ಆತ್ಮಹತ್ಯೆಯಲ್ಲಿ ‘ಅಭಿವೃದ್ಧಿ’!

Update: 2023-12-16 04:24 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ದೇಶದಲ್ಲಿ ನಡೆಯುತ್ತಿರುವ ಗಂಭೀರ ಅಪರಾಧವೊಂದರ ಕಡೆಗೆ ಬೆಳಕು ಚೆಲ್ಲಿದೆ. ಆ ಅಪರಾಧವೇ ಆತ್ಮಹತ್ಯೆಗಳು. ‘ಪ್ರತೀ ಆತ್ಮಹತ್ಯೆಯೂ ವ್ಯವಸ್ಥೆ ನಡೆಸುವ ಕೊಲೆ’ ಎಂದು ಚಿಂತಕರೊಬ್ಬರು ಹೇಳುತ್ತಾರೆ. ಸಾಧಾರಣವಾಗಿ ಈ ದೇಶದಲ್ಲಿ ಆತ್ಮಹತ್ಯೆಗಳಿಗೆ ಸ್ವತ್ವಃ ಆತ್ಮಹತ್ಯೆಗೈದವರನ್ನೇ ಹೊಣೆಯಾಗಿಸಿಕೊಂಡು, ವ್ಯವಸ್ಥೆ ತನಗೆ ತಾನೇ ಕ್ಲೀನ್ ಚಿಟ್ ನೀಡಿಕೊಂಡು ಬಂದಿದೆ. ದೇಶದ ಇತಿಹಾಸದಲ್ಲೇ ಮೊದಲಬಾರಿಗೆ, ಕೆಲ ದಿನಗಳ ಹಿಂದೆ ಸಂಸತ್‌ನಲ್ಲಿ ಸಭಾಧ್ಯಕ್ಷ ಜಗದೀಪ್ ಧನ್ಕರ್ ಅವರು ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿಗಳ ಆತ್ಮಹತ್ಯೆಯ ಕುರಿತ ಚರ್ಚೆಯೆನ್ನುವುದು ಪರೋಕ್ಷವಾಗಿ ಈ ದೇಶದ ಶಿಕ್ಷಣ ವ್ಯವಸ್ಥೆಯ ವೈಫಲ್ಯದ ಚರ್ಚೆಯೂ ಆಗಿದೆ. ಭವಿಷ್ಯಕ್ಕಾಗಿ ಯುವಕರು ನಡೆಸುತ್ತಿರುವ ಸಂಘರ್ಷಮಯ ಬದುಕನ್ನು ಅದು ದೇಶದ ಮುಂದಿಡುತ್ತದೆ.

ದೈಹಿಕ ಆರೋಗ್ಯದ ಬಗ್ಗೆ ಚರ್ಚೆ ನಡೆದಷ್ಟು ಮಾನಸಿಕ ಆರೋಗ್ಯದ ಕುರಿತಂತೆ ಚರ್ಚೆಗಳು ನಡೆಯದಿರುವುದು ಮತ್ತು ಆರೋಗ್ಯ ವ್ಯವಸ್ಥೆ ಮಾನಸಿಕ ರೋಗಗಳನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು ಆತ್ಮಹತ್ಯೆಯ ಸಂಖ್ಯೆ ಹೆಚ್ಚುವುದಕ್ಕೆ ಪ್ರಮುಖ ಕಾರಣವಾಗಿದೆ. ಕೊರೋನೋತ್ತರ ದಿನಗಳಲ್ಲಿ ಎದುರಾದ ಆರ್ಥಿಕ ಅಭದ್ರತೆ ಹಲವರನ್ನು ಖಿನ್ನತೆಗೆ ತಳ್ಳಿದೆ. ಕೊರೋನ ತಂದಿಟ್ಟ ಕರಾಳ ಭವಿಷ್ಯ ಹಲವರನ್ನು ಮಾನಸಿಕ ರೋಗಿಗಳನ್ನಾಗಿಸಿದೆ. ಇದೇ ಸಂದರ್ಭದಲ್ಲಿ ಆರ್ಥಿಕ ಕಾರಣಗಳಿಗಾಗಿ ಆತ್ಮಹತ್ಯೆಗೆ ತಳ್ಳಲ್ಪಡುತ್ತಿದ್ದ ರೈತರು ಮತ್ತು ಕಾರ್ಮಿಕರ ಸ್ಥಿತಿ ಇಂದು ಇನ್ನಷ್ಟು ಭೀಕರವಾಗಿದೆ. ಈ ದೇಶದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳಿಗೆ ನೇರ ಹೊಣೆ ಸರಕಾರ ತೆಗೆದುಕೊಳ್ಳುತ್ತಿರುವ ತಲೆಬುಡವಿಲ್ಲದ ಆರ್ಥಿಕ ನಿರ್ಧಾರಗಳೇ ಆಗಿವೆ. ಆದುದರಿಂದ ಆತ್ಮಹತ್ಯೆಗಳಿಗಾಗಿ ಸಂತ್ರಸ್ತರನ್ನೇ ಅಪರಾಧಿಗಳನ್ನಾಗಿಸುವುದು ಇನ್ನಾದರೂ ನಿಲ್ಲಬೇಕಾಗಿದೆ. ಈ ಆತ್ಮಹತ್ಯೆಯಲ್ಲಿ ತನ್ನ ಪಾಲೆಷ್ಟು ಎನ್ನುವುದನ್ನು ಸರಕಾರ ಚಿಂತಿಸಬೇಕಾಗಿದೆ.

ತಾನು ರೈತರು ಮತ್ತು ಕಾರ್ಮಿಕರ ಅಭಿವೃದ್ಧಿ ಮಾಡಿದ್ದೇನೆ ಎಂಬುದಾಗಿ ಕೇಂದ್ರ ಸರಕಾರವು ಕಳೆದ ಹಲವು ವರ್ಷಗಳಿಂದ ದೊಡ್ಡ ಧ್ವನಿಯಲ್ಲಿ ಹೇಳಿಕೊಳ್ಳುತ್ತಿದೆ. ಇತ್ತೀಚಿನ ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ರೈತರು ಮತ್ತು ಕಾರ್ಮಿಕರ ಆತ್ಮಹತ್ಯೆಗಳು ಹೆಚ್ಚುತ್ತಿವೆ.ಈ ಅಂಕಿಅಂಶಗಳ ಪ್ರಕಾರ, 2022ರಲ್ಲಿ ದೇಶದಲ್ಲಿ 1,70,924 ಆತ್ಮಹತ್ಯೆಗಳು ನಡೆದಿವೆ. ಒಂದು ವರ್ಷ ಹಿಂದೆ ಹೋದರೆ, ಅಂದರೆ 2021ರಲ್ಲಿ ಈ ಸಂಖ್ಯೆ 1,64,033 ಆಗಿತ್ತು. ಅಂದರೆ, 2021ಕ್ಕೆ ಹೋಲಿಸಿದರೆ 2022ರಲ್ಲಿ ಆತ್ಮಹತ್ಯೆಗಳ ಸಂಖ್ಯೆಯಲ್ಲಿ 4.2 ಶೇಕಡ ಹೆಚ್ಚಳವಾಗಿದೆ.

