ಕತ್ತಿ ಪರದೇಶಿಯಾದರೆ ಮಾತ್ರ ನೋವೆ?

Update: 2023-08-14 05:21 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಂದೆಡೆ ಬ್ರಿಟಿಷ್ ಕಾಲದ ದೇಶದ್ರೋಹದ ಕಾನೂನುಗಳನ್ನು ಬಳಸಿಕೊಂಡು ಈ ದೇಶದ ಸಾಮಾಜಿಕ ಹೋರಾಟಗಾರರನ್ನು ಬಂಧಿಸಿ ಸರಕಾರ ಜೈಲಿಗೆ ತಳ್ಳುವುದರಲ್ಲಿ ಅತ್ಯಾಸಕ್ತಿಯನ್ನು ಹೊಂದಿದೆ. ಇನ್ನೊಂದೆಡೆ ದೇಶಾದ್ಯಂತ ಗುಂಪು ಹತ್ಯೆಗಳು ವಿಜೃಂಭಿಸುತ್ತಿವೆ. ಸರಕಾರವೇ ಈ ಗುಂಪು ಹಲ್ಲೆಕೋರರ ಬೆನ್ನಿಗೆ ನಿಂತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಹರ್ಯಾಣದಲ್ಲಿ ಮೋನು ಮನೇಸರ್ನಂತಹ ಗುಂಪು ಹಲ್ಲೆಕೋರರನ್ನು ಅಲ್ಲಿನ ಸರಕಾರವೇ ರಕ್ಷಿಸುತ್ತಿದೆ. ಈತನನ್ನು ಬಂಧಿಸಲು ರಾಜಸ್ಥಾನ ಪೊಲೀಸರು ಮುಂದಾದರೆ ಪೊಲೀಸರ ಮೇಲೆಯೇ ಎಫ್ ಐಆರ್ ದಾಖಲಾಗುತ್ತಿದೆ. ‘ಗೋರಕ್ಷಣೆ’ಯ ಹೆಸರಿನಲ್ಲಿ ಗುಂಪು ಹಲ್ಲೆಕೋರರು ದೌರ್ಜನ್ಯ, ಹತ್ಯೆಗಳನ್ನು ಸಂವಿಧಾನಬದ್ಧವಾಗಿಸಿಕೊಂಡಿದ್ದಾರೆ. ಇತ್ತ ಮಣಿಪುರದಲ್ಲಿ ನಡೆಯುತ್ತಿರುವ ಅತ್ಯಾಚಾರಗಳು ವಿಶ್ವಾದ್ಯಂತ ಸುದ್ದಿಯಲ್ಲಿದೆ. ಮಹಿಳೆಯರ ಬೆತ್ತಲೆ ಮೆರವಣಿಗೆ, ಅವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಗಳ ಬಗ್ಗೆ ಸರಕಾರ ಈವರೆಗೆ ಯಾವುದೇ ಖಂಡನಾ ಹೇಳಿಕೆಗಳನ್ನು ನೀಡಿಲ್ಲ. ದುಷ್ಕರ್ಮಿಗಳನ್ನು ಪರೋಕ್ಷವಾಗಿ ಸಮರ್ಥಿಸುವಂತಹ ಹೇಳಿಕೆಗಳನ್ನು ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರು ನೀಡಿದ್ದಾರೆ. ಇಂತಹ ಹೊತ್ತಿನಲ್ಲಿ, ಕೇಂದ್ರ ಸರಕಾರ ಭಾರತೀಯ ದಂಡ ಸಂಹಿತೆಯ ಬದಲಿಗೆ, ಭಾರತೀಯ ನ್ಯಾಯಸಂಹಿತೆಗೆ ಸಂಬಂಧಿಸಿದ ಮಸೂದೆಯೊಂದನ್ನು ಜಾರಿಗೊಳಿಸಲು ಮುಂದಾಗಿದೆ. ದೇಶದ್ರೋಹ, ಗುಂಪು ಹಲ್ಲೆ, ಅತ್ಯಾಚಾರಗಳನ್ನು ಈ ಕಾನೂನುಗಳ ಮೂಲಕ ತಡೆಯಲು ಹೊರಟಿದೆ ಎನ್ನುವುದನ್ನು ನಾವು ನಂಬಬೇಕಾಗಿದೆ.

ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳಿಗೆ ಸಂಪೂರ್ಣ ಕಾಯಕಲ್ಪ ನೀಡುವ ಪ್ರಯತ್ನ ಇದಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಬ್ರಿಟಿಷ್ ಕಾಲದ ದೇಶದ್ರೋಹ ಕಾನೂನಿನ ಕುರಿತಂತೆ ಸ್ವಾತಂತ್ರ್ಯೋತ್ತರದಲ್ಲಿ ಬಹಳಷ್ಟು ಟೀಕೆಗಳು ವ್ಯಕ್ತವಾಗಿವೆ. ಈ ಕಾನೂನಿನ ವಿರುದ್ಧ ಬೀದಿ ಪ್ರತಿಭಟನೆಗಳೂ ನಡೆದಿವೆ. ಇಂದಿರಾಗಾಂಧಿಯಿಂದ ಹಿಡಿದು ನರೇಂದ್ರ ಮೋದಿಯವರೆಗೆ ಹೆಚ್ಚಿನ ಪ್ರಧಾನಿಗಳು ಈ ಕಾನೂನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯ ಕಾಲದಲ್ಲಿ ಈ ಕಾನೂನನ್ನು ಬಳಸಿಕೊಂಡು ದೇಶದ ಜನರ ತಲೆಗೆ ದೇಶದ್ರೋಹಿ ಆರೋಪವನ್ನು ಕಟ್ಟಿ ನೂರಾರು ನಾಯಕರನ್ನು ಜೈಲಿಗೆ ತಳ್ಳಲಾಯಿತು. ಇದೀಗ ಪ್ರಧಾನಿ ಮೋದಿಯವರ ಅಘೋಷಿತ ತುರ್ತು ಪರಿಸ್ಥಿತಿಯ ಕಾಲದಲ್ಲೂ ಈ ಕಾನೂನಿನ ವ್ಯಾಪಕ ದುರ್ಬಳಕೆ ನಡೆಯುತ್ತಿದೆ. ಸಾಮಾಜಿಕ ಹೋರಾಟಗಾರರು, ಪ್ರತಿಭಟನಾಕಾರರು, ಪತ್ರಕರ್ತರ ವಿರುದ್ಧ ಈ ಕಾಯ್ದೆಯನ್ನು ಬಳಸಿಕೊಂಡು ಅವರನ್ನು ಜೈಲಿಗೆ ತಳ್ಳಲಾಗಿದೆ. ಸರಕಾರದ ವಿರುದ್ಧ ಮಾತನಾಡುವುದನ್ನು ದೇಶವಿರೋಧಿ ಚಟುವಟಿಕೆ ಎಂದು ಗುರುತಿಸಿ ಅವರ ಬಾಯಿ ಮುಚ್ಚಿಸಲು ಈ ಕಾನೂನನ್ನು ಬಳಸಿಕೊಳ್ಳಲಾಗಿದೆ. ಬ್ರಿಟಿಷರ ಕಾಲದಲ್ಲಿ ಸರಕಾರ ಪ್ರಜಾಸತ್ತಾತ್ಮಕವಾಗಿರಲಿಲ್ಲ. ಆದುದರಿಂದ ಸರಕಾರದ ವಿರುದ್ಧ ಮಾತನಾಡಿದರೆ ಅಪರಾಧವಾಗುತ್ತಿತ್ತು. ಆದರೆ ಇಂದು ಈ ದೇಶವನ್ನು ಪ್ರಜಾಸತ್ತಾತ್ಮಕ ಸರಕಾರ ಆಳುತ್ತಿದೆ. ಪ್ರಜೆಗಳೇ ಇಲ್ಲಿ ಪ್ರಭುಗಳು. ತಾನು ಆರಿಸಿದ ಸರಕಾರ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿಲ್ಲ ಎಂದಾದರೆ ಅದನ್ನು ಟೀಕಿಸುವ ಹಕ್ಕು ಪ್ರಜೆಗಳಿಗಿದೆ. ಸರಕಾರವನ್ನು ಟೀಕಿಸುವುದೆಂದರೆ ಅದರ ಅರ್ಥ ದೇಶವನ್ನು ಟೀಕಿಸುವುದೆಂದಲ್ಲ. ಆದರೆ ಇಂದು ಸರಕಾರ ತನ್ನನ್ನು ತಾನು ರಕ್ಷಿಸಿ ಕೊಳ್ಳಲು ದೇಶವನ್ನು ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿದೆ. ಇಂತಹ ಹೊತ್ತಿನಲ್ಲಿ, ಬ್ರಿಟಿಷ್ ಕಾಲದ ದೇಶದ್ರೋಹಿ ಕಾನೂನನ್ನು ಸರಕಾರ ಬದಲಿಸಿ ಅದಕ್ಕೆ ಬದಲಾಗಿ ‘ಏಕತೆಯನ್ನು ಅಪಾಯಕ್ಕೆ ಗುರಿ ಪಡಿಸುವುದು’ ಎಂಬ ಹೊಸ ಅಪರಾಧವೊಂದನ್ನು ಪರಿಚಯಿಸಲು ಮುಂದಾಗಿದೆ.

ಬ್ರಿಟಿಷರ ಕಾಲದ ಕಾನೂನನ್ನು ರದ್ದುಗೊಳಿಸಿದ್ದೇವೆ ಎನ್ನುತ್ತಿರುವ ಕೇಂದ್ರ ಸರಕಾರ, ಅದಕ್ಕೆ ಬದಲಾಗಿ ಅದಕ್ಕಿಂತಲೂ ಕಠಿಣವಾಗಿರುವ ಅಸ್ಪಷ್ಟವಾಗಿರುವ ಕಾನೂನೊಂದನ್ನು ಜಾರಿಗೊಳಿಸಲು ಮುಂದಾಗಿದೆ. ಈವರೆಗೆ ಸರಕಾರದ ವಿರುದ್ಧ ಮಾತನಾಡಿದವರನ್ನು ಬ್ರಿಟಿಷರ ಕಾನೂನನ್ನು ಬಳಸಿಕೊಂಡು ಬಂಧಿಸಲಾಗುತ್ತಿದ್ದರೆ, ಇನ್ನು ಮುಂದೆ ಅಪ್ಪಟ ಸ್ವದೇಶಿ ಕಾನೂನಿನ ಮೂಲಕವೇ ಬಂಧಿಸಲು, ಶಿಕ್ಷಿಸಲು ಸಿದ್ಧತೆ ನಡೆಸುತ್ತಿದೆ. ದೇಶದ್ರೋಹದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿ, ಶಿಕ್ಷೆಯನ್ನು ಇನ್ನಷ್ಟು ಕಠಿಣಗೊಳಿಸುವುದೇ ಹೊಸ ಕಾನೂನಿನ ದುರುದ್ದೇಶವಾಗಿದೆ ಎನ್ನುವುದನ್ನು ಈಗಾಗಲೇ ಹಲವು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ‘ಭಾರತದ ಏಕತೆ, ಸಾರ್ವಭೌಮತ್ವ, ಸಮಗ್ರತೆಗೆ ಅಪಾಯ ಒಡ್ಡುವ ಕೃತ್ಯ’ಗಳ ಬಗ್ಗೆ ಈ ಕಾನೂನು ಮಾತನಾಡುತ್ತದೆ. ಆದರೆ ಯಾವುದು ಈ ದೇಶದ ಏಕತೆಗೆ ಅಡ್ಡಿಯನ್ನುಂಟು ಮಾಡುತ್ತದೆ? ಇದರ ವ್ಯಾಖ್ಯಾನಕ್ಕನುಗುಣವಾಗಿ ಕಾನೂನನ್ನು ಜಾರಿಗೊಳಿಸುವುದಾದರೆ, ಹಿಂದೂ-ಮುಸ್ಲಿಮರ ನಡುವೆ ದ್ವೇಷವನ್ನು ಬಿತ್ತಿ ದೇಶದಲ್ಲಿ ಅರಾಜಕತೆಯನ್ನು ಬಿತ್ತುವ ಎಲ್ಲ ಸಂಘಪರಿವಾರ ಮತ್ತು ಬಿಜೆಪಿ ನಾಯಕರಿಗೆ ಈ ಕಾನೂನು ಅನ್ವಯವಾಗುತ್ತದೆ. ಅವರೆಲ್ಲರೂ ಈ ಕಾನೂನಿನ ಪ್ರಕಾರ ಜೈಲಿನಲ್ಲಿ ರಬೇಕಾಗುತ್ತದೆ. ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಸಂಘಪರಿವಾರದ ನಾಯಕರ ಬಗ್ಗೆ ಈ ಕಾನೂನು ಏನನ್ನು ಹೇಳುತ್ತದೆ? ಅವರ ವಿರುದ್ಧ ಇದು ಮಾತನಾಡುವುದಿಲ್ಲ ಎಂದಾದರೆ, ಏಕತೆ, ಸಮಗ್ರತೆ, ಸಾರ್ವಭೌಮತ್ವಕ್ಕೆ ಅಪಾಯ ಒಡ್ಡುವುದು ಎಂದರೆ ಏನು? ಯಾವುದು ಏಕತೆಗೆ, ಸಾರ್ವಭೌಮತೆಗೆ ಅಪಾಯವನ್ನುಂಟು ಮಾಡುತ್ತದೆ ಎನ್ನುವುದನ್ನು ನಿರ್ಧರಿಸುವವರು ಯಾರು? ಈ ಗೊಂದಲಗಳಿಗೆ ಕಾನೂನಿನಲ್ಲಿ ಸ್ಪಷ್ಟತೆಯಿಲ್ಲ ಮತ್ತು ಗೊಂದಲಗಳನ್ನೇ ಬಳಸಿಕೊಂಡು ಮತ್ತೆ ಸರಕಾರದ ವಿರುದ್ಧ ಮಾತನಾಡುವ ಪತ್ರಕರ್ತರು, ಸಾಮಾಜಿಕ ಹೋರಾಟಗಾರರನ್ನೇ ಕಾನೂನು ಗುರಿ ಮಾಡಲಿದೆ.

