ಉಲ್ಬಣಿಸುತ್ತಿರುವ ಡೆಂಗಿ: ತಕ್ಷಣ ನಿಯಂತ್ರಣ ಅಗತ್ಯ

Update: 2024-07-09 04:00 GMT

ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಮಾರಕ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ರವಿವಾರ 159 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. 35 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ವ್ಯಾಪಿಸುತ್ತಿರುವ ಡೆಂಗಿಯಿಂದ ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ತತ್ತರಿಸಿ ಹೋಗಿವೆ. ಬೆಂಗಳೂರು ಮಹಾನಗರವೊಂದರಲ್ಲೇ 1,200ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವರದಿಯಾಗಿರುವ ಪ್ರಕರಣಗಳ ಸಂಖ್ಯೆ ಜಾಸ್ತಿ. ಸಂಬಂಧಿಸಿದವರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ.ಮಳೆಗಾಲದಲ್ಲಿ ಸಾಮಾನ್ಯವಾಗಿ ಡೆಂಗಿ ಉಲ್ಬಣಗೊಳ್ಳುತ್ತದೆ. ಅಲ್ಲಲ್ಲಿ ಖಾಲಿ ತೊಟ್ಟಿ, ತಗ್ಗು ಪ್ರದೇಶಗಳಲ್ಲಿ ನೀರು ನಿಂತಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚುವುದರಿಂದ ಡೆಂಗಿ ಉಲ್ಬಣಗೊಳ್ಳುತ್ತದೆ. ಇದು ಪ್ರತಿವರ್ಷದ ಹಾವಳಿ.

ಡೆಂಗಿ ಪರಿಣಾಮವಾಗಿ ಸೊಳ್ಳೆಗಳ ಉತ್ಪತ್ತಿಯಾಗಿ ಆ ಸೊಳ್ಳೆಗಳು ಕಚ್ಚುವುದರಿಂದ ರಕ್ತದೊತ್ತಡದಲ್ಲಿ ಒಮ್ಮಿಂದೊಮ್ಮೆಲೇ ಇಳಿಕೆ, ಆಂತರಿಕ ರಕ್ತಸ್ರಾವ, ಇದ್ದಕ್ಕಿದ್ದಂತೆ ಜ್ವರ, ವಸಡು ಮತ್ತು ಮೂಗಿನಲ್ಲಿ ರಕ್ತಸ್ರಾವ, ಮಾಂಸ ಖಂಡ ಮತ್ತು ಕೀಲುಗಳಲ್ಲಿ ನೋವು, ವಿಪರೀತ ತಲೆನೋವು, ಉಸಿರಾಟದಲ್ಲಿ ತೊಂದರೆ ಮತ್ತು ದೈಹಿಕ ಆಯಾಸ ಕಾಣಿಸಿಕೊಳ್ಳುತ್ತದೆ. ಈ ರೋಗದ ಲಕ್ಷಣಗಳನ್ನು ಅರಿತು ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂಬುದು ತಜ್ಞ ವೈದ್ಯರ ಸಲಹೆಯಾಗಿದೆ.

ರಾಜ್ಯದಲ್ಲಿ ಈವರೆಗೆ ಐದೂವರೆ ಸಾವಿರಕ್ಕೂ ಹೆಚ್ಚು ಡೆಂಗಿ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಬಹುತೇಕ ಪ್ರಕರಣಗಳು ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪತ್ತೆಯಾಗಿವೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೂ ಡೆಂಗಿಯಿಂದ ಬಾಧಿತರಾಗಿದ್ದಾರೆ ಎಂಬುದು ಇದರ ತೀವ್ರತೆಗೆ ಉದಾಹರಣೆಯಾಗಿದೆ. ಇದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡೆಂಗಿ ನಿಯಂತ್ರಣದ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಡೆಂಗಿಯನ್ನು ನಿಯಂತ್ರಿಸಲು ಅಗತ್ಯ ಪ್ರಮಾಣದ ಚುಚ್ಚುಮದ್ದು ಮತ್ತು ಪ್ಲೇಟ್ ಲೆಟ್‌ಗಳನ್ನು ಸಂಗ್ರಹಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ. ಆದರೆ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇಂಥ ಸಂದರ್ಭದಲ್ಲಿ ಡೆಂಗಿ ತುರ್ತುಪರಿಸ್ಥಿತಿ ಘೋಷಿಸುವಂತೆ ಸಲಹೆಗಳೂ ಬಂದಿವೆ. ಇದಕ್ಕಾಗಿ ರಾಜ್ಯಾದ್ಯಂತ ಸರಕಾರಿ ಆಸ್ಪತ್ರೆಗಳನ್ನು ಸಜ್ಜುಗೊಳಿಸಬೇಕಾಗಿದೆ. ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿ ಗಳು ಮನೆ ಮನೆಗೆ ಹೋಗಿ ಡೆಂಗಿ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.

