ಕಡಿಮೆಯಾಗುತ್ತಿರುವ ಮಹಿಳಾ ಪ್ರಾತಿನಿಧ್ಯ
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಂಡರು, ಆದರೆ ಹೊಸ ಲೋಕಸಭೆಯಲ್ಲಿ ಅವರ ಪ್ರಾತಿನಿಧ್ಯ ಅತ್ಯಂತ ಕಡಿಮೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುವ ವಿಧೇಯಕವನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿ ತಿಂಗಳುಗಳೇ ಗತಿಸಿದವು. ರಾಜಕೀಯ ಪಕ್ಷಗಳಲ್ಲಿ ನಿಜವಾದ ಪ್ರಾಮಾಣಿಕತೆ ಮತ್ತು ಬದ್ಧತೆ ಇದ್ದರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬರುವಂತೆ ನೋಡಿಕೊಳ್ಳಬೇಕಾಗಿತ್ತು. ನೂತನ ಲೋಕಸಭೆಯಲ್ಲಿ ಮಹಿಳೆಯರ ಸಂಖ್ಯೆ 74ಕ್ಕೆ ಕುಸಿದಿದೆ. ಕಳೆದ ಲೋಕಸಭೆಯಲ್ಲಿ ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದರು. ಭಾರತದ ಒಟ್ಟು ಮಹಿಳಾ ಮತದಾರರು ಶೇ. 48ರಷ್ಟಿದ್ದಾರೆ. ಆದರೆ ಲೋಕಸಭೆಯಲ್ಲಿ ಅವರ ಪ್ರಾತಿನಿಧ್ಯದ ಪ್ರಮಾಣ ಶೇ. 13ರಷ್ಟು ಮಾತ್ರ.
ಮಹಿಳೆಯರು ಸಮಾಜದ ಇತರ ಕ್ಷೇತ್ರಗಳಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿದ್ದಾರೆ. ವೈದ್ಯೆಯರಾಗಿ, ಶಿಕ್ಷಕಿಯರಾಗಿ, ವಿಜ್ಞಾನಿಗಳಾಗಿ, ಅಧಿಕಾರಿಗಳಾಗಿ ದಕ್ಷತೆಗೆ ಹೆಸರಾಗಿದ್ದಾರೆ. ಆದರೆ ರಾಜಕೀಯ ರಂಗದಲ್ಲಿ ಅವರಿಗೆ ಅವಕಾಶ ಸಿಗುತ್ತಿಲ್ಲ ಎಂದರೆ ತಪ್ಪಲ್ಲ. ಈಗ ಚುನಾಯಿತರಾಗಿ ಬಂದ ಹೆಣ್ಣು ಮಕ್ಕಳಲ್ಲೂ ರಾಜಕೀಯವಾಗಿ ಪ್ರಭಾವಿಯಾಗಿರುವ ಕೋಟಿ, ಕೋಟಿ ಸಂಪತ್ತನ್ನು ಹೊಂದಿರುವ ಕುಟುಂಬಗಳಿಂದ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪ್ರಭಾವಿ ಕುಟುಂಬಗಳ ಮಹಿಳೆಯರನ್ನು ಬಿಟ್ಟರೆ ಸಿನೆಮಾ ರಂಗದಿಂದ ಬಂದ ಮಹಿಳೆಯರ ಸಂಖ್ಯೆ ಹೆಚ್ಚಿಗಿದೆ. ಇಂತಹ ವಿಶೇಷ ಹಿನ್ನೆಲೆಯಿರುವ ಮಹಿಳೆಯರಿಗೆ ಇತರ ಮಹಿಳೆಯರಿಗಿಂತ ರಾಜಕೀಯವಾಗಿ ಬೆಳೆಯಲು ಸಾಕಷ್ಟು ಅವಕಾಶಗಳು ತಾನಾಗಿ ಬರುತ್ತವೆ. ಮಹಿಳೆಯರು ಸ್ವಂತ ವ್ಯಕ್ತಿತ್ವದಿಂದ ಶಾಸನಸಭೆಗಳಿಗೆ ಚುನಾಯಿತರಾಗಿ ಬರಬೇಕು. ಯಾವುದಕ್ಕೂ ಕುಟುಂಬದ ಪ್ರಭಾವವನ್ನು ಅವಲಂಬಿಸಬಾರದು. ಹಿಂದೆ ಅರವತ್ತು-ಎಪ್ಪತ್ತರ ದಶಕದಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಗೀತಾ ಮುಖರ್ಜಿ, ರೇಣು ಚಕ್ರವರ್ತಿ, ಸರೋಜಿನಿ ಮಹಿಷಿ, ಮಾರ್ಗರೆಟ್ ಆಳ್ವಾ ಅವರಂಥವರು ಸಂಸದರಾಗಿದ್ದರು. ಈಗ ಗೆದ್ದವರಲ್ಲಿ ಸ್ವಂತ ವರ್ಚಸ್ಸಿನಿಂದ ಬಂದವರ ಸಂಖ್ಯೆ ಕಡಿಮೆ.