ಹೊಸ ಕಾನೂನು ಏನನ್ನು ಏಕತೆಗೆ ಅಪಾಯವೆಂದು ಭಾವಿಸುತ್ತದೆ ಎನ್ನುವುದನ್ನು ಅವಲೋಕಿಸೋಣ. ‘‘ಯಾರು ಉದ್ದೇಶಪೂರ್ವಕವಾಗಿ ಪದಗಳ ಮೂಲಕ, ಮಾತನಾಡುವ ಅಥವಾ ಬರೆಯುವ ಮೂಲಕ, ಚಿಹ್ನೆಗಳ ಮೂಲಕ, ವಿದ್ಯುನ್ಮಾನಗಳ ಮೂಲಕ, ಆರ್ಥಿಕ ಚಟುವಟಿಕೆಗಳ ಮೂಲಕ ಪ್ರತ್ಯೇಕತಾವಾದಿ ಭಾವನೆಗಳನ್ನು ಉತ್ತೇಜಿಸುವುದು, ಸಾರ್ವಭೌಮತ್ವ, ಏಕತೆ, ಸಮಗ್ರತೆಗೆ ಅಪಾಯವನ್ನುಂಟು ಮಾಡುವುದು ....’’ ಎಂಬಿತ್ಯಾದಿ ಸಾಲುಗಳು ಬರುತ್ತವೆ. ಅಂದರೆ ದೇಶದ ಜನವಿರೋಧಿ ನೀತಿಗಳ ವಿರುದ್ಧ ಮಾತನಾಡಿದವರನ್ನೆಲ್ಲ ಈಗಾಗಲೇ ಸರಕಾರದೊಳಗಿರುವವರು ‘ಉಗ್ರಗಾಮಿಗಳು’ ‘ಭಯೋತ್ಪಾದಕರು’ ‘ಅರ್ಬನ್ ನಕ್ಸಲರು’ ಎಂದು ಕರೆದು ಬಿಟ್ಟಿದ್ದಾರೆ. ಸರಕಾರದ ನೀತಿಗಳ ವಿರುದ್ಧ ಮಾತನಾಡುವವರನ್ನಷ್ಟೇ ಇದು ಉದ್ದೇಶಿಸಿದೆಯೇ ಹೊರತು, ಹರ್ಯಾಣ, ಮಣಿಪುರದಲ್ಲಿ ದಂಗೆಗೆ ಕರೆ ನೀಡಿದವರ ವಿರುದ್ಧ ಈ ಕಾನೂನನ್ನು ಬಳಸುವ ಉದ್ದೇಶವನ್ನು ಸರಕಾರ ಹೊಂದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಒಂದು ವೇಳೆ ಹಾಗೆ ಜಾರಿಗೊಳಿಸಿದ್ದೇ ಆದರೆ ಬಿಜೆಪಿಯೊಳಗಿರುವ ಶೇ. ೫೦ರಷ್ಟು ನಾಯಕರು ಜೈಲು ಸೇರಬೇಕಾಗುತ್ತದೆ. ದೇಶದ ಕಾನೂನು ಸುವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿ ಕೋಮುಗಲಭೆ, ಹಿಂಸಾಚಾರ, ದೊಂಬಿಗಳಿಗೆ ಕಾರಣವಾಗುವುದು ಕೂಡ ಪರೋಕ್ಷವಾಗಿ ದೇಶವಿರೋಧಿ ಕೃತ್ಯವೇ ಆಗಿದೆ. ಇವುಗಳಿಗೆ ಕಾರಣರಾದವರ ಮೇಲೆ ಈ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎನ್ನುವ ಯಾವ ಭರವಸೆಯೂ ಇಲ್ಲ. ಶಿಕ್ಷೆಯ ವಿಷಯದಲ್ಲೂ ಸ್ವದೇಶಿ ಕಾನೂನು ಇನ್ನಷ್ಟು ಕಠಿಣವಾಗಿದೆ. ಬ್ರಿಟಿಷರ ದೇಶದ್ರೋಹ ಕಾನೂನು ಜೀವಾವಧಿ ಶಿಕ್ಷೆ ಅಥವಾ ಮೂರು ವರ್ಷಗಳ ವರೆಗೆ ವಿಸ್ತರಿಸಬಹುದಾದ ಶಿಕ್ಷೆಯನ್ನು ಹೊಂದಿದ್ದರೆ, ಹೊಸ ನಿಬಂಧನೆಯು ಮೂರು ವರ್ಷಗಳ ಶಿಕ್ಷೆಯನ್ನು ಏಳು ವರ್ಷಕ್ಕೆ ಬದಲಾಯಿಸುತ್ತದೆ.