ಮಳೆಗಾಲದಲ್ಲಿ ಡೆಂಗಿ ಉಲ್ಬಣಗೊಳ್ಳುತ್ತದೆ ಎಂಬುದು ಗೊತ್ತಿದ್ದರೂ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಇತರ ನಗರಪಾಲಿಕೆಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ.ಮಳೆಗಾಲದಲ್ಲಿ ಮಳೆ ನೀರು ನಿಲ್ಲುವ ಜಾಗಗಳಲ್ಲಿ ಸೊಳ್ಳೆಗಳ ಸಂತತಿ ಜಾಸ್ತಿಯಾಗಿ ಡೆಂಗಿ ವ್ಯಾಪಕವಾಗಿ ಹಬ್ಬುತ್ತದೆ ಎಂದು ಗೊತ್ತಿದ್ದರೂ ರಸ್ತೆ ಗಳಲ್ಲಿ, ತಗ್ಗುಗಳಲ್ಲಿ, ನೀರು ನಿಲ್ಲದಂತೆ ನೋಡಿಕೊಳ್ಳುವಲ್ಲಿ ನಗರ ಪಾಲಿಕೆಗಳು ವಿಫಲಗೊಂಡಿವೆ. ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ಹಾಗೂ ಮೋರಿಗಳನ್ನು ಸುಸ್ಥಿತಿಯಲ್ಲಿಡಲು ಬಿಬಿಎಂಪಿ ಸೇರಿದಂತೆ ಬಹುತೇಕ ನಗರ ಪಾಲಿಕೆಗಳು ವಿಫಲವಾಗಿವೆ.

ಡೆಂಗಿಯನ್ನು ನಿಯಂತ್ರಿಸಲು ಸೂಕ್ತ ಚಿಕಿತ್ಸಾ ಕ್ರಮಗಳನ್ನು ಕೈಗೊಂಡರೆ ಮಾತ್ರ ಸಾಲದು, ಅದು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಬೇಕು.ಕೆಲವು ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ರೋಗಿಗಳಿಂದ ಹಣವನ್ನು ಸುಲಿಗೆ ಮಾಡುತ್ತಿವೆ ಎಂದು ವರದಿಗಳಿಂದ ತಿಳಿದು ಬರುತ್ತದೆ. ಮನುಷ್ಯತ್ವವನ್ನು ಮರೆತು ಹಣ ಲೂಟಿ ಮಾಡುತ್ತಿರುವ ಇಂಥ ಖಾಸಗಿ ಆಸ್ಪತ್ರೆಗಳ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕು.

ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕುಗಳು, ತೆರೆದ ತೊಟ್ಟಿಗಳು ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ನೀರು ಶೇಖರಣೆ ಮಾಡುವ ತೊಟ್ಟಿಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವುದು ಅಗತ್ಯವಾಗಿದೆ. ಮನೆ, ಅಂಗಡಿಗಳ ಮುಂದೆ, ಹೊಟೇಲ್ ಮತ್ತು ವಾಣಿಜ್ಯ ಸಂಕೀರ್ಣಗಳ ಬಳಿ ಬಹಳ ಕಾಲ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು.

ಡೆಂಗಿಯನ್ನು ಹರಡುವ ಈಡಿಸ್ ಸೊಳ್ಳೆಗಳು ಮನೆಯಲ್ಲಿನ ನೀರಿನ ತೊಟ್ಟಿ, ಬ್ಯಾರಲ್, ಡ್ರಮ್‌ಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಹಾಗಾಗಿ ಸದರಿ ನೀರಿನ ತೊಟ್ಟಿ, ಬ್ಯಾರಲ್, ಡ್ರಮ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛ ವಾಗಿಡಬೇಕು. ಹೂವಿನ ಕುಂಡದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.