ಆದರೂ, ಹೆಚ್ಚಿನ ಪ್ರಕರಣಗಳಲ್ಲಿ, ಕಾರ್ಮಿಕರು ಕೌಟುಂಬಿಕ ಸಮಸ್ಯೆಗಳು ಮತ್ತು ಕಾಯಿಲೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ವರದಿ ಹೇಳಿದೆ. ಕಾರ್ಮಿಕರ ಆತ್ಮಹತ್ಯೆಗಳಿಗೆ ಕೌಟುಂಬಿಕ ಸಮಸ್ಯೆಗಳು 31.7 ಶೇಕಡ ಕಾರಣವಾದರೆ, ಕಾಯಿಲೆಗಳು 18.4 ಶೇಕಡ ಕಾರಣವಾಗಿವೆ. ಅದೇ ವೇಳೆ, ನಿರುದ್ಯೋಗ 1.9 ಶೇಕಡ ಕಾರಣವಾದರೆ, ವೃತ್ತಿ ಸಮಸ್ಯೆಗಳು1.2 ಶೇಕಡದಷ್ಟು ಕಾರಣವಾಗಿವೆ. ಆದರೆ ಇವೆಲ್ಲವೂ ನೇರವಾಗಿ ಹೆಚ್ಚುತ್ತಿರುವ ನಿರುದ್ಯೋಗಗಳೊಂದಿಗೆ ತಳಕು ಹಾಕಿಕೊಂಡಿದೆ. ಕೌಟುಂಬಿಕ ಸಮಸ್ಯೆಗಳಿಗೆ ಕಾರ್ಮಿಕನ ಆರ್ಥಿಕ ಸ್ಥಿತಿಗತಿಗಳು ಮೊತ್ತ ಮೊದಲ ಕಾರಣ ಎನ್ನುವುದನ್ನು ನಾವು ಮರೆಯಬಾರದು. ಕಾಯಿಲೆಗಳಿಂದಾಗಿ ಆತ್ಮಹತ್ಯೆಗೈಯುತ್ತಿರುವ ಕಾರ್ಮಿಕರು ಈ ದೇಶದ ಆರೋಗ್ಯ ವ್ಯವಸ್ಥೆಯ ದೈನೇಸಿ ಸ್ಥಿತಿಗೆ ಸಾಕ್ಷಿಯಾಗಿದ್ದಾರೆ. ಎನ್‌ಸಿಆರ್‌ಬಿ ವರದಿಯ ಪ್ರಕಾರ, ಮಹಾರಾಷ್ಟ್ರದಲ್ಲಿ ಸತತ ಮೂರನೇ ವರ್ಷ ಅತಿ ಹೆಚ್ಚು ಸಂಖ್ಯೆಯ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಧ್ಯಪ್ರದೇಶಗಳಿವೆ.

ದೇಶದ ಒಟ್ಟು ಆತ್ಮಹತ್ಯೆಗಳ ಪೈಕಿ ಮೂರನೇ ಒಂದರಷ್ಟು ಆತ್ಮಹತ್ಯೆಗಳು ರೈತರು ಮತ್ತು ಕೃಷಿ ಕಾರ್ಮಿಕರದ್ದಾಗಿದೆ. ಅದರ ನಂತರದ ಸ್ಥಾನದಲ್ಲಿರುವುದು ದಿನಗೂಲಿ ಕಾರ್ಮಿಕರು. ದಿನಗೂಲಿ ಕಾರ್ಮಿಕರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ 44,713. ಇದು ಒಟ್ಟು ಸಂಖ್ಯೆಯ 26.4 ಶೇಕಡ ಆಗಿದೆ. ಈ ಸಂಖ್ಯೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ 1ಶೇ.ದಷ್ಟು ಅಧಿಕವಾಗಿದೆ. 2022ರ ಎನ್‌ಸಿಆರ್‌ಬಿ ವರದಿಯಲ್ಲಿ, ದೊಡ್ಡ ವೃತ್ತಿಗಳಲ್ಲಿ ತೊಡಗಿಸಿಕೊಂಡವರು ಆತ್ಮಹತ್ಯೆ ಮಾಡಿಕೊಂಡ ಪ್ರಮಾಣ 9.2 ಶೇಕಡ. ಇದರಲ್ಲಿ 14,395 ಮಂದಿ ತಿಂಗಳ ಸಂಬಳ ಪಡೆಯುವ ನೌಕರರು ಮತ್ತು 18,357 ಮಂದಿ ಸ್ವಉದ್ಯೋಗದಲ್ಲಿ ತೊಡಗಿಸಿಕೊಂಡವರು. ನಿರುದ್ಯೋಗದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯೂ ಕಡಿಮೆಯೇನಿಲ್ಲ. ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಅವರ ಪಾಲು 9.2 ಶೇಕಡ. ನಿರುದ್ಯೋಗದಿಂದ ಬಸವಳಿದು 2021ರಲ್ಲಿ 3,541 ಮಂದಿ ಆತ್ಮಹತ್ಯೆ ಮಾಡಿಕೊಂಡರೆ, 2022ರಲ್ಲಿ 3,170 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೇಶಾದ್ಯಂತ ಆತ್ಮಹತ್ಯೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಹಲವು ವರ್ಷಗಳಿಂದ ಜನರ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಆದರೆ, ಅದೇ ಸಂದರ್ಭದಲ್ಲಿ, ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಇದರ ಜೊತೆಗೆ, ನಿರುದ್ಯೋಗವೂ ದಿನೇ ದಿನೇ ಏರುತ್ತಿದೆ. ಇವುಗಳೆಲ್ಲದರ ಪರಿಣಾಮವಾಗಿ, ಜನರ ಉಳಿತಾಯವು 5 ಶೇಕಡದಷ್ಟು ಕುಸಿದಿದೆ.ಹೆಚ್ಚಿನವರು ಕೌಟುಂಬಿಕ ಕಾರಣಗಳಿಂದಾಗಿ ಅಥವಾ ಕಾಯಿಲೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಎನ್‌ಸಿಆರ್‌ಬಿ ಅಂಕಿಅಂಶಗಳು ಹೇಳಿದರೆ, ಆರ್ಥಿಕ ಬಿಕ್ಕಟ್ಟು ಕೂಡ ಪ್ರಮುಖ ಕಾರಣಗಳ ಪೈಕಿ ಒಂದಾಗಿದೆ.ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡವರ ಪೈಕಿ 64.3 ಶೇಕಡಷ್ಟು, ಅಂದರೆ 1,09,875 ಜನರ ವಾರ್ಷಿಕ ಆದಾಯ ಒಂದು ಲಕ್ಷ ರೂ.ಗಿಂತಲೂ ಕಡಿಮೆಯಿತ್ತು.ಕಳೆದ ಐದು ವರ್ಷಗಳ ಅವಧಿಯಲ್ಲಿ, ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯಲ್ಲಿ ಅಗಾಧ, ಅಂದರೆ 27.06 ಶೇಕಡದಷ್ಟು ಹೆಚ್ಚಳವಾಗಿದೆ. ಆತ್ಮಹತ್ಯೆಗಳ ಪ್ರಮಾಣ ಹಳ್ಳಿಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ 16.4 ಶೇಕಡದಷ್ಟು ಹೆಚ್ಚಾಗಿದೆ.

ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, ಪ್ರತೀ ವರ್ಷದಂತೆ ಈ ಬಾರಿಯೂ ಮಹಿಳೆಯರ ವಿರುದ್ಧದ ಹಿಂಸಾಚಾರ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ.2022ರಲ್ಲಿ, 4,45,256 ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ವರದಿಯಾಗಿವೆ. ಈ ಸಂಖ್ಯೆಯು 2021ರಲ್ಲಿ 4,28,278 ಮತ್ತು 2020ರಲ್ಲಿ 3,71,503 ಆಗಿತ್ತು.2022ರ ಅಂಕಿಅಂಶವನ್ನು ವಿಶ್ಲೇಷಿಸುವುದಾದರೆ, ಮಹಿಳೆಯರ ವಿರುದ್ಧ ಪ್ರತೀ ಗಂಟೆಗೆ ಸುಮಾರು 51 ಅಪರಾಧಗಳು ನಡೆದಿವೆ. 