ಹೊಳೆವ ಚಂದ್ರನ ಮುಖದ ಕಪ್ಪು ಕಲೆಗಳು!

Update: 2023-08-25 05:25 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಚಂದ್ರನ ಮೇಲೆ ಭಾರತ ತನ್ನ ವಿಕ್ರಮ ಹೆಜ್ಜೆಯನ್ನಿರಿಸಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರನ್ನು ಇಳಿಸಿದ ಮೊತ್ತ ಮೊದಲ ದೇಶವಾಗಿ ಭಾರತ ಗುರುತಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಚಂದ್ರನ ಮೇಲೆ ಲ್ಯಾಂಡರನ್ನು ಇಳಿಸಿದ ನಾಲ್ಕನೇ ದೇಶವೆಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. ಈ ಮೊದಲು ಸೋವಿಯತ್ ಒಕ್ಕೂಟ, ಅಮೆರಿಕ ಮತ್ತು ಚೀನಾ ಈ ಸಾಧನೆಯನ್ನು ಮಾಡಿದ್ದವು. ಚಂದ್ರನೊಳಗಿನ ಅನ್ವೇಷಣೆಯಲ್ಲಿ ಹತ್ತು ಹಲವು ಸಾಧನೆಗಳನ್ನು ಹಲವು ದೇಶಗಳು ಮಾಡಿವೆ. ಅದರಲ್ಲಿ ಮಹತ್ವ ಪೂರ್ಣವಾದುದು ಚಂದ್ರನ ಮೇಲೆ ಮನುಷ್ಯನ ಹೆಜ್ಜೆ ಗುರುತುಗಳು.

1969ರಲ್ಲಿ ನಾಸಾ ಮೂಲಕ ಮೊತ್ತ ಮೊದಲ ಬಾರಿಗೆ ಮನುಷ್ಯನೊಬ್ಬ ಚಂದ್ರನನ್ನು ತಲುಪುವಂತಾಯಿತು. ಇದಾದ ಬಳಿಕ ಒಟ್ಟು ಐದು ಬಾರಿ ಮನುಷ್ಯರು ಚಂದ್ರನನ್ನು ತಲುಪಿದ್ದಾರೆ. ಒಟ್ಟು 12 ಮಂದಿ ಚಂದ್ರನಲ್ಲಿ ಓಡಾಡಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. 1972ರ ಬಳಿಕ ಚಂದ್ರನ ಬಳಿ ಮನುಷ್ಯನನ್ನು ಕಳುಹಿಸಿದ ಉದಾಹರಣೆಗಳಿಲ್ಲ. ಆದರೆ ಚಂದ್ರನ ಕುರಿತಂತೆ ಸಂಶೋಧನೆಗಳಲ್ಲಿ ಹಲವು ಸಾಧನೆಗಳಾಗಿವೆ. ಖಗೋಳ ಕ್ಷೇತ್ರದಲ್ಲಿ ಭಾರತದ ಸಾಧನೆಗಳನ್ನು ಪಟ್ಟಿ ಮಾಡುವಾಗ ಆರ್ಯಭಟ ಉಪಗ್ರಹ ಮತ್ತು ರಾಕೇಶ್ ಶರ್ಮಾ ಅವರನ್ನು ಸ್ಮರಿಸಲೇಬೇಕಾಗಿದೆ. ಸೋವಿಯತ್ ಒಕ್ಕೂಟದ ಸೋಯುಝ್-ಟಿಯಲ್ಲಿ ಬಾಹ್ಯಾಕಾಶಕ್ಕೆ ಹಾರಿದ ಮೊತ್ತ ಮೊದಲ ಭಾರತೀಯನಾಗಿ ರಾಕೇಶ್ ಶರ್ಮಾ ಅವರು ಗುರುತಿಸಲ್ಪಟ್ಟಿದ್ದಾರೆ.