ಈ ಸಲದ ಲೋಕಸಭಾ ಚುನಾವಣಾ ಕಣದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಒಟ್ಟು ಸಂಖ್ಯೆ 8,300. ಇವರಲ್ಲಿ ಮಹಿಳೆಯರ ಪ್ರಮಾಣ ಶೇ. 10ರಷ್ಟು ಮಾತ್ರ. 155 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳೇ ಇರಲಿಲ್ಲ. ಬಿಜೆಪಿ 69 ಮಹಿಳೆಯರನ್ನು ಚುನಾವಣಾ ಕಣಕ್ಕಿಳಿಸಿತ್ತು. ಈ ಪೈಕಿ 31 ಮಂದಿ ಚುನಾಯಿತರಾಗಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಮಹಿಳಾ ಅಭ್ಯರ್ಥಿಗಳು 41. ಇವರಲ್ಲಿ 13 ಮಂದಿ ಜಯಶಾಲಿಯಾಗಿದ್ದಾರೆ. ಹಾಗೆ ನೋಡಿದರೆ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಾಧನೆ ಗಮನಾರ್ಹವಾಗಿದೆ. ಈ ಪಕ್ಷ 12 ಮಹಿಳೆಯರನ್ನು ಚುನಾವಣಾ ಕಣಕ್ಕೆ ಇಳಿಸಿತ್ತು. ಅವರಲ್ಲಿ 11 ಮಂದಿ ಗೆದ್ದಿದ್ದಾರೆ. ಟಿಎಂಸಿಯ ಒಟ್ಟು 29 ಸಂಸದರ ಪೈಕಿ ಮಹಿಳೆಯರ ಪಾಲು ಶೇ. 38ರಷ್ಟಿದೆ.
ಮಹಿಳಾ ಪ್ರಾತಿನಿಧ್ಯ ಕಡಿಮೆಯಾಗಲು ಕಾರಣ ಹುಡುಕಲು ಪರದಾಡಬೇಕಿಲ್ಲ. ನಮ್ಮ ಪುರುಷ ಪ್ರಧಾನ ಸಮಾಜ ಮಹಿಳೆಯರಿಗೆ ರಾಜಕೀಯವಾಗಿ ಹೆಚ್ಚಿನ ಅವಕಾಶ ನೀಡಲು ತಯಾರಿಲ್ಲ. ಮಹಿಳೆಯರ ಜೊತೆ ಅಧಿಕಾರವನ್ನು ಹಂಚಿಕೊಳ್ಳಲು ರಾಜಕೀಯದಲ್ಲಿ ಪ್ರಾಬಲ್ಯ ಗಳಿಸಿರುವ ಪುರುಷರು ಸಿದ್ಧವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್‌ಗಳಲ್ಲಿ ಮಹಿಳೆಯರು ಚುನಾಯಿತರಾಗಿ ದಕ್ಷ ಆಡಳಿತ ನೀಡಿ ಸಾಧನೆಯನ್ನು ತೋರಿಸಿಕೊಟ್ಟಿದ್ದಾರೆ. ಆದರೂ ಪುರುಷಾಧಿಪತ್ಯದ ಸಮಾಜ ಮಹಿಳೆಯರಿಗೆ ಹೆಚ್ಚು ಅವಕಾಶ ನೀಡುವ ಇಚ್ಛಾಶಕ್ತಿಯನ್ನು ತೋರಿಸುತ್ತಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಪುರುಷರಿಗೆ ಕಡಿಮೆಯಿಲ್ಲದಂತೆ ಶೇ. 66ರಷ್ಟು ಮತದಾನ ಮಾಡಿದ್ದಾರೆ. ಚುನಾಯಿತ ಸರಕಾರಗಳೇನೋ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ರೂಪಿಸುತ್ತ ಬಂದಿವೆ. ಇಂತಹ ಯೋಜನೆಗಳು ಮಹಿಳೆಯರ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ರೂಪಿಸಿದ ಯೋಜನೆಗಳೆನ್ನುವುದರಲ್ಲಿ ಹುರುಳಿಲ್ಲದಿಲ್ಲ. ಪುರುಷ ಪ್ರಧಾನ ಸಮಾಜ ಮಹಿಳೆಯರಿಗೆ ಸಮಾನಾವಕಾಶ ನೀಡಲು ಈಗಲೂ ತಯಾರಿಲ್ಲ.ಮನುವಾದಿ ಮನಸ್ಸುಗಳು ಆಡಳಿತಾಂಗದ ಆಯಕಟ್ಟಿನ ಜಾಗಗಳಲ್ಲಿ ಕುಳಿತು ಮಹಿಳೆಯರು ಮುಂದೆ ಬರದಂತೆ ನೋಡಿಕೊಳ್ಳುತ್ತ ಬಂದಿವೆ. ಕೇಂದ್ರದಲ್ಲಿ ಈಗ ಅಧಿಕಾರದಲ್ಲಿರುವ ಪಕ್ಷದ ಸೈದ್ಧಾಂತಿಕ ಮೂಲವೂ ಮಹಿಳಾ ವಿರೋಧಿ ಹಿನ್ನೆಲೆಯನ್ನು ಹೊಂದಿದೆ ಅಂದರೆ ತಪ್ಪಿಲ್ಲ.
