಾವುಗಳು ಮತ್ತು ತೀವ್ರ ಹಾನಿಗೆ ಕಾರಣವಾಗಿದ್ದು, ಇಂತಹ 51 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿವೆ. ತನ್ನ ಲಸಿಕೆಯಿಂದಾಗಿ ತೀವ್ರ ಪ್ರತಿಕೂಲ ಪರಿಣಾಮಗಳಿಗೆ ಒಳಗಾಗಿರುವವರಿಗೆ ಆ್ಯಸ್ಟ್ರಝೆನೆಕ ಈಗಾಗಲೇ ಸಂತಾಪವನ್ನು ವ್ಯಕ್ತಪಡಿಸಿವೆ. ಭಾರತದಲ್ಲಿ ಈ ಆ್ಯಸ್ಟ್ರಝೆನೆಕ ಜೊತೆಗೆ ಕೈ ಜೋಡಿಸಿದ ಭಾರತ ಸರಕಾರ ಮಾತ್ರ ಈ ದುಷ್ಪರಿಣಾಮಗಳ ಬಗ್ಗೆ ಈವರೆಗೆ ತುಟಿ ಬಿಚ್ಚಿಲ್ಲ.

ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ಭಾರತ ಮತ್ತು ಇತರ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗಾಗಿ ಲಸಿಕೆಯನ್ನು ಉತ್ಪಾದಿಸಲು ಆ್ಯಸ್ಟ್ರಝೆನೆಕ ಜೊತೆಗೆ 2021ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಅದರ ಅತಿ ದೊಡ್ಡ ಮಾರುಕಟ್ಟೆ ಭಾರತವೇ ಆಗಿತ್ತು. 2024 ಎಪ್ರಿಲ್‌ನ ವೇಳೆಗೆ ಭಾರತದಲ್ಲಿ 170 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಸರಕಾರವೇ ಹೆಮ್ಮೆಯಿಂದ ಹೇಳಿಕೊಂಡಿತ್ತು. ವಿಪರ್ಯಾಸವೆಂದರೆ, ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ಸ್ಪೇನ್‌ನಂತಹ ಹಲವು ಯುರೋಪಿಯನ್ ದೇಶಗಳು ಈ ಲಸಿಕೆಯನ್ನು 2021ರಲ್ಲೇ ಬಳಸುವುದನ್ನು ನಿಲ್ಲಿಸಿದ್ದವು. ತೀವ್ರ ಪರಿಶೋಧನೆ ನಡೆಸಿದ ಬಳಿಕ ಡೆನ್ಮಾರ್ಕ್, ಐರ್‌ಲ್ಯಾಂಡ್, ಥಾಯ್ಲೆಂಡ್, ನೆದರ್‌ಲ್ಯಾಂಡ್, ನಾರ್ವೆ ಮೊದಲಾದ ದೇಶಗಳು ಲಸಿಕೆಯನ್ನು ನಿಷೇಧಿಸಿದ್ದವು. ಆದರೆ ಭಾರತದಲ್ಲಿ ಕೇಂದ್ರ ಸರಕಾರದ ನೇತೃತ್ವದಲ್ಲೇ ಕೋವಿಶೀಲ್ಡ್ ಲಸಿಕೆಯನ್ನು ಪ್ರೋತ್ಸಾಹಿಸಲಾಯಿತು. ‘ಲಸಿಕೆ ಬಳಕೆ ಐಚ್ಛಿಕವಾಗಿತ್ತು’ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಹೇಳಿಕೆಯನ್ನು ನೀಡಿದೆಯಾದರೂ, ಲಸಿಕೆಯನ್ನು ಪಡೆದುಕೊಳ್ಳಲೇ ಬೇಕಾದಂತಹ ಅನಿವಾರ್ಯ ಸ್ಥಿತಿಯನ್ನು ಸರಕಾರ ಸಮಾಜದಲ್ಲಿ ಅದಾಗಲೇ ನಿರ್ಮಾಣ ಮಾಡಿತ್ತು. ಲಸಿಕೆ ಪಡೆಯದವರಿಗೆ ಸಿನೆಮಾ ಮಂದಿರ, ಮಾಲ್, ಪಾರ್ಕ್‌ಗಳಲ್ಲಿ ಪ್ರವೇಶವಿಲ್ಲ ಎಂದು ಅಧಿಸೂಚನೆ ಹೊರಡಿಸುವುದು ಲಸಿಕೆಯನ್ನು ಜನರ ಮೇಲೆ ಹೇರಿಕೆ ಮಾಡಿದಂತೆಯೇ ಅಲ್ಲವೆ? ಜನರು ಹೆಚ್ಚು ಹೆಚ್ಚು ಲಸಿಕೆಯನ್ನು ಪಡೆದುಕೊಳ್ಳುವುದಕ್ಕಾಗಿ ‘ಲಾಕ್‌ಡೌನ್’ನನ್ನು ಬೆದರಿಕೆಯಾಗಿ ಬಳಸಲಾಯಿತು. ರಾಜ್ಯದ ಅಂದಿನ ಬಿಜೆಪಿ ಸರಕಾರವಂತೂ, ಪೋಷಕರು ಲಸಿಕೆ ಪಡೆದುಕೊಳ್ಳದೇ ಇದ್ದರೆ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ಪ್ರವೇಶವಿಲ್ಲ ಎನ್ನುವ ಅಧಿಸೂಚನೆಯನ್ನು ಹೊರಡಿಸಿತು. ಲಸಿಕೆಯನ್ನು ಜನರ ಮೇಲೆ ಕಡ್ಡಾಯಗೊಳಿಸಬಾರದು ಎಂದು ಪ್ರಜ್ಞಾವಂತ ನಾಗರಿಕರು ಒಂದೆಡೆ ಸುಪ್ರೀಂಕೋರ್ಟ್‌ಗೆ ಹೋಗಿರುವ ಹೊತ್ತಿಗೇ, ಶಾಲೆ ಕಾಲೇಜುಗಳ ಮೂಲಕ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ಬಲವಂತವಾಗಿ ನೀಡಿತು. ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ಪ್ರವೇಶವಿಲ್ಲ ಎನ್ನುವ ನಿಯಮವನ್ನು ಅಘೋಷಿತವಾಗಿ ಜಾರಿಗೊಳಿಸಿತು. ಲಸಿಕೆ ಪಡೆಯುವವರ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿಯೇ ಮಾಧ್ಯಮಗಳ ಮೂಲಕ ಕೊರೋನಾ ಅಂಕಿಸಂಕಿಗಳನ್ನು ಮುಂದಿಟ್ಟು ಹೆದರಿಸತೊಡಗಿತು. ಇಷ್ಟೆಲ್ಲ ಆದ ಬಳಿಕವೂ ‘ಸರಕಾರ ಲಸಿಕೆಯನ್ನು ಕಡ್ಡಾಯಗೊಳಿಸಿರಲಿಲ್ಲ’ ಎಂದು ಹೇಳುವುದರಲ್ಲಿ ಏನು ಅರ್ಥವಿದೆ?

ಲಸಿಕೆ ಕಡ್ಡಾಯವಲ್ಲದೇ ಇದ್ದರೆ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರ ಯಾಕಿತ್ತು? ಎಂದೂ ಜನರು ಕೇಳುತ್ತಿದ್ದಾರೆ. ಲಸಿಕೆಯ ಯಾವುದೇ ಅಡ್ಡ ಪರಿಣಾಮಗಳಿಗೆ ಆಯಾ ಕಂಪೆನಿಯೇ ಹೊಣೆಯಾದರೆ, ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಯಾಕೆ ಹಾಕಲಾಗಿತ್ತು? ಲಸಿಕೆಯನ್ನು ಪಡೆಯಲು ಪ್ರಧಾನಿ ಮೋದಿಯವರೇ ಪ್ರೇರಣೆಯಾಗಿದ್ದರು. ಮೋದಿಯ ಭಾವಚಿತ್ರವನ್ನು ನಂಬಿ, ಲಸಿಕೆಯ ಮೇಲೆ ವಿಶ್ವಾಸವನ್ನು ತಾಳಿದ ಅಮಾಯಕರಿದ್ದರು. ಇದೀಗ ನೋಡಿದರೆ ಕಂಪೆನಿಯೇ ಅದರ ಮಾರಕ ಅಡ್ಡ ಪರಿಣಾಮಗಳನ್ನು ಒಪ್ಪಿಕೊಂಡಿದೆ. ಕನಿಷ್ಟ ಇತರ ದೇಶಗಳಲ್ಲಿ ಲಸಿಕೆ ಯನ್ನು ನಿಷೇಧಿಸಿದ ಸಂದರ್ಭದಲ್ಲಾದರೂ, ಸರಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬಹುದಿತ್ತು. ಆದರೆ ಅದಾಗಲೇ ಈ ಲಸಿಕೆಗಾಗಿ ಕೋಟ್ಯಂತರ ರೂಪಾಯಿಯನ್ನು ಸರಕಾರ ಚೆಲ್ಲಿಯಾಗಿತ್ತು. ಪ್ರಧಾನಿ ಮೋದಿ ‘ಲಸಿಕೆಯ ಕಿರೀಟ’ ಧರಿಸಿ ಓಡಾಡುತ್ತಿದ್ದರು. ವಿಪರ್ಯಾಸವೆಂದರೆ, ಕೋವ್ಯಾಕ್ಸಿನ್ ಕೂಡ ಬಿಜೆಪಿಯ ‘ರಾಷ್ಟ್ರೀಯತೆ’ಗೆ ಬಲಿಯಾಗಿ ಪೂರ್ಣ ಪ್ರಮಾಣದ ವಿಶ್ವಾಸಾರ್ಹ ಲಸಿಕೆಯಾಗಿ ಉಳಿದಿಲ್ಲ. ಭಾರತ್ ಬಯೋಟೆಕ್ ಸಿದ್ಧಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಗೆ ಭಾರತ ಅತ್ಯಂತ ಅವಸರವಸರವಾಗಿ ಅನುಮತಿಯನ್ನು ನೀಡಿದೆ ಎನ್ನುವ ಆರೋಪಗಳನ್ನು ಹಲವು ತಜ್ಞರು ಮಾಡಿದ್ದರು. ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯುವ ಮೊದಲೇ ಅದಕ್ಕೆ ಸರಕಾರ ಅನುಮತಿ ನೀಡಿತ್ತು. ಮೊದಲನೇ ಹಂತ ಮತ್ತು ಎರಡನೆ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಯಾವ ರೀತಿಯ ಫಲಿತಾಂಶ ಲಭ್ಯವಾಗಿದೆ ಎನ್ನುವ ವಿವರವನ್ನೂ ಸರಕಾರ ಮುಚ್ಚಿಟ್ಟು ಕೋವ್ಯಾಕ್ಸಿನನ್ನು ಮಾರುಕಟ್ಟೆಗೆ ಇಳಿಸಿತ್ತು. ಪ್ರಧಾನಿಯ ವರ್ಚಸ್ಸನ್ನು ಎತ್ತಿ ಹಿಡಿಯುವುದಕ್ಕಾಗಿಯೇ ಆತುರಾತುರವಾಗಿ ಕೋವ್ಯಾಕ್ಸಿನ್‌ಗೆ ಅನುಮತಿ ನೀಡಲಾಗಿತ್ತು. ಸುಮಾರು ಒಂದು ಲಕ್ಷ ಕೋಟಿ ರೂಪಾಯಿಯನ್ನು ಸುರಿದು, ಪ್ರಧಾನಿಯನ್ನು ‘ವಿಶ್ವ ಗುರು’ವಾಗಿಸುವ ವ್ಯರ್ಥ ಪ್ರಯತ್ನವೊಂದು ಕೋವ್ಯಾಕ್ಸಿನ್ ಮೂಲಕ ನಡೆಯಿತು. ಲಾಕ್‌ಡೌನ್‌ನಿಂದಾಗಿ ಭಾರತದ ಜನರು, ‘ಹಸಿವು...ಹಸಿವು’ ಎನ್ನುತ್ತಿದ್ದರೆ ಪ್ರಧಾನಿ ಮೋದಿಯವರಿಗೆ ಅದು ‘ಲಸಿಕೆ ಲಸಿಕೆ’ ಎಂದು ಕೇಳಿಸಿತು. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ಜನರು ಪ್ರಮಾಣ ಪತ್ರಕ್ಕಾಗಿ ಲಸಿಕೆಯನ್ನು ಪಡೆದರೇ ಹೊರತು, ಲಸಿಕೆಯ ಮೇಲೆ ವಿಶ್ವಾಸದಿಂದಲ್ಲ. ‘ಲಸಿಕೆ ಬೇಡ, ನಮಗೆ ಪ್ರಮಾಣ ಪತ್ರ ಬೇಕು’ ಎನ್ನುವವರ ಸಂಖ್ಯೆಯೇ ದೊಡ್ಡದಿತ್ತು. ‘ನಕಲಿ ಪ್ರಮಾಣ ಪತ್ರ’ ಮಾರಾಟದ ಭಾರೀ ಕಾಳದಂಧೆಗೆ ಇದು ಕಾರಣವಾಯಿತು.