ಮೊದಲ ಭಾರತೀಯ ಉಪಗ್ರಹ ಆರ್ಯಭಟ ಉಡಾವಣೆಯಾಗಿದ್ದು 1976ರಲ್ಲಿ. ರಶ್ಯದ ಸಹಾಯದಿಂದ ಇದನ್ನು ಹಾರಿ ಬಿಡಲಾಗಿತ್ತು. ಆದರೆ ಐದು ದಿನಗಳಲ್ಲಿ ಇದು ಭೂಮಿಯ ಸಂಪರ್ಕವನ್ನು ಕಳೆದುಕೊಂಡಿತು. ಇದಾದ ಬಳಿಕ ಇಸ್ರೋ ಹಂತ ಹಂತವಾಗಿ ಸಾಧಿಸಿದ ಸಾಧನೆ ಇಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರನ್ನು ಇಳಿಸುವವರೆಗೆ ತಲುಪಿದೆ. ಎಲ್ಲಕ್ಕಿಂತ ಮುಖ್ಯವಾಗಿ ಉಪಗ್ರಹ ಉಡಾವಣೆಯಲ್ಲಿ ಭಾರತ ಸ್ವಾವಲಂಬಿಯಾಗಿದೆ ಮಾತ್ರವಲ್ಲ, ಇತರ ದೇಶಗಳು ಭಾರತವನ್ನು ಅವಲಂಬಿಸುವ ಮಟ್ಟಿಗೆ ಭಾರತ ವಿಕ್ರಮ ಹೆಜ್ಜೆಗಳನ್ನು ಇಟ್ಟಿದೆ.

ಇಂದಿನ ಸಾಧನೆಗೆ ನಾವು ನೆನೆಯಬೇಕಾಗಿರುವುದು, ಈ ದೇಶವನ್ನು ತಂತ್ರಜ್ಞಾನ, ವಿಜ್ಞಾನಗಳ ಕಡೆಗೆ ಮುನ್ನಡೆಸಿದ ದೇಶದ ಪ್ರಪ್ರಥಮ ಪ್ರಧಾನಿ ನೆಹರೂ ಅವರನ್ನು. ಅವರ ದೂರದೃಷ್ಟಿಯ ಫಲವಾಗಿ ಇಂದು ದೇಶ ಖಗೋಳ ವಿಜ್ಞಾನದಲ್ಲಿ ಸಾಧನೆಗಳನ್ನು ಮಾಡಲು ಸಾಧ್ಯವಾಗಿದೆ. ಸ್ವತಂತ್ರ ಭಾರತದ ಪ್ರಧಾನಿಯಾಗಿ ಅಧಿಕಾರಸ್ವೀಕರಿಸಿದ ಬೆನ್ನಿಗೆ ಕೋಟ್ಯಂತರ ವೆಚ್ಚದಲ್ಲಿ ಪ್ರತಿಮೆಗಳನ್ನು, ದೇವಸ್ಥಾನಗಳನ್ನು, ಪಾರ್ಕ್‌ಗಳನ್ನು ನಿರ್ಮಿಸಿ ಹಣವನ್ನು ಪೋಲು ಮಾಡಿದ್ದಿದ್ದರೆ ದೇಶ ಇಂದು ಈ ಮಟ್ಟಿನ ಸಾಧನೆಯನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ದೇಶ ಸ್ವಾತಂತ್ರಗೊಂಡಾಗ ಹಿಂದೂ ಮಹಾಸಭಾದ ನಾಯಕರು ಹಿಂದೂ ದೇಶ, ಹಿಂದೂ ದೇವಸ್ಥಾನ ಎಂದೆಲ್ಲ ಮಾತನಾಡುತ್ತಿದ್ದಾಗ ನೆಹರೂ ಅವರು ‘‘ಅಣೆಕಟ್ಟುಗಳೇ ಈ ದೇಶದ ದೇವಸ್ಥಾನಗಳು’’ ಎಂದು ಘೋಷಿಸಿದರು. ವಿಜ್ಞಾನ, ತಂತ್ರಜ್ಞಾನಗಳ ಅಭಿವೃದ್ಧಿಗೆ ಆದ್ಯತೆಗಳನ್ನು ನೀಡಿದರು. ಬಹುಶಃ ಪ್ರಧಾನಿ ಮೋದಿಯವರು ದೇಶದ ಚುಕ್ಕಾಣಿಯನ್ನು ಕೈಗೆತ್ತಿಕೊಂಡು ಇಲ್ಲಿನ ಆರ್ಥಿಕತೆಯನ್ನು ಬಿಗಡಾಯಿಸದೇ ಇದ್ದಿದ್ದರೆ ಚಂದ್ರಯಾನ-3 ಸಾಧನೆ ಇನ್ನಷ್ಟು ವೇಗ ಪಡೆಯುತ್ತಿತ್ತು ಎನ್ನುವುದು ಹಲವು ತಜ್ಞರ ಅಂಬೋಣವಾಗಿದೆ. ಯಾಕೆಂದರೆ, ಮೋದಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಅದು ಒಟ್ಟು ವಿಜ್ಞಾನ ಕ್ಷೇತ್ರಕ್ಕೆ ಅನುದಾನಗಳನ್ನು ಹಂತಹಂತವಾಗಿ ಕಡಿತ ಮಾಡುತ್ತಾ ಬಂದಿದೆ. ಚಂದ್ರಯಾನ-2ನ್ನು ಹಮ್ಮಿಕೊಳ್ಳುವ ಹೊತ್ತಿಗೆ ಇಸ್ರೋದ ಸಿಬ್ಬಂದಿಯ ಜೇಬಿಗೇ ಸರಕಾರ ಕತ್ತರಿ ಹಾಕಿತ್ತು. ಇಸ್ರೋ ವಿಜ್ಞಾನಿಗಳನ್ನು ಉತ್ತೇಜಿಸುವುದಕ್ಕಾಗಿ 1996ರಲ್ಲಿ ಸುಪ್ರೀಂಕೋರ್ಟ್ ಆದೇಶಿಸಿದ್ದ ಪ್ರೋತ್ಸಾಹಕ ಧನವನ್ನು 2019ರಲ್ಲಿ ಪ್ರಧಾನಿ ಮೋದಿ ಸರಕಾರ ಹಿಂದೆಗೆದುಕೊಂಡ ಕಾರಣದಿಂದ ಶೇ. 90ಕ್ಕೂ ಅಧಿಕ ವಿಜ್ಞಾನಿಗಳ ವೇತನದಲ್ಲಿ ಸುಮಾರು 10,000 ರೂ.ಯಷ್ಟು ಇಳಿಕೆಯಾಯಿತು. ಇದರ ವಿರುದ್ಧ ಇಸ್ರೋ ಸಿಬ್ಬಂದಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು. ಇಸ್ರೋದ ಸ್ಪೇಸ್ ಇಂಜಿನಿಯರ್ಸ್ ಅಸೋಸಿಯೇಷನ್ (ಎಸ್ಇಎ) 2019ರ ಜುಲೈಅಂತ್ಯದಲ್ಲಿ  ಸಂಸ್ಥೆಯ ಅಧ್ಯಕ್ಷ ಕೆ.ಶಿವನ್ ಅವರಿಗೆ ಸಲ್ಲಿಸಿದ್ದ ಲಿಖಿತ ಮನವಿಯಲ್ಲಿ ‘‘ವಿಜ್ಞಾನಿಗಳು ತಮ್ಮ ಕುಟುಂಬಗಳನ್ನು ಸಲಹಲು ಸಂಪೂರ್ಣವಾಗಿ ವೇತನವನ್ನೇ ನಂಬಿಕೊಂಡಿದ್ದಾರೆ ಮತ್ತು ಅವರಿಗೆ ಇತರ ಯಾವುದೇ ಆದಾಯಮೂಲಗಳಿಲ್ಲ’’ ಎನ್ನುವುದನ್ನು ಮನದಟ್ಟು ಮಾಡಿದ್ದರು.