ಬ್ರಿಟಿಷ್ ಕಾನೂನನ್ನು ದೇಶದ ಪ್ರಜೆಗಳ ಮೇಲೆ ಬಳಸಲಾಗುತ್ತಿದೆ ಎನ್ನುವ ಆರೋಪಗಳಿಂದ ಪಾರಾಗುವ ಏಕೈಕ ಉದ್ದೇಶದಿಂದ ಹೊಸ ಕಾನೂನನ್ನು ಜಾರಿಗೊಳಿಸುವ ಉದ್ದೇಶವನ್ನು ಸರಕಾರ ಹೊಂದಿದೆ. ಸ್ಪಷ್ಟವಾಗಿ ಇಂತಹದೇ ಕೃತ್ಯವನ್ನು ಉಲ್ಲೇಖಿಸದೆ, ‘ದೇಶದ ಏಕತೆಗೆ ಧಕ್ಕೆ ತರುವ’ ಎನ್ನುವ ಸಾಲನ್ನು ಬಳಸಿಕೊಂಡು ಸರಕಾರದ ವಿರುದ್ಧ ಮಾತನಾಡುವವರನ್ನು ಇನ್ನಷ್ಟು ಹದ್ದು ಬಸ್ತಿನಲ್ಲಿಡಲು ಮುಂದಾಗಿದೆ. ಬ್ರಿಟಿಷ್ ಕಾಲದ ಕಾನೂನುಗಳನ್ನು ಬದಲಿಸಿ ಸ್ವದೇಶಿ ರೂಪಕೊಟ್ಟರೆ, ಅದು ಪ್ರಜಾಸತ್ತಾತ್ಮಕವಾದ ಹಕ್ಕುಗಳಿಗೆ ಧಕ್ಕೆ ತರದೇ ಇರುತ್ತದೆಯೆ? ‘‘ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರೇ ಹದ ಹಾಕಿ ತಿವಿದರದು ಹೂವೆ?’’ ಎನ್ನುವ ಕುವೆಂಪು ಸಾಲುಗಳು ಭಾರತೀಯ ನ್ಯಾಯ ಸಂಹಿತೆಗೆ ಅನ್ವಯವಾಗುತ್ತದೆ. ಹಾಗೆಯೇ, ‘ಗುಂಪು ಥಳಿತದ ಅಪರಾಧಿಗಳಿಗೆ ಮರಣದಂಡನೆ’ಯನ್ನು ಘೋಷಿಸಿದೆಯಾದರೂ, ಗುಂಪುಥಳಿತದಲ್ಲಿ ಭಾಗವಹಿಸಿದ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸುವುದು ಅತ್ಯಗತ್ಯವಾಗಿದೆ. ಹೆಚ್ಚಿನ ಗುಂಪು ಥಳಿತಗಳು ಸಂಭವಿಸುವುದೇ ಪೊಲೀಸರ ಸಹಕಾರದೊಂದಿಗೆ. ಈ ಗುಂಪು ಹಲ್ಲೆಕೋರರಿಗೆ ರಾಜಕಾರಣಿಗಳು ಬೆಂಗಾವಲಾಗಿರುತ್ತಾರೆ. ಹೀಗಿರುವಾಗ, ಮೊತ್ತ ಮೊದಲು ಗುಂಪು ಥಳಿತದಲ್ಲಿ ಭಾಗವಹಿಸಿದ ಜನರನ್ನು ಗುರುತಿಸುವ, ಅವರ ಮೇಲೆ ಪ್ರಕರಣ ದಾಖಲಿಸುವ ಕೆಲಸವಾಗಬೇಕು. ಇದರಲ್ಲೇ ಪೊಲೀಸರು ವಿಫಲವಾದರೆ ಮರಣದಂಡನೆಯನ್ನು ನೀಡುವುದಾದರೂ ಯಾರಿಗೆ?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News