ಆತುರಾತುರವಾಗಿ ಲಸಿಕೆಗಳನ್ನು ಪ್ರಯೋಗಿಸುವುದು ಭಾರತದಂತಹ ದೇಶಕ್ಕೆ ಒಳ್ಳೆಯದಲ್ಲ ಎನ್ನುವುದನ್ನು ವೈದ್ಯಕೀಯ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಇಂತಹ ಆತುರದ ನಿರ್ಧಾರಗಳಿಗೆ ಭಾರತ ಈಗಾಗಲೇ ಸಾಕಷ್ಟು ಬೆಲೆ ತೆತ್ತಿದೆ. ಕೆಲವು ಹಿತಾಸಕ್ತಿಗಳ ಪ್ರಭಾವದಿಂದ ಬಿಡುಗಡೆ ಮಾಡಲಾದ ಪೋಲಿಯೋ ಲಸಿಕೆಯೊಂದು 17 ವರ್ಷಗಳ ಅವಧಿಯಲ್ಲಿ ಅಂದರೆ 2001ರಿಂದ 2017ರವೆಗೆ 4.91ಲಕ್ಷಕ್ಕೂ ಅಧಿಕ ಮಕ್ಕಳನ್ನು ಪಾರ್ಶ್ವವಾಯು ಪೀಡಿತರನ್ನಾಗಿ ಮಾಡಿರುವುದನ್ನು ಸಂಶೋಧನಾ ವರದಿಯೊಂದು ಬಹಿರಂಗ ಪಡಿಸಿದೆ. ಕೊರೋನಾ ಲಸಿಕೆ ಮಾನವ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ , ಶೀಘ್ರವಾಗಿ ಸಿದ್ಧಗೊಂಡ ಲಸಿಕೆಯಾಗಿದೆ. ಇದೀಗ ನೋಡಿದರೆ, ಸರಕಾರ ತಲೆಮರೆಸಿಕೊಂಡಿದೆ. ‘ಪ್ರಮಾಣ ಪತ್ರ’ದಿಂದ ಮೋದಿ ಕಾಣೆಯಾಗಿದ್ದಾರೆ.

ಕೋವಿಶೀಲ್ಡ್ ಕಂಪೆನಿಯ ಜೊತೆ ಜೊತೆಗೇ ಭಾರತ ಸರಕಾರವೂ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕಾಗಿದೆ. ಜನತೆಯ ಕ್ಷಮೆಯಾಚಿಸಬೇಕಾಗಿದೆ. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಇವೆರಡರಿಂದ ಭಾರತದಲ್ಲಿ ಸಂಭವಿಸಿರುವ ಸಾವುಗಳು, ಹಾನಿಗಳು ಎಷ್ಟು ಎನ್ನುವುದು ತನಿಖೆಯಾಗುವುದು ಅತ್ಯಗತ್ಯವಾಗಿದೆ. ಭಾರತದಲ್ಲಿ ಯುವಕರ ಹೃದಯಾಘಾತಗಳ ಪ್ರಕರಣ ಹೆಚ್ಚುತ್ತಿವೆ. ಇದರಲ್ಲಿ ಲಸಿಕೆಯ ಪಾತ್ರವೇನು ಎನ್ನುವುದು ಬಹಿರಂಗವಾಗಬೇಕು. ಲಸಿಕೆಯಿಂದ ಬೃಹತ್ ಕಂಪೆನಿಗಳು ಸಹಸ್ರಾರು ಕೋಟಿ ರೂಪಾಯಿಗಳನ್ನು ಬಾಚಿಕೊಂಡವು. ಲಾಕ್‌ಡೌನ್ ಅವಧಿಯಲ್ಲಿ ಈ ಕಂಪೆನಿಗಳೆಲ್ಲ ಲಾಭದಾಯಕವಾದವು. ಜನಸಾಮಾನ್ಯರ ತೆರಿಗೆಯ ಹಣವನ್ನು ಲಸಿಕೆಗೆ ಸುರಿಯುವ ಮೂಲಕ ನಿಜಕ್ಕೂ ಪ್ರಧಾನಿ ಮೋದಿಯವರು ಉಳಿಸಿರುವುದು ಜನಸಾಮಾನ್ಯರನ್ನಲ್ಲ, ಈ ಕಾರ್ಪೊರೇಟ್ ಕಂಪೆನಿಗಳನ್ನು ಎನ್ನುವುದು ದೇಶಕ್ಕೆ ಇದೀಗ ಅರ್ಥವಾಗತೊಡಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News