ಪ್ರತೀ ವರ್ಷ ಮಳೆಗಾಲದಲ್ಲಿ ಡೆಂಗಿ ಹಾವಳಿ ವಿಪರೀತವಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಆರೋಗ್ಯ ಇಲಾಖೆ ಮತ್ತು ನಗರ ಪಾಲಿಕೆಗಳು ಪರಿಸ್ಥಿತಿ ಕೈ ಮೀರುವ ಹಂತದಲ್ಲಿ ಒಮ್ಮ್ಮೆಲೇ ಎಚ್ಚೆತ್ತುಕೊಳ್ಳುತ್ತವೆ. ರಸ್ತೆಯಲ್ಲಿ ಮಳೆ ನೀರು ನಿಂತರೆ ಡೆಂಗಿ ಸೊಳ್ಳೆಗಳು ಕಾಣಿಸಿಕೊಳ್ಳುತ್ತವೆ. ಹೀಗೆ ನೀರು ನಿಲ್ಲಲು ಯಾರು ಹೊಣೆ? ಮಳೆ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಇತರ ನಗರ ಪಾಲಿಕೆಗಳು ಯಾಕೆ ಮುಂದಾಗುವುದಿಲ್ಲ. ಇದಕ್ಕಾಗಿ ಮುಖ್ಯಮಂತ್ರಿಗಳೇ ಸಭೆ ಕರೆದು ಎಚ್ಚರಿಕೆ ನೀಡಬೇಕೇ?

ಬೆಂಗಳೂರಿನಲ್ಲಂತೂ ಡೆಂಗಿ ಹಾವಳಿ ವಿಪರೀತವಾಗಿದೆ. ಇಂಥ ಸಂದರ್ಭದಲ್ಲಿ ಡೆಂಗಿ ವರದಿಯಾದ ಪ್ರದೇಶಗಳಲ್ಲಿ ಔಷಧಿ ಸಿಂಪಡಿಸಲು ಬಿಬಿಎಂಪಿ ಹಿಂದೆ ಮುಂದೆ ನೋಡಬಾರದು. ಪಾಲಿಕೆ ಮಾತ್ರವಲ್ಲ ಆರೋಗ್ಯ ಇಲಾಖೆಯಲ್ಲೂ ಬಿಕ್ಕಟ್ಟಿನ ಸಂದರ್ಭಗಳನ್ನು ಎದುರಿಸುವ ಯೋಜನೆಗಳಿಲ್ಲ ಎಂಬುದು ಕೋವಿಡ್ ವಿಪರೀತವಾಗಿ ಹರಡಿದಾಗ ಸಾಬೀತಾಯಿತು. ಇನ್ನು ಮುಂದಾದರೂ ಹೀಗಾಗದಂತೆ ಕ್ರಮ ವಹಿಸಲಿ.

ಜನಸಾಮಾನ್ಯರ ಆರೋಗ್ಯದ ಬಗ್ಗೆ ಆಡಳಿತಯಂತ್ರ ನಿರ್ಲಕ್ಷ್ಯ ಧೋರಣೆಯನ್ನು ತಾಳಬಾರದು. ದುಬಾರಿ ಖರ್ಚು, ವೆಚ್ಚಗಳಿಗೆ ಹೆದರಿ ಜನರು ಸ್ವಯಂ ಚಿಕಿತ್ಸಾ ಕ್ರಮಗಳು ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು. ಜನರ ಆರೋಗ್ಯ ರಕ್ಷಣೆ ಸರಕಾರದ ಹೊಣೆಗಾರಿಕೆ ಯಾಗಿದೆ.

ಇಂಥ ಸಂದರ್ಭದಲ್ಲಿ ಬರೀ ಆಡಳಿತ ಯಂತ್ರದ ಲೋಪಗಳನ್ನು ಟೀಕಿಸಿದರೆ ಸಾಲದು. ಸಾರ್ವಜನಿಕರೂ ತಮ್ಮ ಸುತ್ತಮುತ್ತಲಿನ ಪರಿಸರ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ಡೆಂಗಿ ಅಪಾಯದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಅಭಿಯಾನ ನಡೆಯಬೇಕಾಗಿದೆ. ಧಾರ್ಮಿಕ ಕೇಂದ್ರಗಳು ಕೂಡ ಇಂಥ ಸಂದರ್ಭದಲ್ಲಿ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News