ಸರಕಾರದ ಕ್ರಮವು 1996ರ ನಿರ್ಧಾರದ ಪ್ರಮುಖ ಆಶಯಕ್ಕೆ ವಿರುದ್ಧವಾಗಿ ವಿಜ್ಞಾನಿಗಳನ್ನು ನಿರುತ್ತೇಜಿಸುತ್ತದೆ ಎಂದು ಎಸ್ಇಎ ಅಧ್ಯಕ್ಷ ಎ.ಮಣಿರಾಮನ್ ಅವರು ಸಹಿ ಹಾಕಿರುವ ಪತ್ರವು ಎಚ್ಚರಿಸಿತ್ತು. ಸರಕಾರದ ನಿರ್ಧಾರವು ಇಸ್ರೋವಿಜ್ಞಾನಿಗಳನ್ನು ಹತಾಶರನ್ನಾಗಿಸಿದೆ ಎಂದೂ ಪತ್ರದಲ್ಲಿ ತಿಳಿಸಿದ್ದರು. ಕೇಂದ್ರ ಸರಕಾರದ ತಪ್ಪು ಆರ್ಥಿಕ ನಡೆಯಿಂದಾಗಿ ದೇಶ ಹಿಂದಕ್ಕೆ ಚಲಿಸುತ್ತಿದ್ದರೂ ಪ್ರಧಾನಿ ಮೋದಿ ನೇತೃತ್ವದ ಸರಕಾರಕ್ಕೆ ಪ್ರತಿಮೆ, ಮಂದಿರ, ಶಿವಾಜಿ ಪಾರ್ಕ್‌ಗಳನ್ನು ನಿರ್ಮಿಸಲು ಕೋಟ್ಯಂತರ ರೂ. ವ್ಯಯ ಮಾಡಲು ಸಾಧ್ಯವಾಗಿತ್ತು. ಪತಂಜಲಿಯಂತಹ ಸಂಸ್ಥೆಗಳಿಗೆ ಅನುದಾನಗಳನ್ನು ಕೊಡಲು ತುದಿಗಾಲಿನಲ್ಲಿ ನಿಂತಿತ್ತು. ಆದರೆ ವಿಜ್ಞಾನಿಗಳಿಗೆ ನೀಡಲು ಮಾತ್ರ ಸರಕಾರದ ಬಳಿ ದುಡ್ಡಿರಲಿಲ್ಲ. ಇಸ್ರೋದ ವಿಜ್ಞಾನಿಗಳಿಗೆ ಸರಕಾರ ನೀಡುತ್ತಿರುವ ವೇತನ ವಿಶ್ವದ ಇತರ ದೇಶಗಳ ವಿಜ್ಞಾನಿಗಳ ವೇತನದ ಐದನೇ ಒಂದು ಭಾಗದಷ್ಟೂ ಇಲ್ಲ ಎನ್ನುವ ಅಂಶವನ್ನು ಇಸ್ರೋ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಹೇಳಿದ್ದಾರೆ. ಚಂದ್ರಯಾನ-2ರ ಉಡಾವಣಾ ಪ್ಯಾಡ್ ನಿರ್ಮಿಸಿದ್ದ ಇಂಜಿಯರ್‌ಗಳಿಗೂ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ವೇತನ ಬಾಕಿಯಿರಿಸಿರುವುದು ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಇಷ್ಟಾದರೂ ಇಸ್ರೋ ಎಲ್ಲ ಆರ್ಥಿಕ ಅಡೆತಡೆಗಳನ್ನು ಮೀರಿ ಸಾಧನೆಯನ್ನು ಸಾಧಿಸಲು ಮುಖ್ಯ ಕಾರಣ, ನೆಹರೂ ಕಾಲದಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ಹಾಕಿದ್ದ ಗಟ್ಟಿಯಾದ ಅಡಿಗಲ್ಲು.