ಮಹಿಳೆಯರ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲೆಂದೇ ‘ಉಜ್ವಲಾ’ ಎಂಬ ಯೋಜನೆಯನ್ನು ನರೇಂದ್ರ ಮೋದಿಯವರ ನೇತೃತ್ವದ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿತು. ಈ ‘ಉಜ್ವಲಾ’ ಯೋಜನೆಯಲ್ಲಿ ಮೊದಲ ಸಿಲಿಂಡರನ್ನು ಉಚಿತವಾಗಿ ಕೊಟ್ಟು ದೊಡ್ಡ ಪ್ರಚಾರವನ್ನು ಪಡೆಯಲಾಯಿತು. ಆದರೆ ಇದರ ಫಲಾನುಭವಿಗಳಾದ ಗ್ರಾಮೀಣ ಪ್ರದೇಶದ ಬಡ ಮಹಿಳೆಯರಿಗೆ ಎರಡನೇ ಸಿಲಿಂಡರನ್ನು ಹಣ ಕೊಟ್ಟು ತುಂಬಿಸಿಕೊಳ್ಳಲಾಗಲಿಲ್ಲ. ಇಂಥ ಆಸೆ, ಆಮಿಷಗಳನ್ನು ಒಡ್ಡಿ ಮಹಿಳೆಯರ ಮತಗಳನ್ನು ಪಡೆದು ಲೋಕಸಭೆಯನ್ನು ಪ್ರವೇಶಿಸುವ ಪುರುಷರು ರಾಜಕೀಯ ಅಧಿಕಾರವನ್ನು ಮಹಿಳೆಯರ ಜೊತೆ ಹಂಚಿಕೊಳ್ಳಲು ಬಯಸುತ್ತಾರೆಯೇ?.
ಅನೇಕ ಬಾರಿ ಮಹಿಳೆಯರು ತಮ್ಮ ಅಸ್ಮಿತೆಯನ್ನು ಮರೆತು ಕೋಮುವಾದಿ, ಜಾತಿವಾದಿ ಹಾಗೂ ಮನುವಾದಿ ಪಕ್ಷಗಳಿಗೆ, ವ್ಯಕ್ತಿಗಳಿಗೆ ಮತ ಹಾಕಿ ಅವರಿಗೆ ರಾಜಕೀಯ ಅಧಿಕಾರವನ್ನು ನೀಡಿದ ಉದಾಹರಣೆಗಳಿವೆ. ಇತ್ತೀಚೆಗೆ ನಡೆದ ಕರ್ನಾಟಕ ಮತ್ತು ಒಡಿಶಾದ ಲೋಕಸಭಾ ಚುನಾವಣಾ ಫಲಿತಾಂಶ ಇದಕ್ಕೆ ಉದಾಹರಣೆಯಾಗಿದೆ.
ಪುರುಷ ಪ್ರಧಾನ ಸಮಾಜದ ಈ ಮನಸ್ಥಿತಿಯನ್ನು ಗಮನಿಸಿದರೆ ಮುಂದಿನ ಲೋಕಸಭಾ ಚುನಾವಣೆಯ ವೇಳೆಗಾದರೂ ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ಬರುವ ಗ್ಯಾರಂಟಿ ಇಲ್ಲ. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವಾಗ ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು ಹಾಗೂ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಮಹಿಳೆಯರಿಗೆ ನ್ಯಾಯ ಸಮ್ಮತವಾದ ಒಳ ಮೀಸಲಾತಿ ನೀಡಬೇಕು. ಇಲ್ಲವಾದರೆ ಸದನದಲ್ಲಿ ಪ್ರಭಾವಿ ಕುಟುಂಬಗಳ ಸಿರಿವಂತ ಮಹಿಳೆಯರೇ ವಿಜೃಂಭಿಸುತ್ತಾರೆ. ಹಾಗಾಗದಂತೆ ನೋಡಿಕೊಳ್ಳಬೇಕು