2022ರಲ್ಲಿ, ಉತ್ತರಪ್ರದೇಶದಲ್ಲಿ ಅತ್ಯಧಿಕ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವರದಿ ಹೇಳುತ್ತದೆ. ರಾಜ್ಯದಲ್ಲಿ 65,743 ಪ್ರಕರಣಗಳು ದಾಖಲಾಗಿವೆ. ಬಿಜೆಪಿ ಆಳ್ವಿಕೆಯ ರಾಜ್ಯದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರಿಂದ ಹಿಡಿದು ಕೇಂದ್ರ ಗೃಹ ಸಚಿವ ಅಮಿತ್ ಶಾವರೆಗೆ ಬಿಜೆಪಿ ನಾಯಕರು ಮಹಿಳೆಯರ ಸುರಕ್ಷತೆ ಬಗ್ಗೆ ಭಾಷಣಗಳನ್ನು ಮಾಡುತ್ತಾರೆ. ಅಲ್ಲಿ ಮಹಿಳೆಯರಿಗಾಗಿ ಮಿಶನ್ ಶಕ್ತಿಯಿಂದ ಹಿಡಿದು ಸೇಫ್ ಸಿಟಿ ಕಾರ್ಯಕ್ರಮಗಳನ್ನು ಭಾರೀ ಪ್ರಚಾರದೊಂದಿಗೆ ಜಾರಿಗೆ ತರಲಾಗಿದೆ. ಆದರೆ, ಮಹಿಳೆಯರ ಅಭದ್ರತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಆತ್ಮಹತ್ಯೆಯ ಅಂಕಿಸಂಖ್ಯೆಗಳು ಸರಕಾರದ ಅಭಿವೃದ್ಧಿ ಸಂಬಂಧಿತ ಸುಳ್ಳು ಹೇಳಿಕೆಗಳನ್ನು ಬಯಲಿಗೆಳೆದಿವೆ. ಮೊದಲು, ಹಳ್ಳಿಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಅಂದು ಕಾರ್ಮಿಕರ ಆತ್ಮಹತ್ಯೆ ಪ್ರಕರಣಗಳು ವಿರಳವಾಗಿದ್ದವು. ಕಾರ್ಮಿಕರು ನಗರಕ್ಕೆ ವಲಸೆ ಹೋಗಿ ಯಾವುದೇ ಕೆಲಸ ಮಾಡಿಯಾದರೂ ತಮ್ಮ ಜೀವನೋಪಾಯವನ್ನು ಸಂಪಾದಿಸಿಕೊಳ್ಳುತ್ತಿದ್ದರು. ಆದರೆ, ಕಳೆದ ಕೆಲವು ವರ್ಷಗಳಿಂದ ಅವರ ಕಣ್ಣೆದುರೇ ನಿರುದ್ಯೋಗವು ಬೃಹದಾಕಾರವಾಗಿ ತಲೆಎತ್ತಿದೆ. ಈಗ ಕಾರ್ಮಿಕರೂ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ದೊಡ್ಡ ನಗರಗಳಲ್ಲಿ ಕಾರ್ಮಿಕರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಮಹಿಳಾ ಸಬಲೀಕರಣದಲ್ಲಿ ಸರಕಾರ ಯಶಸ್ವಿಯಾಗಿದೆ ಎಂದು ಕೊಚ್ಚಿಕೊಳ್ಳುತ್ತಿದೆ. ಹಾಗಾದರೆ ಮಹಿಳೆಯರ ಆತ್ಮಹತ್ಯೆಗಳು ಯಾಕೆ ಹೆಚ್ಚುತ್ತಿವೆ ಎನ್ನುವ ಪ್ರಶ್ನೆಗೆ ಮಾತ್ರ ಸರಕಾರ ಮೌನವಾಗಿದೆ. ಈ ಮೌನ ಇನ್ನಷ್ಟು ಆತ್ಮಹತ್ಯೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಭಾರತದಲ್ಲಿ ಅಭಿವೃದ್ಧಿಯೇ ಆತ್ಮಹತ್ಯೆಯ ಕಡೆಗೆ ವಾಲುತ್ತಿದೆಯೋ ಅಥವಾ ಆತ್ಮಹತ್ಯೆಯನ್ನೇ ಅಭಿವೃದ್ಧಿಯೆಂದು ಸರಕಾರ ಭಾವಿಸಿದೆಯೇ ಎನ್ನುವುದರ ಬಗ್ಗೆ ಜನತೆ ಗೊಂದಲದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News