ಬಹುಶಃ ಈ ದೇಶದ ಪ್ರಥಮ ಪ್ರಧಾನಿಯಾಗಿ ಮೋದಿಯಂತಹ ಮನಸ್ಥಿತಿಯ ನಾಯಕರೇನಾದರೂ ಆಯ್ಕೆಯಾಗಿದ್ದರೆ ಇಂದು ಪತಂಜಲಿಯಂತಹ ಸಂಸ್ಥೆಗಳನ್ನೇ ಭಾರತದ ಸಾಧನೆಯೆಂದು ಬಿಂಬಿಸಿ, ರಾಮ್‌ದೇವ್‌ನಂತಹ ಸ್ವಯಂಘೋಷಿತ ಬಾಬಾಗಳನ್ನೇ ಭಾರತದ ಪಾಲಿನ ವಿಜ್ಞಾನಿಗಳೆಂದು ಮಾಧ್ಯಮಗಳು ಸಂಭ್ರಮಿಸಬೇಕಾಗಿತ್ತು. ಸರಕಾರದ ನಿರ್ಲಕ್ಷಗಳ ನಡುವೆಯೂ ವಿಜ್ಞಾನಿಗಳು ಸಾಧಿಸಿದ ಸಾಧನೆಗಾಗಿ ಅವರನ್ನು ಅಭಿನಂದಿಸಬೇಕು. ಚಂದ್ರನ ಮೈಮೇಲಿನ ಚಿತ್ರಗಳನ್ನು ವಿಕ್ರಮ ಸೆರೆಹಿಡಿದು ಕಳುಹಿಸಿರುವ ಬಗ್ಗೆ ವರದಿಯಾಗಿವೆ. ಆದರೆ ಇದೇ ಸಂದರ್ಭದಲ್ಲಿ ನಮ್ಮ ಮಣಿಪುರ, ಹರ್ಯಾಣಗಳಲ್ಲಿ ನಡೆಯುತ್ತಿರುವ ಅತ್ಯಾಚಾರ, ಹಿಂಸಾಚಾರಗಳ ಚಿತ್ರಗಳನ್ನು ಸೆರೆ ಹಿಡಿದು ಅವುಗಳನ್ನು ಪ್ರಧಾನಿಗೆ ರವಾನಿಸಬಲ್ಲ ತಂತ್ರಜ್ಞಾನವನ್ನು ಭಾರತ ಅಭಿವೃದ್ಧಿ ಪಡಿಸಬೇಕಾದ ಅಗತ್ಯವಿದೆ. ಚಂದ್ರನ ನೆಲದ ಮೇಲೆ ಉಪಗ್ರಹವನ್ನು ಇಳಿಸಲು ಭಾರತ ಶಕ್ತವೆಂದಾದರೆ, ಶೌಚಗುಂಡಿಯೊಳಗೆ ಇಳಿಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿಗೊಳಿಸಲು ಇರುವ ಅಡ್ಡಿಯೇನು ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲವಾಗಿದೆ. ವಿಜ್ಞಾನ, ತಂತ್ರಜ್ಞಾನಗಳ ಮೂಲಕ ಭಾರತ ಸಾಧಿಸಿದ ಅಭಿವೃದ್ಧಿ ಹೊಳೆಯುವ ಚಂದ್ರನ ಮುಖವಾಗಿದ್ದರೆ, ಇಲ್ಲಿರುವ ಹಸಿವು, ಮಹಿಳೆಯರ ಬೆತ್ತಲೆ ಮೆರವಣಿಗೆ,ಸಾಮೂಹಿಕ ಅತ್ಯಾಚಾರ, ಶೌಚಗುಂಡಿಯಲ್ಲಿ ಪೌರಕಾರ್ಮಿಕರ ಮೃತದೇಹಗಳು ಆ ಚಂದ್ರನ ಮುಖದ ಕಲೆೆಗಳು. ಚಂದ್ರನ ಕುರಿತಂತೆ ಸಂಭ್ರಮಿಸುವಾಗ ಈ ಕಲೆಗಳು ನಮ್ಮಾಳಗನ್ನು ಒಂದಿಷ್ಟಾದರೂ ಕಾಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News